ಕಾಫಿನಾಡಿನಿಂದ ಕಣ್ಮರೆಯಾಗುತ್ತಿವೆ ಮಲೆನಾಡಿನ ಗಿಡ್ಡ ತಳಿ ಜಾನುವಾರು

Update: 2024-06-24 08:52 GMT

ಚಿಕ್ಕಮಗಳೂರು: ಮಲೆನಾಡಿನಾದ್ಯಂತ ಕಂಡು ಬರುತ್ತಿದ್ದ ಮಲೆನಾಡಿನ ಗಿಡ್ಡ ತಳಿಗಳ ಜಾನುವಾರುಗಳನ್ನು ಸಾಕಣೆ, ನಿರ್ವಹಣೆ ಮಾಡಲಾಗದೇ ಮಾರಾಟ ಮಾಡುತ್ತಿರುವುದರಿಂದ ಕಣ್ಮರೆಯಾಗುತ್ತಿವೆ. ಇದು ಮುಂದುವರಿದಲ್ಲಿ ಈ ತಳಿಯ ಜಾನುವಾರುಗಳು ಅವಸಾನದ ಅಂಚಿಗೆ ತಲುಪುವುದು ನಿಶ್ಚಿತ.

ಮಲೆನಾಡಿನಲ್ಲಿ ಈ ಹಿಂದೆ ಪ್ರತೀ ಮನೆಗಳ ಕೊಟ್ಟಿಗೆಗಳಲ್ಲೂ ಜಾನುವಾರುಗಳು ತುಂಬಿಕೊಂಡಿದ್ದವು. ಜಾನುವಾರುಗಳನ್ನು ಗೋಮಾಳಗಳಿಗೆ ಬಿಟ್ಟು ಮೇಯಿಸಿಕೊಂಡು ಬರಲು ದನ ಕಾಯುವ ವ್ಯಕ್ತಿಯೊಬ್ಬ ಮೀಸಲಿರುತ್ತಿದ್ದ. ಊರಿನ ಎಲ್ಲ ಜಾನುವಾರುಗಳನ್ನು ಗೋಮಾಳದಲ್ಲಿ ಮೇಯಿಸಿಕೊಂಡು ಬರಲು ಈ ಹಿಂದೆ ಗೋಪಾಲಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಮಳೆಗಾಲ ಮುಗಿದು ಪೈರುಗಳ ಕೊಯ್ಲು ಮುಗಿದ ಮೇಲೆ ಜಾನುವಾರುಗಳನ್ನು ಭತ್ತದ ಗದ್ದೆಗಳಲ್ಲಿ ಮೇಯಲು ಬಿಡಲಾಗುತ್ತಿತ್ತು. ಸದ್ಯ ಮಲೆನಾಡು ಭಾಗದಲ್ಲಿ ಗೋಮಾಳಗಳು ಒತ್ತುವರಿದಾರರು, ಪ್ರಭಾವಿಗಳ ಪಾಲಾಗಿದ್ದು, ಗೋಮಾಳಗಳಿಲ್ಲದೇ ದನ ಮೇಯಿಸುತ್ತಿದ್ದವರಿಗೂ ಕೆಲಸ ಇಲ್ಲದಂತಾಗಿದೆ.

ಮಲೆನಾಡಿನಲ್ಲಿ ಈ ಹಿಂದೆ ಗಿಡ್ಡ ತಳಿಗಳ ಜಾನುವಾರುಗಳನ್ನು ನಂಬಿಕೊಂಡು ಸಾವಿರಾರು ಬಡ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿದ್ದವು. 10-20 ಜಾನುವಾರುಗಳನ್ನು ಸಾಕುತ್ತಿದ್ದ ಈ ಕುಟುಂಬಗಳು ಹಸುಗಳನ್ನು ಗೋಮಾಳಗಳಲ್ಲಿ ಮೇಯಿಸಿಕೊಂಡು ಹಾಲು, ತುಪ್ಪ ಮಾರಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ ಜಾನುವಾರುಗಳಿಗೆ ಮೇವು ಒದಗಿಸುತ್ತಿದ್ದ ಭತ್ತದ ಗದ್ದೆಗಳು ಕ್ರಮೇಣ ಕಾಫಿ, ಅಡಿಕೆ ತೋಟಗಳಾದ ಪರಿಣಾಮ ಹಾಗೂ ಜಾನುವಾರು ಮೇಯಿಸಲು ಇದ್ದ ಗೋಮಾಳಗಳು ಒತ್ತುವರಿದಾರರ ಪಾಲಾದ ಪರಿಣಾಮ ಮಲೆನಾಡಿನಲ್ಲಿ ಬಡ ವರ್ಗದ ಜನರು ಸಾಕುತ್ತಿದ್ದ ಗಿಡ್ಡ ತಳಿ ಹಸುಗಳಿಗೆ ಮೇವು ಒದಗಿಸಲು ಸಾಧ್ಯವಾಗದೇ ಜಾನುವಾರುಗಳನ್ನು ಸಾಕುವುದನ್ನೇ ನಿಲ್ಲಿಸುತ್ತಿದ್ದಾರೆ. ತಮ್ಮ ಬಳಿ ಇದ್ದ ಗಿಡ್ಡ ತಳಿಯ ರಾಸುಗಳನ್ನು ಮಾರಾಟ ಮಾಡಲಾರಂಭಿಸಿದ್ದು, ಇದರಿಂದ ಮಲೆನಾಡಿನ ಅಪರೂಪದ ಗಿಡ್ಡ ತಳಿಗಳು ವಿನಾಶದ ಅಂಚಿಗೆ ತಲುಪುತ್ತಿವೆ.

ಮಲೆನಾಡಿನ ಗಿಡ್ಡ ತಳಿ ಜಾನುವಾರುಗಳ ಹಾಲು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಈ ಹಸುಗಳ ನಿರ್ವಹಣೆ ಸಾಧ್ಯವಾಗದೇ ಜನರು ಗಿಡ್ಡ ತಳಿಗಳನ್ನು ಮಾರಾಟ ಮಾಡಿ ಉತ್ತಮ ಹಾಲುಕೊಡುವ ಮಿಶ್ರ ತಳಿಗಳ ಜಾನುವಾರುಗಳನ್ನು ಖರೀದಿಸುತ್ತಿದ್ದಾರೆ. ಹಿಂದೆ ಕೃಷಿ ಚಟುವಟಿಕೆಗೆ ಮಲೆನಾಡಿನ ಗಿಡ್ಡ ತಳಿ ಜಾನುವಾರುಗಳನ್ನೇ ಬಳಸಿಕೊಳ್ಳಲಾಗುತ್ತಿತ್ತು. ಮುಖ್ಯವಾಗಿ ಬೇಸಾಯ ಮತ್ತು ಒಕ್ಕಣೆ ಕಾರ್ಯಕ್ಕೆ ಇವುಗಳ ಉಪಯೋಗ ಹೆಚ್ಚಿನದ್ದಾಗಿತ್ತು. ಈಗ ಅವುಗಳ ಜಾಗಕ್ಕೆ ಟ್ರ್ಯಾಕ್ಟರ್ ಮತ್ತು ಟಿಲ್ಲರ್‌ಗಳು ಬಂದಿರುವುದರಿಂದ ಎತ್ತುಗಳನ್ನು ಸಾಕಲು ಜನರು ಇಚ್ಛಿಸುತ್ತಿಲ್ಲ.

ಮಲೆನಾಡಿನಲ್ಲಿ ಈಗಲೂ ಜಮೀನು, ಮೇವು ಹೊಂದಿರುವ ಕೆಲವು ರೈತ ಕುಟುಂಬಗಳು ಈ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ನಡೆಸಿರುವ 20ನೇ ಜಾನುವಾರು ಗಣತಿ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 1,12,654 ಮಿಶ್ರತಳಿಗಳು, 1,77,353 ಸ್ಥಳೀಯ ಜಾನುವಾರು(ಗಿಡ್ಡ ತಳಿ)ಗಳು ಸೇರಿದಂತೆ ಒಟ್ಟು 2,90,007 ಜಾನುವಾರುಗಳಿವೆ. ಶೃಂಗೇರಿ ತಾಲೂಕಿನಲ್ಲಿ 1,117 ಮಿಶ್ರತಳಿ, 14,898 ಸ್ಥಳೀಯ ಜಾನುವಾರು ಸೇರಿದಂತೆ ಒಟ್ಟು 16,015 ಜಾನುವಾರುಗಳಿವೆ. ಕೊಪ್ಪದಲ್ಲಿ 7,422 ಮಿಶ್ರತಳಿ, 27,031 ಸ್ಥಳೀಯ ಜಾನುವಾರು ಸೇರಿ 34,453 ದನಗಳಿದ್ದರೆ, ನರಸಿಂಹರಾಜಪುರದಲ್ಲಿ 3,936 ಮಿಶ್ರತಳಿ, 25,769 ಸ್ಥಳೀಯ ದನಗಳಿವೆ. ತರೀಕೆರೆಯಲ್ಲಿ 26,262 ಮಿಶ್ರತಳಿ, 22,538 ಸ್ಥಳೀಯ ದನಗಳು, ಕಡೂರು ತಾಲೂಕಿನಲ್ಲಿ 43,290 ಮಿಶ್ರತಳಿ, 33,771 ಸ್ಥಳೀಯ ದನಗಳು, ಚಿಕ್ಕಮಗಳೂರು ತಾಲೂಕಿನಲ್ಲಿ 24,142 ಮಿಶ್ರತಳಿ, 35,771 ಸ್ಥಳೀಯ ಜಾನುವಾರು, ಮೂಡಿಗೆರೆಯಲ್ಲಿ 6,485 ಮಿಶ್ರತಳಿ,17,575 ಸ್ಥಳೀಯ ಜಾನುವಾರುಗಳಿವೆ. ಈ ಅಂಕಿಅಂಶಗಳಿಂದ ಜಿಲ್ಲೆಯಲ್ಲಿ ಮಲೆನಾಡು ಗಿಡ್ಡ ತಳಿಗಳು ಮಾಯವಾಗುತ್ತಿರುವುದು ಸ್ಪಷ್ಟವಾಗಿದ್ದು, ಇವುಗಳ ಜಾಗದಲ್ಲಿ ಮಿಶ್ರತಳಿಗಳ ಜಾನುವಾರುಗಳು ಬರುತ್ತಿವೆ.

10-20 ಮಲೆನಾಡು ಗಿಡ್ಡ ತಳಿಗಳನ್ನು ಸಾಕುತ್ತಾ ಅವುಗಳ ಹಾಲು ಮಾರಾಟದಿಂದ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಸದ್ಯ ಮಿಶ್ರತಳಿಯ ಒಂದೆರಡು ಹಸುಗಳನ್ನು ಖರೀದಿಸಲಾರಂಭಿಸಿದ್ದಾರೆ. ಪರಿಣಾಮ ರೋಗನಿರೋಧಕ ಶಕ್ತಿಹೊಂದಿರುವ ಹಾಲು, ಕೃಷಿಗೆ ಉತ್ತಮ ಸೆಗಣಿ ಗೊಬ್ಬರ ನೀಡುತ್ತಿದ್ದ ಮಲೆನಾಡು ಗಿಡ್ಡ ತಳಿಗಳ ಸಂತತಿ ಜಿಲ್ಲೆಯಿಂದ ಮರೆಯಾಗುತ್ತಿದ್ದು, ಇಂತಹ ಅಪರೂಪದ ತಳಿಗಳ ಉಳಿವಿಗೆ ಸರಕಾರ, ಸಂಬಂಧಿಸಿದ ಇಲಾಖೆ ಇನ್ನಾದರೂ ಮುಂದಾಗಬೇಕು, ಈ ತಳಿಗಳ ಜಾನುವಾರು ಸಾಕಣೆಗೆ ಪ್ರೋತ್ಸಾಹ ನೀಡಬೇಕು ಎಂದು ಜಾನುವಾರು ಪ್ರಿಯರು ಆಗ್ರಹಿಸುತ್ತಿದ್ದಾರೆ.

 ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆ 2ದಶಕಗಳಿಂದ ಸರಕಾರದ ಮುಂದಿದ್ದರೂ ಸರಕಾರ, ಜನಪ್ರತಿನಿಧಿಗಳು ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಹೈನುಗಾರಿಕೆಗೆ ಜಿಲ್ಲೆಯಲ್ಲಿ ಹೆಚ್ಚು ಪ್ರೋತ್ಸಾಹ ನೀಡದಿರುವುದು ಹಾಗೂ ಜಾನುವಾರುಗಳನ್ನು ಮೇಯಿಸಲು ಗೋಮಾಳಗಳ ಕೊರತೆಯಿಂದಾಗಿ ಸದ್ಯ ಜಿಲ್ಲೆಯ ಮಲೆನಾಡು ಭಾಗದ ರೈತರು ಜಾನುವಾರುಗಳನ್ನು ಸಾಕಲು ಪರದಾಡುತ್ತಿದ್ದು, ಸಾಕಣೆಯಿಂದಲೇ ವಿಮುಖರಾಗುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಲ್.ಶಿವು

contributor

Similar News