ಕಾಡು ಎಂಬ ಸಂಪತ್ತು ಬೆಂಕಿಗಾಹುತಿಯಾಗದಿರಲಿ

ಪ್ರತೀ ವರ್ಷವೂ ಕಾಡ್ಗಿಚ್ಚು ಉಂಟಾಗದಂತೆ ನೋಡಿ ಕೊಳ್ಳುವುದು, ಆದಾಗ ನಿಯಂತ್ರಿಸುವುದು ಒಂದು ದೊಡ್ಡ ಸವಾಲು. ಈ ಹಿಂದೆ ಬಂಡೀಪುರ ಕಾಡ್ಗಿಚ್ಚು ಪ್ರಕರಣ ಸಮಾಜಕ್ಕೆ ದೊಡ್ಡ ಪಾಠವನ್ನೇ ಕಲಿಸಿದೆ. ಈ ವಿಷಯದಲ್ಲಿ ಜಾಗೃತಿಯಿಂದ ಇರಬೇಕಾದುದು ಬಹು ಮುಖ್ಯ. ಬೇರೆ ದೇಶಗಳಲ್ಲಿರುವಂತೆ, ನಮ್ಮಲ್ಲೂ ಕಾಡ್ಗಿಚ್ಚು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಯನ್ನು ನಿರ್ಮಿಸಬೇಕಾದ ಅಗತ್ಯವಿದೆ.

Update: 2024-03-03 05:06 GMT

ಕಾಡುಗಳು ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗ. ಪ್ರಕೃತಿ ನೀಡಿರುವ ಅತ್ಯಮೂಲ್ಯ ನೈಸರ್ಗಿಕ ಸಂಪತ್ತು. ಇಂದು ಹಲವಾರು ಕಾರಣಗಳಿಂದಾಗಿ ಕಾಡುಗಳಿಗೆ ಸಮಸ್ಯೆ ಬಂದೊದಗಿದೆ. ಅವುಗಳನ್ನು ಜತನದಿಂದ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಭಾರತ ಸಂವಿಧಾನದ ನಾಲ್ಕನೇ ‘ಎ’ ಭಾಗ, 51ಎ ಪರಿಚ್ಛೇದದಡಿಯಲ್ಲಿ ಬರುವ ಹನ್ನೊಂದು ಮೂಲಭೂತ ಕರ್ತವ್ಯಗಳಲ್ಲಿ ‘‘ದೇಶದ ಕಾಡು, ವನ್ಯಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ ಬೆಳೆಸುವುದು’’ ಕೂಡ ಒಂದು. ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ ಎಂದು ತಿಳಿಯಬೇಕಾದುದು ಮುಖ್ಯ. ಕರ್ನಾಟಕ ಅರಣ್ಯ ಇಲಾಖೆಯ 2022-23ನೇ ವಾರ್ಷಿಕ ವರದಿಯ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆ 40,649.30 ಚದರ ಕಿ.ಮೀ. ಕಾಡುಗಳಿದ್ದು, ಇದು ರಾಜ್ಯ ಭೂಭಾಗದ ಶೇ. 21.19ರಲ್ಲಿ ಆವೃತವಾಗಿವೆ. ಇದು ರಾಷ್ಟ್ರೀಯ ಸರಾಸರಿಗಿಂತ ಕಮ್ಮಿ ಇದೆ. ನಮ್ಮ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ, ಪರಿಸರದ ಸ್ಥಿರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದೇಶದ ಒಟ್ಟು ಭೌಗೋಳಿಕ ಪ್ರದೇಶದ ಶೇ.33ರಷ್ಟು ಅರಣ್ಯಪ್ರದೇಶ ಇರಬೇಕು ಎಂದಿದೆ. ಆದರೆ ದೇಶದಲ್ಲಿ ಅಷ್ಟು ಪ್ರಮಾಣದ ಕಾಡುಗಳಿಲ್ಲ.

ಕರ್ನಾಟಕದಲ್ಲಿ ಬೇಸಿಗೆ ಆರಂಭವಾಯಿತೆಂದರೆ ಒಂದೊಂದೇ ಸಮಸ್ಯೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಇವುಗಳಲ್ಲಿ ತಾಪಮಾನ ಹೆಚ್ಚಳ ಮತ್ತು ಅದರಿಂದಾಗುವ ಆರೋಗ್ಯ ಸಮಸ್ಯೆಗಳು, ಕುಡಿಯುವ ನೀರಿನ ತೊಂದರೆ, ಮೇವಿನ ಕೊರತೆ, ನದಿ ನೀರು ಭಾಗಶಃ ಬತ್ತಿಹೋಗುತ್ತಿರುವುದು (ಇತ್ತೀಚೆಗೆ ಪಶ್ಚಿಮ ಘಟ್ಟಗಳ ನದಿಗಳು ಈ ತೊಂದರೆಯನ್ನೆದುರಿಸುತ್ತಿವೆ), ಕಾಡ್ಗಿಚ್ಚು ಪ್ರಮುಖವಾದವು. ಬೇಸಿಗೆಯಲ್ಲಿ ಕಾಡ್ಗಿಚ್ಚು ಉಂಟಾಗುವುದು ಸಾಮಾನ್ಯವಾದರೂ, ನೈಸರ್ಗಿಕ ಕಾರಣಗಳಿಗಿಂತಲೂ ಮನುಷ್ಯನ ಪ್ರಮಾದದಿಂದಾಗಿ ಕಾಡ್ಗಿಚ್ಚು ಹೆಚ್ಚಾಗಿ ಸಂಭವಿಸುತ್ತದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 2019ರಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಆದ ನಷ್ಟ ಅಪಾರ. ಹತ್ತು ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಆಗ ಬೆಂಕಿಗೆ ಆಹುತಿಯಾಯಿತು. ದೊಡ್ಡ ಪ್ರಮಾಣದಲ್ಲಿ ಸಸ್ತನಿಗಳ ಸಾವು ಸಂಭವಿಸದೆ ಇದ್ದರೂ, ಅನೇಕ ಬೆಲೆಬಾಳುವ ಮರಗಳು, ಸಣ್ಣಪುಟ್ಟ ಸಸ್ತನಿಗಳು ಹಾಗೂ ಸರೀಸೃಪಗಳ ಜೀವಹಾನಿಯಾಯಿತು. ನಾಲ್ಕು ದಿನಗಳ ಬಳಿಕ ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ವಾಯುಪಡೆಯ ಹೆಲಿಕಾಪ್ಟರ್ ಬಳಕೆಯ ಜೊತೆಗೆ, ನಾಗರಿಕರ ಅವಿರತ ಸಹಕಾರದಿಂದ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲಾಯಿತು. ಬಹುಶಃ ಕರ್ನಾಟಕ ಹಿಂದೆಂದೂ ಕಾಣದಂತಹ ದೊಡ್ಡ ಅವಘಡ ಇದಾಗಿತ್ತು.

ಕರ್ನಾಟಕದಲ್ಲಿ ಬೇಸಿಗೆ ಮಾರ್ಚ್‌ನಿಂದ ಶುರುವಾಗಿ ಮುಂಗಾರು ಪ್ರಾರಂಭವಾಗುವವರೆಗೂ ಇರುತ್ತದೆ. ಆದರೆ, ಪೂರ್ವ ಮುಂಗಾರು ಸ್ವಲ್ಪಮಟ್ಟಿಗೆ ಸಮಾಧಾನ ತರುತ್ತದೆ. ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ಅತ್ಯಂತ ಹೆಚ್ಚಿನ ತಾಪಮಾನ ದಾಖಲಾಗುತ್ತದೆ. ಕರ್ನಾಟಕದ ಈಶಾನ್ಯ ಜಿಲ್ಲೆಗಳಲ್ಲಿ 40 ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗುತ್ತದೆ. ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ಚಳಿಗಾಲವಿದ್ದರೂ, ಬೇಸಿಗೆಗೂ ಮೊದಲೇ ಎಲೆಗಳು ಉದುರಲು ಶುರುವಾಗುತ್ತದೆ. ಕಳೆದ ವರ್ಷ ಮುಂಗಾರು ಮಳೆ ಸರಿಯಾಗಿ ಬೀಳದ ಕಾರಣ, ಈ ಬಾರಿ ಫೆಬ್ರವರಿ ಪ್ರಾರಂಭದಿಂದಲೇ ನಮ್ಮೆಲ್ಲರಿಗೂ ಬೇಸಿಗೆಯ ಅನುಭವವಾಗಿದೆ. ಪೂರ್ವಮುಂಗಾರು ಕಾಡ್ಗಿಚ್ಚು ಸಂಭವಿಸುವುದನ್ನು ಸ್ವಲ್ಪಮಟ್ಟಿಗೆ ತಡೆದರೂ, ಜೂನ್ ಮೊದಲ ವಾರದಲ್ಲಿ ಬರುವ ಮುಂಗಾರು ಮಳೆ ಭೂಮಿಗೆ ಜೀವಕಳೆ ತಂದುಕೊಡುತ್ತದೆ.

ಕಾಡುಗಳ ನಾಶಕ್ಕೆ ಕಾಡ್ಗಿಚ್ಚು ಕೂಡ ಒಂದು ಪ್ರಮುಖ ಕಾರಣ. ಇದರಿಂದಾಗಿ ಗಿಡ, ಮರ, ಪೊದೆಗಳು ಸೇರಿದಂತೆ ಹಲವಾರು ಸಸ್ಯಪ್ರಭೇದಗಳು ನಾಶವಾಗುವ ಜೊತೆಗೆ, ಕಾಡುಗಳಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಸಾವಯವ ಗೊಬ್ಬರ ಪ್ರಕ್ರಿಯೆ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಮರಗಳ ಘರ್ಷಣೆಯ ಮೂಲಕ, ಬಿದಿರಿನ ಮಸೆತದಿಂದಾಗಿ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಕಾಡುಗಳನ್ನು ಬೆಂಕಿಯಿಂದ ರಕ್ಷಿಸಲು ಮರ, ಗಿಡ, ಪೊದೆಗಳನ್ನು ತೆರವುಗೊಳಿಸುವ ಮೂಲಕ ಫೈರ್‌ಲೈನ್ ನಿರ್ಮಿಸಿ ಎಲ್ಲಿಯೂ ಬೆಂಕಿ ಬೀಳದಂತೆ, ಬಿದ್ದರೂ ಹರಡದಂತೆ ನೋಡಿಕೊಳ್ಳಬಹುದು. ಅರಣ್ಯಪ್ರದೇಶದಲ್ಲಿ ಫೈರ್‌ಲೈನ್ ನಿರ್ಮಿಸುವುದು ಅರಣ್ಯ ಇಲಾಖೆ ಸಿಬ್ಬಂದಿಯ ಪಾಲಿಗೆ ಸವಾಲಿನ ಕೆಲಸವಾಗಿದ್ದು, ಅದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಫೈರ್‌ಲೈನ್ ನಿರ್ಮಿಸುವಾಗಲೇ ಕಾಡಿನ ಇತರ ಭಾಗಕ್ಕೆ ಬೆಂಕಿ ಬಿದ್ದು ಸಮಸ್ಯೆ ಉಲ್ಬಣಗೊಳ್ಳಬಹುದು. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದನ್ನು ತಹಬಂದಿಗೆ ತರುವ ಒತ್ತಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಜೀವಹಾನಿಯಾದ ಉದಾಹರಣೆಗಳೂ ಇವೆ. ಈ ಕಾರ್ಯವನ್ನು ಕೈಗೊಳ್ಳಲು ಅರಣ್ಯ ಇಲಾಖೆಯು ತನ್ನ ಸಿಬ್ಬಂದಿಗೆ ಅಗತ್ಯವಿರುವ ಅತ್ಯಾಧುನಿಕ ಸಲಕರಣೆಗಳನ್ನು ಆದ್ಯತೆಯ ಮೇರೆಗೆ ಒದಗಿಸಬೇಕು.

ಪ್ರತೀ ವರ್ಷವೂ ಕಾಡ್ಗಿಚ್ಚು ಉಂಟಾಗದಂತೆ ನೋಡಿ ಕೊಳ್ಳುವುದು, ಆದಾಗ ನಿಯಂತ್ರಿಸುವುದು ಒಂದು ದೊಡ್ಡ ಸವಾಲು. ಈ ಹಿಂದೆ ಪ್ರಸ್ತಾಪಿಸಿದಂತೆ ಬಂಡೀಪುರ ಕಾಡ್ಗಿಚ್ಚು ಪ್ರಕರಣ ಸಮಾಜಕ್ಕೆ ದೊಡ್ಡ ಪಾಠವನ್ನೇ ಕಲಿಸಿದೆ. ಈ ವಿಷಯದಲ್ಲಿ ಜಾಗೃತಿಯಿಂದ ಇರಬೇಕಾದುದು ಬಹು ಮುಖ್ಯ. ಬೇರೆ ದೇಶಗಳಲ್ಲಿರುವಂತೆ, ನಮ್ಮಲ್ಲೂ ಕಾಡ್ಗಿಚ್ಚು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಯನ್ನು ನಿರ್ಮಿಸಬೇಕಾದ ಅಗತ್ಯವಿದೆ. ಅರಣ್ಯಪ್ರದೇಶಗಳಲ್ಲಿ ಬೆಂಕಿ ಬೀಳಬಹುದಾದ ಸೂಕ್ಷ್ಮ ಪ್ರದೇಶಗಳನ್ನು ಮೊದಲೇ ಗುರುತಿಸಬೇಕಾದುದು ಆದ್ಯತೆಯಾಗಬೇಕು. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಅಂಥ ಸೂಕ್ಷ್ಮ ಪ್ರದೇಶಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿಡುವುದರಿಂದ, ಒಂದು ವೇಳೆ ಕಾಡ್ಗಿಚ್ಚು ಕಾಣಿಸಿಕೊಂಡರೂ, ಬೆಂಕಿ ಅಷ್ಟಾಗಿ ಹರಡದಿರುವ ಹಾಗೆ ತಡೆಯಬಹುದು. ಈ ಕೆಲಸದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದರಿಂದ ಸಂಕಷ್ಟದ ಸಮಯದಲ್ಲಿ ಮಾನವ ಸಂಪನ್ಮೂಲ ಉಪಯೋಗಕ್ಕೆ ಬರುತ್ತದೆ. ಪೊಲೀಸರು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಹೋಂಗಾರ್ಡ್ಸ್‌ಗಳನ್ನು ಬಳಸಿಕೊಳ್ಳುವ ರೀತಿಯಲ್ಲಿ ಅರಣ್ಯ ಇಲಾಖೆಯೂ ಹೆಚ್ಚುವರಿ ಸಿಬ್ಬಂದಿಯನ್ನು ಹೊಂದಬೇಕಾದ ಅವಶ್ಯಕತೆ ಇದೆ, ಇದಕ್ಕೆ ಹೊಸ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಜೊತೆಗೆ ಆಧುನಿಕ ತಂತ್ರಜ್ಞಾನದ ನೆರವನ್ನೂ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕಾಡುಗಳ ಸಂರಕ್ಷಣೆ ಬಗ್ಗೆ ಶಾಲಾಕಾಲೇಜುಗಳು, ಕಾಡಂಚಿನ ಗ್ರಾಮಸ್ಥರು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು; ಅಂಥ ಸಂರಕ್ಷಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಉತ್ತೇಜಿಸಬೇಕು. ಬೇಸಿಗೆಯಲ್ಲಿ ಕಾಡಂಚಿನ ಗ್ರಾಮಸ್ಥರನ್ನು ಪರಿಸರ ರಾಯಭಾರಿಗಳಾಗಿ ಅಥವಾ ಸ್ವಯಂಸೇವಕರಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಬಹುದು. ಹಾಗಾದಾಗ ಕಾಡಂಚಿನ ಗ್ರಾಮಸ್ಥರಿಗೆ ಸ್ವಲ್ಪ ದಿನಗಳ ಮಟ್ಟಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕಾಡುಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಒಟ್ಟಾರೆ, ಮಳೆಗಾಲ ಆರಂಭವಾಗುವವರೆಗೆ ಕಾಡುಗಳನ್ನು ಬೆಂಕಿಯಿಂದ ರಕ್ಷಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಮರೆಯದಿರೋಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರಸಾದ್ ಜಿ.ಎಂ. ಮೈಸೂರು

contributor

Similar News