‘ಮೋದಿ ಬ್ರ್ಯಾಂಡ್’ ವಾರಂಟಿ ಮುಗಿದು ಹೋಯಿತೇ?
ಬಿಜೆಪಿಯವರಲ್ಲಿ ಉತ್ಸಾಹ ತುಂಬುತ್ತಿದ್ದ ಬ್ರ್ಯಾಂಡ್, ಬಿಜೆಪಿಯನ್ನು ಗೆಲ್ಲಿಸುತ್ತದೆ ಎಂಬ ಭಾವನೆ ಮೂಡಿಸುತ್ತಿದ್ದ ಬ್ರ್ಯಾಂಡ್‌ನ ವಾರಂಟಿ ಮುಗಿದುಹೋಗಿದೆಯೇ? ಮತ್ತದನ್ನು ಬಿಜೆಪಿಯ ಜನರೇ ಈಗ ಬಾಯ್ಬಿಟ್ಟು ಹೇಳುವ ಧೈರ್ಯ ಮಾಡುತ್ತಿದ್ದಾರೆಯೆ? ಈಗ ಮೋದಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಸೋತುಹೋಗುತ್ತೇವೆ ಎಂದು ಬಿಜೆಪಿಯೇ ಹೆದರುವ ಹಾಗಾಗಿದೆಯೆ?
ಬಿಜೆಪಿ ಮಂದಿಗೆ ಒಂದು ಭ್ರಮೆಯಿತ್ತು.
ಮೋದಿ ಮುಖ ತೋರಿಸಿದರೆ ಸಾಕು, ಪಕ್ಷ ಗೆದ್ದುಬಿಡುತ್ತದೆ ಎಂಬುದು ಆ ಭ್ರಮೆಯಾಗಿತ್ತು.
ಆ ಭ್ರಮೆ ಮೊದಲ ಸಲ ಕಳಚಿಬಿದ್ದಿದ್ದು ಕಳೆದ ಸಲ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ.
ಕರ್ನಾಟಕ ಮತ್ತು ಕನ್ನಡಿಗರ ಅಸ್ಮಿತೆ ಮುಂದೆ ಮೋದಿ ಆಟ ನಡೆಯದೇ ಹೋಗಿತ್ತು. ಬಿಜೆಪಿ ನಾಯಕರು ತಲೆ ತಗ್ಗಿಸಿದ್ದರು.
ಅದಾದ ಬಳಿಕ 2024ರ ಲೋಕಸಭಾ ಚುನಾವಣೆ, ಮೋದಿ ಬ್ರ್ಯಾಂಡ್ ಮುಂದಿಟ್ಟು ಮೆರೆದಾಡುತ್ತಿದ್ದ ಬಿಜೆಪಿಗೆ ಮತ್ತೊಮ್ಮೆ ಸರಿಯಾದ ಪಾಠವನ್ನೇ ಕಲಿಸಿದೆ. ಒಂದರ್ಥದಲ್ಲಿ ಅದು ಮೋದಿ ಬ್ರ್ಯಾಂಡ್‌ಗೆ ಜನರು ಕೊಟ್ಟಿರುವ ಶಾಕ್.
ಆದರೆ ಈಗ ಪಕ್ಷದೊಳಗೇ ಮೋದಿ ಬ್ರ್ಯಾಂಡ್‌ಗೆ ಶಾಕ್ ಕೊಡಲಾಗುತ್ತಿದೆಯೇ?
ಬಿಜೆಪಿಯವರಲ್ಲಿ ಉತ್ಸಾಹ ತುಂಬುತ್ತಿದ್ದ ಬ್ರ್ಯಾಂಡ್, ಬಿಜೆಪಿಯನ್ನು ಗೆಲ್ಲಿಸುತ್ತದೆ ಎಂಬ ಭಾವನೆ ಮೂಡಿಸುತ್ತಿದ್ದ ಬ್ರ್ಯಾಂಡ್‌ನ ವಾರಂಟಿ ಮುಗಿದುಹೋಗಿದೆಯೇ? ಮತ್ತದನ್ನು ಬಿಜೆಪಿಯ ಜನರೇ ಈಗ ಬಾಯ್ಬಿಟ್ಟು ಹೇಳುವ ಧೈರ್ಯ ಮಾಡುತ್ತಿದ್ದಾರೆಯೆ? ಈಗ ಮೋದಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಸೋತುಹೋಗುತ್ತೇವೆ ಎಂದು ಬಿಜೆಪಿಯೇ ಹೆದರುವ ಹಾಗಾಗಿದೆಯೆ?
ಲೋಕಸಭೆ ಚುನಾವಣೆಯಲ್ಲಿ ಮೋದಿ ಹೋದಲ್ಲೆಲ್ಲ, ಭಾರೀ ಪ್ರಚಾರ ಮಾಡಿದಲ್ಲೆಲ್ಲ ಬಿಜೆಪಿ ಹೊಸದಾಗಿ ಗೆಲ್ಲುವುದು ಹೋಗಲಿ, ಇರುವ ಸೀಟುಗಳನ್ನೂ ಕಳೆದುಕೊಂಡು ಗೋಳಾಡುವಂತಾಯಿತು.
ಹಾಗಾಗಿ, ಈಗ ಮೋದಿ ಬ್ರ್ಯಾಂಡ್ ಎಂದರೆ ಬಿಜೆಪಿಗೇ ಬೇಡವಾದ ಬ್ರ್ಯಾಂಡ್ ಆಯಿತೆ?
ಬಿಜೆಪಿಯ ಭದ್ರಕೋಟೆ ಎನ್ನಲಾಗುವ ಉತ್ತರ ಪ್ರದೇಶದಲ್ಲಿಯೂ ಮೋದಿ ಬ್ರ್ಯಾಂಡ್ ಕೆಲಸ ಮಾಡದೇ ಹೋಯಿತು. ರಾಮ್ ಲಲ್ಲಾನನ್ನು ಮೋದಿಯೇ ಕೈಹಿಡಿದು ಕರೆತಂದು ಮಂದಿರದೊಳಗೆ ನಿಲ್ಲಿಸಿದರೂ, ಅಯೋಧ್ಯೆಯಲ್ಲಿಯೇ ಜನರು ಬಿಜೆಪಿ ಅಭ್ಯರ್ಥಿಯನ್ನು ಸೋಲಿನ ಶರಶಯ್ಯೆಯ ಮೇಲೆ ಮಲಗಿಸಿಬಿಟ್ಟರು.
ಕನ್ಯಾಕುಮಾರಿಯಲ್ಲಿ ವಿವೇಕಾನಂದರೇ ಧ್ಯಾನ ಮಾಡಿದ್ದ ಮಂಟಪದಲ್ಲಿ ಧ್ಯಾನ ಮಾಡಿದರೂ, ನವಿಲುಗರಿ ಹಿಡಿದುಕೊಂಡು ಸಮುದ್ರದಾಳಕ್ಕೆ ಹೋಗಿ
ದ್ವಾರಕೆಯ ಅವಶೇಷಗಳಿಗೆ ಪೂಜೆ ಮಾಡಿದರೂ ಎಲೆಕ್ಷನ್‌ನಲ್ಲಿ ಮಾತ್ರ ಮೋದಿ ಬ್ರ್ಯಾಂಡ್ ಕ್ಲಿಕ್ ಆಗಲೇ ಇಲ್ಲ.
ಯುಪಿಯಲ್ಲಿ ಮಾತ್ರವಲ್ಲ, ಬಂಗಾಳದಲ್ಲಿಯೂ ಮಮತಾ, ಮಹುವಾ ಅವರುಗಳ ನಿಜವಾದ ಹೋರಾಟದ ಮುಂದೆ ಮೋದಿ ಸೋತುಹೋಗಬೇಕಾಯಿತು.
ಮಹಾರಾಷ್ಟ್ರದಲ್ಲಿಯೂ ಮೋದಿ ಹೋಗಿ ಪ್ರಚಾರ ಮಾಡಿದಲ್ಲೆಲ್ಲಾ ಬಿಜೆಪಿ ಸರಿಯಾಗಿಯೇ ಹೊಡೆಸಿಕೊಂಡಿತು.
ಈಗ ಮಹಾರಾಷ್ಟ್ರದಲ್ಲಿ ಇನ್ನು ಮೂರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವುದಿದೆ. ಹಯಾರ್ಣದಲ್ಲೂ ಮೂರು ತಿಂಗಳಲ್ಲಿ ಚುನಾವಣೆ ನಡೆಯುವುದಿದೆ. ಆದರೆ ಆ ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಮೋದಿ ಹೋಗುತ್ತಿಲ್ಲವೆ?
ಯಾವುದೇ ರಾಜ್ಯಗಳಲ್ಲಿ ಮೋದಿ ಪ್ರಚಾರಕ್ಕೆ ಹೋದರೂ, ಅವರ ವಿರುದ್ಧವಾಗಿ ರಾಹುಲ್ ಎತ್ತುವ ವಿಷಯಗಳು ಬಿಜೆಪಿಗೆ ಪ್ರಬಲ ಹೊಡೆತಗಳಾಗಿ ಪರಿಣಮಿಸುವುದು ನಿಶ್ಚಿತ ಎಂದು ಈಗ ಬಿಜೆಪಿಯೇ ಖಚಿತವಾಗಿ ಭಾವಿಸುವ ಹಾಗಾಗಿದೆಯೇ?
ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರ ಮಾಡಿದ್ದೇನು ಎಂಬ ಪ್ರಶ್ನೆ ಈಗಂತೂ ನಿರುದ್ಯೋಗದಿಂದ ಕಂಗೆಟ್ಟಿರುವ ಈ ದೇಶದ ಲಕ್ಷಾಂತರ ಯುವಕರೆದುರು ಇದೆ. ಕೆಲಸ ಕಳೆದುಕೊಂಡ ಕೋಟಿಗಟ್ಟಲೆ ಜನರ ಮುಂದೆ ಇದೆ.
ಬೆಲೆಯೇರಿಕೆಯಂಥ ಸ್ಥಿತಿಯನ್ನು ಎದುರಿಸಲಾಗದೆ ಹೈರಾಣಾಗಿರುವವರ ಎದುರಲ್ಲಿಯೂ ಇದೆ.
ದೇಶದ ಆರ್ಥಿಕತೆ ಕಂಡಿರುವ ಗತಿ ಬಗ್ಗೆ ಪರಿಣಿತರು ಹೇಳುವ ಸತ್ಯಗಳು ಜನರಿಗೂ ನಿಧಾನವಾಗಿಯಾದರೂ ಆರ್ಥವಾಗಿವೆ.
ಯಾಕೆಂದರೆ ಜನಸಾಮಾನ್ಯರ ಪಾಲಿಗೆ ತಮ್ಮ ಊಟ ದುಬಾರಿಯಾಗಿರುವುದು, ಎರಡು ಹೊತ್ತಿನ ಊಟ ಕಷ್ಟದ್ದಾ ಗಿರುವುದು ಕಾಣಿಸಿದೆ.
ಸತ್ಯ ಹೀಗೆಲ್ಲ ಇರುವಾಗ ಮೋದಿಯವರ ಯಾವ ಹಳೆಯ ಸುಳ್ಳುಗಳೂ ಕೆಲಸಕ್ಕೆ ಬರುವುದಿಲ್ಲ ಎಂಬುದು ಮೊನ್ನೆಯ ಚುನಾವಣೆಯಲ್ಲಿಯೇ ಗೊತ್ತಾಗಿಬಿಟ್ಟಿದೆ.
ಪರಿಸ್ಥಿತಿ ಹೀಗಿರುವಾಗ, ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿಯೇ ಆಗಲೀ, ಚುನಾವಣೆ ಸೋತ ರಾಜ್ಯಗಳಲ್ಲಿಯೇ ಆಗಲೀ ಬಿಜೆಪಿಯ ಎದುರು ಇರುವ ಭಯವೇನೆಂದರೆ, ಮೋದಿ ಸರಕಾರದ ತಸ್ವೀರುಗಳನ್ನು ಇಟ್ಟುಕೊಂಡು ಹೋದರೆ ಜನ ಸೀದಾ ವಾಪಸ್ ಕಳಿಸುತ್ತಾರೆ ಎಂಬುದು.
ಒಂದು ವೇಳೆ ಮೋದಿ ಮಹಾರಾಷ್ಟ್ರಕ್ಕೂ, ಹರ್ಯಾಣಕ್ಕೂ ಚುನಾವಣಾ ಪ್ರಚಾರಕ್ಕೆ ಹೋದರೆ ಇದ್ದಕ್ಕಿದ್ದಂತೆ ರಾಜ್ಯದ ವಿಷಯಗಳು ರಾಷ್ಟ್ರೀಯ ವಿಚಾರಗಳಾಗಿ ಬದಲಾಗಿಬಿಡಬಹುದು. ಮೋದಿ ಸರಕಾರಕ್ಕೆ ವಿರುದ್ಧವಿರುವ ಅಲೆ ಕ್ರಮೇಣ ಎಲ್ಲ ರಾಜ್ಯಗಳಲ್ಲಿಯೂ ವಿಸ್ತರಿಸಿಕೊಳ್ಳಬಹುದು.
ಉತ್ತರ ಪ್ರದೇಶದಲ್ಲಿ ಅಸಂಘಟಿತ ಕ್ಷೇತ್ರದ 30 ಲಕ್ಷ ಉದ್ಯೋಗಗಳು ಇಲ್ಲವಾಗಿವೆ. ಮಹಾರಾಷ್ಟ್ರದಲ್ಲಿ ಈ ಪ್ರಮಾಣ 12ರಿಂದ 16 ಲಕ್ಷದಷ್ಟಿದೆ. ಹರ್ಯಾಣದಲ್ಲಿ 23 ಲಕ್ಷ ಉದ್ಯೋಗಗಳು ಕಡಿಮೆಯಾಗಿವೆ.
ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ಮತ್ತು ಹರ್ಯಾಣಗಳಲ್ಲಿ ಕೇಂದ್ರದ ವಿಷಯಗಳೆಲ್ಲವೂ ರಾಜ್ಯದ ಚುನಾವಣೆ ಮೇಲೆ ಪ್ರಭಾವ ಬೀರಲಿವೆ.
ಮಹಾರಾಷ್ಟ್ರದಲ್ಲಾಗಲೀ, ಹರ್ಯಾಣದಲ್ಲಾಗಲೀ, ಯುಪಿಯಲ್ಲಾಗಲೀ ಯುವಕರ ಹತಾಶೆಯಂತೂ ಸಣ್ಣ ಮಟ್ಟದ್ದಾಗಿ ಉಳಿದಿಲ್ಲ. ಅವರೆಲ್ಲರ ಇವತ್ತಿನ ಸ್ಥಿತಿಗೆ, ಸಂಕಷ್ಟಕ್ಕೆ ಮೋದಿ ನೀತಿಗಳೇ ಕಾರಣ.
ಹೀಗಿರುವಾಗ ಮೋದಿ ಮುಖ ತೋರಿಸುವುದರಿಂದ ಕೇಂದ್ರ ಸರಕಾರದ ವಿರುದ್ಧದ ಜನರ ಸಿಟ್ಟು ಕೆರಳಲಿದೆ.
ಯುವ ಮತದಾರರು ಬಿಜೆಪಿಗೆ ವಿರುದ್ಧವಾಗಿ ಮತ ಹಾಕಲಿದ್ದಾರೆ ಎಂಬ ಆತಂಕ ಬಿಜೆಪಿಯನ್ನು ಕಾಡತೊಡಗಿದೆ. ಬೆಲೆಯೇರಿಕೆಯಂತೂ ಜನಜೀವನವನ್ನು ದುಸ್ತರಗೊಳಿಸಿದೆ. ಎಲ್ಲವೂ ತುಟ್ಟಿಯಾಗಿದೆ. ಈಗ ಮೊಬೈಲ್ ರೀಚಾರ್ಜ್ ದರ ಕೂಡ ಏರುತ್ತಿದೆ ಮತ್ತು ಇದೆಲ್ಲದರ ಹಿಂದೆಯೂ ಕೇಂದ್ರ ಸರಕಾರವೇ ಇದೆ. ಇದೆಲ್ಲವೂ ಸಹಜವಾಗಿಯೇ ರಾಜ್ಯಗಳ ಚುನಾವಣೆಗಳಲ್ಲಿಯೂ ವಿಷಯವಾಗುತ್ತದೆ.
ಇನ್ನು ಚುನಾವಣಾ ಕದನದ ಸ್ವರೂಪ ಹೇಗೆ ನಿಶ್ಚಯವಾಗಬಹುದು ಎನ್ನುವುದನ್ನು ನೋಡುವುದಾದರೆ,
ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಇದೆ.
ಕಾಂಗ್ರೆಸ್ ಜೊತೆಗೆ ಉದ್ಧವ್ ಠಾಕ್ರೆಯ ಶಿವಸೇನೆ, ಶರದ್ ಪವಾರ್ ಅವರ ಎನ್‌ಸಿಪಿ ಇವೆ.
ಕಳೆದ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಕಾಂಗ್ರೆಸ್ ಗಣನೀಯ ಹಿಡಿತ ಸಾಧಿಸಿದೆ. ಅಲ್ಲಿ ಅತಿ ಹೆಚ್ಚು ಸಂಸದರು ಈಗ ಕಾಂಗ್ರೆಸ್‌ಗೇ ಇದ್ದಾರೆ.
ಬಿಜೆಪಿ ಬಹಳಷ್ಟು ಕಡೆ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ.
ಪಶ್ಚಿಮ ಮಹಾರಾಷ್ಟ್ರ ಪ್ರದೇಶ, ಮರಾಠಾವಾಡಾ ಪ್ರದೇಶ ಹಾಗೂ ವಿದರ್ಭ ಪ್ರದೇಶ ಈ ಮೂರೂ ಕಡೆಗಳಲ್ಲಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಬೇರೆ ಬೇರೆಯೇ ಆದರೂ, ಫಲಿತಾಂಶ ಎಲ್ಲ ಕಡೆಯೂ ಒಂದೇ ರೀತಿಯಲ್ಲಿದೆ.
ಇದಕ್ಕೆ ಕಾರಣ ರಾಷ್ಟ್ರೀಯ ವಿಚಾರಗಳು ಮುನ್ನೆಲೆಗೆ ಬಂದು, ಮತದಾರರ ಮೇಲೆ ಉಂಟುಮಾಡುವ ಪ್ರಭಾವ.
ಇನ್ನು ಹರ್ಯಾಣದಲ್ಲಿಯೂ ಬಿಜೆಪಿಯೆದುರಿನ ಸ್ಥಿತಿ ಸುಲಭವಿಲ್ಲ.
ಇದೆಲ್ಲದರ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ವಿಚಾರವಾಗಿ ಮೋದಿ ಬ್ರ್ಯಾಂಡ್ ಬಗ್ಗೆಯೇ ಬಿಜೆಪಿಗೆ ಭಯವಾಗತೊಡಗಿದೆ.
ಮೋದಿ ಭಾಷಣಗಳು ಬಿಜೆಪಿಗೆ ಫಲ ತಂದುಕೊಟ್ಟಿಲ್ಲ. ಮೋದಿ ಸುಳ್ಳುಗಳು ಲಾಭ ಮಾಡಿಕೊಡುತ್ತವೆ ಎಂಬುದೂ ಭ್ರಮೆಯಾಗಿಯೇ ಉಳಿಯಿತು.
ಮೋದಿ ದ್ವೇಷ ರಾಜಕಾರಣವೂ ಪ್ರಧಾನಿ ಹುದ್ದೆಯ ಘನತೆಯನ್ನೇ ಮರೆತದ್ದಾಗಿತ್ತು. ಬಿಜೆಪಿಯನ್ನು ಬೆಂಬಲಿಸುತ್ತಿದ್ದವರು ಕೂಡ ಭರವಸೆ ಕಳೆದುಕೊಂಡಿದ್ದಾರೆ.
ಹಾಗಾಗಿ ಚುನಾವಣೆ ಪ್ರಚಾರದಲ್ಲಿ ಮೋದಿ ಭಾಗಿಯಾಗುವುದಕ್ಕಿಂತಲೂ, ಸುಮ್ಮನಿದ್ದುಬಿಟ್ಟರೇನೇ ಅದೇ ದೊಡ್ಡ ಪ್ರಚಾರ ಎಂದು ಬಿಜೆಪಿ ನಾಯಕರು ಭಾವಿಸುತ್ತಿದ್ದಾರೆಯೆ?
ಅಂಥದೊಂದು ಸಂದೇಶವನ್ನು ನೀಡುವ ಮಟ್ಟಕ್ಕೆ ವಿವಿಧ ರಾಜ್ಯಗಳಲ್ಲಿನ ಬಿಜೆಪಿ ನಾಯಕರು ಮನಸ್ಸು ಮಾಡಿದ್ದಾರೆಯೆ?
ಒಂದಂತೂ ನಿಜ.
ಮೋದಿ ಬ್ರ್ಯಾಂಡ್ ಈಗ ಗೆಲ್ಲುವ ಬ್ರ್ಯಾಂಡ್ ಆಗಿಯಂತೂ ಉಳಿದಿಲ್ಲ.
ವಿಶೇಷವಾಗಿ ದೇಶಾದ್ಯಂತ ರಾಹುಲ್ ಗಾಂಧಿ ಅವರ ಜನಪ್ರಿಯತೆ, ಸ್ವೀಕಾರಾರ್ಹತೆ ಈ ಹಿಂದೆಂದಿಗಿಂತಲೂ ಹೆಚ್ಚುತ್ತಿರುವ ಈ ಕಾಲದಲ್ಲಿ.