ಸಿದ್ದರಾಮಯ್ಯ ಅವರ ಸಮರ್ಥನೆ: ಅಹಿಂದ ವರ್ಗಕ್ಕೆ ರಾಜಕೀಯ ಅಸ್ತಿತ್ವದ ಪರೀಕ್ಷೆ

ಸಿದ್ದರಾಮಯ್ಯ ಅವರ ವಿರುದ್ಧದ ಪಿತೂರಿಯನ್ನು ಎದುರಿಸಲು ಅಹಿಂದ ವರ್ಗ ಈ ಕೂಡಲೇ ಕಾರ್ಯಸನ್ನದ್ಧವಾಗಬೇಕಾದ ಅನಿವಾರ್ಯತೆಯಿದೆ. ಇಡೀ ಅಹಿಂದ ವರ್ಗವು ಸಿದ್ದರಾಮಯ್ಯ ಅವರ ಪರವಾಗಿ ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ.

Update: 2024-08-06 06:02 GMT

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವ ಸಂಚಿಗೆ ವೇಗ ದೊರೆಯುತ್ತಿದೆ. ಹಿಂದುಳಿದ ಸಮುದಾಯದ ಕಟ್ಟಾಳು ಸಿದ್ದರಾಮಯ್ಯನವರು ರಾಜ್ಯದ ಕಟ್ಟ ಕಡೆಯ ಸಮುದಾಯಗಳ ಆಶಾಕಿರಣವಾಗಿದ್ದಾರೆ. ಅಹಿಂದ ಸಮುದಾಯದ ಪ್ರಶ್ನಾತೀತ ಬೆಂಬಲ ಅವರಿಗಿದೆ. ಹೀಗಾಗಿ ರಾಜ್ಯದಲ್ಲಿ ಭಾರೀ ಬಹುಮತ ಪಡೆದು ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಆದರೂ, ಪಕ್ಷದ ಒಳಗಿನ ಹಾಗೂ ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ರಾಜಕೀಯ ಮಹತ್ವಾಕಾಂಕ್ಷೆಯಿಂದಾಗಿ ಅಹಿಂದ ನಾಯಕನ ಎರಡನೇ ಅವಧಿಯು ಮೊದಲಿನ ಅವಧಿಯಷ್ಟು ಸುಲಭವಾಗಿ ಕಾಣುತ್ತಿಲ್ಲ. ಈ ಸನ್ನಿವೇಶವು ಕೇವಲ ನಾಯಕತ್ವದ ಬದಲಾವಣೆ ಅಥವಾ ಸರಕಾರವನ್ನು ಅಸ್ಥಿರಗೊಳಿಸುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ಹಿಂದಿನಿಂದ ನಡೆದುಬಂದ ಅಧಿಕಾರಕ್ಕಾಗಿನ ಹೋರಾಟಗಳು ಹಾಗೂ ಶೋಷಿತ - ದುರ್ಬಲ ವರ್ಗಗಳು ಬಹುಕಾಲದಿಂದ ಶ್ರಮಪಟ್ಟು ಗಳಿಸಿದ ಪ್ರಾತಿನಿಧ್ಯ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಎದುರಿಸುತ್ತಿರುವ ಸವಾಲುಗಳನ್ನು ಪ್ರತಿಬಿಂಬಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಹಿಂದ ಸಮುದಾಯವು ಸಿದ್ದರಾಮಯ್ಯ ಅವರ ಪರವಾಗಿ ಯಾವೆಲ್ಲ ಕಾರ್ಯತಂತ್ರಗಳನ್ನು ರೂಪಿಸಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

ಅಹಿಂದ ವರ್ಗದ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಕೇವಲ ರಾಜಕೀಯ ನೇತಾರನಾಗಿ ಸೀಮಿತಗೊಳ್ಳದೆ ಅದಕ್ಕೂ ಮಿಗಿಲಾದ ಬಾಂಧವ್ಯವನ್ನು ಹೊಂದಿದ್ದಾರೆ. ಅಹಿಂದ ಹಿನ್ನೆಲೆಯನ್ನಿಟ್ಟುಕೊಂಡು ರಾಜಕೀಯವಾಗಿ ಮುನ್ನೆಲೆಗೆ ಬಂದರೂ ತಮ್ಮ ಅಧಿಕಾರ ಅವಧಿಯ ಯೋಜನೆಗಳು ಯಾವುದೇ ಜಾತಿ, ಧರ್ಮ, ವರ್ಗದ ಹಂಗಿಲ್ಲದೆ ಎಲ್ಲಾ ವರ್ಗದ ದುರ್ಬಲ ಜನರ ಪರವಾಗಿ ಜಾರಿಗೊಳಿಸಿದ್ದಾರೆ. ಹೀಗಾಗಿ ರಾಜ್ಯದ ಬಹುದೊಡ್ಡ ವರ್ಗದ ವಿಶ್ವಾಸಕ್ಕೆ ಸಿದ್ದರಾಮಯ್ಯ ಅವರು ಪಾತ್ರರಾಗಿದ್ದಾರೆ. ಒಂದು ವೇಳೆ ಈ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸಂಚಿನಲ್ಲಿ ಸಫಲರಾದರೆ ರಾಜ್ಯ ರಾಜಕೀಯದಲ್ಲಿ ಅಹಿಂದ ವರ್ಗಗಳ ಪ್ರಾತಿನಿಧ್ಯಕ್ಕೆ ಅತಿ ದೊಡ್ಡ ಪೆಟ್ಟು ಬೀಳಲಿದೆ. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ತೊಲಗಿಸಲು ಸಿದ್ದರಾಮಯ್ಯ ಅವರು ಜಾರಿಗೆ ತಂದ ಎಲ್ಲಾ ಭಾಗ್ಯಗಳು/ಗ್ಯಾರಂಟಿಗಳಿಗೆ ಕತ್ತರಿ ಬೀಳಲಿದೆ. ಅಹಿಂದ ಸಮುದಾಯದ ಹೆಮ್ಮೆಯಾಗಿರುವ ಸಿದ್ದರಾಮಯ್ಯ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರದಿಂದ ಕೆಳಗಿಳಿಸಿ ರಾಜಕೀಯ ಜೀವನ ಅಂತ್ಯಗೊಳಿಸಲು ಯತ್ನಿಸಿದರೆ ಇಡೀ ಅಹಿಂದ ವರ್ಗದ ಮೇಲೆ ಮಾನಸಿಕ ಪರಿಣಾಮ ಬೀರಲಿದೆ.

ತನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವಿಲ್ಲದೆ ಬದುಕಿರುವ ಸಿದ್ದರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ಎದುರಿಸುವಲ್ಲಿ ಅವರ ವಿರೋಧಿಗಳು ವಿಫಲವಾಗಿದ್ದಾರೆ. ರಾಜಕೀಯ ಪಿತೂರಿಯಿಂದ ಕೂಡಿದ ಭ್ರಷ್ಟಾಚಾರದ ಆರೋಪ ಮಾಡಿದ ಮಾತ್ರಕ್ಕೆ ಅಹಿಂದ ವರ್ಗ ಸಿದ್ದರಾಮಯ್ಯ ಅವರನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದೇ? ಇತಿಹಾಸದಲ್ಲಿ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಹಾಗೂ ಧರಂಸಿಂಗ್ ಅವರಿಗೆ ಆದ ಅನ್ಯಾಯದಿಂದ ಪಾಠ ಕಲಿಯಬೇಕಾದ ಅನಿವಾರ್ಯತೆ ಅಹಿಂದ ವರ್ಗಕ್ಕೆ ಎದುರಾಗಿದೆ. ಒಂದು ವೇಳೆ ಈ ಪಿತೂರಿಯ ವಿರುದ್ಧ ಅಹಿಂದ ವರ್ಗವು ಧ್ವನಿಯೆತ್ತದಿದ್ದರೆ ತನ್ನನ್ನು ಮುನ್ನಡೆಸಲು ಭವಿಷ್ಯದಲ್ಲಿ ಅಹಿಂದ ವರ್ಗಕ್ಕೆ ಇರುವ ಬೇರೆ ಪರ್ಯಾಯವಾದರೂ ಏನು?

ಮೇಲ್ನೋಟಕ್ಕೆ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆಯಲು ಎಲ್ಲಾ ರೀತಿಯ ಪೂರ್ವಯೋಜನೆ ಆಗಿಹೋಗಿದೆ ಎಂದು ಕಾಣಿಸುತ್ತಿದೆ. ಈ ಪಿತೂರಿಯ ಬಳಿಕ ಕುರುಬ ಸಮುದಾಯದ ಸಿಟ್ಟಿಗೆ ಗುರಿಯಾಗುತ್ತೇವೆಂಬ ಭಯದಿಂದಲೇ ಬಿಜೆಪಿಯು ಮೈಸೂರಿನ ವಿಜಯ್‌ಶಂಕರ್ ಅವರನ್ನು ರಾಜ್ಯಪಾಲರ ಹುದ್ದೆಗೆ ಹಾಗೂ ಜೆಡಿಎಸ್ ಪಕ್ಷವು ಸಿ.ಬಿ. ಸುರೇಶ್‌ಬಾಬು ಅವರನ್ನು ವಿಧಾನಸಭೆಯಲ್ಲಿ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ ಎಂಬುದು ಜನಸಾಮನ್ಯರ ನಡುವಿನ ಚರ್ಚೆ. ಸಿದ್ದರಾಮಯ್ಯ ಅವರನ್ನು ಕೇವಲ ಕುರುಬ ಸಮುದಾಯಕ್ಕೆ ಸೀಮಿತಗೊಳಿಸಿ ಅಹಿಂದ ವರ್ಗದಿಂದ ಎದುರಾಗಬಹುದಾದ ಪ್ರತಿರೋಧವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದನ್ನು ಏನೆನ್ನಬೇಕು? ಒಂದು ವೇಳೆ ಸಿದ್ದರಾಮಯ್ಯ ಅವರ ಪದಚ್ಯುತಿಯಾದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗುವ ಗ್ಯಾರಂಟಿ ಬಿಜೆಪಿ-ಜೆಡಿಎಸ್‌ನ ರಾಜ್ಯ ನಾಯಕರಿಗೆ ಇದೆ. ಹಿಂದೆ ಬಾಬಾಸಾಹೇಬ್ ಅಂಬೆಡ್ಕರ್ ಅವರನ್ನು ಸೋಲಿಸಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ಹಣೆಪಟ್ಟಿಯಂತೆಯೇ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಇಳಿಸಿದ ಹಣೆಪಟ್ಟಿಯೂ ಬಿಜೆಪಿ-ಜೆಡಿಎಸ್‌ಗೆ ಬೆಂಬಿಡದಂತೆ ಕಾಡಲಿದೆ. ಹೀಗಾಗಿಯೇ ಪಾದಯಾತ್ರೆಗೆ ಸ್ವಪಕ್ಷೀಯರಿಂದಲೇ ಅಪಸ್ವರ ಎದುರಾಗಿದೆ. ರಾಜ್ಯ ರಾಜಕೀಯದ ಎಲ್ಲಾ ಪಟ್ಟುಗಳನ್ನು ತಿಳಿದಿರುವ ಕುಮಾರಸ್ವಾಮಿಯವರೂ ಇದನ್ನರಿತು ಪ್ರಾರಂಭದಲ್ಲಿ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದರೇನೋ.

ಸದ್ಯದ ಪರಿಸ್ಥಿತಿಯಲ್ಲಿ ಅಹಿಂದ ವರ್ಗವನ್ನು ಮುನ್ನಡೆಸಲು ಸಿದ್ದರಾಮಯ್ಯ ಅವರಿಗೆ ಸರಿಸಾಟಿಯಾಗಬಲ್ಲ ಬೇರೆ ಯಾವ ನಾಯಕರೂ ಇಲ್ಲದಂತಾಗಿದೆ. ಅಹಿಂದ ವರ್ಗದಡಿ ಬರುವ ಒಂದೊಂದು ಸಮುದಾಯದ ಪ್ರತಿನಿಧಿಯಾಗಿ ಒಬ್ಬೊಬ್ಬ ರಾಜಕೀಯ ನೇತಾರರು ಬೆಳೆದಿದ್ದಾರೆ. ಆದರೆ ಸಿದ್ದರಾಮಯ್ಯರಂತೆ ಇಡೀ ಅಹಿಂದ ವರ್ಗವನ್ನು ಮುನ್ನಡೆಸಲು ರಾಜ್ಯದಲ್ಲಿ ಎರಡನೇ ಸಾಲಿನ ನಾಯಕತ್ವವೇ ಇಲ್ಲವಾಗಿದೆ. ಈ ಪರಿಸ್ಥಿತಿಗೆ ಸಿದ್ದರಾಮಯ್ಯ ಆದಿಯಾಗಿ ಇಡೀ ಅಹಿಂದ ವರ್ಗವನ್ನೇ ದೂಷಿಸಬೇಕಾಗಿದೆ. ಸಿದ್ದರಾಮಯ್ಯ ಅವರ ವಿರುದ್ಧದ ಸಂಚಿನಿಂದಾಗಿ ಇಡೀ ಅಹಿಂದ ಸಮುದಾಯವು ಅಧಿಕಾರದ ಉನ್ನತ ಸ್ತರಗಳಲ್ಲಿ ತನ್ನ ಧ್ವನಿಯನ್ನು ಗಟ್ಟಿಗೊಳಿಸುವಲ್ಲಿ ಹಾಗೂ ತನ್ನ ಪ್ರಾತಿನಿಧ್ಯವನ್ನು ಪಡೆಯುವಲ್ಲಿ ಇಷ್ಟು ವರ್ಷಗಳವರೆಗೆ ಸಾಧಿಸಿದ ಪ್ರಗತಿಗೆ ಹಾಗೂ ಮಾಡಿದ ಎಲ್ಲಾ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ. ಆದರೆ ಈ ಹಿನ್ನಡೆಯನ್ನು ತಪ್ಪಿಸಲು ಅಹಿಂದ ವರ್ಗದಿಂದ ಸಾಧ್ಯವೇ?

ರಾತ್ರೋರಾತ್ರಿ ನಾಯಕತ್ವ ಬೆಳೆಸುವುದಂತೂ ಅಸಾಧ್ಯದ ಮಾತು. ಆದರೆ ಸಿದ್ದರಾಮಯ್ಯ ಅವರ ವಿರುದ್ಧದ ಪಿತೂರಿಯನ್ನು ಎದುರಿಸಲು ಅಹಿಂದ ವರ್ಗ ಈ ಕೂಡಲೇ ಕಾರ್ಯಸನ್ನದ್ಧವಾಗಬೇಕಾದ ಅನಿವಾರ್ಯತೆಯಿದೆ. ಇಡೀ ಅಹಿಂದ ವರ್ಗವು ಸಿದ್ದರಾಮಯ್ಯ ಅವರ ಪರವಾಗಿ ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಒಂದು ವೇಳೆ ಮುಡಾ ಪ್ರಕರಣವು ನಿಜವಾಗಿಯೂ ಹಗರಣವೇ ಆಗಿದ್ದರೆ, ಎಲೆಕ್ಷನ್ ಬಾಂಡ್ ಹಾಗೂ ನೀಟ್ ಪ್ರಕರಣಗಳು ಹಗರಣಗಳಲ್ಲವೇ? ಎಂದು ಪ್ರಶ್ನಿಸಬೇಕಾಗಿದೆ. ಸಿದ್ದರಾಮಯ್ಯನವರ ಪದಚ್ಯುತಿಯಿಂದಾಗುವ ಸಂಭಾವ್ಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಜನಸಮುದಾಯದೊಂದಿಗೆ ಬೆರೆತು ಒಂದು ಜನಾಂದೋಲನವನ್ನೇ ರೂಪಿಸಬೇಕಾಗಿದೆ. ಈ ಪಿತೂರಿಯ ಹಿಂದೆ ಅಡಗಿರುವ ಶಕ್ತಿಗಳನ್ನು ಗುರುತಿಸಿ ಅಹಿಂದ ವರ್ಗವನ್ನು ಎದುರು ಹಾಕಿಕೊಂಡರೆ ಎದುರಿಸಬೇಕಾದ ದುಷ್ಪರಿಣಾಮಗಳನ್ನು ನೇರವಾಗಿ, ಸ್ಪಷ್ಟವಾಗಿ ಪ್ರಚುರಪಡಿಸಬೇಕಾಗಿದೆ. ತನಗಿಂತ ದೊಡ್ಡ ಹಿಂದುಳಿದ ವರ್ಗದವರು ಯಾರಾದರು ಇದ್ದಾರೆಯೇ ಎಂದು ಕೇಳಿದ್ದ ಗೌರವಾನ್ವಿತ ಪ್ರಧಾನಿಯವರಿಗೆ ನಮ್ಮ ರಾಜ್ಯದ ಅಹಿಂದ ವರ್ಗದ ನಾಯಕನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ನಿಲ್ಲಿಸಿ ದೊಡ್ಡತನ ಮೆರೆಯುವಂತೆ ಒತ್ತಾಯಿಸಬೇಕಾಗಿದೆ. ದೇಶದಲ್ಲಿ ಜಾತಿಜನಗಣತಿ ಮಾಡಿ ದಲಿತ-ದುರ್ಬಲ-ಹಿಂದುಳಿದ-ಶೋಷಿತ-ಅಲ್ಪಸಂಖ್ಯಾತರಿಗೆ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಧ್ವನಿಯೆತ್ತುತ್ತಿರುವ ರಾಹುಲ್‌ಗಾಂಧಿಯವರ ಮೇಲೆ ಎಂತಹ ಸಂದಿಗ್ಧ ಸನ್ನಿವೇಶ ಎದುರಾದರೂ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲುವಂತೆ ಒತ್ತಡ ತರಬೇಕಾಗಿದೆ. ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರವನ್ನು ‘ಇಂಡಿಯಾ’ ಒಕ್ಕೂಟದ ಇತರ ರಾಜ್ಯಗಳ ಮುಖ್ಯಮಂತ್ರಿಗಳ ಮೇಲೆ ನಡೆಯುತ್ತಿರುವ ರಾಜಕೀಯ ಪ್ರೇರಿತ ದಾಳಿಯಂತೆ ಪರಿಗಣಿಸಿ ಸಿದ್ದರಾಮಯ್ಯ ಅವರ ಪರವಾಗಿ ನಿಲ್ಲುವುದರಲ್ಲೇ ಕಾಂಗ್ರೆಸ್ ಪಕ್ಷದ ಜಾಣ್ಮೆಯಾಗಿದೆ.

ಅಹಿಂದ ವರ್ಗದ ಬಹಳಷ್ಟು ಜನರಿಗೆ ಸಿದ್ದರಾಮಯ್ಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇರುವಾಗ ಯಾವ ನೈತಿಕತೆಯಿಂದ ಅವರನ್ನು ಸಮರ್ಥಿಸಿಕೊಳ್ಳಬೇಕು ಎಂಬ ಪ್ರಶ್ನೆಯೂ ಎದುರಾಗಿದೆ. ಆದರೆ ಅದಕ್ಕೂ ಮುಂಚೆ ಸಿದ್ದರಾಮಯ್ಯ ಅವರ ವಿರೋಧಿಗಳು ಆರೋಪಿಸುತ್ತಿರುವ ಇನ್ನೂ ವಿಚಾರಣೆಯೇ ಮುಗಿಯದ, ಸಾಬೀತಾಗದ ಮುಡಾ ಹಗರಣ ಮುಖ್ಯವೋ ಅಥವಾ ನಾಲ್ಕು ದಶಕಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ಟ್ರ್ಯಾಕ್ ರೆಕಾರ್ಡ್ ಮುಖ್ಯವೋ, ಜನಪರ, ಬಡವರಪರ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾರ್ಥಿವೇತನಗಳು, ಸರಕಾರಿ ಟೆಂಡರ್‌ಗಳಲ್ಲಿ ದಲಿತರಿಗೆ ಮೀಸಲಾತಿ, ಐದು ಗ್ಯಾರಂಟಿಗಳು ಇತ್ಯಾದಿ ಜಾರಿಗೊಳಿಸಿದ್ದು ಮುಖ್ಯವೋ? ಎಂಬುದು ಯೋಚಿಸಬೇಕಾಗಿದೆ. ಈ ಆರೋಪಗಳ ಹಿಂದಿನ ರಾಜಕೀಯ ಉದ್ದೇಶವನ್ನೂ ಪರಾಮರ್ಶಿಸಬೇಕಾಗಿದೆ. ಇದೆಲ್ಲದಕ್ಕೂ ಹೆಚ್ಚಾಗಿ ಘನವೆತ್ತ ರಾಜ್ಯಪಾಲರು ನೀಡಿದ ನೋಟಿಸಿಗೆ ಉತ್ತರಿಸಲು ಕರೆದ ಕ್ಯಾಬಿನೆಟ್‌ಮೀಟಿಂಗ್‌ನ ನೇತೃತ್ವವನ್ನು ಸಹೋದ್ಯೋಗಿಗೆ ವಹಿಸಿ ಪಾರದರ್ಶಕತೆಯಿಂದ ನಡೆದುಕೊಂಡಿದ್ದನ್ನೂ ಪರಿಗಣಿಸಿದ್ದೇ ಆದಲ್ಲಿ ಉತ್ತರ ಸ್ಪಷ್ಟವಿರಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಮುಹಮ್ಮದ್ ಹಬೀಬ್

contributor

Similar News