ಪಾಟ್ನಾ ಹೈಕೋರ್ಟ್ ತೀರ್ಪು: ಬಿಹಾರ ಮುಖ್ಯಮಂತ್ರಿಗೆ ಮುಖಭಂಗ
ಮೀಸಲಾತಿ ಕಾಯ್ದೆಗೆ ಮಾಡಿದ ತಿದ್ದುಪಡಿಗಳನ್ನು ಅಸಾಂವಿಧಾನಿಕವೆಂದು ಪರಿಗಣಿಸಲು ನ್ಯಾಯಾಲಯವು ಈ ಕೆಳಗಿನ ಕಾರಣಗಳನ್ನು ನೀಡಿದೆ: 1. ಮೀಸಲಾತಿಗೆ ಪ್ರತಿಶತ 50ರಷ್ಟು ಗರಿಷ್ಠ ಮೀಸಲಾತಿ ಮಿತಿ ಇದೆ 2. ಮೀಸಲಾತಿಯು ಹಿಂದುಳಿದ ವರ್ಗಗಳ ಜನಸಂಖ್ಯೆ ಅನುಪಾತವನ್ನು ಆಧರಿಸಿದೆ. 3. ರಾಜ್ಯವು ಯಾವುದೇ ವಿಶ್ಲೇಷಣೆಯನ್ನು ನಡೆಸಿಲ್ಲ ಅಥವಾ ತಿದ್ದುಪಡಿ ಕಾಯ್ದೆಗಳ ಅಡಿಯಲ್ಲಿ ಮೀಸಲಾತಿಯನ್ನು ಘೋಷಿಸುವ ಮೊದಲು ಆಳವಾದ ಅಧ್ಯಯನ ಮಾಡಿಲ್ಲ.
ಬಿಹಾರ ಇಡೀ ದೇಶದಲ್ಲಿ, ಜಾತಿ- ಜನಗಣತಿ ಹಮ್ಮಿಕೊಂಡ ಮೊದಲ ರಾಜ್ಯ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಬೀಗುತ್ತಿದ್ದರು. ಜಾತಿ-ಜನಗಣತಿ ಅನುಸರಿಸಿ, ಮೀಸಲಾತಿ ಕೋಟಾವನ್ನು ಪ್ರತಿಶತ 50 ರಿಂದ ಪ್ರತಿಶತ 65ಕ್ಕೆ ಏರಿಸುವ ದಿಸೆಯಲ್ಲಿ ಜಾರಿಯಲ್ಲಿದ್ದ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಮೀಸಲಾತಿ ಕೋಟಾವನ್ನು ಪ್ರತಿಶತ 65ಕ್ಕೆ ಏರಿಸಿರುವುದನ್ನು ಪ್ರಶ್ನಿಸಿ ದಂಡಿ ರಿಟ್ ಅರ್ಜಿಗಳು ಪಾಟ್ನಾ ಉಚ್ಚ ನ್ಯಾಯಾಲಯದಲ್ಲಿ ದಾಖಲಾದವು. ಅರ್ಜಿದಾರರ ವಾದವೆಂದರೆ: ಭಾರತದ ಸಂವಿಧಾನದ ಅಡಿಯಲ್ಲಿ ಸಾರ್ವಜನಿಕ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಸಮಾನತೆಯ ಅವಕಾಶದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಎಂಬುದು. ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು, 1992 ರ ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಕೊಟ್ಟ ತೀರ್ಪಿಗೆ ವಿರುದ್ಧವಾಗಿದೆ ಎಂದು 9 ನವೆಂಬರ್, 2023ರ ತಿದ್ದುಪಡಿ ಕಾಯ್ದೆಯನ್ನು 20 ಜೂನ್, 2024ರಂದು ರದ್ದುಗೊಳಿಸಿದೆ. ಪ್ರತಿಶತ 50 ರ ಮೀಸಲಾತಿ ಕೋಟಾವನ್ನು ಉಲ್ಲಂಘಿಸಲು ಯಾವುದೇ ಅಸಾಧಾರಣ ಸಂದರ್ಭಗಳಿಲ್ಲ; ಕೇವಲ ಜನಸಂಖ್ಯೆಯ ಅನುಪಾತವನ್ನು ಆಧರಿಸಿ ಕೋಟಾ ಅನುಸರಿಸಲಾಗಿದೆ. ಅಲ್ಲದೆ ಸಂವಿಧಾನದ ವಿಧಿಗಳಾದ 14, 15 ಮತ್ತು 16ರ ಸ್ಪಷ್ಟ ಉಲ್ಲಂಘನೆ ಆಗಿರುವುದರಿಂದ ಅನುಮತಿಸಲಾಗುವುದಿಲ್ಲ ಎಂಬ ವಿವರಣೆಯನ್ನೂ ನ್ಯಾಯಾಲಯ ನೀಡಿದೆ. ಜಾತಿ ಜನ-ಗಣತಿ ಮಾಡಿದ್ದೇ ಅಲ್ಲದೆ ತದನುಸಾರ, ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿ ಕೋಟಾ ಹೆಚ್ಚು ಮಾಡಿದ್ದೇನೆ ಎಂದು ಹಮ್ಮಿನಿಂದ ಬೀಗುತ್ತಿದ್ದ ನಿತೀಶ್ ಕುಮಾರ್‌ಗೆ ಸಹಜವಾಗಿ ಕಪಾಳಮೋಕ್ಷ ವಾಗಿದೆ.
ಸರಕಾರ/ರಾಜ್ಯವು ತಾನು ನಡೆಸಿದ ಜಾತಿ ಸಮೀಕ್ಷೆಯ ಅನುಸಾರವಾಗಿ ಮೀಸಲಾತಿಯನ್ನು ಹೆಚ್ಚಿಸಲಾಗಿದೆ ಎಂದು ಪ್ರತಿಪಾದಿಸಿದೆ. ಅದರ ವರದಿಯನ್ನು ಎರಡನೇ ಅಕ್ಟೋಬರ್, 2023ರಂದು ಪ್ರಕಟಿಸಲಾಗಿದೆ ಎಂದು ಸಮರ್ಥಿಸಿ ಉಚ್ಚ ನ್ಯಾಯಾಲಯದ ಮುಂದೆ ಸಮರ್ಥಿಸಿ ಕೊಂಡಿತು.
ಮುಖ್ಯ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಹರೀಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸಂವಿಧಾನದ ವಿಧಿ 15(4) ಮತ್ತು ವಿಧಿ 16(4) ಅನ್ನು ಪರಿಶೀಲಿಸಿ, ಕಾಯ್ದೆಗೆ ತಂದಿರುವ ತಿದ್ದುಪಡಿಗಳು ನಿಬಂಧನೆಗಳನ್ನು ಉಲ್ಲಂಘಿಸುತ್ತವೆ ಎಂದು ಘೋಷಿಸಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಯಾವುದೇ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರಿಕರ ಪ್ರಗತಿಗೆ ಯಾವುದೇ ವಿಶೇಷ ಅವಕಾಶವನ್ನು ಮಾಡಲು ವಿಧಿ 15 (4) ರಾಜ್ಯವು ಅಧಿಕಾರ ಹೊಂದಿರುತ್ತದೆ, ಹಾಗೆಯೇ ವಿಧಿ 16(4) ರಾಜ್ಯವು ಯಾವುದೇ ಹಿಂದುಳಿದ ವರ್ಗಗಳಿಗೆ ರಾಜ್ಯದ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಇಲ್ಲವೆಂದಾದರೆ, ಅಂತಹ ವರ್ಗಗಳಿಗೆ ರಾಜ್ಯವು ಹುದ್ದೆಗಳನ್ನು ಮೀಸಲಿರಿಸ ಬಹುದು ಎಂದು ಪೀಠ ಹೇಳಿದೆ.
ತಿದ್ದುಪಡಿಗಳನ್ನು ಅಸಾಂವಿಧಾನಿಕವೆಂದು ಪರಿಗಣಿಸಲು ನ್ಯಾಯಾಲಯವು ಈ ಕೆಳಗಿನ ಕಾರಣಗಳನ್ನು ನೀಡಿದೆ: 1. ಮೀಸಲಾತಿಗೆ ಪ್ರತಿಶತ 50ರಷ್ಟು ಗರಿಷ್ಠ ಮೀಸಲಾತಿ ಮಿತಿ ಇದೆ. 2. ಮೀಸಲಾತಿಯು ಹಿಂದುಳಿದ ವರ್ಗಗಳ ಜನಸಂಖ್ಯೆ ಅನುಪಾತವನ್ನು ಆಧರಿಸಿದೆ. 3. ರಾಜ್ಯವು ಯಾವುದೇ ವಿಶ್ಲೇಷಣೆಯನ್ನು ನಡೆಸಿಲ್ಲ ಅಥವಾ ತಿದ್ದುಪಡಿ ಕಾಯ್ದೆಗಳ ಅಡಿಯಲ್ಲಿ ಮೀಸಲಾತಿಯನ್ನು ಘೋಷಿಸುವ ಮೊದಲು ಆಳವಾದ ಅಧ್ಯಯನ ಮಾಡಿಲ್ಲ.
ಸೀಮಿತ ಸಂದರ್ಭದಲ್ಲಿ ಮಾತ್ರ ಶೇ. 50ರಷ್ಟು ಮಿತಿಯನ್ನು ಉಲ್ಲಂಘಿಸಬಹುದು ಎಂದು ನ್ಯಾಯಾಲಯ ಗಮನಿಸಿದೆ. ಇದು ಇಂದ್ರಾ ಸಹಾನಿ ಪ್ರಕರಣವನ್ನು ಉಲ್ಲೇಖಿಸಿ ನೀಡಿದ ಅಭಿಪ್ರಾಯ. ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದಿನ ವರ್ಷಗಳಲ್ಲಿ ಭರ್ತಿಯಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಮೀಸಲಾತಿಯಲ್ಲಿ ಶೇ. 50ರ ಮಿತಿಯನ್ನು ಮೀರಬಹುದು ಎಂದು ಹೇಳಿದೆ.
ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಯೆ ಮತ್ತು ಸರಕಾರಿ ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯದ ಶೇಕಡವಾರು ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ತಿದ್ದುಪಡಿ ಕಾಯ್ದೆಗಳಲ್ಲಿ ಮೀಸಲಾತಿಯನ್ನು ಯಾಂತ್ರಿಕವಾಗಿ ಹೆಚ್ಚಿಸಲಾಗಿದೆ ಎಂದು ನ್ಯಾಯಾಲಯ ಪರಿಗಣಿಸಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಬಹು ಸಂಖ್ಯಾತರು ಮತ್ತು ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒದಗಿಸುವ ಅಂಶವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದೆ ಎಂದು ಅದು ಗಮನಿಸಿದೆ.
ವಿಧಿ 15(4) ಮತ್ತು ವಿಧಿ 16(4)ರ ಅಡಿಯಲ್ಲಿ ಮೀಸಲಾತಿಗಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಾದ ಸಂಬಂಧಿತ ಅಂಶವೆಂದರೆ ‘ಸಾಕಷ್ಟು ಪ್ರಾತಿನಿಧ್ಯ’ ಮತ್ತು ಪ್ರಮಾಣಾನುಗುಣವಾದ ಪ್ರಾತಿನಿಧ್ಯವಲ್ಲ. ಇದು ಇಂದ್ರಾ ಸಹಾನಿ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಅದರಲ್ಲಿ ವಿಧಿ 16(4) ಸಾಕಷ್ಟು ಪ್ರಾತಿನಿಧ್ಯ ಮತ್ತು ಅನುಪಾತದ ಪ್ರಾತಿನಿಧ್ಯವನ್ನು ಕಲ್ಪಿಸುತ್ತದೆ.
ಜಾತಿ ಸಮೀಕ್ಷೆ ವರದಿಯಿಂದ ತಿಳಿದುಬಂದಂತೆ ಹಿಂದುಳಿದ ವರ್ಗಗಳಿಗೆ ಅಸಮರ್ಪಕ ಪ್ರಾತಿನಿಧ್ಯವಿದೆ ಎಂಬ ರಾಜ್ಯದ ಹೇಳಿಕೆಯ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಸರಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ವಿದೆ ಎಂದು ವರದಿ ಬಹಿರಂಗ ಪಡಿಸುತ್ತದೆ.
ಮೀಸಲಾತಿ ಹೆಚ್ಚಳಕ್ಕೆ ಜಾತಿಯ ಒಟ್ಟಾರೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಪರಿಶೀಲನೆ ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಸಾಮಾಜಿಕ ಪರಿಸರದಲ್ಲಿನ ಬದಲಾವಣೆಯನ್ನು ಗಣನೆಗೆ ತೆಗೆದುಕೊಂಡು ವಸ್ತುನಿಷ್ಠ ವಿಶ್ಲೇಷಣೆಯನ್ನು ಮಾಡಬೇಕಾಗಿದೆ ಎಂದು ಅದು ಪ್ರತಿಪಾದಿಸಿದೆ. ಪ್ರಸಕ್ತ ಪ್ರಕರಣದಲ್ಲಿ ಜಾತಿ ಸಮೀಕ್ಷೆ ವರದಿಯನ್ನು ರಾಜ್ಯವು ಯಾವುದೇ ವೈಜ್ಞಾನಿಕ ವಿಶ್ಲೇಷಣೆ ಮಾಡಿಲ್ಲವೆಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಅಭಿಪ್ರಾಯ ಹೀಗಿದೆ:
ಯಾವುದೇ ವೈಜ್ಞಾನಿಕ ಅಥವಾ ಸಂಗ್ರಹಿಸಿದ ದತ್ತಾಂಶದ ವಿಶ್ಲೇಷಣೆಯನ್ನು ಮಾಡಲು ಯಾವ ತಜ್ಞರನ್ನೂ ನೇಮಿಸಲಾಗಿಲ್ಲ. ತಜ್ಞರ ಅಭಿಪ್ರಾಯಕ್ಕಾಗಲಿ ಅಥವಾ ಕಾನೂನು ಬದ್ಧವಾಗಿ ರಚಿಸಲಾದ ಆಯೋಗದ ಪರಿಶೀಲನೆಗಾಗಲಿ ವಹಿಸುವ ಪ್ರತಿಯೊಂದು ಪ್ರಯೋಗ ಅತ್ಯಗತ್ಯವಲ್ಲ ಎಂದು ನಾವು ಭಾವಿಸಿದ್ದೇವೆ. ನಮಗೆ ಆತಂಕಕಾರಿ ಸಂಗತಿ ಎಂದರೆ ದತ್ತಾಂಶದ ಸಂಗ್ರಹಣೆಯ ನಂತರ ತಿದ್ದುಪಡಿ ಕಾಯ್ದೆಗಳನ್ನು ತರುವಲ್ಲಿ ಸರಕಾರ ಅಥವಾ ಶಾಸಕಾಂಗವು ಅಂಥ ಯಾವುದೇ ಕಸರತ್ತು ಅಥವಾ ವಿಶ್ಲೇಷಣೆ ಮಾಡಿಲ್ಲದಿರುವುದು. ದತ್ತಾಂಶ ಸಂಗ್ರಹಿಸಿದ ನಂತರ ಫಲವರಿಯದ ಕೆಲಸ ಮಾಡಿದಂತೆ ಶೇ.50ಕ್ಕಿಂತ ಮೀಸಲಾತಿಯನ್ನು ಹೆಚ್ಚಿಸುವ ತಿದ್ದುಪಡಿ ಮತ್ತೆ ಪ್ರಮಾಣಾನುಗುಣವಾದ ಪ್ರಾತಿನಿಧ್ಯವನ್ನು ನೀಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ ರಾಜ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳ ಸೇವೆಗಳು ವಿಧಿ 15 (4) ಮತ್ತು 16(4) ರ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ.
ಹಿಂದುಳಿದ ವರ್ಗಗಳ ಮೀಸಲಾತಿಗೆ ಶೇ. 50ರಷ್ಟು ಮಿತಿಯನ್ನು ಉಲ್ಲಂಘಿಸಲಾಗದ ನಿಯಮ ಎಂದು ನ್ಯಾಯಾಲಯ ಪುನರುಚ್ಚರಿಸಿತು. ಅದು ಹೇಳಿದ್ದು ಹೀಗೆ:
ಮೀಸಲಾತಿಯಲ್ಲಿನ ಶೇ. 50ರಷ್ಟು ಮಿತಿಯ ನಿಯಮವು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುತ್ತದೆ. ಇದು ವಿಧಿ 15( 4) ಮತ್ತು ವಿಧಿ 16(4)ರ ಅಡಿಯಲ್ಲಿ ಸಮಾನವಾಗಿ ಅನ್ವಯಿಸುತ್ತವೆ...
ಇದು ಸಂವಿಧಾನದ ಅಡಿಯಲ್ಲಿ ಸಮಾನತೆಯ ತತ್ವವನ್ನು ಉಲ್ಲಂಘಿಸುವ ತಿದ್ದುಪಡಿಗಳಿಗೆ ಪ್ರಬಲ ಹೊಡೆತ ಕೊಟ್ಟಿದೆ.
ಯಾವುದೇ ಪಕ್ಷ ಅಥವಾ ರಾಜಕಾರಣಿಗಳು ಯಾರೇ ಇರಲಿ ವೋಟಿನ ರಾಜಕೀಯ ಕಾರಣಕ್ಕಾಗಿ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಮನಸೋಇಚ್ಛೆ ನಡೆದುಕೊಂಡಲ್ಲಿ ಘನ ನ್ಯಾಯಾಲಯಗಳು ಅಂತಹ ಸಂವಿಧಾನ ಬಾಹಿರ ನಿರ್ಣಯಗಳನ್ನು ನೋಡಿ ಕೈಕಟ್ಟಿ ಕೂರುವುದಿಲ್ಲ ಎಂಬುದಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪಾಟ್ನಾ ಹೈಕೋರ್ಟ್ ತೆಗೆದುಕೊಂಡ ಕ್ರಮಗಳೇ ಪ್ರತ್ಯಕ್ಷ ಸಾಕ್ಷಿ.