ಶೋಭಾ ಕರಂದ್ಲಾಜೆ ಸ್ವಕ್ಷೇತ್ರದಲ್ಲಿ ತಿರಸ್ಕೃತರಾದರೂ ಬೆಂಗಳೂರು ಉತ್ತರದಲ್ಲಿ ಮಣೆ!

Update: 2024-03-18 05:07 GMT

Photo: fb.com/Shobhakarandlaje

ಉಡುಪಿಯಲ್ಲಿ ಭಾರೀ ಆಕ್ರೋಶ ಎದುರಿಸಿದ್ದ ಶೋಭಾ ಕರಂದ್ಲಾಜೆ ಈಗ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ತನ್ನ ಕ್ಷೇತ್ರದ ಜನರಿಗೆ ಬೇಡವಾದ ಅವರನ್ನು ಈಗ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗುತ್ತಿದೆ. ಆದರೆ ಬೆಂಗಳೂರು ಉತ್ತರದಲ್ಲಿ ಸ್ಥಳೀಯ ಬಿಜೆಪಿ ನಾಯಕರೇ ಯಾಕೆ ಅವಕಾಶ ಪಡೆಯುತ್ತಿಲ್ಲ? ಎಲ್ಲೂ ಸಲ್ಲದವರನ್ನು ಇಲ್ಲೇಕೆ ತಂದು ನಿಲ್ಲಿಸಲಾಗುತ್ತದೆ? ಯಾರ್ಯಾರನ್ನೋ ಗೆಲ್ಲಿಸುವ ಅನಿವಾರ್ಯತೆ ಆ ಕ್ಷೇತ್ರದವರಿಗೆ ಇದೆಯೇ? ಟಿಕೆಟ್ ಕೊಡಲೇಬೇಡಿ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾರ್ಯಕರ್ತರೇ ಗದ್ದಲವೆಬ್ಬಿಸುವ ಮಟ್ಟಿಗೆ ವಿರೋಧ ಕಟ್ಟಿಕೊಂಡಿದ್ದವರು, ಅದು ಹೇಗೆ ಇನ್ನೊಂದು ಕ್ಷೇತ್ರದಲ್ಲಿ ಸಲ್ಲುತ್ತಾರೆಂದು ಬಿಜೆಪಿ ಭಾವಿಸಿದೆ?.

ಈ ಹಿಂದೆಯೂ ಶೃಂಗೇರಿಯಿಂದ ಡಿ.ಬಿ. ಚಂದ್ರೇಗೌಡರನ್ನು, ಮಂಗಳೂರಿನಿಂದ ಡಿ.ವಿ. ಸದಾನಂದ ಗೌಡರನ್ನು ತಂದು ಬೆಂಗಳೂರು ಉತ್ತರಕ್ಕೆ ಹೇರಲಾಗಿತ್ತು. ಇನ್ನು ಬೆಂಗಳೂರು ಉತ್ತರ ಕ್ಷೇತ್ರದ ಜನರ ಮುಂದೆ ಶೋಭಾ ಕರಂದ್ಲಾಜೆ ಭಾಷಣ ಶುರುವಾಗಲಿದೆ.

ಬೇರೆ ಬೇರೆ ಕ್ಷೇತ್ರಗಳಲ್ಲಿ ವಿರೋಧಿ ಅಲೆ ಎದುರಿಸುತ್ತಿದ್ದ ಇತರ ಬಿಜೆಪಿ ಹಾಲಿ ಸಂಸದರು ಟಿಕೆಟ್ ಕಳೆದುಕೊಂಡರೆ, ಶೋಭಾ ಮಾತ್ರ ಇನ್ನೊಂದು ಕಡೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗುತ್ತಲೇ ಇದ್ದಾರೆ. ಶೋಭಾ ಅವರಿಗೆ ಈ ರೀತಿಯ ಸ್ಪೆಷಲ್ ಟ್ರೀಟ್‌ಮೆಂಟ್ ಮತ್ತೆ ಮತ್ತೆ ಬಿಜೆಪಿಯಲ್ಲಿ ಸಿಗುತ್ತಲೇ ಬಂದಿದೆ.

ವಿಧಾನ ಪರಿಷತ್‌ಗೆ ಆಯ್ಕೆ, ವಿಧಾನ ಸಭೆಗೆ ಆಯ್ಕೆ, ಸಚಿವೆಯಾಗಿ ಆಯ್ಕೆ, ಪ್ರಭಾವಿ ಖಾತೆಗಳು, ಮತ್ತೆ ಸಂಸದೆಯಾಗಿ ಸುಲಭವಾಗಿ ಎರಡೆರಡು ಬಾರಿ ಆಯ್ಕೆ, ಈಗ ಮತ್ತೆ ಹೊಸತೊಂದು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಅವಕಾಶ.

ಮಹಿಳಾ ರಾಜಕಾರಣಿಯೊಬ್ಬರಿಗೆ ಈ ರೀತಿ ಆದ್ಯತೆ ಸಿಗುವುದು ಒಳ್ಳೆಯದೇ ಆದರೂ, ಎಂಪಿಯಾಗಿ, ಸಚಿವೆಯಾಗಿ ಶೋಭಾ ಸಾಧನೆ ಏನು? ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ಜನರ ಆಶೋತ್ತರಗಳಿಗೆ ಹೇಗೆ ಸ್ಪಂದಿಸಿದ್ದಾರೆ? ತಮ್ಮ ಪಕ್ಷದ ಕಾರ್ಯಕರ್ತರಿಗೇ ಅವರು ಎಷ್ಟು ಲಭ್ಯರಿದ್ದರು ಎಂದು ನೋಡಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.

ಎರಡೆರಡು ಬಾರಿ ಗೆಲ್ಲಿಸಿ ಕಳಿಸಿದ ಕ್ಷೇತ್ರದಲ್ಲಿ ಅವರು ಕಾಣಿಸಿಕೊಂಡಿದ್ದೇ ಅಪರೂಪ. ಸಂಸದರನ್ನು ಹುಡುಕಿಕೊಡಿ ಎಂದು ಅದೆಷ್ಟು ಸಲ ಕ್ಷೇತ್ರದ ಜನರೇ ದೂರಿದ್ದರು. ಆದರೆ ಆಗೀಗ ಕಾಣಿಸಿಕೊಳ್ಳುತ್ತಿದ್ದ ಶೋಭಾ ಮಾತ್ರ ಏನೇನೂ ಆಗಿಯೇ ಇಲ್ಲ ಎನ್ನುವಂತೆ ಇದ್ದರು. ಅವರ ಹೇಳಿಕೆಗಳಂತೂ ಸಂಘ ಪರಿವಾರದ ದೊಡ್ಡ ನಾಯಕರ ಮಾತಿಗೊಂದು ಬಾಲದಂತೆ ತಮ್ಮದೂ ಇರಲಿ ಎನ್ನುವ ರೀತಿಯಲ್ಲೇ ಇರುತ್ತವೆ.

ಉದಾಹರಣೆಗೆ ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಎನ್ನುವುದು, ರೈತರನ್ನು ಭಯೋತ್ಪಾದಕರೆನ್ನುವ ಟೀಕೆಗೂ ತಮ್ಮದೊಂದು ಮಾತು ಸೇರಿಸುವುದು, ಹಿಂದುತ್ವದ ವಿಚಾರ ಎತ್ತಿ ಮಾತಾಡುವುದು- ಇಷ್ಟನ್ನೇ ಮಾಡುತ್ತ ಬಂದರೇ ಹೊರತು ಕ್ಷೇತ್ರದ ಕೆಲಸ ನಡೆದದ್ದಂತೂ ಬಲು ಕಡಿಮೆ. ಜನವಿರೋಧಿ, ಕೋಮುವಾದಿ ರಾಜಕೀಯವೇ ಅವರ ಬಂಡವಾಳ ಎಂಬುದೂ ಢಾಳಾಗಿ ಎದ್ದು ಕಾಣುವ ಅಂಶ. ಹೀಗಿದ್ದರೂ ಅವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಆದರೆ ಶೋಭಾ ಕರಂದ್ಲಾಜೆ ಹಾದಿ ಸುಗಮವಾಗಿದೆಯೆ? ಈ ಪ್ರಶ್ನೆ ಏಳುವುದಕ್ಕೆ ಮುಖ್ಯ ಕಾರಣ, ಬೆಂಗಳೂರು ಉತ್ತರದಲ್ಲೂ ಬಿಜೆಪಿ ಕಾರ್ಯಕರ್ತರಿಂದ ‘ಗೋಬ್ಯಾಕ್ ಶೋಭಕ್ಕ’ ಅಭಿಯಾನ ಶುರುವಾಗಿರುವುದು.

ಸ್ಥಳೀಯರು ಭಿತ್ತಿಪತ್ರಗಳನ್ನು ಹಿಡಿದುಕೊಂಡು ‘ಗೋ ಬ್ಯಾಕ್ ಶೋಭಾ ಅಕ್ಕ’ ಎಂಬ ಘೋಷಣೆಗಳನ್ನು ಕೂಗುತ್ತಿದಾರೆ. ಯಾವುದೇ ಕಾರಣಕ್ಕೂ ಶೋಭಾ ಅವರಿಗೆ ಬೆಂಗಳೂರು ಉತ್ತರಕ್ಕೆ ಟಿಕೆಟ್ ಕೊಡಬೇಡಿ. ಅವರು ಎಲ್ಲಿಂದಲೋ ಬಂದು ನಮ್ಮ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಸ್ಥಳೀಯರಿಗೆ ನೀಡಿದರೆ ನಮ್ಮ ಸಮಸ್ಯೆಗಳು ಪರಿಹಾರವಾಗಬಹುದು ಎನ್ನುತ್ತಿರುವ ಸಾರ್ವಜನಿಕರು ‘ಶೋಭಾ ಹಠಾವೋ-ಬೆಂಗಳೂರು ಉತ್ತರ ಬಿಜೆಪಿ ಬಚಾವೋ’ ಎಂಬ ಫಲಕ ಗಳನ್ನು ಹಿಡಿದು ಪ್ರತಿಭಟಿಸುತ್ತಿದ್ದಾರೆ. ಸ್ಥಳೀಯ ಒಕ್ಕಲಿಗ ನಾಯಕರಿಗೆ ಟಿಕೆಟ್ ಕೊಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಹಾಗೆ ನೋಡಿದರೆ, ಇಲ್ಲಿ ಶೋಭಾ ಅವರನ್ನು ಕಣಕ್ಕಿಳಿಸಿರುವುದು ಸ್ವತಃ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರಿಗೂ ಇಷ್ಟವಿಲ್ಲ ಎಂಬ ರೀತಿಯ ವರದಿಗಳಿವೆ. ಮತ್ತೊಮ್ಮೆ ಸದಾನಂದಗೌಡರಿಗೇ ಇಲ್ಲಿಂದ ಟಿಕೆಟ್ ಕೊಡಬೇಕು ಎಂದು ಅವರು ಒತ್ತಾಯಿಸಿದ್ದರು.

ಚುನಾವಣೆ ರಾಜಕೀಯ ಬೇಡ ಎಂದು ಒಂದು ಹಂತದಲ್ಲಿ ಹಿಂದೆ ಸರಿದಿದ್ದ ಸದಾನಂದಗೌಡರನ್ನು ತಾವೇ ಹೋಗಿ ಕಂಡು ಕಣಕ್ಕಿಳಿಯುವಂತೆ ಅವರು ಕೇಳಿದ್ದೂ ಇತ್ತು. ಆದರೆ ದಿಲ್ಲಿ ವರಿಷ್ಠರು ಸೊಪ್ಪು ಹಾಕಿಲ್ಲ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ತೀವ್ರ ವಿರೋಧ ಕಟ್ಟಿಕೊಂಡಿದ್ದರೂ ಶೋಭಾ ಅವರಿಗೆ ಟಿಕೆಟ್ ಕೊಡಲೇ ಬೇಕು, ಆದರೆ ಬೆಂಗಳೂರು ಉತ್ತರ ಬಿಟ್ಟರೆ ಇನ್ನಾವ ಕ್ಷೇತ್ರದಲ್ಲೂ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಪಕ್ಷಕ್ಕೆ ಕಂಡಿರಬೇಕು. ಅಂತೂ ಯಡಿಯೂರಪ್ಪನವರ ಕೃಪಾಕಟಾಕ್ಷದಿಂದಾಗಿ, 10 ವರ್ಷದಿಂದ ಇದ್ದ ಕ್ಷೇತ್ರಕ್ಕೆ ಬೇಡವಾದವರು ಬೆಂಗಳೂರು ಉತ್ತರಕ್ಕೆ ಬರುವಂತಾಯಿತು.

ಕ್ಷೇತ್ರದ ಹಾಲಿ ಸಂಸದ ಡಿವಿಎಸ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವ ಶೋಭಾ, ತನ್ನನ್ನು ತಾನು ಫೈಟರ್ ಎಂದು ಕರೆದುಕೊಂಡಿದ್ದಾರೆ. ಆದರೆ ಕಾರ್ಯಕರ್ತರು ಮಾತ್ರವಲ್ಲ, ಪಕ್ಷದ ರಾಜ್ಯ ನಾಯಕರಿಗೂ ಶೋಭಾ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾದದ್ದು ಸಮಾಧಾನ ಕೊಟ್ಟಿಲ್ಲ ಎಂಬುದು ಈಗಾಗಲೇ ಬಯಲಾಗತೊಡಗಿದೆ.

ಅಷ್ಟಕ್ಕೂ ಶೋಭಾ ಅವರಿಗೆ ಇಷ್ಟೆಲ್ಲ ಆದ್ಯತೆ ಸಿಗುತ್ತಿರುವುದಕ್ಕೆ ಕಾರಣವೇನು ಎಂಬುದು ತೀರಾ ರಹಸ್ಯದ ವಿಚಾರವೇನೂ ಅಲ್ಲ.

ಅತ್ತ ಪುತ್ರನಿಗೆ ಹಾವೇರಿ ಟಿಕೆಟ್ ಮಿಸ್ಸಾದ ಸಿಟ್ಟಲ್ಲಿರುವ ಈಶ್ವರಪ್ಪನವರೂ ಶೋಭಾಗೆ ಟಿಕೆಟ್ ನೀಡಿರುವ ಬಗ್ಗೆ ಮಾತಾಡಿದ್ದಾರೆ. ‘‘ಉಡುಪಿಯಲ್ಲಿ ತಿರಸ್ಕೃತ ಶೋಭಾಗೆ ಬೆಂಗಳೂರು ಉತ್ತರದಲ್ಲಿ ಯಡಿಯೂರಪ್ಪ ಟಿಕೆಟ್ ಕೊಡಿಸಿದ್ದಾರೆ. ಅಲ್ಲಿ ಸದಾನಂದ ಗೌಡರಿಗೇ ಟಿಕೆಟ್ ಕೊಡಬೇಕು ಎಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದರು. ಆದರೂ ಶೋಭಾಗೆ ಹೇಗೆ ಟಿಕೆಟ್ ಸಿಕ್ಕಿತು?’’ ಎಂದು ಕೇಳಿದ್ದಾರೆ ಈಶ್ವರಪ್ಪ.

ಬಿಜೆಪಿಗೆ ಚುನಾವಣಾ ರಾಜಕೀಯದಲ್ಲಿ ಯಡಿಯೂರಪ್ಪ ಅನಿವಾರ್ಯತೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಅವರ ಆಪ್ತ ವಲಯದ ಶೋಭಾ ಕರಂದ್ಲಾಜೆಯವರಿಗೂ ಆದ್ಯತೆಗಳು ಹೀಗೇ ಒದಗಲಿವೆ ಎಂದಂತೂ ಹೇಳಬಹುದು.

ಯಡಿಯೂರಪ್ಪನವರ ಸರಕಾರವಿದ್ಧಾಗ ಎಲ್ಲವೂ ಶೋಭಾ ಅವರ ಕಣ್ಣ ಇಷಾರೆಯಲ್ಲೇ ನಡೆಯುತ್ತಿತ್ತು ಎಂಬುದು ರಾಜ್ಯ ರಾಜಕೀಯವನ್ನು ಹತ್ತಿರದಿಂದ ಬಲ್ಲವರೆಲ್ಲ ಹೇಳುವ ಮಾತು. ಕಡೆಗೆ ಅದು ಯಾವ ಮಟ್ಟಕ್ಕೆ ಹೋಯಿತೆಂದರೆ, ಶೋಭಾ ಕಾರಣಕ್ಕಾಗಿಯೇ ಯಡಿಯೂರಪ್ಪ ಸರಕಾರ ಇಕ್ಕಟ್ಟಿಗೆ ಸಿಲುಕುವ ಹಾಗಾಯಿತು. ಶೋಭಾ ಅವರನ್ನು ಸಂಪುಟದಿಂದ ವಜಾ ಮಾಡದಿದ್ದರೆ ನಾವು ಸರಕಾರದಲ್ಲಿ ಉಳಿಯುವುದಿಲ್ಲ ಎಂದು ಬಳ್ಳಾರಿಯ ರೆಡ್ಡಿಗಳು ಬಂಡಾಯ ಸಾರಿದ್ದರು.

ಬಿಎಸ್‌ವೈ ಮೂರನೇ ಬಾರಿ ಸಿಎಂ ಆದಾಗ ಅವರನ್ನು ಬಿಎಸ್‌ವೈ ಕುಟುಂಬ ಸರಕಾರದಿಂದಲೇ ದೂರ ಇರುವಂತೆ ಮಾಡಿತ್ತು. ಇಷ್ಟೆಲ್ಲದರ ನಂತರವೂ ಶೋಭಾ ಅವರನ್ನು ಬಿಎಸ್‌ವೈ ಆಪ್ತವಲಯದಿಂದ ದೂರ ಮಾಡುವುದು ಯಾರಿಗೂ ಸಾಧ್ಯವಾಗಲಿಲ್ಲ. ಹಾಗೆಯೇ

ಬಿಎಸ್‌ವೈ ಅವರನ್ನು ಪಕ್ಷದಿಂದ ದೂರ ಇಡುವುದು ಬಿಜೆಪಿಯ ದಿಲ್ಲಿ ನಾಯಕರಿಗೂ ಸಾಧ್ಯವಾಗಲಿಲ್ಲ. ಇದೆಲ್ಲದರ ಪರಿಣಾಮವಾಗಿ, ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಬೇಡವಾದರೂ ಬೆಂಗಳೂರು ಉತ್ತರದಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಬೇರೆ ಕೆಲವು ಸಂಸದರೆಲ್ಲ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿದ ಬಳಿಕ ಕೈಕೈಹೊಸಕಿಕೊಂಡು ಕೂತಿರುವಾಗ, ಶೋಭಾ ಮಾತ್ರ ಬೆಂಗಳೂರು ಉತ್ತರ ಕ್ಷೇತ್ರದ ಮತದಾರರ ಮುಂದೆ ಕೈಬೀಸಲು ತಯಾರಾಗುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ, ಜಯ ಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದ್ದರು.

2019ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ್ದ ಶೋಭಾ, ಆಗ ಪ್ರಮೋದ್ ಮಧ್ವರಾಜ್ ವಿರುದ್ಧ ಮೂರೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾದಾಗ ಜನ ಇವರ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿತ್ತು. ಇದೇ ಕಾರಣಕ್ಕೆ 2019ರ ಚುನಾವಣೆ ಸಂದರ್ಭ ಗೋ ಬ್ಯಾಕ್ ಶೋಭಾ ಅಭಿಯಾನವನ್ನು ಬಿಜೆಪಿ ಕಾರ್ಯಕರ್ತೆಯರೇ ಹಮ್ಮಿಕೊಂಡಿದ್ದರು. ಆದರೆ 2019ರ ಚುನಾವಣೆಯಲ್ಲಿ ಯಡಿಯೂರಪ್ಪ ಕೃಪಾಕಟಾಕ್ಷದಿಂದಲೇ ಟಿಕೆಟ್ ಪಡೆದು ಮೋದಿ ಹೆಸರಿನಲ್ಲಿ ಮತ್ತೆ ಭರ್ಜರಿ ಗೆಲುವು ಸಾಧಿಸಿದ್ದರು.

ಆನಂತರ ಕೇಂದ್ರ ಸಂಪುಟದಲ್ಲಿ ರಾಜ್ಯ ಸಚಿವೆಯಾಗಿ ನೇಮಕಗೊಂಡ ಶೋಭಾ ಕರಂದ್ಲಾಜೆ ಕ್ಷೇತ್ರ ಭೇಟಿ ಕೂಡ ಕಡಿಮೆಯಾಯಿತು. ಇದರ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಈ ಬಾರಿಯೂ ಶೋಭಾ ವಿರುದ್ಧ ಗೋ ಬ್ಯಾಕ್ ಶೋಭಾ ಅಭಿಯಾನ ನಡೆದಿತ್ತು. ಕಳೆದ 10ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ ಎಂಬುದರ ಬಗ್ಗೆ ಸ್ವಪಕ್ಷೀಯರಲ್ಲೇ ಶೋಭಾ ವಿರುದ್ಧ ಅಸಮಾಧಾನ ಇದೆ.

ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಭೆಯಲ್ಲಿ ಮೀನುಗಾರರ ಮುಖಂಡರು ಸಂಸದೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಕೋಟ್ಯಂತರ ರೂ. ವ್ಯವಹಾರ ಹಾಗೂ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿರುವ ದೇಶದ ಪ್ರಮುಖ ಮೀನುಗಾರಿಕಾ ಬಂದರು ಇರುವ ಮಲ್ಪೆಯನ್ನು ಸಂಪರ್ಕಿಸುವ, ಕರಾವಳಿ ಬೈಪಾಸ್‌ನಿಂದ ಮಲ್ಪೆಯವರೆಗಿನ ಕೇವಲ ಮೂರು ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನೂ 10 ವರ್ಷಗಳ ಕಾಲ ಸಂಸದರಾಗಿದ್ದ ಸಂಸದೆ ಶೋಭಾ ಕರಂದ್ಲಾಜೆಯವರಿಂದ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ ಎಂಬುದು ಅವರ ಆರೋಪವಾಗಿದೆ.

ಸ್ಥಳೀಯ ನಗರಸಭಾ ಬಿಜೆಪಿ ಸದಸ್ಯರು ಕೂಡ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕಾಮಗಾರಿಯ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಒದಗಿಸಿಕೊಡುವಲ್ಲಿ ಸಂಸದರು ವಿಫಲರಾಗಿದ್ದಾರೆಂದು ಮೀನುಗಾರರು ಸೇರಿದಂತೆ ಸ್ಥಳೀಯ ಸಂತ್ರಸ್ತರು ಈ ಸಭೆಯಲ್ಲಿ ದೂರಿದ್ದರು.

ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿರುವ ಬಗ್ಗೆಯೂ ಸಂಸದರ ವಿರುದ್ಧ ಆಕ್ರೋಶಗಳು ಕೇಳಿಬರುತ್ತಿವೆ. ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸಂಚಾರ ದುಸ್ತರವಾಗಿದ್ದು, ಜನ ಸಂಸದರಿಗೆ ಹಿಡಿಶಾಪ ಹಾಕುತ್ತಲೇ ಇದ್ದಾರೆ.

ಇನ್ನು, ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿನ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಗೂ ಕಾಲ ಕೂಡಿಬಂದಿಲ್ಲ. ಇದರಿಂದ ಈ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಇದರ ವಿರುದ್ಧ ಕೂಡ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಸದೆ ಕ್ಷೇತ್ರಕ್ಕಾಗಮಿಸುವುದೇ ಅಪರೂಪ. ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿದರೂ ಅದರ ಅನುಷ್ಠಾನ ವಿಳಂಬ ವಾಗುತ್ತಿದೆ. ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದರೂ ಪೂರ್ಣಗೊಳ್ಳದ ಕಟ್ಟಡ, ಇಎಸ್‌ಐ ಆಸ್ಪತ್ರೆಗೆ ಕೂಡಿಬಾರದ ಕಟ್ಟಡ ಯೋಗ ಹೀಗೆ ಹಲವಾರು ತಕರಾರುಗಳು ಇವರ ವಿರುದ್ಧ ಇವೆ.

ಸಂಸದರ ಕಚೇರಿಗೆ ಕಷ್ಟ ಹೇಳಿಕೊಂಡು ಬರುವವರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಕೇಂದ್ರ ಸರಕಾರದ ಹಲವು ಯೋಜನೆಗಳು ಅರ್ಹರಿಗೆ ಇನ್ನೂ ತಲುಪಿಲ್ಲ. ಜಿಲ್ಲೆಯ ಪಕ್ಷ ರಾಜಕಾರಣದಿಂದಲೂ ಅವರು ಬಲು ದೂರ. ಒಬ್ಬ ಜನನಾಯಕಿಯಾಗಿ, ಇಷ್ಟು ಕಾಲ ರಾಜಕಾರಣದಲ್ಲಿದ್ದು ಜನವಿರೋಧಿ ನಡವಳಿಕೆ ತೋರಿದರೇ ಹೊರತು ಜನಪ್ರೀತಿ ಗಳಿಸಲಿಲ್ಲ.

ಉತ್ತರ ಕನ್ನಡದಲ್ಲಿ ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ಆ ಬಳಿಕ ಶಾಲಾ ವಿದ್ಯಾರ್ಥಿನಿಯರಿಗೆ ಗಾಯವಾದ ಪ್ರಕರಣದಲ್ಲಿ ಸುಳ್ಳು ಹೇಳಿಕೆ ನೀಡಿ ಕೋಮು ಪ್ರಚೋದನೆಗೆ ಯತ್ನಿಸಿದ್ದರು. ಬಳಿಕ ಆ ವಿದ್ಯಾರ್ಥಿನಿಯರು ನಾವೇ ಗಾಯ ಮಾಡಿಕೊಂಡಿದ್ದು ಎಂದು ಹೇಳಿದರು. ಅಂತಹ ಹಲವು ಪ್ರಕರಣಗಳಲ್ಲಿ ಶೋಭಾ ತೀರಾ ಬೇಜವಾಬ್ದಾರಿಯುತ ಕೋಮು ಪ್ರಚೋದಕ ಹೇಳಿಕೆ ಕೊಟ್ಟಿದ್ದಾರೆ.

ಶೋಭಾ ವಿದ್ಯಾವಂತೆಯಾಗಿದ್ದರೂ ಸಂಸತ್ತಿನಲ್ಲೂ ಒಂದು ಒಳ್ಳೆಯ ಚರ್ಚೆ ಮಾಡಿದ, ಮಾತಾಡಿದ ನಿದರ್ಶನ ಸಿಗುವುದೇ ಅಪರೂಪ. ಬಾಯಿ ಬಿಟ್ಟರೆ ಬರೇ ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವವರು ಎಂದೇ ಶೋಭಾ ಕುಖ್ಯಾತಿ ಗಳಿಸಿದ್ದಾರೆ. ಯಡಿಯೂರಪ್ಪ ಆಪ್ತವಲಯದಲ್ಲಿ ಮಾತ್ರ ಅವರು ಪ್ರಭಾವಿ ಎಂದು ಆಡಿಕೊಳ್ಳುವವರೂ ಅವರ ಪಕ್ಷದಲ್ಲೇ ಇದ್ದಾರೆ. ಅವರಿಗೆ ಹೋದಲ್ಲೆಲ್ಲ ವಿರೋಧ ವ್ಯಕ್ತವಾಗುತ್ತಿರುವುದೇ, ಅವರ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಸಹಮತವಿಲ್ಲ ಎಂಬುದಕ್ಕೆ ಸಾಕ್ಷಿ.

ಒಳ್ಳೆಯ ಜನನಾಯಕಿಯಾಗಿ ಬೆಳೆಯಬಹುದಾಗಿದ್ದ ಎಲ್ಲ ಅವಕಾಶಗಳನ್ನೂ, ಪಕ್ಷದೊಳಗೆ ಪ್ರಭಾವಿ ನಾಯಕನ ಆಶೀರ್ವಾದವಿದೆ ಎಂಬ ಅಹಮ್ಮಿನಿಂದಲೇ ಕಳೆದುಕೊಳ್ಳುತ್ತಿರುವ ಶೋಭಾ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದ ಜನ ಕೈಹಿಡಿಯುವರೇ ಕಾದು ನೋಡಬೇಕಿದೆ.

ಅದಕ್ಕಿಂತಲೂ ಮೊದಲು, ಶೋಭಾ ವಿರುದ್ಧ ರೊಚ್ಚಿಗೆದ್ದ ಕಾರ್ಯಕರ್ತರನ್ನು ಸಮಾಧಾನಪಡಿಸುವವರು ಯಾರು?

Writer - ವಾರ್ತಾಭಾರತಿ

contributor

Editor - jafar sadik

contributor

Byline - ಆರ್. ಕುಮಾರ್

contributor

Similar News