ಸತತ 13 ವರ್ಷ ಹೋರಾಡಿ ಸರಕಾರಿ ಹುದ್ದೆ ಪಡೆದ ಮುಬೀನಾ ಬಾನು!

Update: 2024-01-22 05:22 GMT
Editor : Thouheed | Byline : ​ಹಂಝ ಮಲಾರ್

ಮಂಗಳೂರು, ಜ.21: ಮುಸ್ಲಿಮರು ಶಿಕ್ಷಣ ಪಡೆಯುತ್ತಿಲ್ಲ. ಅದರಲ್ಲೂ ಮುಸ್ಲಿಮ್ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬ ಮಾತು 20-25 ವರ್ಷದ ಹಿಂದೆ ಕೇಳಿ ಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಮಾತಿಗೆ ವ್ಯತಿರಿಕ್ತವಾದ ವಾತಾವರಣವಿದೆ. ಮುಸ್ಲಿಮ್ ಗಂಡು ಮಕ್ಕಳಿಗಿಂತ ಹೆಣ್ಮಕ್ಕಳು ಅಧಿಕ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿಪರ್ಯಾಸವೆಂದರೆ ಉನ್ನತ ಶಿಕ್ಷಣ ಪಡೆದ ಹೆಣ್ಮಕ್ಕಳ ಪೈಕಿ ಬಹುತೇಕ ಮಂದಿ ಮದುವೆಯಾದ ಬಳಿಕ ಉದ್ಯೋಗ ಅದರಲ್ಲೂ ಸರಕಾರಿ ಉದ್ಯೋಗ ಪಡೆಯಲು ಹಿಂಜರಿಯುತ್ತಿರುವುದು ಕಂಡು ಬರುತ್ತಿದೆ.

ಇಲ್ಲೊಬ್ಬರು ಮುಸ್ಲಿಮ್ ಮಹಿಳೆ ಸತತ 13 ವರ್ಷ ಹೋರಾಡಿ ಸರಕಾರಿ ಹುದ್ದೆ ಪಡೆಯುವ ಮೂಲಕ ಯುವ ಪೀಳಿಗೆಗೆ ಸ್ಫೂರ್ತಿ ಮತ್ತು ಮಾದರಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಹೊಕ್ಕೋಡಿಗೋಳಿಯ ಬೀಡಿ ಗುತ್ತಿಗೆದಾರರಾಗಿದ್ದ ದಿ.ಮುಹಮ್ಮದ್ ಎಚ್. ಮೇಗಿನ ಮನೆ ಮತ್ತು ದಿ. ಝೈನಬಾ ದಂಪತಿಯ 5 ಗಂಡು ಮತ್ತು 6 ಹೆಣ್ಣು ಮಕ್ಕಳ ಪೈಕಿ 10ನೇಯವರಾದ ಮುಬೀನಾ ಬಾನು ಜನಪ್ರತಿನಿಧಿಗಳು, ಅಧಿಕಾರಿಗಳು, ಸರಕಾರಿ ಕಚೇರಿಗಳಿಗೆ ಆಗಾಗ ತೆರಳಿ ಪಟ್ಟು ಬಿಡದೆ ಸರಕಾರಿ ಹುದ್ದೆ ಪಡೆದ ಛಲಗಾರ್ತಿ.

1ರಿಂದ ದ್ವಿತೀಯ ಪಿಯುಸಿವರೆಗೆ ಊರಿನಲ್ಲೇ ಕಲಿತ ಈಕೆ ಪದವಿಯನ್ನು ಮೂಡುಬಿದಿರೆಯ ಖಾಸಗಿ ಕಾಲೇಜು ಮತ್ತು ಸ್ನಾತಕೋತ್ತರ ಪದವಿ (ಎಂಎ)ಯನ್ನು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಹೆತ್ತವರ ಕನಸು ನನಸುಗೊಳಿಸುವ ಸಲುವಾಗಿ 2008ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಹುದ್ದೆಗೆ ಅರ್ಜಿ ಹಾಕಿದ್ದರು. 2010ರಲ್ಲಿ ಈ ಹುದ್ದೆಗಳಿಗೆ ಹಲವರ ನೇಮಕಾತಿಯಾದರೂ

ಮುಬೀನಾ ಬಾನುಗೆ ಆ ಅವಕಾಶ ಸಿಗಲಿಲ್ಲ.

ಅರ್ಹತೆ ಇದ್ದರೂ ತನಗೆ ಹುದ್ದೆ ತಪ್ಪಲು ಕಾರಣ ಪತ್ತೆ ಹಚ್ಚಲು ಮುಂದಾದರು. ಬಿಎ ಪದವಿಯಲ್ಲಿ ಶೇ.75.36 ಅಂಕವಿದ್ದರೂ ಅಧಿಕಾರಿ-ಸಿಬ್ಬಂದಿಯ ಎಡವಟ್ಟೋ, ಕೈಚಳಕವೋ ಏನೋ ಅಂಕ ತಿದ್ದುಪಡಿಯಾಗಿರುವುದನ್ನು ಅಂದರೆ ತನ್ನ ಅಂಕ ಶೇ.71.79 ಎಂದು ನಮೂದಾಗಿರುವುದನ್ನು ಪತ್ತೆ ಹಚ್ಚಿದರು.

ಆದರೆ ಹಿರಿಯ ಅಧಿಕಾರಿಗಳು ಈ ಎಡವಟ್ಟು ಅಥವಾ ಕೈ ಚಳಕದ ‘ತಪ್ಪು’ ಒಪ್ಪಲು ತಯಾರು ಇರಲಿಲ್ಲ. ಹಾಗಂತ ಮುಬೀನಾ ಬಾನು ಕೂಡ ಸುಮ್ಮನೆ ಕೂರಲಿಲ್ಲ. ಶಾಸಕರಾಗಿದ್ದ ವಸಂತ ಬಂಗೇರಾ, ರಮಾನಾಥ ರೈ ಅವರ ಮೂಲಕ ಪ್ರಯತ್ನ ಮುಂದುವರಿಸಿದರು. ಈ ಮಧ್ಯೆ ತನ್ನ ವಾಸಸ್ಥಳವನ್ನು ಮಿತ್ತಬೈಲು ಬಳಿಕ ಮೆಲ್ಕಾರ್‌ಗೆ ಸ್ಥಳಾಂತರಿಸಿದ್ದರು. ಮೆಲ್ಕಾರ್‌ನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕಿ ವೃತ್ತಿ ಆರಂಭಿಸಿದ್ದ ಮುಬೀನಾ ಬಾನು ಕೊನೆಯ ಪ್ರಯತ್ನ ಎಂಬಂತೆ ಸ್ಪೀಕರ್ ಯು.ಟಿ.ಖಾದರ್‌ರ ನೆರವು ಯಾಚಿಸಿದರು. ಜೊತೆಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದರು. ‘ಕೆಎಟಿ’ಯ ಮೊರೆ ಹೋದರು. ಸತತ ಪ್ರಯತ್ನದ ಫಲವಾಗಿ ಕೆಎಟಿಯಿಂದ ಮುಬೀನಾ ಬಾನು ಪರವಾಗಿಯೇ ತೀರ್ಪು ಬಂತು.

ಅಂತಿಮವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 2024ರ ಜನವರಿ 10ರಂದು ಮುಬೀನಾ ಬಾನು ಅವರಿಗೆ ಬಂಟ್ವಾಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕಿ ಹುದ್ದೆಯ ನೇಮಕಾತಿಯ ಆದೇಶವನ್ನು ನೀಡಿವೆ. ಅರ್ಜಿ ಸಲ್ಲಿಸುವಾಗ ಬೆಳ್ತಂಗಡಿಯ ಆರಂಬೋಡಿ ಗ್ರಾಮದಲ್ಲಿದ್ದ ಮುಬೀನಾ ಬಾನು, ಇದೀಗ ಸರಕಾರಿ ಉದ್ಯೋಗ ನೇಮಕಾತಿಯ ಆದೇಶ ಪತ್ರ ಪಡೆಯುವಾಗ ಬಂಟ್ವಾಳ ತಾಲೂಕಿನ ಸಜಿಪ ಮೂಡ ಗ್ರಾಮದ ಕಾರಾಜೆ ಚೆಡವಿನ ಪತಿಯ ಮನೆಯಲ್ಲಿರುವುದು ಅವರ ಸತತ ಹೋರಾಟಕ್ಕೆ ಸಾಕ್ಷಿಯಾಗಿದೆ.

ನನ್ನ ತಂದೆ ಬೀಡಿ ಗುತ್ತಿಗೆದಾರರಾಗಿದ್ದರು. ಸಮಾಜ ಸೇವಕರಾಗಿದ್ದ ಅವರು 1970-75ರಲ್ಲೇ ಶಿಕ್ಷಣದ ಮಹತ್ವವನ್ನು ಅರಿತಿದ್ದರು. ಹೊಕ್ಕೋಡಿಗೋಳಿಯ ನಮ್ಮ ಮನೆಯಲ್ಲೇ ಶಾಲೆ ಮತ್ತು ಮದ್ರಸದ ತರಗತಿ ತೆರೆಯಲು ಅವಕಾಶ ಕಲ್ಪಿಸಿದ್ದರು. ತನ್ನ 11 ಮಕ್ಕಳಿಗೂ ಒಳ್ಳೆಯ ಶಿಕ್ಷಣ ನೀಡಿದ್ದರು. ಸ್ನಾತಕೋತ್ತರ ಪದವಿ ಪಡೆಯಲು ಮತ್ತು ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ನನಗಾದ ಅನ್ಯಾಯದ ವಿರುದ್ಧ ಹೋರಾಟ ಮಾಡಲು ತಂದೆ ಮತ್ತು ತಾಯಿಯ ಬೆಂಬಲ ಮರೆಯಲು ಸಾಧ್ಯವಿಲ್ಲ. ಬೇಸರದ ಸಂಗತಿ ಏನೆಂದರೆ, ಸರಕಾರಿ ಉದ್ಯೋಗದ ಆದೇಶದ ಪ್ರತಿ ನನ್ನ ಕೈ ಸೇರುವಾಗ ಅವರಿಬ್ಬರೂ ಇಹಲೋಕ ತ್ಯಜಿಸಿಯಾಗಿದೆ. ಅವರು ಇದ್ದಿದ್ದರೆ ತುಂಬಾ ಸಂತೋಷ ಪಡುತ್ತಿದ್ದರೋ ಏನೋ?. ನಾನು ಒಟ್ಟು 35 ಬಾರಿ ಬೆಂಗಳೂರು ವಿಧಾನಸೌಧ, ಇಲಾಖೆಯ ಕಚೇರಿಗೆ ಅಲೆದಾಡಿರುವೆ. ಬೆಂಗಳೂರಿಗೆ ಹೋಗಿ ಬರಲು ತಂದೆ-ತಾಯಿ ಮತ್ತು ಪತಿ ಇಸ್ಮಾಯೀಲ್ ಖಾದರ್ ಆರ್ಥಿಕ ಸಹಾಯ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿ ಅಮಾನುಲ್ಲಾ ಮತ್ತು ಸ್ಪೀಕರ್ ಯು.ಟಿ. ಖಾದರ್‌ರ ಸಹಕಾರವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜೊತೆಗೆ ಅವರ ಆಪ್ತ ಸಹಾಯಕ ಲಿಬ್ಝತ್‌ರ ಸಹಕಾರವೂ ಅಪಾರ. ಅಧಿಕಾರಿಗಳ/ಸಿಬ್ಬಂದಿಯ ಎಡವಟ್ಟಿನಿಂದ ನನಗೆ ತಪ್ಪಿದ ಆ ಸರಕಾರಿ ಹುದ್ದೆ ಪಡೆಯಲೇಬೇಕು ಎಂಬ ನನ್ನ ಹಠ ಮತ್ತು ಹೋರಾಟಕ್ಕೆ ಯು.ಟಿ. ಖಾದರ್ ಸದಾ ಬೆಂಬಲ ನೀಡಿದರು. ಬಹುಷಃ ಅವರು ಮಧ್ಯ ಪ್ರವೇಶಿಸಿದ ಬಳಿಕ ನನ್ನ ಈ ಹೋರಾಟದ ಹಾದಿ ಸುಗಮವಾಯಿತು ಎನ್ನಬಹುದು.

►ಮುಬೀನಾ ಬಾನು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ​ಹಂಝ ಮಲಾರ್

contributor

Similar News