ಅಂಬೇಡ್ಕರ್ ಭವನ ಸಾರ್ವಜನಿಕರ ಬಳಕೆಗೆ ಒದಗಿಸಲು ಗ್ರಾಮಸ್ಥರ ಆಗ್ರಹ
ಗುಡಿಬಂಡೆ: ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಗ್ರಾಪಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾ.ಅಂಬೇಡ್ಕರ್ ಭವನಗಳು ಸಾರ್ವಜನಿಕರು ಹಾಗೂ ಸಮುದಾಯದ ಜನರ ಬಳಕೆಗೆ ಅವಕಾಶ ವಿಲ್ಲದೇ ಅನಾಥವಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆಂಡೂರು ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸರಕಾರದಿಂದ ನಿರ್ಮಾಣವಾಗಿರುವ ಅಂಬೇಡ್ಕರ್ ಭವನ ಇದುವರೆಗೂ ಸಾರ್ವಜನಿಕರ ಹಾಗೂ ಸಮುದಾಯಗಳ ಬಳಕೆಗೆ ನೀಡದೇ ಬೀಗವನ್ನು ಹಾಕಿರುವಂತಹ ಸ್ಥಿತಿಯಲ್ಲಿದೆ.
ಹಂಪಸಂದ್ರ ಗ್ರಾಮ ಪಂಚಾಯತ್ ಮೇಲುಸ್ತುವಾರಿಗೆ ಅಂಬೇಡ್ಕರ್ ಭವನವನ್ನು ಪಡೆದುಕೊಂಡಿದ್ದರೂ ಈ ಭವನವನ್ನು ಸರಿಯಾದ ರೀತಿಯಲ್ಲಿ ಸಾರ್ವಜನಿಕರ ಬಳಕೆಗೆ ಅವಕಾಶವನ್ನು ಕೊಡದಿರುವುದರಿಂದ ಭವನದ ಸುತ್ತ ಮುತ್ತಲು ಗಿಡಗಂಟಿಗಳು ಬೆಳೆದು ಭವನದ ಒಳಗೆ ಹೋಗಿಬರಲು ಜಾಗ ಇಲ್ಲದಂತಾಗಿದೆ. ಭವನದ ಸುತ್ತಲು ಕಸದ ತಿಪ್ಪೆಗಳನ್ನು ಹಾಕಿರುವುದರಿಂದ ವಾಸನೆ ಆವರಿಸಿದೆ. ಇದರಿಂದಾಗಿ ಭವನದ ಕಡೆ ಜನರು ಮುಖ ಮಾಡಿನೋಡಲು ಸಹ ಮುಂದಾಗದೇ ಇರುವ ಸ್ಥಿತಿ ನಿರ್ಮಾಣವಾಗಿದೆ .
ಗ್ರಾಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದವರು ವಾಸವಾಗಿದ್ದು. ಈ ಸಮುದಾಯಗಳ ಸಾಮಾಜಿಕ ಕಾರ್ಯಕ್ರಮಗಳಿಗೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಬಳಕೆಗೆ ಗ್ರಾಪಂ ಅಧಿಕಾರಿಗಳು ಅವಕಾಶ ಮಾಡಿಕೊಡದೇ ಅಂಬೇಡ್ಕರ್ ಭವನ ಹಾಳುಕೊಂಪೆಯಾಗಿದೆ ಗ್ರಾಮಸ್ಥರ ಆರೋಪವಾಗಿದೆ.
ಸಂಬಂಧಪಟ್ಟ ಮೇಲಿನ ಅಧಿಕಾರಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರ ಅನುಕೂಲಕ್ಕೆ ಅಂಬೇಡ್ಕರ್ ಭವನವನ್ನು ಅನುವು ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಅಂಬೇಡ್ಕರ್ ಭವನವನ್ನು ನಮ್ಮ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೇ ಆ ಭವನ ಇದುವರೆಗೂ ಸಾರ್ವಜನಿಕರ ಬಳಕೆಗೆ ಇಲ್ಲ. ಪಂಚಾಯತ್ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಭವನವನ್ನು ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಿ.
-ಚೆಂಡೂರು ರಮಣ, ದಸಂಸ ತಾಲೂಕು ಸಂಚಾಲಕ ಗುಡಿಬಂಡೆ
ಚೆಂಡೂರು ಗ್ರಾಮದಲ್ಲಿರುವ ಅಂಬೇಡ್ಕರ್ ಭವನದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು, ಭವನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಗೆ ಕ್ರಮವಹಿಸಿ ಇಪ್ಪತ್ತು ದಿನಗಳ ಒಳಗೆ ಸಾರ್ವಜನಿಕರ ಬಳಕೆಗೆ ಕ್ರಮವಹಿಸಲಾಗುವುದು.
-ನರಸಿಂಹಮೂರ್ತಿ, ಹಂಪಸಂದ್ರ ಗ್ರಾಪಂ ಪಿಡಿಒ