ಹಳ್ಳಿ ಬದುಕಿನ ಸ್ಥಿತ್ಯಂತರಗಳು ಮತ್ತು ಬಿಕ್ಕಟ್ಟುಗಳು

ಇ-ಆಡಳಿತ ವ್ಯವಸ್ಥೆ ಜಾರಿಗೆ ಬಂದ ನಂತರ ಪ್ರತಿಯೊಬ್ಬ ಅಧಿಕಾರಿಯೂ ತನ್ನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಆನ್‌ಲೈನ್ ಮೂಲಕ ತಿಳಿಸುವ ವ್ಯವಸ್ಥೆ ರೂಪುಗೊಂಡಿದೆ. ಕಡತಗಳನ್ನು ಮಂಡಿಸುವ, ಅವುಗಳನ್ನು ಮೇಲಧಿಕಾರಿಗಳಿಗೆ ಕಳಿಸುವ, ಅವರಿಂದ ಬಂದ ಆಡಳಿತಾತ್ಮಕ ನಿರ್ದೇಶನದ ಹಿನ್ನೆಲೆಯಲ್ಲಿ ಮರುಮಂಡಿಸುವ ಮತ್ತು ಆದೇಶಗಳನ್ನು ತಯಾರು ಮಾಡಲಾಗುತ್ತಿದೆ. ಬಹುತೇಕ ಎಲ್ಲಾ ಆಡಳಿತಾತ್ಮಕ ಪ್ರಕ್ರಿಯೆಗಳು ಇ-ಆಡಳಿತ ವ್ಯವಸ್ಥೆಗಳು ಡಿಜಿಟಲೀಕರಣ ಸ್ವರೂಪ ಪಡೆದುಕೊಂಡಿದೆ.

Update: 2024-02-05 06:23 GMT

ಭಾಗ- 1

ಯುವ ರೈತರಿಗೆ ಬೇಕು ಸಂಗಾತಿ, ಹಳ್ಳಿವಾಸಿಗಳಿಗೆ ಹೆಣ್ಣು ಕೊಡುವವರಿಲ್ಲ ಎನ್ನುವ ಶೀರ್ಷಿಕೆಯಲ್ಲಿ ಜನವರಿ 14, 2024 ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ(ಒಳನೋಟ) ವರದಿಯೊಂದು ಪ್ರಕಟಗೊಂಡಿತು. ಈ ವಿಷಯದ ಮೇಲೆ ಸಂವಾದ ಮತ್ತು ಚರ್ಚೆಗಳನ್ನು ಪ್ರಾದೇಶಿಕ ಪತ್ರಿಕೆಗಳೂ ಸೇರಿದಂತೆ ಕೆಲವು ಮಾಧ್ಯಮಗಳು ಪ್ರಾರಂಭಿಸಿವೆ. ಹೀಗೆ ಹುಟ್ಟಿಕೊಂಡಿರುವ ಚರ್ಚೆಗಳು ರೈತ ಕುಟುಂಬದ ಯುವಕರಿಗೆ ಎದುರಾಗಿರುವ ವಧುಗಳ ಕೊರತೆಯೂ ಹಳ್ಳಿಗಾಡಿನಲ್ಲಿ ಸಾಮಾಜಿಕ ಸಮಸ್ಯೆಯಾಗಿದೆ ಎನ್ನುವ ಚರ್ಚೆಯನ್ನು ಮುನ್ನೆಲೆಗೆ ತಂದಿವೆ. ಇದು ಸಮಕಾಲೀನ ಸಂದರ್ಭದಲ್ಲಿ ಕೃಷಿ/ಗ್ರಾಮ ಸಮಾಜ ಎದುರಿಸುತ್ತಿರುವ ಗಂಡಾಂತರಗಳನ್ನು ಸೂಚಿಸುತ್ತದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಜ್ಞರು ಕೃಷಿಯನ್ನು ಘನತೆಯಿಂದ ನೋಡಬೇಕು; ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗಿರುವುದು, ಜಾತಿ-ಉಪಜಾತಿಗಳು ಮತ್ತು ವರ್ಗಗಳ ನಡುವೆ ವೈವಾಹಿಕ ಸಂಬಂಧಗಳಿಗೆ ನಾವು ಹೆಚ್ಚಿನ ಪ್ರಮಾಣದಲ್ಲಿ ತೆರೆದುಕೊಂಡಿಲ್ಲದಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಇದು ಮೇಲುನೋಟಕ್ಕೆ ಸರಿ ಎನ್ನಿಸಿದರೂ ಹೆಚ್ಚು ಸರಳೀಕೃತ ದೃಷ್ಟಿಕೋನವಾಗಿದೆ. ಏಕೆಂದರೆ, ಹಳ್ಳಿಯ ಯುವಕರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಮುಂದೆ ಬರುತ್ತಿಲ್ಲ ಎನ್ನುವ ವಿದ್ಯಮಾನವು ಹೆಚ್ಚು ಸಂಕೀರ್ಣವಾಗಿದ್ದು, ಬಹು ಆಯಾಮಗಳ ಸ್ವರೂಪವನ್ನು ಹೊಂದಿದೆ. ಈ ವಿದ್ಯಮಾನವನ್ನು ಬಹು ಆಯಾಮಗಳ ಅನುಸಂಧಾನಗಳ (ಮಲ್ಟಿಪಲ್ ಅಪ್ರೋಚ್) ಮೂಲಕವೇ ಅರ್ಥಮಾಡಿಕೊಳ್ಳಬೇಕಾಗಿದೆ.

ಕೃಷಿ ಸಮಾಜ ಎದುರಿಸುತ್ತಿರುವ ಗಂಡಾಂತರಗಳನ್ನು ಸಮಕಾಲೀನ ಅನುಭವಗಳ ಆಧಾರದಲ್ಲಿ ಅರ್ಥಮಾಡಿಕೊಳ್ಳುವುದು ಅಗತ್ಯ. ಸಾಮಾಜಿಕ ವಿದ್ಯಮಾನಗಳನ್ನು ಗ್ರಹಿಸುವಾಗ, ಅರ್ಥಮಾಡಿಕೊಳ್ಳುವಾಗ ನಾವು ವಸ್ತುನಿಷ್ಠವಾಗಿರುವಾಗಲೇ ವ್ಯಕ್ತಿನಿಷ್ಠ ಜೀವನಾನುಭವಗಳಿಗೆ ತೆರೆದುಕೊಳ್ಳುತ್ತೇವೆ. ಅಂದರೆ ವಾಸ್ತವಿಕತೆಯನ್ನು ವಸ್ತುನಿಷ್ಠವಾಗಿ ನೋಡುವಾಗಲೇ ನಾವು ವ್ಯಕ್ತಿನಿಷ್ಠ ಅನುಭವಗಳಿಗೆ ಒಳಪಡುತ್ತೇವೆ. ಅನುಭವಗಳ ಆಧಾರದಲ್ಲಿ ಸಾಮಾಜಿಕ ರಚನೆಯಿಂದ ರೂಪುಗೊಳ್ಳುವ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಹಳ್ಳಿಯ ಯುವಕರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಏಕೆ ಮುಂದೆ ಬರುತ್ತಿಲ್ಲ? ಇದಕ್ಕೆ ಕೃಷಿಯಲ್ಲಿ ಉಂಟಾಗಿರುವ ಸ್ಥಿತ್ಯಂತರಗಳು ಎಷ್ಟರಮಟ್ಟಿಗೆ ಕಾರಣವಾಗಿವೆ? ಉದ್ಯೋಗ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಸ್ಥಿತ್ಯಂತರಗಳು ಎಷ್ಟರಮಟ್ಟಿಗೆ ಕಾರಣವಾಗಿವೆ? ಅಭಿವೃದ್ಧಿ ನೀತಿಗಳು ಎಷ್ಟರಮಟ್ಟಿಗೆ ಕಾರಣವಾಗಿವೆ? ಇದಕ್ಕೆ ರಚನೆಯಲ್ಲಿ ಇರುವ ಅಸಮಾನತೆಗಳು ಹೇಗೆ ಕಾರಣವಾಗಿವೆ? ಇನ್ನೂ ಮುಂತಾದ ಪ್ರಶ್ನೆಗಳ ಮೂಲಕ ಹಳ್ಳಿವಾಸಿಗಳಿಗೆ ಹೆಣ್ಣು ಕೊಡುವವರಿಲ್ಲ ಎನ್ನುವ ವಿದ್ಯಮಾನವನ್ನು ಕೃಷಿಸಮಾಜದ ದುಡಿಮೆ ಮತ್ತು ಆರ್ಥಿಕ ಸ್ವರೂಪದಲ್ಲಿ ಉಂಟಾಗಿರುವ ಸ್ಥಿತ್ಯಂತರಗಳ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದು ಈ ಲೇಖನದ ಆಶಯವಾಗಿದೆ.

ಮೊದಲಿಗೆ ಕೃಷಿಸಮಾಜದ ದುಡಿಮೆಯ ಸ್ವರೂಪದಲ್ಲಿ ಉಂಟಾಗಿರುವ ಸ್ಥಿತ್ಯಂತರಗಳನ್ನು ನೋಡೋಣ. ಡಿಜಿಟಲ್ ತಂತ್ರಜ್ಞಾನವು ನಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿನ ಬಹು ಆಯಾಮಗಳನ್ನು ಮರುರೂಪಿಸುವ, ನಿಯಂತ್ರಿಸುವ, ನಿರ್ದೇಶಿಸುವ ಕೆಲಸ ಮಾಡುತ್ತಿದೆ. ಡಿಜಿಟಲ್ ತಂತ್ರಜ್ಞಾನವು ನಮ್ಮನ್ನು ಹಿಂದಿಗಿಂತಲೂ ಹೆಚ್ಚು ಬುದ್ಧಿವಂತರನ್ನಾಗಿ, ತಿಳಿದವರನ್ನಾಗಿ, ಶ್ರೀಮಂತರನ್ನಾಗಿ ಮತ್ತು ಸಂತೋಷಿಗಳನ್ನಾಗಿ ಮಾಡಿದೆ. ಇದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಮನುಷ್ಯನ ಸಾಧ್ಯತೆಗಳನ್ನು ಎಲ್ಲಾ ಬಗೆಯ ತಂತ್ರಜ್ಞಾನಗಳು ವಿಸ್ತರಿಸಿವೆ. ಜೊತೆಗೆ, ಹೊಸ ಹೊಸ ಅವಕಾಶಗಳನ್ನು, ಹೆಚ್ಚು ಶ್ರಮವಿಲ್ಲದ ದುಡಿಮೆಯ ಸಾಧ್ಯತೆಗಳನ್ನು ಸಹ ಸೃಷ್ಟಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನ ನೀಡಿದ ಅವಕಾಶವನ್ನು ಬಳಸಿಕೊಂಡು ಗಳಿಸಿಕೊಂಡಿರುವ ನಾವು, ವೈಯಕ್ತಿಕ ಸ್ವಾತಂತ್ರ್ಯ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಡುತ್ತಿದ್ದೇವೆ. ಹಾಗೆಯೇ ಜೀವನದ ಕೆಲವು ಮೂಲಭೂತ ಜವಾಬ್ದಾರಿಗಳನ್ನೇ ಕೈಬಿಡುವ ಸ್ಥಿತಿಗೆ ತಲುಪಿಬಿಟ್ಟಿದ್ದೇವೆ. ಅದರಲ್ಲಿಯೂ ಕೃತಕ ಬುದ್ಧಿವಂತಿಕೆ(ಅ್ಟಠಿಜ್ಛಿಜ್ಚಿಜಿಚ್ಝ ಜ್ಞಿಠಿಛ್ಝ್ಝಿಜಿಜಛ್ಞ್ಚಿಛಿ)ತಂತ್ರಜ್ಞಾನಗಳ ಪರಿಣಾಮವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ವಿಸ್ತೃತವಾದ ಬದಲಾವಣೆಗಳು ಮತ್ತು ಸ್ಥಿತ್ಯಂತರಗಳು ಉಂಟಾಗುತ್ತಿವೆ. ಒಂದು ಕಡೆ ಉದ್ಯೋಗ ಅವಕಾಶಗಳು ಕುಗ್ಗುತ್ತಿವೆ. ಮತ್ತೊಂದು ಕಡೆ ಕೌಶಲ್ಯ ಆಧಾರಿತ ಉದ್ಯೋಗಗಳು ವಿಸ್ತರಣೆಯಾಗುತ್ತಿವೆ ಎಂದು ಹೇಳುತ್ತಿದ್ದೇವೆ. ಇದಕ್ಕೆ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ ದೊಡ್ಡಮಟ್ಟದ ಆವಿಷ್ಕಾರಗಳು ಕಾರಣವಾಗಿವೆ. ಇದನ್ನು ಒಂದು ನಿದರ್ಶನದ ಮೂಲಕ ನೋಡಬಹುದು.

ಈ ಮೊದಲು ನಮ್ಮ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚು ಶ್ರಮ ಆಧಾರಿತವಾಗಿತ್ತು. ನಾಟಿಮಾಡುವುದು, ಕಳೆಕೀಳುವುದು, ಬೆಳೆಯ ಕಟಾವು, ಒಕ್ಕಣೆ ಮತ್ತು ಸುಗ್ಗಿ ಕಾಲದಲ್ಲಿ ಮಾನವ ಶ್ರಮ ಹೆಚ್ಚು ಬಳಕೆಯಾಗುತ್ತಿತ್ತು. ಈ ರೀತಿಯ ಶ್ರಮದಾಯಕ ಕೆಲಸಗಳಿಂದ ಕೃಷಿ ಸಮಾಜದಲ್ಲಿಯೇ ಇರುವ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ ಹಾಗೂ ಭೂರಹಿತ ಕೃಷಿ ಕಾರ್ಮಿಕರಿಗೆ ಸ್ಥಳೀಯವಾಗಿ ದುಡಿಯುವ ಅವಕಾಶಗಳು ದೊರಕುತ್ತಿದ್ದವು. ಈಗ ನಾಟಿ, ಕಟಾವು, ಒಕ್ಕಣೆ, ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆಯು ಸೇರಿದಂತೆ ಬಹುತೇಕ ಎಲ್ಲಾ ಕೃಷಿ ಚಟುವಟಿಕೆಗಳು ಯಾಂತ್ರೀಕೃತವಾಗಿವೆ. ಕೃಷಿ ಚಟುವಟಿಕೆಗೆ ಬಳಸಲಾಗುತ್ತಿದ್ದ ಎತ್ತಿನ ಗಾಡಿ, ಮರದ ನೇಗಿಲು, ಕುಂಟೆ, ಕೂರಿಗೆ, ಹಲುಬೆ, ಇನ್ನೂ ಮುಂತಾದ ಪಾರಂಪರಿಕ ಕೃಷಿ ಉಪಕರಣಗಳು ಮತ್ತು ಪರಿಕರಗಳು ಕಾಣದಾಗಿವೆ. ಗ್ರಾಮೀಣ ಸುರ್ತಿಗಳಿಗೆ/ಕೌಶಲಗಳಿಗೆ ಕೆಲಸವಿಲ್ಲದಂತಾಗಿದೆ. ಮರದ ಕೃಷಿ ಸಲಕರಣೆಗೆ ಬದಲಾಗಿ ಕಬ್ಬಿಣದ ಕೃಷಿ ಸಲಕರಣೆಗಳು ಮತ್ತು ಉಪಕರಣಗಳು ಬಂದಿವೆ. ಆಧುನಿಕ ತಂತ್ರಜ್ಞಾನವನ್ನು ಸ್ವಲ್ಪಮಟ್ಟಿಗೆ ತಿಳಿದಿರುವ ಮತ್ತು ತರಬೇತಿ ಪಡೆದಿರುವವರು ವೆಲ್ಡಿಂಗ್ ಶಾಪ್ ಮತ್ತು ಚಿಕ್ಕ ಪುಟ್ಟ ಫೌಂಡ್ರಿಗಳ ಮೂಲಕ ಕಬ್ಬಿಣದ ಕೃಷಿ ಸಲಕರಣೆಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದಾರೆ. ಕಬ್ಬಿಣದ ಕೃಷಿ ಸಲಕರಣೆಗಳ ಬೆಲೆ ಕಡಿಮೆ. ಇವುಗಳ ಬಾಳಿಕೆ ಹೆಚ್ಚು ದೀರ್ಘಕಾಲಿಕ. ಈ ಕಾರಣಕ್ಕಾಗಿ ಬಹುತೇಕರು ಕಬ್ಬಿಣದ ಕೃಷಿ ಸಲಕರಣೆಗಳನ್ನು ಬಳಸುತ್ತಿದ್ದಾರೆ. ಈ ಬೆಳವಣಿಗೆಯಿಂದ ಕೃಷಿ ಸಮಾಜದ ಪಾರಂಪರಿಕ ಜ್ಞಾನ ಮತ್ತು ವೃತ್ತಿ ಆಧಾರಿತ ಕೌಶಲ್ಯಗಳು ನಿಧಾನವಾಗಿ ನೆಲೆ ಕಳೆದುಕೊಳ್ಳುತ್ತಿವೆ.

ಇದರ ಪರಿಣಾಮವಾಗಿ ನಮ್ಮ ಪರಿಸರದಲ್ಲಿ ಈಗ ಎತ್ತಿನಗಾಡಿ ಕಾಣುಸಿಗುತ್ತಿಲ್ಲ. ಎತ್ತಿನಗಾಡಿಯನ್ನು ಟ್ಯಾಕ್ಟರ್, ಟಿಲ್ಲರ್, ಏಸ್, ಆಟೊಗಳು ಸೇರಿದಂತೆ ಇನ್ನೂ ಮುಂತಾದ ಚಿಕ್ಕಪುಟ್ಟ ವಾಹನಗಳು ಆಕ್ರಮಣ ಮಾಡಿವೆ. ಇವುಗಳ ರಿಪೇರಿಯನ್ನು ತಾಂತ್ರಿಕ ಶಿಕ್ಷಣವಿಲ್ಲದೇ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮೊದಲು ಸ್ಥಳೀಯ ವರ್ಕ್ ಶಾಪ್‌ಗಳಲ್ಲಿಯೇ ವಾಹನಗಳ ರಿಪೇರಿ ಮಾಡಲಾಗುತ್ತಿತ್ತು. ಆದರೆ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ತಂತ್ರಜ್ಞಾನದಲ್ಲಿ ಉಂಟಾಗಿರುವ ಬಹುದೊಡ್ಡ ಬದಲಾವಣೆ ಸ್ಥಳೀಯವಾಗಿ ಹೊಸ ವಾಹನಗಳನ್ನು ರಿಪೇರಿ ಮಾಡಲಾಗದಂತೆ ರೂಪಿಸಲಾಗಿದೆ. ಇದು ಬೃಹತ್ ಬಂಡವಾಳಶಾಹಿ ವ್ಯವಸ್ಥೆಯು ಹೊಸ ವಾಹನಕ್ಕೆ ನೀಡುವ ವಾರಂಟಿ ರಾಜಕಾರಣದ ಕಾರ್ಯತಂತ್ರವಾಗಿದೆ. ಇದನ್ನು ಇಲ್ಲಿ ಹೆಚ್ಚು ಚರ್ಚೆ ಮಾಡುವುದಿಲ್ಲ. ಅಷ್ಟು ಮಾತ್ರವಲ್ಲ ಈಗ ಸಾಮಾನ್ಯ ವೃತ್ತಿಯಾಗಿ ಟೈಯರ್ ಪಂಚರ್ ಹಾಕುವ ಕೆಲಸವು ಇಲ್ಲವಾಗಿದೆ. ಸೈಕಲ್ ರಿಪೇರಿ ಇಲ್ಲವಾಗಿದೆ. ಒಬ್ಬ ಸ್ಥಳೀಯ ಮೆಕ್ಯಾನಿಕ್ ತನ್ನ ಅನುಭವದ ಹಿನ್ನೆಲೆಯಲ್ಲಿ ರಿಪೇರಿಗೆ ನೀಡುವ ಸಲಹೆಗಳಿಗಿಂತಲೂ ಒಂದು ಇಲೆಕ್ಟ್ರಾನಿಕ್ ಡಿವೈಸ್ ನೀಡುವ ಸಲಹೆ ಮುಖ್ಯವಾಗಿದೆ. ಸಮಕಾಲೀನ ಹೊಸ ಡಿಜಿಟಲ್ ಆಟೋಮೊಬೈಲ್ ತಂತ್ರಜ್ಞಾನದಲ್ಲಿ ರಿಪೇರಿಗಿಂತ ರಿಪ್ಲೇಸ್‌ಮೆಂಟ್ ಆದ್ಯತೆ ನೀಡುತ್ತಿದೆ. ಇದು ಸ್ಥಳೀಯ ಸಣ್ಣಪುಟ್ಟ ವರ್ಕ್‌ಶಾಪ್‌ಗಳು ಕೆಲಸವಿಲ್ಲದೆ ನಶಿಸುವಂತೆ ಮಾಡುತ್ತಿದೆ. ಜೊತೆಗೆ ವಾಹನಗಳನ್ನು ಬಿಚ್ಚುವ ಮತ್ತು ಜೋಡಿಸುವ ಕೆಲಸವು ಬಹುತೇಕ ಯಾಂತ್ರಿಕೃತವಾಗಿದೆ. ಇದು ಸಮಯದ ಉಳಿತಾಯವನ್ನು ಮಾಡುತ್ತದೆ. ಗುಣಮಟ್ಟದ ಖಾತರಿಯನ್ನು ನೀಡುತ್ತದೆ ಎಂದು ಆಟೋಮೊಬೈಲ್ ಮಾರುಕಟ್ಟೆ ಪ್ರತಿಪಾದಿಸುತ್ತದೆ.

ಹೀಗಾಗಿ ಸಣ್ಣ ಬೈಕ್ ರಿಪೇರಿಯಿಂದ ಹಿಡಿದು ಬೃಹತ್ ಗಾತ್ರದ ಯಂತ್ರಗಳ ರಿಪೇರಿಯೂ ಸ್ಥಳೀಯ ಮೆಕ್ಯಾನಿಕ್‌ಗಳಿಗೆ ಬದಲಾಗಿ, ಬಂಡವಾಳಶಾಹಿಗಳ ಕಂಪೆನಿ ವಾಹನ ಶೋರೂಮ್‌ಗಳನ್ನು ಅವಲಂಬಿಸುವ ಪರಿಸ್ಥಿತಿ ನಿಮಾರ್ಣವಾಗಿದೆ. ವಾಹನಗಳು ಮತ್ತು ಬೈಕ್ ರಿಪೇರಿ ಮಾಡುವವರು ಸಹ ಹೊಸ ತಂತ್ರಜ್ಞಾನಗಳನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಈ ವಾಹನಗಳ ರಿಪೇರಿಗೆ ಅಗತ್ಯವಾಗಿ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಮತ್ತು ಲ್ಯಾಪ್‌ಟಾಪ್‌ಗಳನ್ನು ಬಳಸಲೇಬೇಕಾದ ಪರಿಸ್ಥಿತಿಯಲ್ಲಿ ನಾವು ಇದ್ದೇವೆ. ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ ಹೊಸ ಹೊಸ ಆವಿಷ್ಕಾರಗಳ ಜ್ಞಾನವನ್ನು ಮತ್ತು ಅವುಗಳನ್ನು ಬಳಸುವ ಕೌಶಲ್ಯವನ್ನು ಪಡೆದುಕೊಳ್ಳಲೇಬೇಕಾಗಿದೆ. ಇಲ್ಲದೇ ಇದ್ದರೆ ವಾಹನ ರಿಪೇರಿ ಮಾಡುವ ವೃತ್ತಿಯನ್ನು ಅವಲಂಬಿಸಿದವರು ದುಡಿಯುವ ಅವಕಾಶವನ್ನು ಕಳೆದುಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ದುಡಿಯುವ ಅವಕಾಶಗಳನ್ನು ಸೃಷ್ಟಿಕೊಳ್ಳಬೇಕೆಂದರೆ, ನಮ್ಮ ಕಲಿಕೆ ಮತ್ತು ಕೌಶಲ್ಯವನ್ನು ಹೊಸ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಪೂರಕವಾಗಿ ಹೆಚ್ಚಿಸಿಕೊಳ್ಳಬೇಕಾಗಿದೆ. ಆದರೆ ನಮ್ಮ ಕೃಷಿ ಸಮಾಜದಲ್ಲಿ ರಿಪೇರಿ ಕೆಲಸಗಳನ್ನು ಮಾಡುತ್ತಿರುವವರು ಶಾಲೆಗಳನ್ನು ಮಧ್ಯದಲ್ಲಿಯೇ ಬಿಟ್ಟವರು, ಚಿಕ್ಕ ವಯಸಿನಲ್ಲಿ ಹೊಟ್ಟೆಪಾಡಿಗೆ ಈ ಕೆಲಸ ಮಾಡಲು ಪ್ರಾರಂಭಿಸಿದವರು. ಈ ಕೌಶಲವು ಅನುಭವದಿಂದ ಬಂದದ್ದು. ಡಿಜಿಟಲ್ ತಂತ್ರಜ್ಞಾನವು ಇಂತಹವರ ಉದ್ಯೋಗಾವಕಾಶಗಳನ್ನು ಹಿಗ್ಗಿಸುವುದಕ್ಕಿಂತಲೂ ಕುಗ್ಗಿಸುವ ಕಾರ್ಯತಂತ್ರವನ್ನು ತನ್ನೊಳಗಡೆ ಹೊಂದಿದೆ. ಇದು ಜಾಗತಿಕ ಬಂಡವಾಳಶಾಹಿ ಆಟೋಮೊಬೈಲ್ ಇಂಡಸ್ಟ್ರಿಗಳ ರಾಜಕೀಯ ಆರ್ಥಿಕತೆಯಾಗಿದೆ. ಅಂದರೆ ಎಷ್ಟು ಸಾಧ್ಯವೊ ಅಷ್ಟು ಮಾನವ ಶ್ರಮವನ್ನು ಕಡಿಮೆ ಮಾಡುವುದು. ಲಾಭವನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಕೋನದಲ್ಲಿ ಕೃತಕ ಬುದ್ಧಿವಂತಿಕೆಯನ್ನು ಬಳಸುವುದು.

ಇನ್ನ್ನು ಇ-ಆಡಳಿತ ವ್ಯವಸ್ಥೆ ಜಾರಿಗೆ ಬಂದ ನಂತರ ಪ್ರತಿಯೊಬ್ಬ ಅಧಿಕಾರಿಯೂ ತನ್ನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಆನ್‌ಲೈನ್ ಮೂಲಕ ತಿಳಿಸುವ ವ್ಯವಸ್ಥೆ ರೂಪುಗೊಂಡಿದೆ. ಕಡತಗಳನ್ನು ಮಂಡಿಸುವ, ಅವುಗಳನ್ನು ಮೇಲಧಿಕಾರಿಗಳಿಗೆ ಕಳಿಸುವ, ಅವರಿಂದ ಬಂದ ಆಡಳಿತಾತ್ಮಕ ನಿರ್ದೇಶನದ ಹಿನ್ನೆಲೆಯಲ್ಲಿ ಮರುಮಂಡಿಸುವ ಮತ್ತು ಆದೇಶಗಳನ್ನು ತಯಾರು ಮಾಡಲಾಗುತ್ತಿದೆ. ಬಹುತೇಕ ಎಲ್ಲಾ ಆಡಳಿತಾತ್ಮಕ ಪ್ರಕ್ರಿಯೆಗಳು ಇ-ಆಡಳಿತ ವ್ಯವಸ್ಥೆಗಳು ಡಿಜಿಟಲೀಕರಣ ಸ್ವರೂಪ ಪಡೆದುಕೊಂಡಿದೆ. ಇದುವರೆಗೆ ಒಂದು ಹಂತದ ಶಿಕ್ಷಣದ ನಂತರ ಅಥವಾ ಪದವಿಗಳನ್ನು ಪಡೆದ ನಂತರ ಕಚೇರಿ ಸಹಾಯಕರ ಹುದ್ದೆಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಗುಮಾಸ್ತ ಅಥವಾ ಕ್ಲರಿಕಲ್ ಪೋಸ್ಟ್ ಸಹ ಇಲ್ಲದಂತೆ ಇ-ಆಡಳಿತ ಮಾಡುತ್ತಿದೆ.

ಈ ರೀತಿಯ ದುಡಿಮೆಯ ಸ್ವರೂಪದಲ್ಲಿನ ಸ್ಥಿತ್ಯಂತರ ಕೃಷಿ ಚಟುವಟಿಕೆಗಳು, ವಾಹನ ರಿಪೇರಿ, ಕ್ಲೆರಿಕಲ್ ಪೋಸ್ಟ್‌ಗಳಲ್ಲಿ ಮಾತ್ರ ಉಂಟಾಗಿಲ್ಲ. ಮಾರುಕಟ್ಟೆಗಳು ಆನ್‌ಲೈನ್ ಮಾರುಕಟ್ಟೆಗಳಾಗಿ ರೂಪಾಂತರವಾದರೆ, ಬ್ಯಾಂಕ್‌ಗಳ ಕಾರ್ಯಚಟುವಟಿಕೆಗಳು ಆನ್‌ಲೈನ್ ಮತ್ತು ಇ-ಕಾಮರ್ಸ್ ಸ್ವರೂಪ ಪಡೆದುಕೊಂಡಿವೆ. ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಆರೋಗ್ಯ ಸೇವೆಗಳು, ಪಡಿತರ ಸೇವೆಗಳು, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳು, ವಸತಿ ಯೊಜನೆಗಳು, ಬೆಳೆ ಸಮೀಕ್ಷೆ, ಭೂ ಸಮೀಕ್ಷೆ, ಬರ ಸಮೀಕ್ಷೆ, ಪ್ರವಾಹ ಸಮೀಕ್ಷೆ, ಸ್ವಾಭಾವಿಕ ಸಂಪನ್ಮೂಲಗಳ ಸಮೀಕ್ಷೆ, ಪ್ರಕೃತಿ ವಿಕೋಪಗಳ ಮುನ್ಸೂಚನೆಗಳಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತಿದೆ. ಹೀಗೆ ಬಹುತೇಕ ಯೋಜನೆಗಳು ಇ-ಆಡಳಿತ ಪ್ರಕ್ರಿಯೆಗೆ ಒಳಪಟ್ಟಿದೆ.

(ಮುಂದುವರಿಯುವುದು)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಎಚ್.ಡಿ.ಪ್ರಶಾಂತ್

contributor

Similar News