ಮೋದಿ ಮ್ಯಾಜಿಕ್ ಈಗ ಕರಗಿಹೋಗಿದೆ: ಸತ್ಯಪಾಲ್ ಮಲಿಕ್

Update: 2024-10-01 07:08 GMT

ಒಂದು ಕಾಲದಲ್ಲಿ ಮೋದಿ ಸೂಚನೆಯಂತೆ ಬಾಯಿ ಮುಚ್ಚಿಕೊಂಡಿದ್ದು, ಯಾವುದೋ ಒಂದು ಹಂತದಲ್ಲಿ ಅದರ ಬಗ್ಗೆ ಹೇಳಿಕೊಂಡಿದ್ದ ಜಮ್ಮು-ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಈಗಂತೂ ಅತ್ಯಂತ ದಿಟ್ಟತನದಿಂದ ಮಾತಾಡಿದ್ದಾರೆ.

ವಿಶ್ವಾಸಾರ್ಹತೆ ಕಳೆದುಕೊಂಡಿರುವ ಪ್ರಧಾನಿ ಮೋದಿಯನ್ನು ಆರೆಸ್ಸೆಸ್ ಅಥವಾ ಬಿಜೆಪಿಯೇ ಕೆಳಗಿಳಿಸುವುದು ನಿಶ್ಚಿತ ಎಂದಿದ್ದಾರೆ ಅವರು.

HW ನ್ಯೂಸ್‌ನ On Truth Be Told ಶೋನಲ್ಲಿ ನೀಲು ವ್ಯಾಸ್ ಅವರಿಗೆ ನೀಡಿದ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ಹೇಳಿರುವ ಮಾತುಗಳು ಮೋದಿ ರಾಜಕೀಯ ಮುಗಿಯುತ್ತಿರುವುದರ ಸೂಚನೆಯೆ?

ಈ ಸಂದರ್ಶನ ನಡೆಸುವ ಹೊತ್ತಲ್ಲಿ ಮಲಿಕ್ ಆಗಷ್ಟೇ ಮಹಾರಾಷ್ಟ್ರ ಪ್ರವಾಸದಿಂದ ಮರಳಿದ್ದರು. ಅಲ್ಲಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದದ್ದರ ಬಗ್ಗೆಯೇ ಮೊದಲ ಪ್ರಶ್ನೆಯಿತ್ತು. ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಂಬರುವ ದಿನಗಳ ರಾಜಕೀಯದಲ್ಲಿ ಬಹಳ ಪ್ರಮುಖರಾಗಲಿದ್ದಾರೆ ಎಂದಿರುವ ಮಲಿಕ್, ಬಿಜೆಪಿಯದ್ದು ಅಲ್ಲಿ ಮುಗಿದ ಕಥೆ ಎಂದಿದ್ದಾರೆ. ರೈತರು ಮತ್ತು ಯುವಕರು ಬಿಜೆಪಿಯ ಬಗ್ಗೆ ತೀವ್ರ ಸಿಟ್ಟಾಗಿರುವ ಬಗ್ಗೆ ಹೇಳಿದ್ದಾರೆ.

ತಾವು ರಾಜಕೀಯ ಹುದ್ದೆ ಬಯಸುತ್ತಿರುವುದಾಗಿ ಎದ್ದಿರುವ ಗುಮಾನಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನೀಗ ಏನಿದ್ದರೂ ನಿವೃತ್ತ. ನನಗೆ ಯಾವ ಹುದ್ದೆಯೂ ಬೇಡ. ಠಾಕ್ರೆ ಭೇಟಿಯ ಕಾರಣವೂ ಅದಲ್ಲವೇ ಅಲ್ಲ ಎಂದಿದ್ದಾರೆ. ಆದರೆ ಠಾಕ್ರೆ ಬೆಂಬಲಕ್ಕೆ ಇರುವುದಾಗಿಯೂ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾಗಿಯೂ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಏನೂ ಆಗದು. ಶಿವಸೇನೆಯನ್ನು ಒಡೆದಿರುವುದಕ್ಕಾಗಿ ಆ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಜನರು ಕೂಡ ಸಿಟ್ಟಾಗಿದ್ದಾರೆ. ಜನರೇ ಅದಕ್ಕೆ ಶಿಕ್ಷೆ ಕೊಡಲಿದ್ದಾರೆ ಎಂಬುದು ಮಲಿಕ್ ಖಚಿತ ಮಾತು. ಮೋದಿಗೆ ಮಹಾರಾಷ್ಟ್ರ ಮಾತ್ರವಲ್ಲ, ಇಡೀ ದೇಶದಲ್ಲೇ ಮುಖವಿಲ್ಲ. ಅವರು ಪೂರ್ತಿ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಪ್ರಭಾವ ಪೂರ್ತಿ ಮಂಕಾಗಿದೆ ಎಂಬುದು ಮಲಿಕ್ ಅಭಿಪ್ರಾಯ.

ಹರ್ಯಾಣದಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪರ ಬಲವಾದ ಅಲೆಯಿದೆ ಎನ್ನುತ್ತಾರೆ ಅವರು.

ಬಿಜೆಪಿಯನ್ನು ಜನ ಮನೆಗೆ ಕಳಿಸುತ್ತಾರೆ. ರೈತರ ಪ್ರತಿಭಟನೆ ವೇಳೆ ಖಟ್ಟರ್ ರೈತರ ವಿರುದ್ಧವಾಗಿ ಮಾಡಿದ್ದು ಒಂದೆರಡಲ್ಲ. ಜನರಂತೂ ಖಟ್ಟರ್ ವಿರುದ್ಧ ನಿಂತುಬಿಟ್ಟಿದ್ದಾರೆ. ಕುಸ್ತಿಪಟುಗಳನ್ನು ನಡೆಸಿಕೊಂಡ ರೀತಿಗೂ ಜನ ಸಿಟ್ಟಾಗಿದ್ದಾರೆ. ವಿನೇಶ್ ಫೋಗಟ್ ಭಾರೀ ಬೆಂಬಲ ಪಡೆಯುತ್ತಿದ್ದಾರೆ. ಅವರು ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಮೋದಿ ಫ್ಯಾಕ್ಟರ್ ಇನ್ನು ಮುಂದೆ ಎಲ್ಲಿಯೂ ಉಪಯೋಗಕ್ಕೆ ಬರುವುದಿಲ್ಲ. ಮೋದಿ ಎನ್ನುವುದು ಮುಗಿದುಹೋದ ಕಥೆ. ತಮ್ಮನ್ನು ಮೋದಿ ಮೂರ್ಖರನ್ನಾಗಿ ಮಾಡಿರುವುದು ಜನರಿಗೆ ಗೊತ್ತಾಗಿದೆ. ಅವರ ಸುಳ್ಳುಗಳು, ನಿಷ್ಪ್ರಯೋಜಕ ಮಾತುಗಳ ಬಗ್ಗೆ ತಿಳಿದಿದೆ. ಮೋದಿ ಈಗ ಗೆಲ್ಲುವ ಫ್ಯಾಕ್ಟರ್ ಅಲ್ಲ ಎಂದಿದ್ದಾರೆ ಮಲಿಕ್.

ಆರೆಸ್ಸೆಸ್ ಅಂತೂ ಮೋದಿಗೆ ಬದಲಾಗಿ ಬೇರೆ ನಾಯಕರನ್ನು ಮುಂದೆ ತರಲು ಯೋಚಿಸುತ್ತಿದೆ. ಸಂಜಯ್ ಜೋಶಿಯಂಥವರು ಬರುತ್ತಾರೆ. ಮೋದಿ ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿರುವುದಿಲ್ಲ. ಮೋದಿಯನ್ನು ಮತ್ತಾರೂ ಅಲ್ಲ, ಆರೆಸ್ಸೆಸ್ ಕೆಳಗಿಳಿಸುತ್ತದೆ. ಮೋದಿ ವ್ಯಕ್ತಿತ್ವ ನೆಗೆಟಿವ್ ಪರಿಣಾಮ ಬೀರುತ್ತಿದೆ ಮತ್ತು ಮೋದಿ ಕಾರಣದಿಂದಾಗಿ ಬಿಜೆಪಿ, ಆರೆಸ್ಸೆಸ್ ಎರಡೂ ತೊಂದರೆಗೆ ಒಳಗಾಗಿವೆ ಎಂಬುದು ಅದರ ಭಾವನೆ. ಒಮ್ಮೆ ಆರೆಸ್ಸೆಸ್ ಮೋದಿಯನ್ನು ಕೆಳಗಿಳಿಸಲು ತಯಾರಾದರೆ ಎಲ್ಲರೂ ಅದರ ಮಾತಿಗೆ ಬದ್ಧರಾಗುತ್ತಾರೆ. ಮೋದಿ ಹೋಗಬೇಕಾಗುತ್ತದೆ. ಅಬ್ಬಬ್ಬಾ ಎಂದರೆ ಒಂದು ವರ್ಷ ಅವರು ಹುದ್ದೆಯಲ್ಲಿರಲಿದ್ದಾರೆ.

ಮೈತ್ರಿಪಕ್ಷಗಳ ಒಲವು ಏನೇ ಇದ್ದರೂ ಸ್ವತಃ ಬಿಜೆಪಿಯೇ ಮೋದಿ ವಿಷಯವಾಗಿ ಸಮಾಧಾನ ಹೊಂದಿಲ್ಲ. ಬಿಜೆಪಿಯವರು ಸುಮ್ಮನಿದ್ದಾರೆ, ನಿಜ. ಆದರೆ ಅವರೆಲ್ಲ ಸಿಟ್ಟಾಗಿದ್ದಾರೆ. ತಮ್ಮನ್ನೆಲ್ಲ ಮೋದಿ ನಾಶ ಮಾಡುತ್ತಿರುವುದು ಗೊತ್ತಿದೆ ಎನ್ನುತ್ತಾರೆ ಮಲಿಕ್.

ಬಿಜೆಪಿಯ ಪ್ರಯೋಗಕ್ಕೆ ಕಂಗನಾ ಬಳಕೆಯಾಗುತ್ತಿದ್ದಾರೆ. ಕಂಗನಾರನ್ನು ಹೇಳಿಕೆ ನೀಡುವಂತೆ ಕೇಳಲಾಗುತ್ತದೆ. ಅದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯಲಾಗುತ್ತದೆ. ಸದ್ಯಕ್ಕೆ ಕಂಗನಾ ಮೋದಿಯವರ ಫೆವರಿಟ್ ಆಗಿದ್ದಾರೆ, ಆಕೆಗೆ ಪ್ರಧಾನಿಯ ಪೂರ್ಣ ಬೆಂಬಲ ಇದೆ ಎಂದಿದ್ದಾರೆ ಮಲಿಕ್.

ರಾಹುಲ್ ಅರ್ಥಪೂರ್ಣವಾಗಿ ಮಾತಾಡುತ್ತಾರೆ. ಅವರು ಬುದ್ಧಿವಂತ ಮತ್ತು ವಿನಯಶೀಲರಾಗಿದ್ದಾರೆ. ಅವರಲ್ಲಿ ಭವಿಷ್ಯದ ನಾಯಕನನ್ನು ಕಾಣುತ್ತೇನೆ ಎಂದಿದ್ದಾರೆ.

ಮೋದಿಗಂತೂ ರಾಹುಲ್ ಎಂದರೆ ಭಯ. ರಾಹುಲ್ ಸಂಸತ್ತಿನಲ್ಲಿದ್ದರೆ ಮೋದಿ ಅಲ್ಲಿಗೆ ಹೋಗುವುದನ್ನೇ ತಪ್ಪಿಸುತ್ತಾರೆ. ರಾಹುಲ್ ತಮ್ಮದೇ ಆದ ಉತ್ತಮ ಮಾರ್ಗದಲ್ಲಿ ಹೊರಟಿದ್ದಾರೆ. ಅವರು ಮೋದಿ ನಡವಳಿಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಮಲಿಕ್ ಅಭಿಪ್ರಾಯ.

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿಸುವುದು ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ಆರ್ಟಿಕಲ್ 370 ಒಂದು ವಿಷಯವೇನೂ ಆಗಲಾರದು.

ಅವರು ತನ್ನನ್ನು ತಾನು ನಾನ್ ಬಯಾಲಜಿಕಲ್ ಎಂದೆಲ್ಲ ಹೇಳುತ್ತಾರೆ. ಅವರು ಹಿಮಾಲಯಕ್ಕೆ ಹೋಗುವುದು ಒಳ್ಳೆಯದು ಎಂದಿದ್ದಾರೆ ಮಲಿಕ್ .

ನಾನ್ ಬಯಾಲಜಿಕಲ್ ಎನ್ನುವಂಥ ಅಹಂಕಾರವೇ ಮೋದಿಯನ್ನು ಹಾಳು ಮಾಡಿದೆ. 2024ರ ಚುನಾವಣಾ ಫಲಿತಾಂಶದ ನಂತರವೂ ಅವರ ಅಹಂಕಾರ ತಗ್ಗಿಲ್ಲ. ಜನರು ತನ್ನನ್ನು ಮೂರನೇ ಅವಧಿಗಾಗಿ ಆಯ್ಕೆ ಮಾಡಿದ್ದಾರೆ ಎಂದು ಮೋದಿ ಹೇಳುತ್ತಿರುವುದು ಪೂರ್ತಿ ತಪ್ಪು. ಜನರು ಅವರನ್ನು ಆರಿಸಿಲ್ಲ, ತಿರಸ್ಕರಿಸಿದ್ದಾರೆ. ಬೇರೆ ಪಕ್ಷಗಳ ಬೆಂಬಲದಿಂದ ಅವರು ಪ್ರಧಾನಿಯಾಗಿದ್ದಾರೆ. ಮೋದಿ ಮ್ಯಾಜಿಕ್ ಕರಗಿಹೋಗಿದೆ ಎನ್ನುತ್ತಾರೆ ಸತ್ಯಪಾಲ್ ಮಲಿಕ್

ಪುಲ್ವಾಮಾದಲ್ಲಿ ಯೋಧರ ಪ್ರಯಾಣಕ್ಕೆ ಮೋದಿ ಸರಕಾರ ವಿಮಾನ ಕಳಿಸದೇ ಇದ್ದಿದ್ದೇ ಭಯೋತ್ಪಾದಕ ದಾಳಿಗೆ ಕಾರಣವಾಯಿತು ಎಂದು ಆಗ ಅಲ್ಲಿನ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ತನ್ನ ನಿವೃತ್ತಿಯ ಬಳಿಕ ಹೇಳಿದ್ದರು.

ತಿಂಗಳುಗಟ್ಟಲೆ ವಿಮಾನ ಕಳಿಸಲು ಸಲ್ಲಿಸಲಾಗಿದ್ದ ಮನವಿ ಮೋದಿ ಸರಕಾರದ ಬಳಿ ಕೊಳೆಯುತ್ತಿತ್ತು, ನನಗೂ ಈ ವಿಷಯ ಗೊತ್ತಿರಲಿಲ್ಲ, ಇಲ್ಲದಿದ್ದರೆ ನಾನದಕ್ಕೆ ವ್ಯವಸ್ಥೆ ಮಾಡುತ್ತಿದ್ದೆ ಎಂದಿದ್ದರು ಮಲಿಕ್

ಪುಲ್ವಾಮಾ ದಾಳಿ ಬಳಿಕ ಏನೂ ಮಾತಾಡಬೇಡಿ, ಸುಮ್ಮನಿರಿ ಎಂದು ಮೋದಿ ನನಗೆ ಸೂಚನೆ ನೀಡಿದ್ದರು ಎಂದೂ ಹೇಳಿದ್ದರು ಸತ್ಯಪಾಲ್ ಮಲಿಕ್

ಅದೇ ಸತ್ಯಪಾಲ್ ಮಲಿಕ್ ಈಗ ಮೋದಿ ಅವರು ಪ್ರಧಾನಿಯಾಗಿ ಹೆಚ್ಚು ಕಾಲ ಅಧಿಕಾರದಲ್ಲಿ ಇರುವುದಿಲ್ಲ ಎಂದು ಹೇಳುತ್ತಾ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News