ಜನ ಗಣ ಮನ' ರಾಷ್ಟ್ರಗೀತೆಯಾಗಿ ಆಯ್ಕೆಯಾಗಿದ್ದರ ಹಿಂದೆ...

Update: 2024-01-29 06:25 GMT

Photo: wiki/Rabindranath_Tagore

 ಭಾಗ-1

ಜನಗಣಮನ-ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ!

ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲ ಜಲಧಿತರಂಗ

ತವ ಶುಭ ನಾಮೇ ಜಾಗೇ,

ತವ ಶುಭ ಆಶಿಷ ಮಾಗೇ,

ಗಾಹೇ ತವ ಜಯಗಾಥಾ.

ಜನಗಣಮಂಗಳದಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ!

ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ.

ಇಂದು ನಮಗೆಲ್ಲರಿಗೂ 52 ಸೆಕೆಂಡುಗಳಲ್ಲಿ ಹಾಡಲಾಗುವ ಜನ ಗಣ ಮನ ಗೊತ್ತಿದೆ. ಆದರೆ ಅದು ರಾಷ್ಟ್ರಗೀತೆಯಾದ ಕಥೆ ತುಂಬ ರೋಚಕ.

ಜನವರಿ 1912. ಶಾಂತಿನಿಕೇತನವು ಬ್ರಿಟಿಷ್ ಅಧಿಕಾರಿಗಳ ಶಿಕ್ಷಣಕ್ಕೆ ಸೂಕ್ತವಾಗಿಲ್ಲ ಎಂದು ಘೋಷಿಸುವ ಅಧಿಸೂಚನೆಯೊಂದನ್ನು ಬ್ರಿಟಿಷ್ ಆಡಳಿತ ಹೊರಡಿಸಿತು. ಅಧಿಕಾರಿಗಳು ಶಾಂತಿನಿಕೇತನದಲ್ಲಿ ಮಕ್ಕಳನ್ನು ಓದಿಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಬ್ರಿಟಿಷ್ ಸರಕಾರ ನೀಡಿತು.

ಇದಕ್ಕೆ ಕಾರಣ ಈಗ ಜೆಎನ್‌ಯು ವಿಚಾರದಲ್ಲಿ ಹೇಗೆ ಸರಕಾರ ಅನುಮಾನ ಹೊಂದಿದೆಯೋ ಅಂಥದೇ ಅನುಮಾನ ಅವತ್ತು ಶಾಂತಿನಿಕೇತನದ ಬಗ್ಗೆ ಬ್ರಿಟಿಷ್ ಸರಕಾರಕ್ಕೆ ಇತ್ತು.

ಅದೇನೇ ಇದ್ದರೂ ಬ್ರಿಟಿಷ್ ಸರಕಾರ ಹಾಗೊಂದು ಯೋಚನೆ ಮಾಡುವಷ್ಟರಲ್ಲಿ ತಡವಾಗಿತ್ತು. ಅಂಥದೊಂದು ಘೋಷಣೆಯನ್ನು ಬ್ರಿಟಿಷರು ಮಾಡುವುದಕ್ಕೆ ಸ್ವಲ್ಪ ಮುಂಚೆ, ಒಂದು ತಿಂಗಳ ಮೊದಲು 1911ರ ಡಿಸೆಂಬರ್ 11ರಂದು ಅದೇ ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಗೋರರು ಒಂದು ಗೀತೆ ಬರೆದಿದ್ದರು. ಅದು ಲಕ್ಷಗಟ್ಟಲೆ ಜನರನ್ನು ಕ್ರಾಂತಿಕಾರಿಗಳನ್ನಾಗಿಸಲಿಕ್ಕಿತ್ತು.

ಆ ಗೀತೆಯ ಹೆಸರೇ ‘ಭಾರತೊ ಭಾಗ್ಯೊ ಬಿಧಾತ’.

1911ರ ಡಿಸೆಂಬರ್ 27ರಂದು ಕೋಲ್ಕತಾದಲ್ಲಿ ಕಾಂಗ್ರೆಸ್ ಸಮ್ಮೇಳನ ನಡೆದಾಗ, ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಮೊದಲ ಬಾರಿಗೆ ಈ ಗೀತೆಯನ್ನು ಹಾಡಲಾಯಿತು.

1919ರ ಫೆಬ್ರವರಿ 28ರಂದು ರವೀಂದ್ರರು ಬೆಸೆಂಟ್ ಥಿಯೊಸೊಫಿಕಲ್ ಕಾಲೇಜಿಗೆ ಹೋದರು. ಪ್ರಾರ್ಥನಾ ಸಭೆಯಲ್ಲಿ ಅವರು ಈ ಗೀತೆಯನ್ನು ಇಡೀ ಕಾಲೇಜಿನವರ ಎದುರು ಹಾಡಿದರು.ಅದು ಎಲ್ಲರ ಮೇಲೆಯೂ ಮಾಂತ್ರಿಕ ಪರಿಣಾಮವನ್ನೇ ಬೀರಿತ್ತು.

ಆ ಕಾಲೇಜಿನ ಉಪಾಧ್ಯಕ್ಷೆಯಾಗಿದ್ದ ಮಾರ್ಗರೆಟ್ ಕಸಿನ್ಸ್ ಈ ಗೀತೆಯನ್ನು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸುತ್ತಾರೆ.

‘‘ಗೀತೆಯ ಮೊದಲ ನುಡಿ ಭೌಗೋಳಿಕ ಚಿತ್ರವನ್ನು ಕೊಡುತ್ತದೆ. ನಮ್ಮ ದೇಶದ ಪರ್ವತಗಳನ್ನು ನದಿಗಳನ್ನು ವರ್ಣಿಸುತ್ತದೆ. ಎರಡನೇ ನುಡಿಯಲ್ಲಿ ಧರ್ಮಗಳು ಬರುತ್ತವೆ. ಅದನ್ನು ಮತ್ತೊಮ್ಮೆ ಹಾಡಲು ನಾವು ಅವರನ್ನು ಕೇಳಿಕೊಂಡೆವು. ಜಯ ಹೇ ಜಯ ಹೇ ಎನ್ನುವಲ್ಲಿ ನಾವು ಅತ್ಯುತ್ಸಾಹದಿಂದ ದನಿಗೂಡಿಸಿದೆವು’’ ಎಂದು ಆಕೆ ಬರೆಯುತ್ತಾರೆ.

ಠಾಗೋರರ ಗೀತೆಯ ರಾಗವನ್ನು ಮಾರ್ಗರೆಟ್ ಕಸಿನ್ಸ್ ತಿಳಿದುಕೊಳ್ಳುತ್ತಾರೆ ಮತ್ತು ಬೆಸೆಂಟ್ ಕಾಲೇಜಿನಲ್ಲಿ ಇಂದಿಗೂ ಆ ಗೀತೆಯನ್ನು ಹಾಡಲಾಗುತ್ತದೆ.

ಗೀತೆಯ ಮೊದಲ ನುಡಿ ನಮಗೆಲ್ಲ ಗೊತ್ತಿದೆ - ‘ಪಂಜಾಬ ಸಿಂಧ ಗುಜರಾತ ಮರಾಠ’. ತಮ್ಮ ಪದಗಳಲ್ಲಿ ಠಾಗೋರರು ಭಾರತದ ಭೂಪಟವನ್ನೇ ರಚಿಸಿದ್ದರು.

ಭೂಪಟ ತುಂಬ ಸಂಕೀರ್ಣ ಆಟ ಎನ್ನುವುದು ಅವರಿಗೆ ಗೊತ್ತಿತ್ತು. ಅವರು ಸ್ವತಃ 1905ರಲ್ಲಿ ಬಂಗಾಳದ ವಿಭಜನೆಯನ್ನು ಕಂಡವರಾಗಿದ್ದರು. ಅದರ ವಿರುದ್ದ ದನಿಯೆತ್ತಿದ್ದರು. ದೇಶವೆಂದರೆ ಬರೀ ಭೂಪ್ರದೇಶವಲ್ಲ, ಅದರ ಜನರೂ ಹೌದು ಎಂಬುದು ಠಾಗೋರರಿಗೆ ತಿಳಿದಿತ್ತು.

ಗೀತೆಯ ಎರಡನೇ ನುಡಿಯಲ್ಲಿ ಅವರು ಬರೆಯುತ್ತಾರೆ:

ಅಹರಹ ತವ ಆಹ್ವಾನ ಪ್ರಚಾರಿತ

ಸುನಿ ತವ ಉದಾರ ವಾಣಿ

ಹಿಂದೂ ಬೌದ್ಧ ಸಿಖ ಜೈನ

ಪಾರಸಿಕ ಮುಸಲ್ಮಾನ ಕ್ರಿಸ್ತಾನಿ

ಪೂರಬ ಪಶ್ಚಿಮ ಆಸೇ

ತವ ಸಿಂಹಾಸನ ಪಾಸೇ

ಪ್ರೇಮಹಾರ ಹಯ ಗಾಥಾ

ನಮ್ಮ ರಾಷ್ಟ್ರಗೀತೆಯಲ್ಲಿ ನಾವಿದನ್ನು ಹಾಡುತ್ತಿಲ್ಲವಾದರೂ, ಈ ಎರಡನೇ ನುಡಿಯ ಉದಾತ್ತ, ಆದರ್ಶಪ್ರಾಯ ಸಂದೇಶ ಸ್ಪಷ್ಟವಿದೆ.

ಹಿಂದೂಗಳು, ಬೌದ್ಧರು, ಸಿಖ್ಖರು, ಜೈನರು, ಪಾರ್ಸಿಗಳು, ಮುಸ್ಲಿಮರು, ಕ್ರೈಸ್ತರು ಹೀಗೆ ಪೂರ್ವದಿಂದ ಪಶ್ಚಿಮದವರೆಗಿನ ಎಲ್ಲರೂ ಒಟ್ಟಾಗಿ ಪ್ರೇಮದ ಹಾರವನ್ನು ಕಟ್ಟುವುದರ ಸುಂದರ ಚಿತ್ರವಿದೆ ಅದರಲ್ಲಿ.

ಈ ನುಡಿಯ ಕಡೆಯಲ್ಲಿ ಠಾಗೋರರು ಬರೆಯುತ್ತಾರೆ:

ಜನ ಗಣ ಐಕ್ಯ ವಿಧಾಯಕ

ಜಯ ಹೇ ಭಾರತ ಭಾಗ್ಯ ವಿಧಾತ

ಅದರ ಅರ್ಥ, ಭಾರತ ಮಾತೆ ಎಲ್ಲರನ್ನೂ ಒಗ್ಗೂಡಿಸುತ್ತಾಳೆ, ಎಲ್ಲರಲ್ಲಿಯೂ ಒಗ್ಗಟ್ಟನ್ನು ತರುತ್ತಾಳೆ ಎಂದು.

ಕುತೂಹಲಕಾರಿಯೆಂದರೆ, ಒಂದು ಕಾಕತಾಳೀಯ ಘಟನೆ ನಡೆಯುತ್ತದೆ. ಠಾಗೋರರು ಈ ಗೀತೆಯನ್ನು ಬರೆದ ಮಾರನೇ ದಿನವೇ, ಅಂದರೆ 1911ರ ಡಿಸೆಂಬರ್ 12ರಂದು 5ನೇ ಕಿಂಗ್ ಜಾರ್ಜ್ ಬಂಗಾಳ ವಿಭಜನೆ ನಿರ್ಧಾರ ವಾಪಸ್ ಪಡೆಯುತ್ತಾನೆ. ಜನರು ಬ್ರಿಟಿಷ್ ಸರಕಾರದ ಆದೇಶದ ವಿರುದ್ಧ ಎತ್ತಿದ್ದ ದನಿಗೆ ಸರಕಾರ ಮಣಿಯುತ್ತದೆ.

ಠಾಗೋರರ ಭಾರತ ಮಾತೆ ಹಿಂದೂ ಅಥವಾ ಮುಸ್ಲಿಮ್ ಆಗಿರಲಿಲ್ಲ. ದೇವರು ಪ್ರಕೃತಿಯಲ್ಲಿನ ಆಧ್ಯಾತ್ಮಿಕ ಶಕ್ತಿಯೇ ಹೊರತು ಕೋಮಿಗೆ ಸಂಬಂಧಿಸಿದ್ದಲ್ಲ. ಅಂತರ್ಗತ ಮಾನವೀಯತೆಯೇ ಠಾಗೋರರ ಪ್ರಧಾನ ನಿಲುವಾಗಿತ್ತು. ರಿಪಬ್ಲಿಕ್ ಅನ್ನುವುದಕ್ಕೆ ಗಣತಂತ್ರ ಎನ್ನುತ್ತೇವೆ. ಗಣ ಎಂದರೆ ಸಮಾನತೆಯ ಗಣರಾಜ್ಯದ ಕಲ್ಪನೆ. ಠಾಗೋರರ ಗೀತೆಯ ಆಧಾರವೇ ಗಣ.

ನೆನಪಿಡಬೇಕು, ಠಾಗೋರರು ಭಾರತದ ರಾಷ್ಟ್ರಗೀತೆಯನ್ನು ಮಾತ್ರವೇ ಬರೆದಿಲ್ಲ. ಅವರ ‘ಅಮರ್ ಸೋನಾರ್ ಬಾಂಗ್ಲಾ’ ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಮಾಡಿಕೊಂಡಿದೆ.

ಅಂಥ ದೊಡ್ಡ ಕವಿಯನ್ನು ಧರ್ಮದ ಹೆಸರಿನಲ್ಲಿ ಮಾತ್ರವಲ್ಲ, ದೇಶದ ಹೆಸರಿನಲ್ಲಿ ಕೂಡ ಬೇರೆಯೆಂದು ನೋಡಲಾಗದು. ಹಾಗಾಗಿಯೇ ಈ ಗೀತೆ ಅತ್ಯಂತ ಜನಪ್ರಿಯವಾಯಿತು, ಪ್ರಸಿದ್ಧಿ ಪಡೆಯಿತು, ಜನರಿಗೆ ಬಹಳ ಇಷ್ಟವಾಯಿತು. ಯಾಕೆಂದರೆ ಅದು ಧರ್ಮ ಮತ್ತು ರಾಷ್ಟ್ರೀಯತೆಯ ಸಂಕುಚಿತ ಮಿತಿಯ ಆಚೆಗೆ ಇತ್ತು. ಅದೊಂದು ವಿಶಾಲ ಮನೋಭಾವವನ್ನು ಪ್ರತಿಪಾದಿಸಿದ್ದ ಗೀತೆಯಾಗಿತ್ತು.

ಆದರೆ ಯಾವುದನ್ನು ರಾಷ್ಟ್ರಗೀತೆಯಾಗಿ ತೆಗೆದುಕೊಳ್ಳಬೇಕೆಂಬ ಆಯ್ಕೆಯ ಹೊತ್ತಿನಲ್ಲಿ ಇದ್ದುದು ‘ಭಾರತೊ ಭಾಗ್ಯೊ ಬಿಧಾತ’ ಮಾತ್ರ ಆಗಿರಲಿಲ್ಲ. ಇನ್ನೂ ಒಂದು ಗೀತೆ ಆ ರೇಸ್‌ನಲ್ಲಿತ್ತು.

1937ರಲ್ಲಿ ಕಾಂಗ್ರೆಸ್ ‘ವಂದೇ ಮಾತರಂ’ ಗೀತೆಯನ್ನು ಆಶಯವಾಗಿ ಹಾಡುತ್ತಿತ್ತು. ಆ ಸಂಪ್ರದಾಯವನ್ನು ಮುರಿಯಬಾರದು ಎಂಬುದು ಹಲವರ ಭಾವನೆ ಯಾಗಿತ್ತು. ಆದರೆ ಮತ್ತೆ ಕೆಲವರು ಅದು ಹಿಂದೂ ಧಾರ್ಮಿಕ ಗೀತೆ, ಹಾಗಾಗಿ ರಾಷ್ಟ್ರೀಯತೆಯ ಸಭೆಗೆ ಅದು ಸರಿಹೊಂದುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಗ ನೇತಾಜಿ ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. 1937ರ ಅಕ್ಟೋಬರ್‌ನಲ್ಲಿ ಠಾಗೋರರಿಗೆ ನೇತಾಜಿಯವರು ಒಂದು ಪತ್ರ ಬರೆಯುತ್ತಾರೆ. ಈ ವಿಚಾರದಲ್ಲಿ ಏನು ಮಾಡಬಹುದೆಂದು ಕೇಳುತ್ತಾರೆ.

ಠಾಗೋರರ ಉತ್ತರ ಸ್ಪಷ್ಟ ಮತ್ತು ದೃಢವಾಗಿತ್ತು. ಅದು ಹಿಂದೂ ದೇವತೆಯ ಆರಾಧನಾ ಗೀತೆ. ರಾಷ್ಟ್ರಿಯ ಸಭೆಗೆ ಅದು ಸರಿಹೊಂದದು ಎಂದಿದ್ದರು ಠಾಗೋರರು.

ಕೆಲವು ಹಿಂದೂ ರಾಜಕಾರಣಿಗಳು ಅದನ್ನು ಒಪ್ಪದಿದ್ದರೂ ಬೋಸ್ ಒಪ್ಪಿದರು ಮತ್ತು ಕಾಂಗ್ರೆಸ್ ಪಕ್ಷ ಠಾಗೋರರ ಸಲಹೆಯನ್ನು ಪಾಲಿಸಿತು. ನೇತಾಜಿ ಬೋಸ್ ಮತ್ತು ಠಾಗೋರರು ಉತ್ತಮ ಬಾಂಧವ್ಯ ಹೊಂದಿದ್ದರು.

ದುರದೃಷ್ಟಕ್ಕೆ ಠಾಗೋರರು 1941ರಲ್ಲಿ ನಿಧನರಾದರು. ಸ್ವಾತಂತ್ರ್ಯ ಚಳವಳಿ ಆಗ ಉತ್ತುಂಗದಲ್ಲಿತ್ತು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಯಿತು. 1943ರಲ್ಲಿ ಬೋಸ್ ಸಿಂಗಾಪುರದಲ್ಲಿದ್ದರು. ಆಝಾದ್ ಹಿಂದ್ ಫೌಜ್ ಕಟ್ಟಿದ್ದರು. ಅವರ ಸೇನೆಯಲ್ಲಿ ಎಲ್ಲ ಧರ್ಮದವರೂ ಇದ್ದರು. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು ಎಲ್ಲರೂ ಒಗ್ಗಟ್ಟಾಗಿದ್ದರು. ಜಾತಿ ತಾರತಮ್ಯವಿಲ್ಲ ಎಂಬುದೇ ಅವರ ಮುಖ್ಯ ತತ್ವವಾಗಿತ್ತು.

1943ರಲ್ಲಿ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಸಿಂಗಾಪುರದಲ್ಲಿ ನೇತಾಜಿಯವರ ಆಝಾದ್ ಹಿಂದ್ ಫೌಜ್ ಬ್ರಿಟಿಷರ ವಿರುದ್ಧ ಯುದ್ಧ ಘೋಷಿಸಿತ್ತು. ಆಗ ನೇತಾಜಿಯ ಹೋರಾಟಕ್ಕೆ ನಿರಂತರ ದೊಡ್ಡ ಧನ ಸಹಾಯ ಮಾಡುವ ಚೆಟ್ಟಿಯಾರ್ ಸಮುದಾಯ ತನ್ನ ದೇವಾಲಯದ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿತ್ತು. ಆಗ ಧಾರ್ಮಿಕ ತಾರತಮ್ಯ ಮಾಡುವ ದೇವಾಲಯಕ್ಕೆ ತಾನು ಬರುವುದಿಲ್ಲ ಎಂದಿದ್ದರು ನೇತಾಜಿ.

ಕೊನೆಗೂ ಎಲ್ಲರನ್ನೂ ಸೇರಿಸಿಯೇ ಕಾರ್ಯಕ್ರಮ ಮಾಡುವ ಒಪ್ಪಿಗೆಯ ಮೇರೆಗೆ ನೇತಾಜಿ ಅಲ್ಲಿಗೆ ಹೋಗಿದ್ದರು. ಹೋಗುವಾಗ ಅವರು ತನ್ನ ಸೇನೆಯಲ್ಲಿದ್ದ ಹಿರಿಯ ಅಧಿಕಾರಿಗಳಾಗಿದ್ದ ಆಬಿದ್ ಹಸನ್ ಹಾಗೂ ಝಮಾನ್ ಕಿಯಾನಿ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿದ್ದರು.

ನೇತಾಜಿ ಸೇನೆಯಲ್ಲಿ ಮಹಿಳೆಯರೇ ಇದ್ದ ರಾಣಿ ಝಾನ್ಸಿ ರೆಜಿಮೆಂಟ್ ಕೂಡ ಇತ್ತು. 1940ರಲ್ಲಿಯೇ ಬೋಸರು ಅಂಥದೊಂದು ಕ್ರಾಂತಿಕಾರಿ ಹೆಜ್ಜೆ ತೆಗೆದುಕೊಂಡಿದ್ದರೆಂದರೆ ಅಚ್ಚರಿಯಾಗುತ್ತದೆ. ಯಾಕೆಂದರೆ ಸ್ವಾತಂತ್ರ್ಯಾನಂತರ 1992ರ ವರೆಗೂ ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ಇರಲಿಲ್ಲ. ಇವತ್ತಿಗೂ ಸೇನೆಯಲ್ಲಿ ಅವರಿಗೆ ಪ್ರಮುಖ ಪಾತ್ರ ನೀಡುವಲ್ಲಿ ಅಡೆತಡೆಗಳಿವೆ.

ಆದರೆ ನೇತಾಜಿ ಆಗಲೇ ಅಷ್ಟು ದೊಡ್ಡ ಹೆಜ್ಜೆ ತೆಗೆದುಕೊಂಡದ್ದು ಅವರು ಪ್ರಗತಿಪರರಾಗಿದ್ದ ಕಾರಣಕ್ಕೆ ಮಾತ್ರವಾಗಿರಲಿಲ್ಲ. ಅವರಿಗೆ ಸರಳ ಸತ್ಯವೊಂದು ಗೊತ್ತಿತ್ತು. ಭಾರತ ಸ್ವತಂತ್ರವಾಗಬೇಕೆಂದರೆ, ಪ್ರತಿಯೊಬ್ಬರೂ ವರ್ಗ, ಜಾತಿ, ಲಿಂಗ, ಧರ್ಮವನ್ನು ಮರೆಯಬೇಕಿದೆ ಮತ್ತು ದೇಶಕ್ಕಾಗಿ ಒಂದಾಗಬೇಕಿದೆ ಎಂಬ ಸತ್ಯ.

ಈ ಭಾರತೀಯ ಅಸ್ಮಿತೆಯನ್ನು ಮುಖ್ಯವಾಗಿಸಲು ಸ್ವತಂತ್ರ ಭಾರತದ ಸರಕಾರ ಹಿಂದುಸ್ಥಾನಿ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಮಾಡಿತು.

ಸೇನಾ ಸಮವಸ್ತ್ರದ ಭುಜ ಭಾಗದಲ್ಲಿ ತ್ರಿವರ್ಣಧ್ವಜದ ಮಧ್ಯೆ ನೆಗೆಯುವ ಹುಲಿಯ ಚಿತ್ರವಿತ್ತು. ಅದು ಟಿಪ್ಪುವಿನ ಬಂಡಾಯವನ್ನು ನೆನಪಿಸುವ ಉದ್ದೇಶದ್ದಾಗಿತ್ತು.

ನಾಗರಿಕ ಸೇವೆಯಲ್ಲಿರುವವರ ಬ್ಯಾಡ್ಜ್ ಮೇಲೆ ವಿಶ್ವಾಸ, ಏಕತೆ, ಬಲಿದಾನ ಎಂಬ ಚಳವಳಿಯ ಧ್ಯೇಯವಿತ್ತು.

ಅವೇ ಪದಗಳನ್ನು ಸೈನಿಕರ ಬ್ಯಾಡ್ಜ್ ಮೇಲೆಯೂ ಇತ್ತೆಫಾಕ್, ಏತ್ಮಾದ್ ಮತ್ತು ಕುರ್ಬಾನಿ ಎಂದು ಬರೆಯಲಾಗಿತ್ತು.

1942ರ ಸೆಪ್ಟಂಬರ್ 11. ಜರ್ಮನ್ ಇಂಡಿಯನ್ ಸೊಸೈಟಿಯನ್ನು ನೇತಾಜಿ ಸುಭಾಷ್ ಚಂದ್ರ ಬೋಸರು ಹ್ಯಾಂಬರ್ಗ್‌ನಲ್ಲಿ ಉದ್ಘಾಟಿಸಿದರು. ಅಲ್ಲಿ ಅವರು ಠಾಗೋರರ ಭಾರತೊ ಭಾಗ್ಯೊ ಬಿಧಾತದ 55 ಸೆಕೆಂಡುಗಳ ಆವೃತ್ತಿಯನ್ನು ಪರಿಚಯಿಸಿದ್ದರು.

ಚೇಂಬರ್ ಆರ್ಕೆಸ್ಟ್ರಾ ಆಫ್ ರೇಡಿಯೊ ಹ್ಯಾಂಬರ್ಗ್ ಹೆಸರಿನ ಬ್ಯಾಂಡ್ ಅದನ್ನು ನುಡಿಸಿತ್ತು. ಠಾಗೋರರ ಸಂಗೀತ ದೇಶದ ಎಲ್ಲ ಪ್ರದೇಶ ಮತ್ತು ಧರ್ಮಗಳನ್ನು ಪ್ರತಿನಿಧಿಸುತ್ತದೆ ಎಂದು ಬೋಸ್ ನಂಬಿದ್ದರು.

ಅಷ್ಟು ಮಾತ್ರವಲ್ಲ, ಠಾಗೋರರು ತಮ್ಮ ಗೀತೆಯಲ್ಲಿ ಸಂಕಟಗಳು ಮತ್ತು ಕ್ರಾಂತಿಯ ಬಗ್ಗೆಯೂ ಬರೆದಿದ್ದರು. ಅದು ಆಝಾದ್ ಹಿಂದ್ ಫೌಜ್‌ನ ಕಟು ವಾಸ್ತವವೇ ಆಗಿತ್ತು.

ಮೂರನೇ ನುಡಿಯಲ್ಲಿ ಠಾಗೋರರು ಹೇಳಿದ್ದರು:

ಪತನ ಅಭ್ಯುದಯ ಬಂಧುರಪಂಥಾ

ಯುಗ ಯುಗ ಧಾವಿತ ಯಾತ್ರಿ

ತುಮಚಿರ ಸಾರಥಿ ತವ ರಥಚಕ್ರೇ

ಮುಖರಿತ ಪಥ ದಿನರಾತ್ರಿ

ದಾರುಣ ವಿಪ್ಲವ ಮಾಜೇ

ತವ ಶಂಖ ಧ್ವನಿ ಬಾಜೇ

ಸಂಕಟ ದುಃಖತ್ರಾತಾ

(ಈ ಎಲ್ಲ ಸಂಕಟಗಳ ನಡುವೆಯೇ ನಾವು ಮುನ್ನಡೆಯಬೇಕಿದೆ.

ಮತ್ತು ಭಾರತಮಾತೆ ನಮ್ಮ ದಾರಿಯಲ್ಲಿ ಮಾರ್ಗದರ್ಶಕಳಾಗಿದ್ದಾಳೆ.

ರಕ್ತಕ್ರಾಂತಿಯ ನಡುವೆಯೂ ಕಷ್ಟಗಳು ಮತ್ತು ನೋವಿನಿಂದ ಬಿಡುಗಡೆಗೊಳಿಸುವ ನಿನ್ನ ದನಿ ನಮಗೆ ಕೇಳಿಸುತ್ತದೆ.)

ಜನ ಗಣ ಪಥಪರಿಚಾಯಕ

ಜಯ ಹೇ ಭಾರತ ಭಾಗ್ಯವಿಧಾತ

(ನಮ್ಮ ಕಠಿಣ ಸ್ಥಿತಿಯಲ್ಲಿ ದಾರಿ ತೋರುತ್ತಿರುವ ಭಾರತ ಮಾತೆಗೆ ಜಯವಾಗಲಿ)

ನಮ್ಮ ಕ್ರಾಂತಿಕಾರಿ ನಾಯಕರುಗಳಾದ ಅಂಬೇಡ್ಕರ್, ಭಗತ್ ಸಿಂಗ್, ನೇತಾಜಿ ಬೋಸ್ ಇವರೆಲ್ಲ ನಡೆದ ಹಾದಿಯ ಕಲ್ಪನೆ ನಮಗೆ ಇದ್ದದ್ದೇ ಆದಲ್ಲಿ ಅವರೆಲ್ಲರ ಜೀವನಯಾನ, ಅವರ ಹೋರಾಟ, ಸಂಘರ್ಷದ ಚಿತ್ರವನ್ನು ಈ ನುಡಿಗಳು ಕಟ್ಟಿಕೊಡುತ್ತಿರುವುದು ಮನವರಿಕೆಯಾಗುತ್ತದೆ.

ನೇತಾಜಿ ಬೋಸರು ಈ ಗೀತೆಯನ್ನು ಆರಿಸಿಕೊಂಡರು ಮತ್ತು ಕ್ಯಾಪ್ಟನ್ ರಾಮ್ ಸಿಂಗ್ ಅವರ ಆರ್ಕೆಸ್ಟ್ರಾ ಅದಕ್ಕೆ ರಾಗ ಸಂಯೋಜಿಸಿತು.

ಅದು ಕಠಿಣವಾದ ಬಾಂಗ್ಲಾ ಭಾಷೆಯಲ್ಲಿ ರಚನೆಯಾಗಿದ್ದರಿಂದ ಅದನ್ನು ಸರಳ ಹಿಂದುಸ್ಥಾನಿಗೆ ಭಾಷಾಂತರಿಸಲು ನೇತಾಜಿಯವರು ಕ್ಯಾಪ್ಟನ್ ಆಬಿದ್ ಹಸನ್ ಅವರಿಗೆ ಹೇಳುತ್ತಾರೆ. ಆಬಿದ್ ಹಸನ್ ಅದನ್ನು ಭಾಷಾಂತರಿಸುತ್ತಾರೆ. ಅದು ಆಝಾದ್ ಹಿಂದ್

ಫೌಜ್‌ನ ರಾಷ್ಟ್ರಗೀತೆಯಾಗುತ್ತದೆ.

1945ರಲ್ಲಿ ಸಿಂಗಾಪುರದ ಮೇಲೆ ಬ್ರಿಟಿಷ್ ಪಡೆಗಳು ಪುನಃ ಹಿಡಿತ ಸಾಧಿಸಿದವು. 1945ರ ಆಗಸ್ಟ್‌ನಲ್ಲಿ ವಿಮಾನ ಅಪಘಾತದಲ್ಲಿ ನೇತಾಜಿ ಹುತಾತ್ಮರಾದರು. ಆದರೆ ನೇತಾಜಿ ವಿಚಾರಗಳು ಮತ್ತು ಗೀತೆಯ ಕಥನ ಅಲ್ಲಿಗೇ ಮುಗಿದುಹೋಗಲಿಲ್ಲ.

1947ರಲ್ಲಿ ಸ್ವಾತಂತ್ರ್ಯದ ದಿನ ತಮ್ಮ ಮಧ್ಯರಾತ್ರಿಯ ಭಾಷಣದ ನಂತರ ನೆಹರೂ ಅವರು ಇಡೀ ಸಂವಿಧಾನ ಸಭೆಯೊಂದಿಗೆ ಜನ ಗಣ ಮನ ಹಾಡಿದರು. 1947ರ ಆಗಸ್ಟ್ 16ರಂದು ಕೆಂಪುಕೋಟೆಯ ಮೇಲೆ ನೆಹರೂ ತ್ರಿವರ್ಣಧ್ವಜ ಹಾರಿಸಿದರು.

ಕ್ಯಾಪ್ಟನ್ ರಾಮ್ ಸಿಂಗ್ ಮತ್ತು ಅವರ ಆರ್ಕೆಸ್ಟ್ರಾವನ್ನು ಆಝಾದ್ ಹಿಂದ್ ಫೌಜ್ ನ ಗೀತೆ ಹಾಡಲು ಆಹ್ವಾನಿಸಲಾಗಿತ್ತು.

ಒಂದು ವರ್ಷದ ಬಳಿಕ, 1948 ಆಗಸ್ಟ್ 25ರಂದು, 1942ರಲ್ಲಿ ನೇತಾಜಿ ಆರಿಸಿಕೊಂಡಿದ್ದ ಜನ ಗಣ ಮನದ ಮೊದಲ ನುಡಿಯನ್ನು ರಾಷ್ಟ್ರಗೀತೆಯಾಗಿಸುವ ಪ್ರಸ್ತಾಪವನ್ನು ನೆಹರೂ ಇಟ್ಟರು. ಎಲ್ಲರೂ ಸಮ್ಮತಿಸಿದರು. ಮೂಲ ಬಾಂಗ್ಲಾದ ಆವೃತ್ತಿಯನ್ನೇ ಆರಿಸಿಕೊಳ್ಳಲಾಯಿತು.

1950ರ ಜನವರಿ 24ರಂದು ಈ ಗೀತೆ ನಮ್ಮ ರಾಷ್ಟ್ರಗೀತೆಯಾಯಿತು.

ಠಾಗೋರರು ರಾಷ್ಟ್ರೀಯವಾದಿ ಎನ್ನುವುದಕ್ಕಿಂತ ಹೆಚ್ಚಾಗಿ ಮಾನವತಾವಾದಿಯಾಗಿದ್ದರು. ಆತ್ಮಾವಲೋಕನದ ಗುಣ ಅವರನ್ನು ಇವತ್ತಿನ ದಿನಗಳಲ್ಲಿ ಅಪರೂಪವಾಗಿರುವ ಗುಣವುಳ್ಳವರನ್ನಾಗಿಸಿತ್ತು.

ಭಾರತೊ ಭಾಗ್ಯೊ ಬಿಧಾತದ 4ನೇ ನುಡಿಯಲ್ಲಿ ಠಾಗೋರ್ ಬರೆದಿರುವುದನ್ನು ನೋಡಿ.

ಘೋರ ತಿಮಿರ ಘನ ನಿಬಿಡ ನಿಶೀತೆ

ಪೀಡಿತ ಮೂರ್ಛಿತ ದೇಶೇ

ಜಾಗೃತ ಚಿಲತವ ಅವಿಚಲ ಮಂಗಲ

ನತನಯನೆ ಅನಿಮೇಷೆ

ದುಃಸ್ವಪ್ನೇ ಆತಂಕೇ

ರಕ್ಷಾ ಕರೀಲೆ ಅಂಕೆ

ಸ್ನೇಹಮಯೀ ತುಮಿ ಮಾತಾ

ಜನ ಗಣ ದುಃಖತ್ರಾಯಕ

ಜಯ ಹೇ ಭಾರತ ಭಾಗ್ಯ ವಿಧಾತ

(ದೇಶದ ಜನರು ಕಷ್ಟದಲ್ಲಿರುವಾಗ ಕಾಳಜಿ ವಹಿಸಲು ತಾಯಿ ಭಾರತಿ ಎಚ್ಚರವಾಗಿಯೇ ಇರುತ್ತಾಳೆ.

ದುಃಸ್ವಪ್ನದಿಂದ ನಾವು ಭಯಗೊಂಡಾಗ ತನ್ನ ಮಡಿಲ ಮೇಲೆ ನಮ್ಮನ್ನು ಕರೆದುಕೊಂಡು ಕಾಪಾಡುತ್ತಾಳೆ. ನಮ್ಮ ಎಲ್ಲ ದುಃಖವನ್ನೂ ನಿವಾರಿಸುತ್ತಾಳೆ.)

ಈ ಗೀತೆಯನ್ನು ಬರೆದಾಗ ಠಾಗೋರರು ದುಃಸ್ವಪ್ನಗಳಿಂದ ಭೀತರಾಗಿದ್ದರು. ಬ್ರಿಟಿಷರ ದಾಸ್ಯದಲ್ಲಿದ್ದದ್ದು, ಬಂಗಾಳ ವಿಭಜನೆ, ಬಡತನ, ಹಸಿವು ಆ ದುಸ್ವಪ್ನಗಳಾಗಿದ್ದವು. ನೇತಾಜಿ ಈ ಗೀತೆಯನ್ನು ಆರಿಸಿಕೊಂಡಾಗ ಬಂಗಾಲದಲ್ಲಿ ಭೀಕರ ಬರ ಇತ್ತು.

ಇವತ್ತು ಕೂಡ ಬಹುಶಃ ಬಹಳಷ್ಟು ಮಂದಿ ದುಸ್ವಪ್ನಗಳಿಂದ ಭೀತರಾಗಿದ್ದಾರೆ. ಧಾರ್ಮಿಕ ಅತಿರೇಕ, ಬಡತನ, ನಿರುದ್ಯೋಗ, ಕಳಪೆ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ, ದೊಡ್ಡ ಉದ್ಯಮಿಗಳಡಿಯ ದಾಸ್ಯ ಇವೆಲ್ಲವೂ ಇವೆ. ಹಾಗಾಗಿ ರಾಷ್ಟ್ರಗೀತೆಯ ಮೂಲಕ ದೇಶದ ಬಗೆಗಿನ ಗೌರವದ ಜೊತೆಗೇ ಇದೆಲ್ಲ ವಿವೇಚನೆಯೂ, ವಿವೇಕವೂ ನಮ್ಮಲ್ಲಿ ಮೂಡಬೇಕು.

ಇವತ್ತಿನ ಸವಾಲುಗಳು ದೊಡ್ಡ ವಿಚಾರವಲ್ಲ. ಸಮ್ರಾಜ್ಯಶಾಹಿ ಮತ್ತು ದ್ವೇಷದ ಸವಾಲುಗಳು ಇವತ್ತಿನ ಸವಾಲುಗಳಿಗಿಂತಲೂ ದೊಡ್ಡವಿದ್ದವು. ಅದರೆ ಅಂದಿನವರು ಅದನ್ನು ದಿಟ್ಟವಾಗಿ ಎದುರಿಸಿದರು ಮತ್ತು ಗೆದ್ದರು.

ನೇತಾಜಿ ಮತ್ತು ಆಝಾದ್ ಹಿಂದ್ ಫೌಜ್ ಕಡೆಯತನಕವೂ ಅಪ್ರತಿಮ ದೇಶಭಕ್ತಿ ಮೊೆದದ್ದನ್ನು ಕಂಡಿದ್ದೇವೆ. ಒಂದಲ್ಲ ಒಂದು ದಿನ ದೇಶ ಸ್ವತಂತ್ರವಾಗುತ್ತದೆ, ಬ್ರಿಟಿಷರು ತೊಲಗಲೇ ಬೇಕಾಗುತ್ತದೆ ಎಂಬುದು ಅವರಿಗೆ ಗೊತ್ತಿತ್ತು.

ನಮಗೀಗ ದ್ವೇಷದಿಂದ ಮುಕ್ತಗೊಳ್ಳುವುದು ಬೇಕಿದೆ. ಅಸಹಿಷ್ಣುತೆ, ದ್ವೇಷ, ಹಿಂಸೆಗಳ ದಾಸ್ಯದಿಂದ ಬಿಡುಗಡೆ ಬೇಕಿದೆ.

ಠಾಗೋರರ ಗೀತೆಯ 5ನೇ ನುಡಿಯಲ್ಲಿ ಈ ಆಶಾಭಾವವಿದೆ. ಕೇಳಿ.

ರಾತ್ರ ಪ್ರಭಾತಿಲ ಉರಿಲ ರವಿಚ್ಛಾವೀ

ಪೂರ್ವ ಉದಯಗಿರಿ ಭಾಲೇ

ಗಾಹೇ ವಿಹಂಗಮ ಪುಣ್ಯ ಸಮೀರಣ

ನವಜೀವನ ರಸ ಢಾಲೇ

ತವ ಕರುಣಾರುಣ ರಾಗೇ

ನಿದ್ರಿತ ಭಾರತ ಜಾಗೇ

ತವ ಚರಣೇ ನತ ಮಾತಾ

ರಾತ್ರಿ ಕಳೆದು ಸೂರ್ಯ ಮೂಡಿಬರುತ್ತಾನೆ. ಹಕ್ಕಿಗಳು ಹಾಡುತ್ತವೆ. ಮತ್ತು ಎಲ್ಲರ ಬಾಳಲ್ಲಿಯೂ ತಂಗಾಳಿ ಸೂಸುತ್ತದೆ.

ತಾಯಿಯ ಕರುಣೆಯಿಂದ, ನಿದ್ರಿಸುತ್ತಿರುವ ಭಾರತ ಎಚ್ಚರಗೊಳ್ಳುತ್ತದೆ

ತಾಯಿಯ ಪಾದಕ್ಕೆ ಎಲ್ಲ ಭಾರತೀಯರೂ ತಲೆಬಾಗುತ್ತಾರೆ.

ಹಿಂದೂ, ಮುಸ್ಲಿಮ್, ಸಿಖ್ಖರು, ಕ್ರೈಸ್ತರು, ಜೈನರು, ಬೌದ್ಧರು, ಪಾರ್ಸಿಗಳು ಎಲ್ಲರ ತಾಯಿಯೂ ಒಬ್ಬಳೇ.

ತಾರತಮ್ಯವನ್ನು ಭಾರತ ಮಾತೆ ಎಂದಿಗೂ ಸಹಿಸಳು.

ಈ ದೇಶ ಗಾಂಧೀಜಿ, ಠಾಗೋರ್, ಬೋಸ್, ಅಂಬೇಡ್ಕರ್ - ಅವರೆಲ್ಲರೂ ಕಂಡಿದ್ದ ಕನಸು.

ಠಾಗೋರರು ಬರೆದ ಈ ರಾಷ್ಟ್ರಗೀತೆ ಹಾಡುವಾಗ ಅದರ ಅರ್ಥ ಮತ್ತು ಉದ್ದೇಶವನ್ನು ತಿಳಿಯುವುದು ಈ ಕಾರಣಕ್ಕಾಗಿಯೂ ಬಹಳ ಮುಖ್ಯ.

(ಮಾಹಿತಿ ಕೃಪೆ : ದಿ ದೇಶ್ ಭಕ್ತ್ ಯೂಟ್ಯೂಬ್ ಚಾನಲ್ ನ ಆಕಾಶ್ ಬ್ಯಾನರ್ಜಿ ಹಾಗೂ ಅದ್ವೈತ್)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಆರ್. ಕುಮಾರ್

contributor

Similar News