ರಾಷ್ಟ್ರೀಯ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸಿದ ಮೋದಿ ಸರಕಾರದ ನಿರಂಕುಶ ಪ್ರಭುತ್ವ

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಗಳ ಸ್ವಾಯತ್ತತೆ ಮತ್ತು ರಾಷ್ಟ್ರೀಯ ಸಮಗ್ರತೆ, ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ, ರಾಷ್ಟ್ರೀಕರಣ ಮತ್ತು ಪ್ರಾದೇಶೀಕರಣಗಳ ನಡುವೆ ಸಮತೋಲನ ಸಾಧಿಸುವಂತಹ ಒಕ್ಕೂಟ ವ್ಯವಸ್ಥೆಯ ಅವಶ್ಯಕತೆ ಇದೆ. ಇದು ಸಾಧ್ಯವಾಗಬೇಕಾದರೆ ಸಾರ್ವಜನಿಕ ಸಂಸ್ಥೆಗಳಿಗೆ ಸ್ವಾಯತ್ತತೆ ದೊರಕಬೇಕು. ಮುಖ್ಯವಾಗಿ ರಾಜ್ಯಗಳಿಗೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ದೊರಕಬೇಕು. ಸ್ಥಳೀಯ ಸಂಸ್ಥೆಗಳು ಸಬಲೀಕರಣಗೊಳ್ಳಬೇಕು. ಹಿಂದಿ-ಹಿಂದೂ-ಹಿಂದೂಸ್ಥಾನ ಎಂಬ ಮತೀಯವಾದಕ್ಕೆ ಸೋಲುಂಟಾಗಬೇಕು. ಸಾಮಾಜಿಕ, ಭಾಷಾ ಬಹುತ್ವಕ್ಕೆ ಮಹತ್ವ ದೊರಕಬೇಕು. ಈ ಬೇಕುಗಳು ಬೆಳೆದಷ್ಟು ಒಕ್ಕೂಟ ವ್ಯವಸ್ಥೆ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ.

Update: 2024-09-09 06:55 GMT

ಆರೆಸ್ಸೆಸ್ ತನ್ನ ರಾಜಕೀಯ ಘಟಕ ಭಾರತೀಯ ಜನಸಂಘದ ಕಾಲದಿಂದಲೂ ಅಂಬೇಡ್ಕರ್ ಪ್ರತಿಪಾದಿಸಿದ ಸಮಸೂತ್ರತೆಯಲ್ಲದ ಒಕ್ಕೂಟ(asymmetrical federalism) ವ್ಯವಸ್ಥೆಯನ್ನು ತಿರಸ್ಕರಿಸಿದೆ. ತನ್ನ ಪೂರ್ವಾಶ್ರಮ ಜನಸಂಘದ ಸಿದ್ಧಾಂತವನ್ನು ವಿಸ್ತರಿಸಿದ ಈಗಿನ ಬಿಜೆಪಿ ಒಕ್ಕೂಟವೆಂದರೆ ಕೇವಲ ಆಡಳಿತ ನಡೆಸಲು ಅಗತ್ಯವಿರುವ ಸಾಧನ ಮಾತ್ರ ಎಂದು ಹೇಳುತ್ತಾ ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ನಿರಾಕರಿಸುತ್ತಿದೆ. ಸಿಎಎ, ಯುಎಪಿಎ ತಿದ್ದುಪಡಿ, ಎನ್‌ಐಎ ಕಾಯ್ದೆ ತಿದ್ದುಪಡಿ ಮುಂತಾದ ಕಾಯ್ದೆಗಳು ಬಿಜೆಪಿಯ ಉಕ್ಕಿನ ಹಿಡಿತದ ಕೇಂದ್ರೀಕರಣಕ್ಕೆ ಸಾಕ್ಷಿಯಾಗಿವೆ. ಇಲ್ಲಿನ ಸಂಕೀರ್ಣ ತೆರಿಗೆ ನೀತಿಯಲ್ಲಿ ಸುಧಾರಣೆಯ ಅಗತ್ಯವಿತ್ತು. ಇದನ್ನು ನೆಪ ಮಾಡಿಕೊಂಡು ಒಂದು ಮಾರುಕಟ್ಟೆ ಎನ್ನುವ ತನ್ನದೇ ಸೂತ್ರ ಮುಂದಿಟ್ಟುಕೊಂಡು ಬಿಜೆಪಿಯು ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ನೇಣುಗಂಬವಾಗಿರುವ ಜಿಎಸ್‌ಟಿ ಎನ್ನುವ ‘ಒಂದು ದೇಶ, ಒಂದು ತೆರಿಗೆ’ ಪದ್ಧತಿಯನ್ನು ಏಕಪಕ್ಷೀಯವಾಗಿ ಜಾರಿಗೊಳಿಸಿತು. ಈ ಒಂದು ದೇಶ ಎನ್ನುವ ಬಹುತ್ವವನ್ನು ನಿರಾಕರಿಸುವ ಏಕರೂಪಿ ಸಿದ್ಧಾಂತವು ಮುಂದೆ ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ಧರ್ಮ ಮುಂತಾದ ಕೇಂದ್ರೀಕರಣ ವ್ಯವಸ್ಥೆ ಮತ್ತು ಬಹು ಸಂಸ್ಕೃತಿ ನಿರಾಕರಣೆಯ ಹಂತಕ್ಕೆ ತಲಪುತ್ತಿದೆ. ಇದರ ಫಲವಾಗಿ ಒಕ್ಕೂಟ ನೀತಿ ಅವನತಿ ಹೊಂದಿದೆ. ಈ ಒಂದು ದೇಶ. ಸಿದ್ಧಾಂತವು ಕೇವಲ ಕೇಂದ್ರೀಕರಣ ಮಾತ್ರವಲ್ಲ, ಜೊತೆಗೆ ರಾಜ್ಯಗಳ ಸ್ವಾಯತ್ತತೆಯನ್ನು ಕೊನೆಗೊಳಿಸುತ್ತದೆ, ದೀರ್ಘಕಾಲದಲ್ಲಿ ಇಲ್ಲಿನ ಬಹುತ್ವ, ಬಹು ಸಂಸ್ಕೃತಿ ಸಮಾಜವನ್ನು ನಾಶಗೊಳಿಸುತ್ತದೆ.

2019ರ 17ನೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ‘ರಾಜ್ಯಗಳು ಕೇಂದ್ರದ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ, ರಾಜ್ಯಗಳ ಭ್ರಷ್ಟಾಚಾರದಿಂದ ನಿಮಗೆ ಕೇಂದ್ರದ ಸೌಲಭ್ಯಗಳು ತಲಪುತ್ತಿಲ್ಲ, ರಾಜ್ಯಗಳ ಸ್ವಾಯತ್ತತೆ ದೇಶದ ಭದ್ರತೆಗೆ ಅಪಾಯಕಾರಿ, ಬಲಿಷ್ಠ ಕೇಂದ್ರ ಮಾತ್ರ ಪರಿಹಾರ’ ಎಂದು ಪ್ರಚಾರ ಮಾಡಿ ಬಹುಮತ ಗಳಿಸಿದರು. ಕಾಶ್ಮೀರದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ನೆಪ ಮಾಡಿಕೊಂಡು ವಿಶೇಷ ಸ್ಥಾನ ಕಲ್ಪಿಸುವ ಪರಿಚ್ಚೇಧ 370ನ್ನು ರದ್ದುಗೊಳಿಸಿತು. ನಾಗರಿಕ ಸಮಾಜದಿಂದ ಇದಕ್ಕೆ ಯಾವುದೇ ಪ್ರತಿರೋಧ ಬರದಿರುವುದು ಮೋದಿಯವರ ಈ ತಂತ್ರಗಾರಿಕೆ ಯಶಸ್ವಿಯಾಗಿರುವುದಕ್ಕೆ ಸಾಕ್ಷಿ.

ಅಧಿಕಾರ ಇಲ್ಲದಾಗ ಒಕ್ಕೂಟ ವ್ಯವಸ್ಥೆಯ ಪರವಾಗಿ ಮಾತನಾಡುವ ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ಅದನ್ನು ಬಲಪಡಿಸುವಂತಹ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ನೀತಿ ರೂಪಿಸಲಿಲ್ಲ. ಒಕ್ಕೂಟ ವ್ಯವಸ್ಥೆಯ ಪರವಾಗಿರುವ ಪ್ರಾದೇಶಿಕ ಪಕ್ಷಗಳು ಸಂಪೂರ್ಣವಾಗಿ ಕುಟುಂಬ ರಾಜಕಾರಣವನ್ನು ಪೋಷಿಸುತ್ತಿವೆ, ಬಲಿಷ್ಠ ಫ್ಯೂಡಲ್ ಜಾತಿಗಳ ವಕ್ತಾರರಾಗಿವೆ. ತಮ್ಮ ಜಾತೀಯತೆ, ಯಾಜಮಾನಕೀಯತೆಯಿಂದ ದಲಿತರು, ಆದಿವಾಸಿಗಳಿಗೆ ಮತ್ತಷ್ಟು ಆತಂಕ ಮೂಡಿಸುತ್ತಿವೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಬಿಜೆಪಿ ತನ್ನ ಕೇಂದ್ರೀಕರಣ ಸಿದ್ಧಾಂತಕ್ಕೆ ಬಳಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿನ ಜೆಡಿಎಸ್ ಜೊತೆಗೆ, ಆಂಧ್ರಪ್ರದೇಶದಲ್ಲಿ ಟಿಡಿಪಿ ಜೊತೆಗೆ, ಬಿಹಾರದಲ್ಲಿ ಜಿಡಿಯು ಜೊತೆಗಿನ ಮೈತ್ರಿ ಇದಕ್ಕೆ ಸಾಕ್ಷಿ. ಅಂಬೇಡ್ಕರ್ ಹೇಳಿದಂತೆ ಇಂದು ವೈರುಧ್ಯಗಳ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ.

ರಾಜಕೀಯ ಚಿಂತಕ ಜೆಫರ್‌ಲಾಟ್ ಭಾರತ ಒಕ್ಕೂಟ ವ್ಯವಸ್ಥೆಯ 75 ವರ್ಷಗಳ ಪಯಣವನ್ನು ‘ಸಹಕಾರಿ ಒಕ್ಕೂಟದಿಂದ ರಾಷ್ಟ್ರೀಯ ಒಕ್ಕೂಟದವರೆಗೆ’ ಎಂದು ವಿವರಿಸುತ್ತಾರೆ. 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಒಕ್ಕೂಟ ವ್ಯವಸ್ಥೆಯು ಮತ್ತಷ್ಟು ದುರ್ಬಲಗೊಂಡು ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಎನ್ನುವುದು ಒಂದು ಸರ್ವಾಧಿಕಾರದ ಆಡಳಿತವಾಗಿ ಮಾರ್ಪಟ್ಟಿದೆ. ರಾಜ್ಯಗಳು ದುರ್ಬಲಗೊಂಡಿವೆ. ಇಂದಿನ ದಿನಗಳಲ್ಲಿ ರಾಜ್ಯಗಳ ಸ್ಥಿತಿ ಶೋಚನೀಯವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರವು ಗರಿಷ್ಠ ಅಧಿಕಾರವನ್ನು ರಾಜ್ಯಗಳ ಮೇಲೆ ಚಲಾಯಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ಅಣಕದಂತಿದೆ. ‘ರಾಜ್ಯಗಳಿಂದ ದೇಶ’ ಎನ್ನುವ ವಿಕೇಂದ್ರೀಕರಣ ನೀತಿಯನ್ನು ಸಂಪೂರ್ಣವಾಗಿ ನಾಶ ಮಾಡಿರುವುದು ಇವರ ಹತ್ತು ವರ್ಷಗಳ ಸಾಧನೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಿರಂತರವಾಗಿ ಸಂಘರ್ಷಾತ್ಮಕ ಒಕ್ಕೂಟ ನೀತಿಯನ್ನು ಅನುಸರಿಸಿದ ಮೋದಿ ಸರಕಾರ ರಾಜ್ಯಗಳ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರಕ್ಕೆ ಧಕ್ಕೆ ತಂದರು. ನೋಟು ಅಮಾನ್ಯ, ಕೋವಿಡ್ ಸಂದರ್ಭದ ಲಾಕ್‌ಡೌನ್, ಕಾಶ್ಮೀರದ ರಾಜ್ಯ ಸ್ಥಾನಮಾನ ರದ್ದತಿ, ಈಶಾನ್ಯ ರಾಜ್ಯಗಳ ಆಸ್ಮಿತೆಯ ನಾಶ, ಹಿಂದಿ ಹೇರಿಕೆ, ನೀಟ್, ಎನ್‌ಇಪಿ ಮತ್ತು ಕೃಷಿ ಮಸೂದೆಗಳ ಏಕಪಕ್ಷೀಯ ಜಾರಿ ಮುಂತಾದ ನಡೆಗಳು ಸರ್ವಾಧಿಕಾರದ ಆಡಳಿತಕ್ಕೆ ಸಾಕ್ಷಿಯಾಗಿದೆ.

ಬಹುತ್ವ ಕರ್ನಾಟಕ ಸಂಘಟನೆಯ ವರದಿಯಲ್ಲಿ ‘ನರೇಗಾ ಅಥವಾ ಆವಾಸ್ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಆರ್ಥಿಕ ಅನುದಾನ ಹಂಚಿಕೆ ಮಾಡುತ್ತಾರೆ ಮತ್ತು ಸ್ಥಳೀಯ ಆಡಳಿತದ ಹೊಣೆಗಾರಿಕೆ ಇರುವ ರಾಜ್ಯಗಳು ಈ ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರವು ಇದರ ಒಟ್ಟು ಕಾರ್ಯ ಸ್ವರೂಪವನ್ನು ನಿರ್ಧರಿಸುತ್ತಿದೆ. ಇದು ಸ್ಥಳೀಯ ಪಟ್ಟಣ ಪಂಚಾಯತ್, ನಗರಸಭೆ, ಗ್ರಾಮ ಪಂಚಾಯತ್‌ಗಳ ಕಾರ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಿಎಂ ಜನಾರೋಗ್ಯ ಯೋಜನೆಯಲ್ಲಿ ರಾಜ್ಯವು ಶೇ.77.97ರಷ್ಟು ವೆಚ್ಚ ಮಾಡುತ್ತದೆ. ಆದರೆ ಇಡಿ ಯೋಜನೆಯ ಹೆಗ್ಗಳಿಕೆಯನ್ನು ಕೇಂದ್ರ ಪಡೆದುಕೊಳ್ಳುತ್ತಿದೆ’ ಎಂದು ವಿವರಿಸುತ್ತದೆ.

2019ರಲ್ಲಿ ಮೋದಿ ನೇತೃತ್ವದ ಸರಕಾರವು ಎರಡನೇ ಅವಧಿಗೆ ಆಯ್ಕೆಯಾದ ತಕ್ಷಣ ಜಮ್ಮು ಮತ್ತು ಕಾಶ್ಮೀರದ ಸರಕಾರವನ್ನು ಪದಚ್ಯತುಗೊಳಿಸಿ ಆ ರಾಜ್ಯವನ್ನು ಕೇಂದ್ರಾಡಳಿತಕ್ಕೆ ಒಳಪಡಿಸಿತು. ದೇಶದ ಭದ್ರತೆಯ ನೆಪವೊಡ್ಡಿ ಈ ಸಂವಿಧಾನ ವಿರೋದಿ ಕೃತ್ಯವೆಸಗಿದ ಕೇಂದ್ರ ಸರಕಾರವು ಚುನಾಯಿತ ಸರಕಾರದೊಂದಿಗೆ ಸಮಾಲೋಚನೆಯನ್ನು ನಡೆಸಲಿಲ್ಲ. ಏಕಪಕ್ಷೀಯವಾಗಿ ಕಲಂ 370ನ್ನು ನಿಷೇಧಿಸಿತು. ಮೋದಿ ಸರಕಾರದ ಗೃಹ ಮಂತ್ರಿ ಅಮಿತ್ ಶಾ ರಾಜ್ಯಗಳೊಂದಿಗೆ ಚರ್ಚಿಸದೆ ತಮ್ಮ ರಾಜಕೀಯ ಲಾಭಕ್ಕಾಗಿ ಸಿಎಎ ಎನ್ನುವ ಕರಾಳ ಶಾಸನವನ್ನು ಜಾರಿಗೊಳಿಸಿದರು.

ಸಮವರ್ತಿ ಪಟ್ಟಿಯಲ್ಲಿ ರಾಜ್ಯಗಳಿಗೆ ಸಮಾನವಾದ ಅಧಿಕಾರ ಮತ್ತು ಹಕ್ಕುಗಳಿದ್ದರೂ ಸಹ ವಾಸ್ತವದಲ್ಲಿ ತಮ್ಮ ಪಟ್ಟಿಯಲ್ಲಿರುವ ಅನೇಕ ವಲಯಗಳಲ್ಲಿನ ನೀತಿಗಳನ್ನು, ನಿಯಮಾವಳಿಗಳನ್ನು ಸ್ವತಂತ್ರವಾಗಿ ನಿರ್ಧರಿಸುವ ಅಧಿಕಾರವನ್ನು ಹತ್ತಿಕ್ಕಲಾಗುತ್ತಿದೆ. ಉದಾಹರಣೆಗೆ ಕೃಷಿ ವಲಯವು ರಾಜ್ಯದ ಪಟ್ಟಿಯಲ್ಲಿ ಬರುತ್ತದೆ. ಆದರೆ ಕೃಷಿಗೆ ಸಂಬಂಧಿಸಿದ ಬಹುತೇಕ ಮಸೂದೆಗಳನ್ನು ಪರಿಚ್ಚೇದ 256ರ ದುರ್ಬಳಕೆ ಮಾಡಿಕೊಂಡು ರಾಜ್ಯಗಳ ಮೇಲೆ ಹೇರಲ್ಪಡುತ್ತದೆ ಮತ್ತು ರಾಜ್ಯಗಳು ಕೇಂದ್ರ ರೂಪಿಸಿದ ಮಸೂದೆಯನ್ನು ವಿಧಾನಮಂಡಲದಲ್ಲಿಯೂ ಮಂಡಿಸುತ್ತಾರೆ. ಉದಾಹರಣೆಗೆ ಇತ್ತೀಚೆಗೆ ಮೋದಿ ಸರಕಾರವು ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಖಾಸಗಿಯವರಿಗೆ ಅವಕಾಶ, ಗುತ್ತಿಗೆ ಬೇಸಾಯವನ್ನು ಒಳಗೊಂಡ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿತು. ಈ ಮಸೂದೆಗಳನ್ನು ರೂಪಿಸುವಾಗ ಇದರ ಹಕ್ಕುದಾರರಾದ ದೇಶದ 28 ರಾಜ್ಯ, 9 ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಏಕಪಕ್ಷೀಯವಾಗಿ ಹೇರಲ್ಪಟ್ಟ ಈ ಮಸೂದೆಗಳನ್ನು ರಾಜ್ಯ ಸರಕಾರಗಳು ಯಥಾವತ್ತಾಗಿ ವಿಧಾನಮಂಡಲಗಳಲ್ಲಿ ಮಂಡಿಸಿದವು (ಕೇರಳ, ಪಂಜಾಬ್, ರಾಜಸ್ಥಾನದ ವಿರೋಧ ಪಕ್ಷಗಳ ಸರಕಾರಗಳನ್ನು ಹೊರತುಪಡಿಸಿ)

ಇದೇ ಮಾದರಿಯಲ್ಲಿ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಮೋದಿ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ 2020ಯನ್ನು ಸಂಸತ್‌ನಲ್ಲಿಯೂ ಮತ್ತು ವಿಧಾನಮಂಡಲಗಳಲ್ಲಿಯೂ ಚರ್ಚಿಸಲಿಲ್ಲ. ಕೇಂದ್ರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಮಾಡಿ ಏಕಪಕ್ಷೀಯವಾಗಿ ಇದನ್ನು ಜಾರಿಗೊಳಿಸುತ್ತೇವೆ ಎಂದು ಬಿಜೆಪಿಯ ಮಂತ್ರಿಗಳು ಹೇಳಿಕೆ ಕೊಡುತ್ತಿದ್ದಾರೆ. ಯುಜಿಸಿ ಸಹ ಸಂವಿಧಾನ ನೀತಿಸಂಹಿತೆಗಳನ್ನು ನಿರ್ಲಕ್ಷಿಸಿ, ರಾಜ್ಯ ಸರಕಾರಗಳನ್ನು ಪರಿಗಣಿಸದೆ ನೇರವಾಗಿ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಪತ್ರವನ್ನು ಬರೆದು ‘ಎನ್‌ಇಪಿ 2020’ ಜಾರಿ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಆದೇಶ ಕೊಡುತ್ತದೆ. ಎಲ್ಲಕ್ಕಿಂತಲೂ ಆತಂಕದ ಸಂಗತಿಯೆಂದರೆ ಚುನಾಯಿತ ರಾಜ್ಯ ಸರಕಾರಗಳು ಸಹ ತಮ್ಮ ಸಂವಿಧಾನಬದ್ಧ ಹಕ್ಕನ್ನು ರಕ್ಷಿಸಿಕೊಳ್ಳಲು ವಿಫಲಗೊಂಡಿವೆ.

2014ರಲ್ಲಿ ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ತಮ್ಮ ಮೊದಲ ಭಾಷಣ ಮಾಡಿದ ಮೋದಿ 64 ವರ್ಷಗಳಷ್ಟು ಹಳೆಯದಾದ ಯೋಜನಾ ಆಯೋಗವನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಆದರೆ ಇದನ್ನು ನಿರ್ಧರಿಸುವಾಗ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ, ಆಗಿನ ಯೋಜನಾ ಆಯೋಗದ ಉಪಾಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಲಿಲ್ಲ, ಏಕಪಕ್ಷೀಯವಾಗಿ ತೀರ್ಮಾನಿಸಿದರು. ಆರ್ಥಿಕ ತಜ್ಞ ಕೆ.ಪಿ.ಚಂದ್ರಶೇಖರ್ ಅವರು ಈ ಭಾಷಣದಲ್ಲಿ ‘‘ಸಾರ್ವಜನಿಕ-ಖಾಸಗಿ ಸಹಯೋಗ(ಪಿಪಿಪಿ), ಸಂಪನ್ಮೂಲಗಳ ಗರಿಷ್ಠ ಬಳಕೆ, ದೇಶಕ್ಕಾಗಿ ಯುವಶಕ್ತಿಯ ಬಳಕೆ, ಅಭಿವೃದ್ಧಿ ಬಯಸುವ ರಾಜ್ಯ ಸರಕಾರಗಳ ನಿರೀಕ್ಷೆಗಳಿಗೆ ಉತ್ತೇಜನ, ರಾಜ್ಯ ಸರಕಾರಗಳ, ಒಕ್ಕೂಟ ರಚನೆಯ ಸಬಲೀಕರಣ ಎಂದು ಮಾತನಾಡಿದರು. ಆದರೆ ಒಕ್ಕೂಟ ವ್ಯವಸ್ಥೆಯ ಮೂಲಕ ಅಭಿವೃದ್ಧಿಗೆ ಸಾಧಿಸಲು ಬಯಸುವ ಯೋಜನಾ ಆಯೋಗವನ್ನು ವಿರೋಧಿಸುತ್ತಿದ್ದರು. ಯೋಜನಾ ಆಯೋಗದ ರದ್ದತಿ ನಕಾರಾತ್ಮಕ ಪರಿಣಾಮ ಬೀರಿತು. ಕೇಂದ್ರ ಹಣಕಾಸು ಇಲಾಖೆ ದೇಶದ ಸಂಪನ್ಮೂಲದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಹಿಂದೆ ಯೋಜನಾ ಆಯೋಗದ ಸಭೆಗಳಲ್ಲಿ ಸಮಗ್ರ ಬಜೆಟ್ ಬೆಂಬಲದ ಮೊತ್ತವನ್ನು ಅಭಿವೃದ್ಧಿಗಾಗಿ ಮೀಸಲಿಡುವುದರ ಕುರಿತು, ಕೇಂದ್ರ ಮತ್ತು ರಾಜ್ಯಗಳ ವಿವಿಧ ಇಲಾಖೆಗಳಿಗೆ ಹಂಚುವುದರ ಕುರಿತು ರಾಜ್ಯ ಪ್ರತಿನಿಧಿಗಳು ಮತ್ತು ಆಯೋಗದ ನಡುವೆ ನಿರಂತರ ಸಂಘರ್ಷ ನಡೆಯುತ್ತಿತ್ತು, ಅಂತಿಮವಾಗಿ ಪ್ರಧಾನಿಗಳು ಬಗೆಹರಿಸುತ್ತಿದ್ದರು. ಕೇಂದ್ರದಲ್ಲಿನ ಯೋಜನಾ ಕಾರ್ಯವಿಧಾನಗಳು ರಾಜ್ಯಗಳಲ್ಲಿಯೂ ಪ್ರತಿಫಲಿಸುತ್ತಿದ್ದವು’’ ಎಂದು ಬರೆಯುತ್ತಾರೆ. ಆದರೆ ಯೋಜನಾ ಅಯೋಗವನ್ನು ರದ್ದುಗೊಳಿಸಿ ನಿತಿ ಆಯೋಗವನ್ನು ಸ್ಥಾಪಿಸುವುದರ ಮೂಲಕ ಕೇಂದ್ರದ ಉಕ್ಕಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಆರಂಭದ ವರ್ಷಗಳಲ್ಲಿ ನೀತಿ ಆಯೋಗಕ್ಕೆ ಯಾವುದೇ ಗುರಿ ಮತ್ತು ಜವಾಬ್ದಾರಿ ಇರಲಿಲ್ಲ. ತಮ್ಮ ಪಾತ್ರವೇನು ಎಂದು ಅದರ ಅಧ್ಯಕ್ಷರು, ಉನ್ನತ ಅಧಿಕಾರಿಗಳಿಗೆ ಗೊತ್ತಿರಲಿಲ್ಲ.

ಮೋದಿ ಸರಕಾರವು ತನಗೆ ದೊರಕಿದ ಬಹುಮತದ ಮೂಲಕ ‘ಸಹಕಾರಿ ಒಕ್ಕೂಟ ವ್ಯವಸ್ಥೆ’ಯ ಬದಲಿಗೆ ‘ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆ’ ನೀತಿಯನ್ನು ಜಾರಿಗೊಳಿಸಿದರು. ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ವಲಯಗಳಿಗೆ ರಾಷ್ಟ್ರೀಯ ಸೂಚ್ಯಂಕಗಳನ್ನು ನಿಗದಿಪಡಿಸಿದರು ಮತ್ತು ರಾಜ್ಯಗಳು ಆ ಸೂಚ್ಯಂಕಗಳ ಗುರಿ ತಲಪುತ್ತಿಲ್ಲ ಎಂದು ವಿಮರ್ಶಿಸುವ ಪರಿಪಾಠ ಬೆಳೆಸಿದರು. ಈ ಬೆಳವಣಿಗೆಯನ್ನು ಸಹ ಏಕಪಕ್ಷೀಯವಾಗಿ ನಿರ್ಧರಿಸಿದರು. ಪ್ರೊ.ಚಂದ್ರಶೇಖರ್ ‘ಕೆಲವು ರಾಜ್ಯಗಳು ಮಾನವ ಸಂಪನ್ಮೂಲ ಅಭಿವೃದ್ಧಿ, ಕಲ್ಯಾಣ ಯೋಜನೆಗೆ ಆದ್ಯತೆ ನೀಡಿದರೆ ಇತರ ರಾಜ್ಯಗಳು ಕೈಗಾರಿಕಾ, ಕಾರ್ಪೋರೇಟ್ ಅಭಿವೃದ್ಧಿಗೆ ಒಲವು ತೋರಿಸುತ್ತಾರೆ. ಎರಡು ಭಿನ್ನ ಗುರಿಯಿರುವ ರಾಜ್ಯಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಮಾವಿನ ಹಣ್ಣು ಹಾಗೂ ಕಿತ್ತಳೆ ಹಣ್ಣನ್ನು ಹೋಲಿಸಿದಂತೆ ಅಸಮಂಜಸ ಎನಿಸಿಕೊಳ್ಳುತ್ತದೆ. ಇದರಿಂದ ಆಯಾ ರಾಜ್ಯಗಳಲ್ಲಿನ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಅಲ್ಲಿನ ಸರಕಾರಗಳು ಆದ್ಯತೆ ನೀಡದ ವಲಯಗಳನ್ನು ಆಯ್ಕೆ ಮಾಡಿ ರಾಜ್ಯದ ಅಭಿವೃದ್ಧಿ ಹಳಿ ತಪ್ಪಿದೆ ಎಂದು ಟೀಕಿಸಲು ಆರಂಭಿಸುತ್ತಾರೆ’ ಎಂದು ಬರೆಯುತ್ತಾರೆ

ಮೋದಿಯವರ ಈ ಸ್ಪರ್ಧಾತ್ಮಕ ಒಕ್ಕೂಟ ನೀತಿಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ರಾಜಕೀಯ ವೈರತ್ವ ಬೆಳೆಯಿತು ಮತ್ತು ಕೆಲವು ರಾಜ್ಯಗಳ ಹಿತಾಸಕ್ತಿ ಬಲಿಕೊಟ್ಟು ನಿರ್ದಿಷ್ಠ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚಿನ ಮಾನ್ಯತೆ ಕೊಡಲಾಯಿತು. ಕ್ರೂನಿ ಬಂಡವಾಳಶಾಹಿಗಳು ಮೋದಿ ಬಯಸುವ ರಾಜ್ಯಗಳಲ್ಲಿ ತಮ್ಮ ಉದ್ಯಮ ಪ್ರಾರಂಭಿಸುವ, ಬಂಡವಾಳ ಹುಡುವ ಕೆಟ್ಟ ಮೇಲ್ಪಂಕ್ತಿ ಶುರುವಾಯಿತು. ‘ಡಬಲ್ ಇಂಜಿನ್ ಸರಕಾರ’ ರಾಜ್ಯದ ಅಭಿವೃದ್ಧಿಗೆ ಸಹಾಯಕವಾಗುತ್ತದೆ, ಈ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರಕಾರವನ್ನೇ ಆಯ್ಕೆ ಮಾಡಿ ಎಂದು ಪ್ರಚಾರ ಮಾಡುವುದರ ಮೂಲಕ ಮೋದಿ ಮತ್ತು ಶಾ ಪ್ರಜಾಪ್ರಭುತ್ವದ ತಳಹದಿಯನ್ನೇ ದುರ್ಬಲಗೊಳಿಸಿದರು, ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ನಾಶ ಮಾಡಿದರು.

12 ಜನವರಿ 2022ರಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ‘ಐಎಎಸ್(ಕೇಡರ್) ನಿಯಮಗಳು, 1954 ತಿದ್ದುಪಡಿ ಶಿಫಾರಸುಗಳು’ ಶೀರ್ಷಿಕೆ ಅಡಿಯಲ್ಲಿ ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸುತ್ತೋಲೆ ಕಳುಹಿಸಿದರು. ಇದರ ಪ್ರಕಾರ ಕೇಂದ್ರ ಸರಕಾರವು ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಐಎಎಸ್ ಅಧಿಕಾರಿಯ ಸೇವೆಯನ್ನು ನಿಯೋಜಿಸಲು ಬಯಸಿದಲ್ಲಿ ರಾಜ್ಯ ಸರಕಾರವು ಒಪ್ಪಿಗೆ ನೀಡದಿದ್ದರೂ ಅಥವಾ ಪ್ರತಿಕ್ರಿಯಿಸುವುದರಲ್ಲಿ ತಡ ಮಾಡಿದರೂ ಅವರನ್ನು ಆ ಹುದ್ದೆಯಿಂದ ಪದಮುಕ್ತಗೊಳಿಸಬೇಕು ಮತ್ತು ಸಂಬಂಧಿಸಿದ ಅಧಿಕಾರಿಯ ಅನುಮತಿಯ ಅಗತ್ಯವೂ ಬೇಕಿಲ್ಲ. ಇದು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಮತ್ತು ಕೇಂದ್ರದ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಇದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಅಧಿಕಾರಶಾಹಿಯನ್ನು ಕೇಂದ್ರೀಕರಣಗೊಳಿಸುತ್ತದೆ. ಮೂಲದಲ್ಲಿ ಕೇಂದ್ರದ ನೀತಿ ನಿರೂಪಣೆಗಳಲ್ಲಿ ರಾಜ್ಯದ ಆದ್ಯತೆ ಮತ್ತು ಹಿತಾಸಕ್ತಿಯನ್ನು ಒಳಗೊಳ್ಳಬೇಕು ಎನ್ನುವ ಕಾರಣಕ್ಕೆ ಐಎಎಸ್ ಕೇಡರ್ ಅಧಿಕಾರಿಗಳನ್ನು ಕೇಂದ್ರಕ್ಕೆ ನಿಯೋಜಿಸುವ ನಿಯಮವಿದೆ. ಅಧಿಕಾರಿಗಳ ಆಯ್ಕೆ ಮತ್ತು ಆಡಳಿತಾತ್ಮಕ ತರಬೇತಿ ಕೇಂದ್ರ ಸರಕಾರದ ಅಡಿಯಲ್ಲಿದ್ದರೆ ಅವರ ಸೇವೆ ಮತ್ತು ಕಾರ್ಯಪಾಲನೆ ರಾಜ್ಯ ಸರಕಾರಗಳ ಜೊತೆಗೆ ನಿಯೋಜಿಸಲಾಗಿತ್ತು. ಈ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಸಮತೋಲನಗೊಳಿಸಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಂದ್ರದ ಐಎಎಸ್ ಹುದ್ದೆಗಳಿಗೆ ನಿರ್ದಿಷ್ಟ ರಾಜ್ಯಗಳ ಅಧಿಕಾರಿಗಳನ್ನು ಆಯ್ಕೆ ಮಾಡುವ ಪರಂಪರೆ ಶುರುವಾಯಿತು. ಮೋದಿ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ಕೆಲಸ ಮಾಡಿದ ಅಧಿಕಾರಿಗಳನ್ನು ಬಹುಸಂಖ್ಯೆಯಲ್ಲಿ ಕೇಂದ್ರ ಸರಕಾರದ ಸೇವೆಗೆ ನಿಯೋಜಿಸಲಾಗಿದೆ. ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಗುಜರಾತ್ ಕೇಡರ್ ಅಧಿಕಾರಿಗಳಿದ್ದಾರೆ. ಅನೇಕ ಸಂದರ್ಭದಲ್ಲಿ ರಾಜ್ಯ ಸರಕಾರಗಳನ್ನು ಪರಿಗಣಿಸದೆ ನೇರವಾಗಿ ಅಲ್ಲಿನ ಅಧಿಕಾರಿಗಳೊಂದಿಗೆ ವ್ಯವಹರಿಸಲಾಗಿದೆ.

ಭಾರತವು ಇಂದು ‘quasi-federal’ ಪ್ರಭುತ್ವವಾಗಿಯೂ ಉಳಿದುಕೊಂಡಿಲ್ಲ. ಪ್ರಸಕ್ತ ಅದು ಕೇಂದ್ರೀಕರಣಗೊಂಡ ಒಕ್ಕೂಟ ವ್ಯವಸ್ಥೆ. ಸ್ವಾತಂತ್ರ್ಯ ಬಂದ ನಂತರ ಅಪಾರ ವೈವಿಧ್ಯ, ಬಹುಸಂಸ್ಕೃತಿಯ ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ವಿಕೇಂದ್ರೀಕರಣಗೊಳಿಸುವ ಬದಲಿಗೆ ಕೇಂದ್ರೀಕರಣಕ್ಕೆ ಒತ್ತು ಕೊಟ್ಟಿರುವುದಕ್ಕೆ ಅನೇಕ ಕಾರಣಗಳಿದ್ದವು. ಆದರೆ ಯಾವ ಸಂದರ್ಭದಲ್ಲಿಯೂ ಸಂಪೂರ್ಣವಾಗಿ ಕೇಂದ್ರಕ್ಕೆ ಅಧಿಪತ್ಯ ಕೊಟ್ಟಿರಲಿಲ್ಲ. ಆದರೆ ಕ್ರಮೇಣ ಈ ಒಕ್ಕೂಟ ವ್ಯವಸ್ಥೆ ಕುಸಿಯುತ್ತಾ ಹೋದಂತೆ ಫ್ಯಾಶಿಸಂನ ಆಡಳಿತ ಗಟ್ಟಿಗೊಳ್ಳತೊಡಗಿತು. ಮೋದಿ ನೇತೃತ್ವದ ಬಿಜೆಪಿ ಸರಕಾರದ ಹತ್ತು ವರ್ಷಗಳ ಆಡಳಿತದಲ್ಲಿ ಸಮಾಜೋ-ರಾಜಕೀಯ-ಆರ್ಥಿಕ ವ್ಯವಸ್ಥೆ ಕೇಂದ್ರೀಕರಣಗೊಳ್ಳುತ್ತಾ ಹೋದಂತೆ ಒಕ್ಕೂಟ ವ್ಯವಸ್ಥೆ ಕುಸಿಯತೊಡಗಿತು. ದೇಶವನ್ನು ಹುಸಿ ರಾಷ್ಟ್ರೀಯತೆ ಮತಾಂಧತೆಯ, ಬ್ರಾಹ್ಮಣಶಾಹಿ ಚಾತುರ್ವರ್ಣದ ಮೂಲಕ ಸೋಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ. ಶ್ರೀಪಾದ ಭಟ್

contributor

Similar News