'ವಂದೇ ಭಾರತ್ ರೈಲು' ಪ್ರಯಾಣ ಬಡವರಿಗಲ್ಲ..!

Update: 2024-05-07 05:19 GMT

ಬೆಂಗಳೂರು: ಇತ್ತೀಚೆಗೆ ಕೇಂದ್ರ ಬಿಜೆಪಿ ಸರಕಾರ ಜಾರಿಗೊಳಿಸಿರುವ ‘ವಂದೇ ಭಾರತ್ ರೈಲು’ ಪ್ರಯಾಣ ವೆಚ್ಚ ದುಬಾರಿಯಾಗಿದ್ದು, ಬಡವರು, ಕೂಲಿ ಕಾರ್ಮಿಕರು, ರೈತರು, ಜನಸಾಮಾನ್ಯರು ಈ ರೈಲಿನಲ್ಲಿ ಪ್ರಯಾಣಿಸಲು ಪರದಾಡುವಂತಾಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಅಂದರೆ ಮಾರ್ಚ್ 15ರಿಂದ ಬೆಂಗಳೂರು ಮತ್ತು ಕಲಬುರಗಿಗೆ ‘ವಂದೇ ಭಾರತ್ ರೈಲು’ ಸಂಚಾರ ಆರಂಭವಾಗಿದೆ. ರೈಲ್ವೆ ಎಂದರೆ ಕೂಲಿ ಕಾರ್ಮಿಕರು, ರೈತರು, ಸಾಮಾನ್ಯ ಬಡಜನರು ಕಡಿಮೆ ದರದಲ್ಲಿ ಪ್ರಯಾಣ ಮಾಡುವ ಸಾರಿಗೆ ವ್ಯವಸ್ತೆಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರೈಲಿನಲ್ಲಿರುವ ಮೀಸಲು ಆಸನ ಇತ್ಯಾದಿಗಳಿಂದ ಪ್ರಯಾಣ ವೆಚ್ಚವು ಹೆಚ್ಚಾಗಿದೆ. ಎಲ್ಲ ರೈಲುಗಳಿಗಿಂತ ‘ವಂದೇ ಭಾರತ್ ರೈಲು’ ಪ್ರಯಾಣ ಅಧಿಕ ವೆಚ್ಚದಿಂದ ಕೂಡಿದ್ದು, ಬಡವರು ಅದರಲ್ಲಿ ಪ್ರಯಾಣಿಸದಂತ ಸ್ಥಿತಿ ನಿರ್ಮಾಣವಾಗಿದೆ.

ಒಂದು ಕಡೆ ಪ್ರಯಾಣ ವೆಚ್ಚ ಹೆಚ್ಚಾಗಿರುವುದಲ್ಲದೇ ರೈಲು ಸಂಚಾರದ ಸಮಯವೂ ಸಾಮಾನ್ಯಜನರ ಪ್ರಯಾಣಕ್ಕೆ ಅಡ್ಡಿಪಡಿಸಿದೆ. ವಂದೇ ಭಾರತ್ ರೈಲು ಗುರುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೈಯಪ್ಪನಹಳ್ಳಿಯಿಂದ 2:40ಕ್ಕೆ ಹೊರಟು ಕಲಬುರಗಿಗೆ ರಾತ್ರಿ 11:30ಕ್ಕೆ ತಲುಪುತ್ತದೆ. ಬೆಂಗಳೂರು ಮತ್ತು ಕಲಬುರಗಿ ಕಡೆ ಪ್ರಯಾಣ ಬೆಳೆಸುವ ಬಹುತೇಕ ಜನರು ಕೂಲಿ ಕಾರ್ಮಿಕರೇ ಆಗಿದ್ದು, ಬೆಳಗ್ಗೆಯಿಂದ ಸಂಜೆಯ ತನಕ ಕೆಲಸ ಮಾಡಿ ರಾತ್ರಿ ಊರಿಗೆ ಹೋಗುವ ಯೋಜನೆ ಹಾಕಿಕೊಂಡಿರುತ್ತಾರೆ. ಆದ್ದರಿಂದ ಮಧ್ಯಾಹ್ನ ಯಾವೊಬ್ಬ ಕೂಲಿ ಕಾರ್ಮಿಕರು ವಂದೇ ಭಾರತ್ ರೈಲು ಹತ್ತುವುದಿಲ್ಲ.

ಇನ್ನು ಪ್ರಯಾಣ ದರದ ವಿಚಾರಕ್ಕೆ ಬರುವುದಾದರೆ ಉಪಹಾರ ಸೇರಿ ಬೈಯಪ್ಪನಹಳ್ಳಿ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಕಲಬುರಗಿಯ ವರೆಗಿನ ಚೇರ್‌ಕಾರ್ (ಸಿಸಿ) ಪ್ರಯಾಣಕ್ಕೆ 1,465ರೂ., ಎಕ್ಸಿಕ್ಯೂಟಿವ್ ಚೇರ್ ಕಾರ್ (ಇಸಿ) ಪ್ರಯಾಣಕ್ಕೆ 369ರೂ. ಕ್ಯಾಟರಿಂಗ್, ಇತರೆ ಶುಲ್ಕ ಸೇರಿ ಒಟ್ಟು 2,700 ರೂ. ನಿಗದಿಪಡಿಸಲಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಯಲಹಂಕ ವರೆಗಿನ 18ಕಿ.ಮೀ. ಚೇರ್ ಕಾರ್ (ಸಿಸಿ) ಪ್ರಯಾಣಕ್ಕೆ 705ರೂ. ನಿಗದಿ ಮಾಡಲಾಗಿದೆ. ಈ ದರವು ಕೆಲವು ದಿನಗಳ ಹಿಂದೆ ಇದ್ದ ವಿಮಾನ ಪ್ರಯಾಣ ದರಕ್ಕೆ ಹತ್ತಿರವಾಗಿದೆ.

ಈ ರೈಲನ್ನು ಉಳ್ಳವರಿಗಾಗಿ ಮತ್ತು ಕರ್ನಾಟಕದ ಜನರಿಂದ ಹಣ ಕಿತ್ತಿಕೊಳ್ಳಲು ಮೋದಿ ಸರಕಾರ ರೂಪಿಸಿದ ಯೋಜನೆಯಾಗಿದೆ ಎಂಬುದು ರೈಲ್ವೆ ಪ್ರಯಾಣಿಕರ ಅಭಿಪ್ರಾಯವಾಗಿದೆ.

‘ಕಲಬುರಗಿ ಭಾಗದಿಂದ ಹೆಚ್ಚು ಕೂಲಿ ಕಾರ್ಮಿಕರು, ರೈತರು ಬೆಂಗಳೂರಿಗೆ ಹೋಗುತ್ತಾರೆ. ದೂರವಿರುವುದರಿಂದ ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ, ವಂದೇ ಭಾರತ್ ರೈಲು ಕಲಬುರಗಿಯಿಂದ ಬೆಳಗ್ಗೆ ಪ್ರಯಾಣ ಮಾಡುತ್ತದೆ. ರಾತ್ರಿ ಪ್ರಯಾಣಿಸುವ ಕಾರ್ಮಿಕರನ್ನು ದೂರ ಉಳಿಸುವ ಕಾರಣಕ್ಕೆ ಈ ರೈಲನ್ನು ಬೆಳಗ್ಗೆ ಬಿಡಲಾಗಿದೆ. ಅದಕ್ಕಾಗಿ ಈ ರೈಲಿನಲ್ಲಿ ಪ್ರಯಾಣ ಮಾಡಲು ದುಡಿಯುವ ಕಾರ್ಮಿಕರಿಗೆ ಸಾಧ್ಯವಿಲ್ಲ. ಟಿಕೆಟ್ ದರ ಹೆಚ್ಚಿರುವುದರಿಂದ ಬಡವರು ಈ ರೈಲಿನಿಂದ ದೂರ ಉಳಿದಿದ್ದಾರೆ. ಕಲಬುರಗಿಯಿಂದ ಬೆಂಗಳೂರಿಗೆ 2ಸಾವಿರ ರೂ.ನಿಂದ 3ಸಾವಿರ ರೂ.ವರೆಗೆ ಖರ್ಚಾಗುತ್ತದೆ. ಈ ರೈಲು ನಮ್ಮಂತಹ ಬಡವರಿಗೆ ಅಲ್ಲ. ನಾವು ಇದರಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲ. ಅಷ್ಟು ಹಣ ಕೊಟ್ಟು ವಂದೇ ಭಾರತ್ ರೈಲಿನಲ್ಲಿ ಹೋಗುವುದು ವಿಮಾನದಲ್ಲಿ ಹೋಗುವುದಕ್ಕೆ ಸಮವಾಗಿದೆ.

-ಸಂಜೀವ ಜಗ್ಲಿ, ಯುವಜನ ಕಾರ್ಯಕರ್ತ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮಾಳಿಂಗರಾಯ ಕೆಂಭಾವಿ

contributor

Similar News