ಪರಿಸರ ಪ್ರೇಮಿಗಳ ಸ್ವರ್ಗ ಮುಳ್ಳಯ್ಯನಗಿರಿಗೆ ಪ್ರವಾಸಿಗರೇ ಕಂಟಕ
ಚಿಕ್ಕಮಗಳೂರು: ಕರ್ನಾಟಕದ ಸ್ವಿಟ್ಜರ್‌ಲ್ಯಾಂಡ್ ಎಂದೇ ಪ್ರಸಿದ್ಧಿಯಾದ ಕಾಫಿನಾಡಿಗೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳ ಪರಿಸರ ಪ್ರೇಮಿಗಳು ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಆಗಮಿಸುತ್ತಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 6,630 ಅಡಿ ಎತ್ತರದಲ್ಲಿರುವ ಮುಳ್ಳಯ್ಯನಗಿರಿ ಕರ್ನಾಟಕ ರಾಜ್ಯದ ಅತ್ಯಂತ ಎತ್ತರದ ಗಿರಿಶ್ರೇಣಿಯಾಗಿದೆ. ಈ ಶಿಖರ 1,930ಮೀ. ಎತ್ತರ ಇದ್ದು, ರಾಜ್ಯದ ಬೇರೆಲ್ಲೂ ಇಷ್ಟು ಎತ್ತರದ ಗಿರಿಶ್ರೇಣಿಯನ್ನು ಕಾಣಲು ಸಾಧ್ಯವಿಲ್ಲ.
ಮುಳ್ಳಯ್ಯನಗಿರಿ ಸದಾ ಹಸಿರು ಹೊದಿಕೆಯಿಂದ ಕಂಗೊಳಿಸುವ ಗಿರಿಶ್ರೇಣಿಯಾಗಿದ್ದು, ಗಿರಿಶ್ರೇಣಿಯ ವಿಶಿಷ್ಟ ಆಕಾರ ಶಿಲ್ಪಿಯೇ ಕೆತ್ತಿ ನಿಲ್ಲಿಸಿರುವ ಅಪರೂಪದ ಕಲಾಕೃತಿಯಂತೆ ಭಾಸವಾಗುತ್ತದೆ. ಬೇಸಿಗೆ, ಮಳೆಗಾಲ, ಚಳಿಗಾಲ ಸೇರಿದಂತೆ ವರ್ಷಪೂರ್ತಿ ಒಂದೇ ಬಗೆಯ ಹವಾಮಾನದ ವಾತಾವರಣ ಹೊಂದಿರುವ ಮುಳ್ಳಯ್ಯನಗಿರಿ ಇಕ್ಕೆಲಗಳಲ್ಲಿ ಕಂಡು ಬರುವ ಅಪರೂಪದ ಶೋಲಾ ಕಾಡುಗಳು, 12 ವರ್ಷಕ್ಕೊಮ್ಮೆ ಅರಳುವ ನೀಲಕುರಂಜಿಯಂತಹ ಸಸ್ಯ ಪ್ರಭೇದ, ಕಡಿದಾದ ರಸ್ತೆಗಳು, ಪಾತಾಳ ಲೋಕವನ್ನೇ ನೆನಪಿಸುವ ಆಳವಾದ ಕಂದಕಗಳು, ಅಪರೂಪದ ಗಿಡಮೂಲಿಕೆಗಳು, ಬೇರೆಲ್ಲೂ ಕಾಣಲು ಸಿಗದ ಅಪರೂಪದ ವನ್ಯಜೀವಿಗಳು, ವರ್ಷವಿಡೀ ತುಂಬಿ ಹರಿಯುವ ಝರಿ, ಜಲಪಾತಗಳು, ನೀರಿನ ಸೆಲೆಗಳು, ಮನಕ್ಕೆ ಮುದ ನೀಡುವ ತಂಗಾಳಿಯ ವಾತಾವರಣ ಗಿರಿಯ ಪ್ರಾಕೃತಿಕ ಸೊಬಗಿಗೆ ಇಂಬು ನೀಡುತ್ತಿವೆ.
ಆಕಾಶಕ್ಕೆ ಮುತ್ತಿಕ್ಕುತ್ತಿದೆಯೇನೋ ಎಂಬಂತೆ ಕಂಡು ಬರುವ ಮುಳ್ಳಯ್ಯನ ಗಿರಿಯ ನೆತ್ತಿ ಮೇಲೆ ಕಾಲಿಡುತ್ತಿದ್ದಂತೆ ಪ್ರಕೃತಿಯ ಸೊಬಗಿನೊಂದಿಗೆ ಪ್ರಕೃತಿಯ ರೌದ್ರತೆಯ ಮುಖದ ಅನಾವರಣಕ್ಕೂ ಈ ಶಿಖರ ಸಾಕ್ಷಿಯಾಗುತ್ತಿದ್ದು, ಗಿರಿಯ ತಪ್ಪಲಿನ ಆಳವಾದ ಕಂದಕಗಳು ನೋಡುಗರ ಮೈ ನಡುಕಕ್ಕೂ ಕಾರಣವಾಗುತ್ತದೆ. ಸಂಜೆ, ಮುಂಜಾನೆ ವೇಳೆಯಲ್ಲಿ ಗಿರಿಯನ್ನು ಪೂರ್ತಿಯಾಗಿ ಆವರಿಸಿಕೊಳ್ಳುವ ಹಾಲ್ನೊರೆಯಂತಹ ಮಂಜು ಮುಸುಕಿದ ವಾತಾವರಣ ನೋಡಲು ಎರಡು ಕಣ್ಣು ಸಾಲದು. ಇಂತಹ ರಮಣೀಯ ದೃಶ್ಯಕಾವ್ಯದಂತಹ ಪರಿಸರವು ಪ್ರವಾಸಿಗರು, ಪರಿಸರ ಪ್ರೇಮಿಗಳು, ಪರಿಸರ ಸಂಶೋಧಕರು, ವನ್ಯಜೀವಿ ಪ್ರೇಮಿಗಳು ಹಾಗೂ ಪ್ರೇಮಿಗಳ ಪಾಲಿನ ಸ್ವರ್ಗವಾಗಿದ್ದು, ಈ ಕಾರಣಕ್ಕೆ ಮುಳ್ಳಯ್ಯನಗಿರಿ ಪ್ರವಾಸಿಗರು, ಟ್ರಕ್ಕಿಂಗ್ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪ್ರವಾಸೋದ್ಯಮ ಇಲಾಖೆ ಪ್ರಕಾರ ಮುಳ್ಳಯ್ಯನಗಿರಿಗೆ ಪ್ರತೀ ವರ್ಷ 5ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ.
ಪ್ರವಾಸಿಗರೇ ಕಂಟಕ:
ಹೀಗೆ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮುಳ್ಳಯ್ಯನಗಿರಿಗೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರೇ ಕಂಟಕವಾಗುತ್ತಿರುವ ಆತಂಕಕಾರಿ ವಿಷಯ ಜಿಲ್ಲಾಡಳಿತಕ್ಕೆ ತಲೆ ನೋವು ತಂದಿಟ್ಟಿದ್ದು, ಇದು ಪರಿಸರವಾದಿಗಳ ಆಕ್ರೋಶಕ್ಕೂ ಕಾರಣವಾಗಿದೆ.
ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್‌ನಂತಹ ತ್ಯಾಜ್ಯವಸ್ತುಗಳನ್ನು ತಂದು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಇದು ಮುಳ್ಳಯ್ಯನಗಿರಿ ತಪ್ಪಲಿನ ಪರಿಸರಕ್ಕೆ ಭಾರೀ ಅನಾಹುತ ತಂದೊಡ್ಡಿದೆ. ತ್ಯಾಜ್ಯ ವಸ್ತುಗಳು ಇಲ್ಲಿನ ಪರಿಸರ, ವನ್ಯಜೀವಿಗಳ ಬದುಕಿಗೆ ಮಾರಕವಾಗುತ್ತಿದ್ದು, ಈ ಸಂಬಂಧ ಪ್ರವಾಸಿಗರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಗಿರಿಶ್ರೇಣಿ ವ್ಯಾಪ್ತಿಯಲ್ಲಿ ಪ್ರವಾಸಿಗರ ಬೇಜವಾಬ್ದಾರಿತನದಿಂದಾಗಿ ಟನ್‌ಗಟ್ಟಲೇ ತ್ಯಾಜ್ಯವಸ್ತುಗಳು ಸಂಗ್ರಹವಾಗುತ್ತಿರುವುದು ಇಲ್ಲಿನ ಪರಿಸರ ನಾಶಕ್ಕೆ ಕಾರಣವಾಗುವ ಆತಂಕ ಎದುರಾಗಿದೆ. ತ್ಯಾಜ್ಯ ವಸ್ತುಗಳನ್ನು ಗಿರಿಶ್ರೇಣಿ ವ್ಯಾಪ್ತಿಗೆ ಕೊಂಡೊಯ್ಯುವುದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಎಷ್ಟೇ ಕ್ರಮವಹಿಸಿದರೂ ತ್ಯಾಜ್ಯಗಳ ರಾಶಿ ಮಾತ್ರ ಹೆಚ್ಚುತ್ತಲೇ ಇದೆ.
ಪ್ಲಾಸ್ಟಿಕ್ ಮುಕ್ತ ಪ್ರದೇಶ ಘೋಷಣೆ:
ಮುಳ್ಳಯ್ಯನಗಿರಿ ಶ್ರೇಣಿಯನ್ನು ತ್ಯಾಜ್ಯವಸ್ತುಗಳಿಂದ ರಕ್ಷಣೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಡೆಗೂ ದಿಟ್ಟಕ್ರಮಕ್ಕೆ ಮುಂದಾಗಿದೆ. ಶ್ರೇಣಿ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶವನ್ನು ಪಾಸ್ಲಿಕ್ ಮುಕ್ತ ಪ್ರದೇಶ ಎಂದು ಇತ್ತೀಚೆಗೆ ಜಿಲ್ಲಾಡಳಿತ ಘೋಷಣೆ ಮಾಡಿದ್ದು, ಗಿರಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವುದರಿಂದ ಇನ್ನು ಮುಂದೆ ಪ್ರವಾಸಿಗರು ಸಿಗರೇಟ್ ಪ್ಯಾಕ್‌ನಲ್ಲಿ ಬರುವ ಸಣ್ಣ ಪ್ಲಾಸ್ಟಿಕ್ ತುಂಡನ್ನೂ ಗಿರಿ ವ್ಯಾಪ್ತಿಗೆ ಕೊಂಡೊಯ್ಯುವಂತಿಲ್ಲ. ಜಿಲ್ಲಾಡಳಿತದ ಆದೇಶ ಮೀರಿದವರಿಗೆ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ.
ಮುಳ್ಳಯ್ಯನಗಿರಿ ತಪ್ಪಲನ್ನು ತ್ಯಾಜ್ಯಗಳಿಂದ ರಕ್ಷಣೆ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಈ ಆದೇಶ ಹೊರಡಿಸಿದೆ. ಜಿಲ್ಲಾಡಳಿತದ ಆದೇಶದ ಪ್ರಕಾರ ಇನ್ನು ಮುಂದೆ ಗಿರಿ ತಪ್ಪಲಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ ಗಿರಿ ಸಮೀಪದ ಕೈಮರ ಚೆಕ್‌ಪೋಸ್ಟ್‌ನಲ್ಲಿ ಪಾಸ್ಟಿಕ್ ತಪಾಸಣಾ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸಲಿದ್ದು, ಈ ಸಂಬಂಧ ಪ್ರತೀ ತಿಂಗಳು ವರದಿ ನೀಡಬೇಕು ಎಂದು ಅರಣ್ಯ ಇಲಾಖೆಗೆ ಆದೇಶಿಸಿದೆ.
ಪ್ಲಾಸ್ಟಿಕ್ ನಿಷೇಧದ ಬಗ್ಗೆ ಗಿರಿಶ್ರೇಣಿಯ ವ್ಯಾಪ್ತಿಯ ಎಲ್ಲ ಹೋಮ್ ಸ್ಟೇ, ರೆಸಾರ್ಟ್‌ಗಳ ವ್ಯಾಪ್ತಿಯಲ್ಲಿ ಸೂಚನ ಫಲಕ ಹಾಕಲು ಆದೇಶಿಸಲಾಗಿದೆ. ಜಿಲ್ಲಾಡಳಿತದ ಈ ಆದೇಶಕ್ಕೆ ಸಾರ್ವಜನಿಕರು, ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ತಡವಾಗಿಯಾದರೂ ಅಪರೂಪದ ಜೀವವೈವಿಧ್ಯತೆಯ ತಾಣವನ್ನು ಸಂರಕ್ಷಿಸಲು ದಿಟ್ಟ ಕ್ರಮಕೈಗೊಂಡಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಳ್ಳಯ್ಯನಗಿರಿ ರಾಜ್ಯದ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದು. ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ಪರಿಸರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರಾದರೂ ಅಪರೂಪದ ಈ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂಬ ಅರಿವಿನ ಕೊರತೆ ಪ್ರವಾಸಿಗರಲ್ಲಿದೆ. ಪ್ರವಾಸಿಗರ ಈ ನಿರ್ಲಕ್ಷ್ಯದಿಂದಾಗಿ ಪ್ರತೀ ವರ್ಷ ಗಿರಿ ತಪ್ಪಲಿನಲ್ಲಿ ರಾಶಿ ರಾಶಿ ತ್ಯಾಜ್ಯ ಸಿಗುತ್ತಿದೆ. ಇದು ಇಲ್ಲಿನ ಪರಿಸರ ಹಾಗೂ ವನ್ಯಜೀವಿಗಳಿಗೆ ಮಾರಕವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಶ್ರೇಣಿಯನ್ನು ‘ಪ್ಲಾಸ್ಟಿಕ್ ಮುಕ್ತ ಪ್ರದೇಶ’ ಎಂದು ಘೋಷಿಸಲಾಗಿದೆ. ಜಿಲ್ಲಾಡಳಿತದ ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು.
-ಮೀನಾ ನಾಗರಾಜ್, ಜಿಲ್ಲಾಧಿಕಾರಿ
ಮುಳ್ಳಯ್ಯನಗಿರಿ ಕೇವಲ ಪ್ರವಾಸಿತಾಣವಲ್ಲ, ಅದು ಜೀವವೈವಿಧ್ಯತೆಯ ಆಗರ. ಇದನ್ನು ಸಂರಕ್ಷಣೆ ಮಾಡಲೇಬೇಕು. ಪ್ರವಾಸಿಗರ ಭೇಟಿಯಿಂದ ಇಲ್ಲಿನ ಪರಿಸರದ ಮೇಲೆ ನಿರಂತರ ಒತ್ತಡ ಬೀಳುತ್ತಿದೆ, ಆದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸಿಗರು ಬೇಕು. ಆದರೆ ಪ್ರವಾಸಿಗರ ಬೇಜವಾಬ್ದಾರಿತನಕ್ಕೆ ಕಡಿವಾಣ ಹಾಕಲೇಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಡವಾಗಿಯಾದರೂ ಮುಳ್ಳಯ್ಯನಗಿರಿ ಶ್ರೇಣಿಯನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ.
-ವೀರೇಶ್, ಪರಿಸರವಾದಿ