ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಕಾಡಾನೆಗಳ ಹಾವಳಿ

ಕಾಡಾನೆಗಳ ಹಾವಳಿ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಕೈಲಾದ ಕೆಲಸ ಮಾಡುತ್ತಿದೆ. ಮೂಡಿಗೆರೆ ಭಾಗದಲ್ಲಿ ಆನೆ ಕಾರ್ಯಪಡೆ ಆರಂಭಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಜನರ ಪ್ರಾಣಕ್ಕೆ ಕುತ್ತು ತರುವ ಆನೆಗಳನ್ನು ಗುರುತಿಸಿ ಅಂತಹ ಆನೆಗಳನ್ನು ಸ್ಥಳಾಂತರ ಮಾಡಲು ಸಾಕಾನೆಗಳನ್ನು ಬಳಸಿಕೊಂಡು ಸೆರೆ ಹಿಡಿಯಲು ಶ್ರಮಿಸುತ್ತಿದೆ. ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಿ ಆನೆಗಳು ಸಂಚರಿಸುವ ಮಾರ್ಗಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವನ್ನೂ ಇಲಾಖಾಧಿಕಾರಿಗಳು, ಸಿಬ್ಬಂದಿ ಮಾಡುತ್ತಿದ್ದಾರೆ.

Update: 2024-02-05 05:32 GMT

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚುತ್ತಿದ್ದು, ಪ್ರಾಣ ಹಾನಿ, ಬೆಳೆ ನಷ್ಟಕ್ಕೆ ಕೊನೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಳೆದೊಂದು ವಾರದಿಂದ ತಾಲೂಕಿನ ಅಂಬಳೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಕಾಫಿ ತೋಟ ಸೇರಿದಂತೆ ಹೊಲ ಗದ್ದೆಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಗುಂಪು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿವೆ. ಕಾಡಾನೆಗಳ ಹಾವಳಿ ಸದ್ಯ ಮಲೆನಾಡಿನ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿರುವುದು ಒಂದೆಡೆಯಾದರೆ, ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಲಾರಂಭಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ, ನರಸಿಂಹರಾಜಪುರದಂತಹ ತಾಲೂಕುಗಳು ದಟ್ಟ ಅರಣ್ಯ ಹಾಗೂ ಅಭಯಾರಣ್ಯಗಳಿಗೆ ಹೊಂದಿಕೊಂಡಿರುವ ತಾಲೂಕುಗಳಾಗಿವೆ. ದಟ್ಟ ಕಾಡುಗಳಲ್ಲಿರುವ ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ಆಹಾರ ಅರಸಿ ನಾಡಿಗೆ ದಾಂಗುಡಿ ಇಡುತ್ತಿವೆ. ಪರಿಣಾಮ ಕಾಡಂಚಿನ ಗ್ರಾಮಗಳಲ್ಲಿ ಕಾಫಿ, ಅಡಿಕೆ ತೋಟ, ಭತ್ತದ ಗದ್ದೆಗಳು ನಾಶವಾಗುತ್ತಿವೆ. ಇಡೀ ವರ್ಷ ರೈತರು ಬೆವರು ಸುರಿಸಿ ದುಡಿದ ಬೆಳೆಗಳು ಕಾಡಾನೆಗಳ ಕೆಲ ಹೊತ್ತಿನ ದಾಳಿಯಿಂದಾಗಿ ಮಣ್ಣು ಪಾಲಾಗುತ್ತಿವೆ.

ಕಳೆದ 10 ವರ್ಷಗಳಲ್ಲಿ ಕಾಫಿನಾಡಿನಲ್ಲಿ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳು ಕಾಡಾನೆಗಳ ಹಾವಳಿಯಿಂದ ನಾಶವಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ.

ಇದರೊಂದಿಗೆ ಕಳೆದ 10 ವರ್ಷಗಳಲ್ಲಿ ಕಾಫಿನಾಡಿನಲ್ಲಿ 30ಕ್ಕೂ ಹೆಚ್ಚು ರೈತರು, ಕಾರ್ಮಿಕರು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ದಾಳಿಯಿಂದ ಸಾವಿಗೀಡಾಗಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕೈಲಾದ ಪ್ರಯತ್ನಗಳನ್ನು ಮಾಡುತ್ತಿದ್ದರೂ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಸದ್ಯ ಕಾಫಿನಾಡಿನಲ್ಲಿದೆ.

ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿ ವ್ಯಾಪ್ತಿಯ ಕೆ.ಆರ್.ಪೇಟೆ ಗ್ರಾಮದ ಸುತ್ತಮುತ್ತ ಕಳೆದೊಂದು ವಾರದ ಹಿಂದೆ ಸಕಲೇಶಪುರ, ಬೇಲೂರು ಮಾರ್ಗವಾಗಿ ಆಗಮಿಸಿರುವ ಬೀಟಮ್ಮ ಹೆಸರಿನ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಆಹಾರಕ್ಕಾಗಿ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಚರಿಸುತ್ತ ಗ್ರಾಮೀಣ ಭಾಗದ ಜನರು, ರೈತರಲ್ಲಿ ಆತಂಕಕ್ಕೆ ಕಾರಣವಾಗಿವೆ. ಮೂರು ದಿನಗಳ ಹಿಂದೆ ಚಿಕ್ಕಮಗಳೂರು ನಗರ ಸಮೀಪದ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಈ ಕಾಡಾನೆಗಳ ಗುಂಪು ನಗರಕ್ಕೂ ನುಗ್ಗುವ ಭೀತಿ ಮೂಡಿಸಿದ್ದವು. ಆದರೆ ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಗಲಿರುಳು ಶ್ರಮಿಸಿ ಈ ಕಾಡಾನೆಗಳ ಗುಂಪನ್ನು ನಗರದತ್ತ ಬಾರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಈ ಆನೆಗಳ ಗುಂಪು ಇನ್ನೂ ಕಾಡಿಗೆ ಮರಳದೇ ತಾಲೂಕಿನ ತೋರಣಮಾವು ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದ್ದು, ಆ ಭಾಗದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಆನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ, ರಾಜ್ಯ ಸರಕಾರ ರಚನಾತ್ಮಕ ಯೋಜನೆಗಳನ್ನು ರೂಪಿಸದಿರುವುದು ಹಾವಳಿ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಈ ಹಿಂದೆ ಕಾಡಾನೆಗಳು ಸಂಚಾರ ಮಾಡುತ್ತಿದ್ದ ಆನೆಕಾರಿಡಾರ್‌ಗಳು ಇಂದು ಒತ್ತುವರಿದಾರರ ಪಾಲಾಗಿದ್ದು, ಅಲ್ಲಿ ಕಾಫಿ ತೋಟಗಳು ತಲೆ ಎತ್ತಿವೆ. ಇಂತಹ ಆನೆಕಾರಿಡಾರ್‌ಗಳನ್ನು ಗುರುತಿಸಿ, ಅಲ್ಲಿನ ಒತ್ತುವರಿಯನ್ನು ತೆರವು ಮಾಡಿದಲ್ಲಿ ಕಾಡಾನೆಗಳ ಹಾವಳಿಗೆ ಕೊನೆ ಹಾಡಬಹುದು ಎನ್ನುವುದು ರೈತ ಮುಖಂಡರು, ಸಾರ್ವಜನಿಕರ ಆಗ್ರಹವಾಗಿದೆ.

ಆನೆಕಾರಿಡಾರ್ ಗುರುತಿಸಿ ಆ ಭಾಗದಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಿಸಿ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಬೇಕು. ಆನೆ ಹಾವಳಿ ತೀವ್ರವಾಗಿರುವ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳನ್ನು ಬೇರೆಡೆಗೆ ಸ್ಥಳಂತರ ಮಾಡಬೇಕು. ಕಾಡಾನೆಗಳಿಗೆ ಅರಣ್ಯದಲ್ಲಿ ಆಹಾರ ಸಿಗುವಂತೆ ಮಾಡಲು ಹಣ್ಣಿನ ಮರಗಳನ್ನು ಕಾಡುಗಳಲ್ಲೇ ಬೆಳೆಸಬೇಕು. ಇದರಿಂದ ಕಾಡಾನೆಗಳ ಹಾವಳಿ ನಿಯಂತ್ರಣ ಸಾಧ್ಯ ಎಂದು ಈ ಭಾಗದ ರೈತ ಮುಖಂಡರು, ಕಾಫಿ ಬೆಳೆಗಾರರು, ಪರಿಸರವಾದಿಗಳು ಈ ಹಿಂದಿನಿಂದಲೂ ಆಗ್ರಹಿಸುತ್ತಿದ್ದಾರೆ.

ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತಿರುವ ಕಾಡಾನೆಗಳ ಭೀತಿಯಿಂದಾಗಿ ಹಗಲು ರಾತ್ರಿ ವೇಳೆ ಸಾರ್ವಜನಿಕರು, ರೈತರು, ಕಾರ್ಮಿಕರು ಪ್ರಾಣ ಭೀತಿಯಲ್ಲಿ ಸಂಚರಿಸುವಂತಾಗಿದೆ. ಕಾಡಾನೆಗಳ ಭೀತಿಯಿಂದ ಕಾರ್ಮಿಕರು ಕಾಫಿ ತೋಟಗಳತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಲೆನಾಡು ಭಾಗದಲ್ಲಿ ಕಾಫಿ ತೋಟಗಳಲ್ಲಿ ಕಾಫಿ ಕಟಾವು ಕೆಲಸಕ್ಕೆ ಕಾರ್ಮಿಕರು ಸಿಗದಂತಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನು ಕಾಡಾನೆಗಳು ಎಲ್ಲೆಂದರಲ್ಲಿ ಸಂಚರಿಸುತ್ತಿರುವುದರಿಂದ ಜಿಲ್ಲೆಯತ್ತ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ಕಾಡಾನೆಗಳ ಹಾವಳಿ ಜಿಲ್ಲೆಯ ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಸರಕಾರ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕಳೆದ ವರ್ಷ ಕಾಡಾನೆಗಳ ಹಾವಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ೮ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಂದಿಗೂ ಹಾವಳಿ ಮುಂದುವರಿದಿದ್ದು, ಕಾಫಿ, ಭತ್ತದಂತಹ ಬೆಳೆಗಳನ್ನು ಆನೆಗಳು ಹಾಳು ಮಾಡುತ್ತಿವೆ. ಆನೆಗಳ ಹಾವಳಿಯಿಂದಾಗಿ ಭಯದಿಂದ ಕಾಫಿ ಕಟಾವಿಗೆ ಕಾರ್ಮಿಕರು ಬರುತ್ತಿಲ್ಲ. ತೋಟಗಳ ಕೆಲಸ ನನೆಗುದಿಗೆ ಬಿದ್ದಿದೆ. ರೈತರು, ಗ್ರಾಮಸ್ಥರು ತೋಟಗಳಿಗೆ ಹೋಗಿ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆ.ಆರ್.ಪೇಟೆ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಗಳು ದಾಳಿ ನಡೆಸಿ ಭತ್ತದ ಬಣವೆಗಳನ್ನು ನಾಶ ಮಾಡಿವೆ. ಸಾವಿರಾರು ಕಾಫಿ ಗಿಡಗಳನ್ನು ಕಿತ್ತು ಹಾಕಿವೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಕಾಡಾನೆಗಳ ಹಾವಳಿ ಮಲೆನಾಡಿನ ರೈತರು ಹಾಗೂ ಗ್ರಾಮಸ್ಥರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಸರಕಾರ ರೂಪಿಸಬೇಕು.

-ಕುಮಾರ್, ಕಾಫಿಬೆಳೆಗಾರ, ಕೆ.ಆರ್.ಪೇಟೆ

ಮಲೆನಾಡಿನಲ್ಲಿ ಹಿಂದಿನಿಂದಲೂ ಕಾಡಾನೆಗಳ ಹಾವಳಿ ಇದೆ. ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿಲ್ಲ. ಆನೆಕಾರಿಡಾರ್‌ಗಳನ್ನು ಗುರುತಿಸಿ ಅಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಿಸಿದಲ್ಲಿ ಆನೆಗಳು ನಾಡಿನತ್ತ ಬರುವುದನ್ನು ತಪ್ಪಿಸಬಹುದು. ಈ ಸಂಬಂಧ ಕಳೆದ ಅನೇಕ ವರ್ಷಗಳಿಂದ ರಾಜಕಾರಣಿಗಳು, ಅರಣ್ಯ ಇಲಾಖೆ, ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಸರಕಾರದಿಂದ ಕೇವಲ ಭರವಸೆ ಸಿಗುತ್ತಿದೆಯೇ ಹೊರತು ಯಾವುದೇ ಯೋಜನೆ ರೂಪಿಸುತ್ತಿಲ್ಲ. ಆನೆಗಳು ಗ್ರಾಮಗಳಿಗೆ ದಾಳಿ ಮಾಡಿದಾಗ ಇಲಾಖೆ ಅಧಿಕಾರಿ, ಸಿಬ್ಬಂದಿ ಬಂದು ಓಡಿಸುತ್ತಾರೆ. ಈ ಆನೆಗಳು ಬೇರೆ ಗ್ರಾಮಗಳತ್ತ ತೆರಳಿ ಅಲ್ಲಿ ಹಾವಳಿ ನೀಡುತ್ತವೆ.

 -ಡಿ.ಮಹೇಶ್, ರೈತಸಂಘದ ಮುಖಂಡ


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಲ್.ಶಿವು

contributor

Similar News