ಆಕರ್ಷಣೆಯ ತಾಣವಾದ ಪಿಲಿಕುಳ ನಿಸರ್ಗಧಾಮ

Update: 2025-03-03 11:38 IST
Editor : jafar sadik | Byline : ಸತ್ಯಾ. ಕೆ
ಆಕರ್ಷಣೆಯ ತಾಣವಾದ ಪಿಲಿಕುಳ ನಿಸರ್ಗಧಾಮ
  • whatsapp icon

ಮಂಗಳೂರು: ದ.ಕ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ, ದೇಶದ 2ನೇ ದೊಡ್ಡ ತಾರಾಯಲವನ್ನು ಒಳಗೊಂಡ ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮವು ವರ್ಷದಿಂದ ವರ್ಷಕ್ಕೆ ಹೆಚ್ಚ್ಚಿ ನ ಪ್ರವಾಸಿಗರನ್ನು ಸೆಳೆಯುತ್ತಿದೆ. ಇದು ಆಶಾದಾಯಕ ಬೆಳವಣಿಗೆಯಾಗಿರುವ ಜತೆಗೆ ಮೃಗಾಲಯದಲ್ಲಿ ಇನ್ನಷ್ಟು ಸುರಕ್ಷಾ ಕ್ರಮಗಳು, ಪ್ರವಾಸಿಗರಿಗೆ ತಾತ್ಕಾಲಿಕ ತಂಗುದಾಣದ ವ್ಯವಸ್ಥೆಯೊಂದಿಗೆ ಕೆಫೆಟೇರಿಯಾ, ಹೊಟೇಲ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲೂ ಕ್ರಮಗಳಾಗಬೇಕಾಗಿದೆ.

ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನಾ ರಚನಾ ಸಮಿತಿಯ ನಿಯೋಗ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿದ ಬಳಿಕ ನಡೆಸಿದ ಸಭೆಯಲ್ಲೂ ಈ ಪೂರಕ ಅಂಶಗಳ ಬಗ್ಗೆ ಚರ್ಚೆ ನಡೆದಿದೆ. ಸಮಿತಿಯ ಅಧ್ಯಕ್ಷ ಶಿವಣ್ಣ ಸೇರಿದಂತೆ ಇತರ ಹಲವು ಸದಸ್ಯರು ಪಿಲಿಕುಳ ನಿಸರ್ಗಧಾಮದ ವೈಶಾಲ್ಯ, ಅಲ್ಲಿನ ಪ್ರಕೃತಿ ರಮಣೀಯ ಪರಿಸರ, ಮೃಗಾಲಯವನ್ನು ಕಂಡು ಸಂತಸ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಶಿವಣ್ಣ ಪಿಲಿಕುಳ ನಿಸರ್ಗಧಾಮದಕ್ಕೆ ಭೇಟಿ ನೀಡುವವರೆಗೆ ಇಂತಹ ಒಂದು ಅದ್ಭುತ ವ್ಯವಸ್ಥೆ ಮಂಗಳೂರಿನಲ್ಲಿ ಇರುವುದೇ ನಮಗೆ ಗೊತ್ತಿರಲಿಲ್ಲ ಎಂದು ಅಭಿಪ್ರಾಯಿಸಿದ್ದರು.

 ಈ ವರ್ಷ 4.24 ಲಕ್ಷಕ್ಕೂ ಅಧಿಕ ಮಂದಿ ಭೇಟಿ

ವರ್ಷದಿಂದ ವರ್ಷಕ್ಕೆ ಪ್ರವಾಸಿಗರನ್ನು ಸೆಳೆಯುತ್ತಿರುವ ಪಿಲಿಕುಳ ನಿಸರ್ಗಧಾಮಕ್ಕೆ 2024-25ನೇ ಸಾಲಿನ ಜನವರಿ ವರೆಗೆ 4,24,081 ಮಂದಿ ಭೇಟಿ ನೀಡಿದ್ದು, 3,53,19,220 ರೂ. ಶುಲ್ಕ ಸಂಗ್ರಹವಾಗಿದೆ. 2023-24ನೆ ಸಾಲಿನಲ್ಲಿ 5,49,228 ಮಂದಿ ಭೇಟಿ ನೀಡಿದ್ದು, 4,86,37,193 ರೂ. ಶುಲ್ಕ ಸಂಗ್ರಹಿಸಲಾಗಿದೆ. 2022-23ರಲ್ಲಿ 5,90,279 ಮಂದಿ ಭೇಟಿ ನೀಡಿದ್ದರೆ, 2021-22ರಲ್ಲಿ 2,42,736 ಮಂದಿ ಭೇಟ ನೀಡಿದ್ದರು.

  2018-19ರಲ್ಲಿ ದಾಖಲೆಯ ಭೇಟಿ!

ಕಳೆದ 10 ವರ್ಷಗಳಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿದವರ ಅಂಕಿಅಂಶಗಳ ಪ್ರಕಾರ 6,56,219 ಮಂದಿ ಯೊಂದಿಗೆ 2018-19 ಅತೀ ಹೆಚ್ಚು ಮಂದಿ ಭೇಟಿ ನೀಡಿದ ವರ್ಷವಾಗಿದೆ. 2015-16ರಲ್ಲಿ 4,83,485, 2016-17ರಲ್ಲಿ 5,39,158 ಹಾಗೂ 2017-18ರಲ್ಲಿ 6,15,073 ಮಂದಿ ಪಿಲಿಕುಳ ನಿಸರ್ಗ ಧಾಮವನ್ನು ಸುತ್ತಾಡಿದ್ದಾರೆ. 2019-20ರಲ್ಲಿ 4,74,727 ಹಾಗೂ 2020-21ನೆ ಸಾಲಿನಲ್ಲಿ 1,68,291 ಮಂದಿ ಭೇಟಿ ನೀಡಿದ್ದಾರೆ.

85 ಎಕರೆ ಭೂಮಿಯಲ್ಲಿ ಹರಡಿಕೊಂಡಿರುವ ಸಸ್ಯೋದ್ಯಾನವು ಪಶ್ಚಿಮ ಘಟ್ಟದ ವಿವಿಧ ಸಸ್ಯ ಪ್ರಭೇದಗಳಿಂದ ಕೂಡಿದೆ. 235 ವಿವಿಧ ಜಾತಿಯ ಸುಮಾರು 60,000 ಸಸ್ಯಗಳು ಇಲ್ಲಿದ್ದು, ಸ್ಥಳೀಯವಾಗಿ ಅಳಿವಿನಂಚಿಲ್ಲಿರುವ ಹಾಗೂ ಔಷಧೀಯ ಸಸ್ಯಗಳಾಗಿವೆ. ಸಸ್ಯಶಾಸ್ತ್ರ ವಸ್ತು ಸಂಗ್ರಹಾಲಯದಲ್ಲಿ ಪಶ್ಚಿಮ ಘಟ್ಟಗಳ 2,000 ಜಾತಿಯ ಸಸ್ಯಗಳನ್ನು ಸಂಗ್ರಹಿಸಿಡಲಾಗಿದೆ.

 356.20 ಎಕರೆ ಭೂಮಿ ಪ್ರಾಧಿಕಾರಕ್ಕೆ ಮಂಜೂರಾತಿಗೆ ಆಗ್ರಹ

1996ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ಭರತ್ ಲಾಲ್ ಮೀನಾರ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಆರಂಭದಲ್ಲಿ ಸೊಸೈಟಿಯಾಗಿ, ಬಳಿಕ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿಯಾಗಿ ಕಾರ್ಯನಿರ್ವಹಿಸಿತ್ತು.

2018ರಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಜತೆಯಾಗಿಸಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವಾಗಿ ರಚನೆ ಮಾಡಲಾಗಿದೆ. ಪಿಲಿಕುಳವು ಜೈವಿಕ ಉದ್ಯಾನವನ, ಸಸ್ಯಶಾಸ್ತ್ರೀಯ ಉದ್ಯಾನ (ಅರ್ಬೊರೇಟಂ), ಪ್ರಾದೇಶಿಕ ವಿಜ್ಞಾನ ಕೇಂದ್ರ, ಕುಶಲಕರ್ಮಿಗಳ ಗ್ರಾಮ, ಸಂಸ್ಕೃತಿ ಗ್ರಾಮ, ದೋಣಿ ವಿಹಾರ ಕೇಂದ್ರ, ಹರ್ಬೇರಿಯಂ ಮತ್ತು ಮೊಟಾನಿಕಲ್ ಮ್ಯೂಸಿಯಂ, ಸಿಹಿನೀರಿನ ಮೀನುಗಳ ಅಕ್ವೇರಿಯಂ, ನಗರ ಮತ್ತು ಗ್ರಾಮೀಣ ಹಾಟ್, ಔಷಧೀಯ ಉದ್ಯಾನ, ತೋಟಗಾರಿಕೆ ಘಟಕಗಳಿಂದ ಕೂಡಿದೆ. ಗುತ್ತಿನ ಮನೆ, ಅಮ್ಯೂಸ್‌ಮೆಂಟ್ ಪಾರ್ಕ್‌ನ್ನು ಒಳ ಗೊಂಡಿರುವ ಪಿಲಿಕುಳ ನಿಸರ್ಗಧಾಮವು ಒಟ್ಟು 356.20 ಎಕರೆ ಸರಾರಿ ಜಾಗದಲ್ಲಿ ಹರಡಿಕೊಂಡಿದ್ದು, ಗುತ್ತಿಗೆಯಲ್ಲಿರುವ ಈ ಭೂಮಿಯನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಹೆಸರಿಗೆ ಮಂಜೂರು ಮಾಡುವಂತೆ ಈಗಾಗಲೇ ಸರಕಾರಕ್ಕೆ ಪತ್ರ ಸಲ್ಲಿಕೆಯಾಗಿದೆ.

 ದೇಶದ ಪ್ರಥಮ 3ಡಿ ತಾರಾಲಯದ ಹೆಗ್ಗಳಿಕೆ

ಗುತ್ತಿನ ಮನೆ ದ.ಕ. ಜಿಲ್ಲೆಯ ಪಾರಂಪರಿಕ ವೈಭವದ ಕೇಂದ್ರವಾಗಿದ್ದರೆ, 35.69 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸ್ವಾಮಿ ವಿವೇಕಾನಂದ ತಾರಾಲಯ’ ದೇಶದ ಪ್ರಥಮ 3ಡಿ ತಾರಾಲಯ ಆರಂಭವಾಗಿದ್ದು ಪಿಲಿಕುಳದಲ್ಲಿ. ಸ್ವಾಮಿ ವಿವೇಕಾನಂದ ತಾರಾಲಯ 15 ಡಿಗ್ರಿ ಕೋನದಲ್ಲಿ ಜೋಡಿಸಲಾದ 18 ಮೀಟರ್ ನ್ಯಾನೋ ಸೀಮ್ ಗುಮ್ಮಟದಿಂದ ಕೂಡಿದ್ದಾಗಿದೆ.

ಇನ್ನಷ್ಟು ಪ್ರವಾಸಿಗರು ಹಾಗೂ ಶಾಲಾ ಕಾಲೇಜುಗಳ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪಿಲಿಕುಳದ ಅಭಿವೃದ್ಧಿಗೆ ಸಂಬಂಧಿಸಿ ಸಂಬಂಧಪಟ್ಟ ಸಭೆಗಳಲ್ಲಿ ಚರ್ಚಿಸಲಾಗಿರುವಂತೆ ಸಮಗ್ರ ನಿರ್ವಹಣೆಗಾಗಿ ಅರಣ್ಯ ಇಲಾಖೆಯ ಜವಾಬ್ದಾರಿಯುತ ಅಧಿಕಾರಿಯನ್ನು ನೇಮಕ ಮಾಡುವ ನಿಟ್ಟಿನಲ್ಲಿ ಕ್ರಮಗಳಾಗುತ್ತಿವೆ.

ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.

ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನಾ ರಚನಾ ಸಮಿತಿಯ ಸಭೆಯಲ್ಲಿ ಚರ್ಚಿಸಿದಂತೆ ಪಿಲಿಕುಳಕ್ಕೆ ಭೇಟಿ ನೀಡುವ ಶಾಲಾ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ಯಾಕೇಜ್ ಶುಲ್ಕದಲ್ಲಿ ವಿಶೇಷ ವ್ಯವಸ್ಥೆ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲಾಗುವುದು. ಅಲ್ಲದೆ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗಾಗಿ ಪಿಲಿಕುಳದಲ್ಲಿ ನಿರಂತರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮೃಗಾಲಯದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಕುರಿತಂತೆ ಶಾಸನಾ ರಚನಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ತಡೆಬೇಲಿ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಮೇ ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ.

-ಡಾ.ಅರುಣ್ ಕುಮಾರ್ ಶೆಟ್ಟಿ, ಆಯುಕ್ತರು (ಪ್ರಭಾರ), ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸತ್ಯಾ. ಕೆ

contributor

Similar News