ಧರ್ಮದ ಆಧಾರದಲ್ಲಿ ನಡೆಯುವ ಕ್ರೌರ್ಯಕ್ಕೆ ಕೊನೆಯೇ ಇಲ್ಲವೇ?
ಎಮ್ಮೆ ಮಾಂಸದ ಮೇಲೆ ನಿಷೇಧ ಇಲ್ಲದಿರುವಾಗ, ಭಾರತವೇ ಅದನ್ನು ರಫ್ತು ಮಾಡುತ್ತಿರುವಾಗ, ತನ್ನ ಮಗಳಿಗಾಗಿ ಕೊಂಡೊಯ್ಯುತ್ತಿದ್ದ ಬಡ ಹಾಜಿ ಅಶ್ರಫ್ ಮೇಲೆ ಯುವಕರ ಗುಂಪು ಅಷ್ಟು ಕ್ರೂರವಾಗಿ ಹಲ್ಲೆ ನಡೆಸುತ್ತದೆಂದರೆ ಅದೆಂಥ ದ್ವೇಷ? ಅದೆಂಥ ಕ್ರೂರ ಮನಃಸ್ಥಿತಿ? ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಹೊರಟಿದ್ದ ಹುಡುಗರು ದಾರಿಯಲ್ಲಿ ಇಂಥದೊಂದು ಕ್ರೂರ ಹಲ್ಲೆ ನಡೆಸುತ್ತಾರಾದರೆ, ನಾಳೆ ಇದೇ ಹುಡುಗರು ಪೊಲೀಸ್ ಇಲಾಖೆಗೆ ಸೇರಿದರೆ ಧಾರ್ಮಿಕತೆ ಆಧಾರದಲ್ಲಿ ಎಂಥ ನ್ಯಾಯ ಕೊಡಬಲ್ಲರು?
ದೇಶದಲ್ಲಿ ದ್ವೇಷಾಪರಾಧ, ಗುಂಪು ಹಲ್ಲೆ, ಕೊಲೆಗಳು ಒಂದೇ ಸಮನೆ ಏರುತ್ತಿವೆ. ಆದರೆ ಈ ದ್ವೇಷಾಪರಾಧಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಅಂಥ ಆರೋಪಿಗಳಿಗೆ ಪೊಲೀಸರೇ ನೆರವಾಗುತ್ತಿದ್ದಾರೆಯೇ?
ಹಾಜಿ ಅಶ್ರಫ್ ಮುನಿಯಾರ್ ಎಂಬ 72 ವರ್ಷದ ವೃದ್ಧರೊಬ್ಬರ ಮೇಲೆ 24 ವರ್ಷದ ಯುವಕನೊಬ್ಬ ರೈಲಿನಲ್ಲಿ ಹಲ್ಲೆ ನಡೆಸಿದ್ದಾನೆ. ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ಸಾಗುತ್ತಿದ್ದ ರೈಲಿನಲ್ಲಿ ಈ ಕಳವಳಕಾರಿ ಘಟನೆ ನಡೆದಿದೆ.
ಆ ಯುವಕ ಮತ್ತು ಅವನ ಜೊತೆಗಿದ್ದ ಗುಂಪು ಆ ವೃದ್ಧ ಹಾಜಿ ಅಶ್ರಫ್ ಅವರನ್ನು ಕ್ರೂರವಾಗಿ ಥಳಿಸುತ್ತದೆ ಮತ್ತು ನಿಂದಿಸುತ್ತದೆ. ಆ ಹಿರಿ ಜೀವ ಹಾಜಿ ಅಶ್ರಫ್ ಪಾಲಿಗೆ ರೈಲಿನಲ್ಲಿ ಹಲ್ಲೆ ಮಾಡುವವರು ಇದ್ದರೇ ಹೊರತು ರಕ್ಷಣೆಗೆ ಧಾವಿಸುವವರು ಯಾರೂ ಇರಲಿಲ್ಲ.
ತೀವ್ರ ಹಲ್ಲೆಗೊಳಗಾಗಿ ಬಂದಿದ್ದ ಅವರು ಮನೆಯಲ್ಲೂ ಅದರ ಬಗ್ಗೆ ಹೇಳದೇ ಮೌನವಾಗಿದ್ದರು. ತನಗಾದ ಗಾಯಗಳು ಬಿದ್ದು ಆದದ್ದೆಂದು ಹೇಳಿದ್ದರು.
ಆದರೆ ಅವರನ್ನು ರೈಲಿನಲ್ಲಿ ಥಳಿಸಲಾದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಎಲ್ಲವೂ ಬಹಿರಂಗವಾಗಿದೆ. ಹಾಜಿ ಅಶ್ರಫ್ ಗೋಮಾಂಸ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ತನ್ನನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆಯುವ ಯತ್ನ ನಡೆಯಿತೆಂದು ವೃದ್ಧರು ಹೇಳಿಕೊಂಡಿದ್ದಾರೆ.
ಹಲೆ ನಡೆಸಿದ್ದ ಆಕಾಶ್, ಅಶು ಆವಧ್, ನಿತೇಶ್ ಅಹಿರೆ, ಜಯೇಶ್ ಮೋಹಿತೆ ಎಂಬ ಯುವಕರನ್ನು ಪೊಲೀಸರು ಬಂಧಿಸಿದರಾದರೂ ಅವರಿಗೆ ಕೆಲವೇ ಗಂಟೆಗಳಲ್ಲಿ ಜಾಮೀನು ದೊರೆತಿದೆ. ಇದು ಪಕ್ಕಾ ದ್ವೇಷದ ಅಪರಾಧ ಎಂದು ಗೊತ್ತಾಗುವಂತಿದ್ದರೂ ಪೊಲೀಸರು ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದರು.
ಧರ್ಮದ ಆಧಾರದ ಮೇಲೆ ನಡೆದ ಹಲ್ಲೆ ಇದಾಗಿದೆ ಎಂಬುದರ ಸಾಕ್ಷ್ಯಗಳು ಇದ್ದವು. ಆದರೂ ಪೊಲೀಸರು ದ್ವೇಷಾಪರಾಧ, ಗುಂಪು ಹಲ್ಲೆ ಆರೋಪಗಳನ್ನು ದಾಖಲಿಸಲು ನಿರಾಕರಿಸಿ, ಬರೀ 15 ಸಾವಿರ ರೂ. ಪಾವತಿಸಿ ಅವರೆಲ್ಲ ಜಾಮೀನಿನ ಮೇಲೆ ಬಿಡುಗಡೆಯಾಗಲು ಕಾರಣರಾಗಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಅಶು ಆವಧ್ ಎಸ್‌ಆರ್‌ಪಿಎಫ್ ಅಧಿಕಾರಿಯ ಪುತ್ರ ಎನ್ನಲಾಗಿದೆ. ಆ ಗುಂಪಿನಲ್ಲಿದ್ದ ಯುವಕರು ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಮುಂಬೈಗೆ ಹೊರಟಿದ್ದವರು ಎಂಬುದೂ ಬಯಲಾಗಿದೆ.
ಎನ್‌ಸಿಪಿ ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಆವ್ಹಾಡ್ ದ್ವೇಷಾಪರಾಧ ಕೇಸ್ ದಾಖಲಿಸಲು ಒತ್ತಾಯಿಸಿದ್ದರು. ವೈದ್ಯರು ಹಲ್ಲೆಗೊಳಗಾದ ವೃದ್ಧನ ತಪಾಸಣೆಯನ್ನೂ ಮಾಡಲಿಲ್ಲ ಎಂದ ಮೇಲೆ ಅದು ಹೇಗೆ ಇವರು ತಮಗೆ ತೋಚಿದ ಸೆಕ್ಷನ್ ಹಾಕಿಬಿಡುತ್ತಾರೆ ಎಂಬುದು ಜಿತೇಂದ್ರ ಆವ್ಹಾಡ್ ಅವರ ಪ್ರಶ್ನೆ.
ಪೊಲೀಸರು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹಾಜಿ ಅಶ್ರಫ್ ಅವರಂಥವರು ತನ್ನನ್ನು ರಕ್ಷಿಸುವವರು ಯಾರಾದರೂ ಇರುತ್ತಾರೆ ಎಂದಾಗಲೀ, ತನಗೆ ನ್ಯಾಯ ಸಿಗುತ್ತದೆ ಎಂದಾಗಲೀ ಭರವಸೆ ಉಳಿಸಿಕೊಳ್ಳುವುದು ಇನ್ನು ಹೇಗೆ ಸಾಧ್ಯ?
ನಮಗೆ ಶ್ರಾವಣ ಇರುವಾಗ ಹೇಗೆ ಮಾಂಸ ಸಾಗಿಸುತ್ತಿ ಎಂದು ಹಾಜಿ ಅಶ್ರಫ್ ಜೊತೆ ಆ ಯುವಕರು ತಕರಾರು ತೆಗೆದಿದ್ದರು.
ಹೀಗೆ ತಮ್ಮ ಶ್ರಾವಣ ಮಾಸದಲ್ಲಿ ಇತರರು ಮಾಂಸ ತಿನ್ನಬಾರದು ಎಂದು ಬಯಸುವ, ಇತರರ ಮೇಲೆ ತಮ್ಮ ನಂಬಿಕೆ ಹೇರುವ ಇಂಥ ವರ್ತನೆ ಈ ದೇಶದಲ್ಲಿ ಹೊಸದೇನೂ ಅಲ್ಲ.
ಲಾಲು ಯಾದವ್ ಮನೆಗೆ ರಾಹುಲ್ ಗಾಂಧಿ ಹೋಗಿದ್ದಾಗ ಅವರಿಗೆ ಮಟನ್ ತಯಾರಿಸುವುದು ಹೇಗೆಂದು ತೋರಿಸಿದ್ದನ್ನು ಪ್ರಧಾನಿ ಮೋದಿ ಶ್ರಾವಣದ ಜೊತೆ ಜೋಡಿಸಿದ್ದರು ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು.
ಹೆಲಿಕಾಪ್ಟರ್‌ನಲ್ಲಿ ತೇಜಸ್ವಿ ಯಾದವ್ ಮೀನು ತಿನ್ನುತ್ತಿದ್ದ ವೀಡಿಯೊ ಶೇರ್ ಮಾಡಿದ್ದಾಗ ಮೋದಿ ಅದನ್ನು ನವರಾತ್ರಿ ಜೊತೆ ಜೋಡಿಸಿ ಟೀಕಿಸಿದ್ದರು.
ಹೀಗೆ ಮಾಂಸಾಹಾರವನ್ನು ವ್ರತಗಳ ಜೊತೆ ಜೋಡಿಸಿ ವಿವಾದವೆಬ್ಬಿಸುವ ರಾಜಕೀಯವನ್ನೂ ನೋಡುತ್ತಲೇ ಇದ್ದೇವೆ. ಈಗ 72 ವರ್ಷದ ವೃದ್ಧ ಜೀವ ಎಂಬುದನ್ನೂ ನೋಡದೆ ಈ ಹುಡುಗರು ಹಾಜಿ ಅಶ್ರಫ್ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದರೆಂದರೆ ಇಂಥ ದ್ವೇಷವನ್ನು ಅವರಿಗೆ ಹೇಳಿಕೊಟ್ಟದ್ದು ಯಾರು?
ಮಾಂಸಾಹಾರವನ್ನು ವ್ರತಗಳ ಜೊತೆಗೆ ಜೋಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಚೋದನಾಕಾರಿ ನಿಲುವು ತಾಳುವುದು ಕಳೆದ ಚುನಾವಣೆ ಹೊತ್ತಿನಲ್ಲಿ ಮೋದಿ ಭಾಷಣದಿಂದ ಬಯಲಾಗಿತ್ತು. ದೇಶದ ಪ್ರಧಾನಿಯೇ ಇನ್ನೊಬ್ಬರ ಆಹಾರ ಪದ್ಧತಿಯನ್ನು ಗೌರವಿಸುವ ಮನಃಸ್ಥಿತಿಯನ್ನು ಹೊಂದಿಲ್ಲ ಎಂಬುದು ಆಗಲೇ ಸ್ಪಷ್ಟವಾಗಿತ್ತು.
ಈ ದೇಶದಲ್ಲಿ ಮಾಂಸಾಹಾರ ಸೇವನೆ ಸಹಜ ಆಹಾರ ಪದ್ಧತಿ. ಅದನ್ನು ಪ್ರತೀ ತಿಂಗಳೂ ಬರುವ ಒಂದಲ್ಲ ಒಂದು ಹಬ್ಬದ ಜೊತೆ ಜೋಡಿಸಿ ಯಾಕೆ ಗುರಿ ಮಾಡಲಾಗುತ್ತದೆ? ಹೇಗೆ ಈ ದೇಶದ ಯುವಕರು ಆ ನೆಪದಲ್ಲಿ ವೃದ್ಧ ಜೀವದ ಮೇಲೂ ಹಲ್ಲೆ ನಡೆಸುವಂಥ ಕರಾಳ ಮನಃಸ್ಥಿತಿಯನ್ನು ಬೆಳೆಸಲಾಗುತ್ತಿದೆ?
ವಿಶ್ವದಲ್ಲೇ ಅತಿ ಹೆಚ್ಚು ಎಮ್ಮೆ ಮಾಂಸ ಉತ್ಪಾದಕ ದೇಶ ಭಾರತ, 2024ರಲ್ಲಿ ಇದರ ರಫ್ತು ಹೆಚ್ಚಿದೆಯೆಂದು ವರದಿಗಳು ಹೇಳುತ್ತವೆ.
ದೇಶದಿಂದ 2022-23ರಲ್ಲಿ ರಫ್ತಾದ ಒಟ್ಟು ಪ್ರಾಣಿಜನ್ಯ ಉತ್ಪನ್ನಗಳಲ್ಲಿ ಶೇ.79ರಷ್ಟು ಭಾಗ ಎಮ್ಮೆಮಾಂಸ ಉತ್ಪನ್ನಗಳೇ ಆಗಿವೆ ಎನ್ನುತ್ತದೆ ವರದಿ.
2023ರಲ್ಲಿ ಭಾರತದಿಂದ ರಫ್ತಾಗಿದ್ದ ಎಮ್ಮೆ ಮಾಂಸ 1.55 ಮಿಲಿಯನ್ ಟನ್ ಆಗಿದ್ದರೆ, 2024ರಲ್ಲಿ ಶೇ.5ಕ್ಕಿಂತ ಹೆಚ್ಚಾಗಿ, ಅಂದರೆ 1.64 ಮಿಲಿಯನ್ ಟನ್ ರಫ್ತಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಬೀಫ್ ರಫ್ತು ಕಂಪೆನಿ ಶಿವಸೇನೆಗೆ 5 ಕೋಟಿ ರೂ., ಬಿಜೆಪಿಗೆ 2 ಕೋಟಿ ರೂ.ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ಕೊಡುತ್ತದೆ.
ಯಾರು ಗೋರಕ್ಷಕರು ಎನ್ನಲಾಗುತ್ತದೋ ಅವರದೇ ಪಕ್ಷಕ್ಕೆ ಹೀಗೆ ಕೋಟಿಗಟ್ಟಲೆ ದೇಣಿಗೆ ನೀಡುವ ಬೀಫ್ ರಫ್ತು ಕಂಪೆನಿ ಶ್ರಾವಣದಲ್ಲಿ ಬೀಫ್ ರಫ್ತು ಮಾಡುವುದನ್ನು ನಿಲ್ಲಿಸುತ್ತದೆಯೇ? ಆ ಕಂಪೆನಿಯಿಂದ ಕೋಟಿಗಟ್ಟಲೆ ಹಣ ಪಡೆಯುವಾಗ ಧಾರ್ಮಿಕ ಆಕ್ರೋಶವೂ ಇಲ್ಲ. ಶ್ರಾವಣ, ನವರಾತ್ರಿ ಎಂದು ಟಾರ್ಗೆಟ್ ಮಾಡುವುದೂ ಇಲ್ಲ. ಇವರ ಸಿಟ್ಟೇನಿದ್ದರೂ ಬಡ ಮುಸ್ಲಿಮರ ಮೇಲೆ ಮಾತ್ರ.
ಎಮ್ಮೆ ಮಾಂಸದ ಮೇಲೆ ನಿಷೇಧ ಇಲ್ಲದಿರುವಾಗ, ಭಾರತವೇ ಅದನ್ನು ರಫ್ತು ಮಾಡುತ್ತಿರುವಾಗ, ತನ್ನ ಮಗಳಿಗಾಗಿ ಕೊಂಡೊಯ್ಯುತ್ತಿದ್ದ ಬಡ ಹಾಜಿ ಅಶ್ರಫ್ ಮೇಲೆ ಯುವಕರ ಗುಂಪು ಅಷ್ಟು ಕ್ರೂರವಾಗಿ ಹಲ್ಲೆ ನಡೆಸುತ್ತದೆಂದರೆ ಅದೆಂಥ ದ್ವೇಷ? ಅದೆಂಥ ಕ್ರೂರ ಮನಃಸ್ಥಿತಿ?
ಭಾರತದಿಂದ ಮಾಂಸ ರಫ್ತಾಗುವುದು ಸರಿ ಎಂದಾದರೆ, ಈ ಬಡ ಹಾಜಿ ಅಶ್ರಫ್ ಮೇಲೆ ಅದೇ ಕಾರಣಕ್ಕೆ ಯಾಕೆ ಹಲ್ಲೆ ನಡೆಯುತ್ತದೆ?
ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಹೊರಟಿದ್ದ ಹುಡುಗರು ದಾರಿಯಲ್ಲಿ ಇಂಥದೊಂದು ಕ್ರೂರ ಹಲ್ಲೆ ನಡೆಸುತ್ತಾರಾದರೆ, ನಾಳೆ ಇದೇ ಹುಡುಗರು ಪೊಲೀಸ್ ಇಲಾಖೆಗೆ ಸೇರಿದರೆ ಧಾರ್ಮಿಕತೆ ಆಧಾರದಲ್ಲಿ ಎಂಥ ನ್ಯಾಯ ಕೊಡಬಲ್ಲರು?
ಈ ದೇಶದಲ್ಲಿ ಪೊಲೀಸರ ಮುಸ್ಲಿಮ್ ವಿರೋಧಿ ಪೂರ್ವಗ್ರಹ ಕೂಡ ಹೊಸ ವಿಚಾರವೇನಲ್ಲ.
ಹರ್ಯಾಣದಲ್ಲಿ ಗೋಮಾಂಸ ಸಾಗಾಟದ ಶಂಕೆಯ ಮೆಲೆ ಯುವಕನೊಬ್ಬನನ್ನು ಹೊಡೆದು ಕೊಲ್ಲಲಾಗಿತ್ತು.
ಬಂಧಿತ 7 ಮಂದಿಯಲ್ಲಿ ಮೋಹಿತ್, ಅಭಿಷೇಕ್ ರವಿಂದರ್, ಕಮಲ್‌ಜೀತ್ ಎಂಬವರೂ ಸೇರಿದ್ದರು.
ರಾಕೇಶ್, ಹರಿ ಓಂ, ಯುಧಿಷ್ಠಿರ್, ರಿಂಕು, ಕರಣ್‌ಪಾಲ್, ಮನಿಷ್ ಲಲಿತ್, ಸೋನು, ಕತ್ತಾರ್, ಮಾಂಗೇರಾಮ್ ಎಂಬವರ ಗುಂಪು ಇದೇ ಮಾರ್ಚ್‌ನಲ್ಲಿ ಯುಪಿಯ ಹಾಪುರ್ ಜಿಲ್ಲೆಯಲ್ಲಿ ಗೋಹತ್ಯೆ ಆರೋಪದ ಮೇಲೆ ಒಬ್ಬ ಮುಸ್ಲಿಮ್ ವ್ಯಕ್ತಿಯನ್ನು ಹೊಡೆದು ಕೊಂದಿತ್ತು.
ಮಹಾರಾಷ್ಟ್ರದಿಂದ ಹರ್ಯಾಣದವರೆಗೂ ಈ ದ್ವೇಷ ಎಗ್ಗಿಲ್ಲದೆ ಹರಡಿಕೊಂಡಿದೆ.
ಭಾಷಣದಲ್ಲಿ ಕೇಳುವುದು, ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಡಲಾಗುವ ಸುದ್ದಿಗಳ ಫಲವಾಗಿ ಈ ಯುವಕರೆಲ್ಲ ಇವತ್ತು ಹೀಗೆ ನಡುಬೀದಿಯಲ್ಲಿಯೇ ಹೊಡೆದು ಕೊಲ್ಲುವವರಾಗಿಬಿಟ್ಟಿದ್ದಾರೆ.
ಹಿಂಸಾಚಾರದಲ್ಲಿ ಹಾಳಾಗಲೆಂದೇ ಇಂಥ ಯುವಕರ ದಂಡನ್ನೇ ತಯಾರು ಮಾಡುವ ರಾಜಕೀಯವೊಂದು ಸದ್ದಿಲ್ಲದೆ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ.
ಒಂದೆಡೆ ಮುಸ್ಲಿಮರ ಮೇಲೆ ಹಲ್ಲೆ, ಇನ್ನೊಂದೆಡೆ ಅವರು ತಪ್ಪು ಮಾಡಲಿ, ಮಾಡದೇ ಇರಲಿ ತಪ್ಪೆಲ್ಲವೂ ಅವರದೇ ಎಂದು ಬಿಂಬಿಸಿ ದ್ವೇಷ ಹಬ್ಬಿಸುವ ಮನಃಸ್ಥಿತಿ ಢಾಳಾಗಿದೆ. ಅಪರಾಧಿಗಳು ಎಂದು ಮೊದಲೇ ತೀರ್ಮಾನಿಸಿಬಿಡಲಾಗುತ್ತದೆ. ಅವರ ಮನೆಗಳನ್ನೂ ಬುಲ್ಡೋಜರ್ ಬಳಸಿ ಕೆಡವಿಹಾಕಲಾಗುತ್ತದೆ.
ಗೋಮಾಂಸದ ಹೆಸರಿನ ರಾಜಕೀಯವಂತೂ ಇನ್ನೂ ಘೋರ. ಇದರ ಹೆಸರಲ್ಲಿ ಯಾರನ್ನೂ ಥಳಿಸಬಹುದು, ಯಾರನ್ನೂ ಕೊಂದುಹಾಕಬಹುದು ಎನ್ನುವಲ್ಲಿಯವರೆಗೆ ಸ್ಥಿತಿ ಮುಟ್ಟಿದೆ.
ರಾಜಕೀಯ ನಾಯಕರು ಭಾವನಾತ್ಮಕ ಹೇಳಿಕೆ ಕೊಟ್ಟು ಎಲ್ಲವನ್ನೂ ಮರೆತುಬಿಡುತ್ತಾರೆ. ಕೊಂದ ಹುಡುಗರು ಜೈಲುಪಾಲಾಗುತ್ತಾರೆ.
ಇದೆಲ್ಲವೂ ಬಹುಸಂಖ್ಯಾಕ ಸಮಾಜದ ನಿರುದ್ಯೋಗಿ ಯುವಕರನ್ನು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳುವ ಹುನ್ನಾರದ ಭಾಗವೇ ಆಗಿದೆ.
ಗೋರಕ್ಷಣೆ ಹೆಸರಲ್ಲಿ ಹಲ್ಲೆ, ಹತ್ಯೆಗಳು ರಾಜಾರೋಷವಾಗಿ ನಡೆಯುತ್ತವೆ. ಆರೋಪಿಗಳಿಗೆ ಶಿಕ್ಷೆಯಾಗುವುದು ಎಲ್ಲೋ ಅಲ್ಲೊಂದು ಇಲ್ಲೊಂದು ಕೇಸ್‌ಗಳಲ್ಲಿ ಮಾತ್ರ.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಮಾತುಗಳನ್ನು ಗಮನಿಸಬೇಕು.
‘‘ದ್ವೇಷವನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಅಧಿಕಾರದ ಮೆಟ್ಟಿಲು ಏರಿದವರು ನಿರಂತರವಾಗಿ ದೇಶಾದ್ಯಂತ ಭಯದ ಆಳ್ವಿಕೆ ನಡೆಸುತ್ತಿದ್ದಾರೆ, ಗುಂಪುಗಳ ರೂಪದಲ್ಲಿ ಅಡಗಿರುವ ದ್ವೇಷದ ಅಂಶಗಳು ಬಹಿರಂಗವಾಗಿಯೇ ಹಿಂಸಾಚಾರವನ್ನು ಹರಡುತ್ತಿವೆ, ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುತ್ತಿವೆ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಮರ ಮೇಲಿನ ನಿರಂತರ ದಾಳಿಗಳನ್ನು ಸರಕಾರ ಮೂಕಪ್ರೇಕ್ಷಕನಂತೆ ನೋಡುತ್ತಿದೆ. ಇಂಥ ಅರಾಜಕತೆ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕಾನೂನಿನ ಅಧಿಕಾರವನ್ನು ಸ್ಥಾಪಿಸಬೇಕು ಎಂದು ರಾಹುಲ್ ಪ್ರತಿಪಾದಿಸಿದ್ದಾರೆ.
‘‘ಭಾರತದ ಕೋಮು ಏಕತೆ ಮತ್ತು ಭಾರತೀಯರ ಹಕ್ಕುಗಳ ಮೇಲಿನ ಯಾವುದೇ ದಾಳಿ ಸಂವಿಧಾನದ ಮೇಲಿನ ದಾಳಿಯಾಗಿದೆ, ಇದನ್ನು ನಾವು ಸಹಿಸುವುದಿಲ್ಲ, ಬಿಜೆಪಿ ಎಷ್ಟೇ ಪ್ರಯತ್ನ ಮಾಡಿದರೂ, ದ್ವೇಷದ ವಿರುದ್ಧ ಭಾರತವನ್ನು ಒಗ್ಗೂಡಿಸುವ ಈ ಐತಿಹಾಸಿಕ ಯುದ್ಧವನ್ನು ನಾವು ಗೆಲ್ಲುತ್ತೇವೆ’’ ಎಂದು ರಾಹುಲ್ ಹೇಳಿದ್ದಾರೆ.
ಸಾಕಷ್ಟು ಟೀಕೆಗಳನ್ನು ಎದುರಿಸಿದ ನಂತರ ರೈಲ್ವೆ ಪೊಲೀಸರು ಈಗ ಹಾಜಿ ಅಶ್ರಫ್‌ರ ಮೇಲೆ ಹಲ್ಲೆ ಮಾಡಿದ ಮೂವರು ಆರೋಪಿಗಳ ವಿರುದ್ಧ ಮತ್ತೆ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆೆ.
ದ್ವೇಷ ಹರಡುವ ರಾಜಕಾರಣ ಮಾಡುವವರೇ ಭಾರತವನ್ನು ವಿಶ್ವಗುರು ಎಂದೂ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.
ಆದರೆ ಅದೇ ಭಾರತದ ಅಪಾರ ಸಂಖ್ಯೆಯ ಯುವಕರು ಅಮೆರಿಕಕ್ಕೆ ಕಳ್ಳದಾರಿಯಲ್ಲಿ ಹೋಗುವ ಯತ್ನದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಹೆಚ್ಚುತ್ತಲೇ ಇದೆ.
ಇಲ್ಲಿ ಯುವಕರು ದ್ವೇಷದ ಆಯುಧವಾಗಿ ಬಳಸಲ್ಪಡುತ್ತ ಹಾಳಾಗಿ ಹೋಗುತ್ತಿದ್ದಾರೆ.
ಇಲ್ಲಿ ಹಾಜಿ ಅಶ್ರಫ್ ಎಷ್ಟು ಸಂತ್ರಸ್ತರೋ, ಅವರ ಮೇಲೆ ಅಮಾನುಷವಾಗಿ ದಾಳಿ ಮಾಡಿರುವ ಆ ಯುವಕರೂ ಅಷ್ಟೇ ಸಂತಸ್ತರು. ಅವರ ಮೆದುಳಿಗೆ ಸುಳ್ಳು ಹಾಗೂ ಮನಸ್ಸಿಗೆ ದ್ವೇಷದ ವಿಷ ತುಂಬಿ ದಾರಿ ತಪ್ಪಿಸಲಾಗಿದೆ. ಅಂತಹ ಯುವಕರೇ ಇಲ್ಲಿ ಯಾವುದೇ ಉದ್ಯೋಗ ಸಿಗದೇ ಕೊನೆಗೆ ಹತಾಶರಾಗಿ ಇಸ್ರೇಲ್, ರಶ್ಯದಂತಹ ದೇಶಗಳಿಗೆ ಹೋಗಿ ಅವರ ಯುದ್ಧದಲ್ಲಿ ಪಾಲ್ಗೊಂಡು ಪ್ರಾಣ ಕಳೆದುಕೊಳ್ಳುವ ಚಿಂತಾಜನಕ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ದ್ವೇಷದ ವಿರುದ್ಧ ದೇಶವನ್ನು ಒಗ್ಗೂಡಿಸುವ ರಾಹುಲ್ ಕಲ್ಪನೆಗೆ ವಾಸ್ತವಿಕ ಬಲ ಬರಲೇಬೇಕಾದ ತುರ್ತಿನ ಹೊತ್ತಲ್ಲಿ ಇದ್ದೇವೆ ಎಂಬ ಎಚ್ಚರ ಎಲ್ಲರಲ್ಲೂ ಮೂಡಿದರೆ ಅಲ್ಲಿಂದಲೇ ದೊಡ್ಡ ಗೆಲುವೊಂದರ ಆರಂಭವೂ ಆಗಲಿದೆ. ಮತ್ತೊಬ್ಬ ಹಾಜಿ ಅಶ್ರಫ್ ಇಂಥ ವಿವೇಕಹೀನರಾದ ಮತ್ತು ಮನಸ್ಸಿನ ತುಂಬ ದ್ವೇಷವನ್ನೇ ತುಂಬಿಕೊಂಡ ಹುಡುಗರ ಕೈಗೆ ಸಿಗದಂತಾಗಲಿ ಎಂದು ಪ್ರಾರ್ಥಿಸೋಣ.
ಹಾಗೆಯೇ ಡಾಕ್ಟರ್, ಇಂಜಿನಿಯರ್, ಅಧ್ಯಾಪಕ, ವಕೀಲ, ಪತ್ರಕರ್ತ, ಎಂಎಲ್‌ಎ, ಎಂಪಿ ಆಗಬೇಕಾದ ನಮ್ಮ ಯುವಕರು ಯಾರದ್ದೋ ರಾಜಕೀಯ ಲಾಭಕ್ಕಾಗಿ ಕ್ರಿಮಿನಲ್‌ಗಳಾಗುತ್ತಿರುವುದನ್ನು ಗುರುತಿಸೋಣ. ಅದನ್ನು ತಡೆಯೋಣ.