ಆರೆಸ್ಸೆಸ್‌ಗೇಕೆ ರಾಹುಲ್ ಗಾಂಧಿಯವರ ಭಯ?

ಬಿಜೆಪಿ ಮತ್ತು ಆರೆಸ್ಸೆಸ್ ರಾಜಕಾರಣವನ್ನು ಹಿಂದುತ್ವ, ಮಂದಿರ ಇತ್ಯಾದಿಗಳ ಜೊತೆಗೆ ತಳುಕು ಹಾಕಿರುವಾಗ, ಆರೆಸ್ಸೆಸ್ ವಿಚಾರಧಾರೆ ಅಪಾಯಕಾರಿ, ಅದು ಈ ದೇಶವನ್ನು ಹಾಳುಮಾಡುತ್ತದೆ ಎಂದು ರಾಹುಲ್ ಪ್ರತಿಪಾದಿಸುತ್ತಿದ್ದಾರೆ. ಆದರೆ, 2025ರಲ್ಲಿ ಆರೆಸ್ಸೆಸ್‌ಗೆ 100 ವರ್ಷ ತುಂಬುತ್ತಿರುವಾಗ, ಅದು ಹಿಂದುತ್ವ, ಮಂದಿರ ಇತ್ಯಾದಿಗಳಿಗೆ ಹೊರತಾದ ರಾಜಕೀಯಕ್ಕೆ ಮುಂದಾಗಿದೆ. ಹೀಗಾಗಿಯೇ ಕೇರಳದಲ್ಲಿ ಶನಿವಾರ ಶುರುವಾಗಿರುವ ಆರೆಸ್ಸೆಸ್ ಬೈಠಕ್‌ನಲ್ಲಿ ಹಿಂದುತ್ವದ ವಿಚಾರ ಬದಿಗಿಟ್ಟು, ಜಾತಿಜನಗಣತಿಯ ವಿಚಾರ ಎತ್ತಿಕೊಳ್ಳಲಾಗಿದೆ.

Update: 2024-09-03 07:14 GMT

ಕಾಂಗ್ರೆಸ್‌ನಲ್ಲಿ ಆರೆಸ್ಸೆಸ್ ವಿರುದ್ಧ ನೇರ ಸಮರ ಸಾರಿರುವ ಏಕೈಕ ನಾಯಕ ರಾಹುಲ್ ಗಾಂಧಿ. ಇದೇ ಮಾತನ್ನು ಅವರ ಪಕ್ಷ ಕಾಂಗ್ರೆಸ್‌ಗೆ ಹೇಳಲಾಗದು. ಆದರೆ ರಾಹುಲ್ ಗಾಂಧಿ ಮಾತ್ರ ನೇರವಾಗಿ, ಸ್ಪಷ್ಟವಾಗಿ, ನಿರ್ಭೀತಿಯಿಂದ ಆರೆಸ್ಸೆಸ್ ಹಾಗೂ ಅದರ ಸಿದ್ಧಾಂತವನ್ನು ಎದುರು ಹಾಕಿಕೊಂಡಿದ್ದಾರೆ.

ರಾಹುಲ್ ಗಾಂಧಿಯವರನ್ನು ಮಣಿಸಲು ಯಾವ್ಯಾವ ರೂಪದಲ್ಲಿ ಅವರಿಗೆ ಆರೆಸ್ಸೆಸ್ ಮುಖಾಮುಖಿಯಾಗುತ್ತಿದೆ ಎಂದು ನೋಡಿದರೆ, ಅದು ಹಾಕಿರುವ ಡಝನ್‌ಗಟ್ಟಲೆ ಕೇಸ್‌ಗಳು ಕಾಣುತ್ತವೆ.

ಆರೆಸ್ಸೆಸ್ ಕಾರ್ಯಕರ್ತರು ವಿವಿಧ ವಿಷಯಗಳಲ್ಲಿ ರಾಹುಲ್ ಅವರ ವಿರುದ್ದ ಕೇಸ್ ದಾಖಲಿಸಿದ್ದಾರೆ.ಆದರೆ ರಾಹುಲ್ ತಮ್ಮ ವಿಚಾರಗಳ ಮೂಲಕವೇ ಆರೆಸ್ಸೆಸ್‌ಗೆ ಮುಖಾಮುಖಿಯಾಗುತ್ತಿದ್ದಾರೆ.

ಅವರ ವಾಗ್ದಾಳಿಗಳನ್ನೇ ನೆಪವಾಗಿಸಿಕೊಂಡು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಮಾನನಷ್ಟ ಮೊಕದ್ದಮೆಗಳನ್ನು ಹೂಡಿರುವುದಿದೆ.

ಅಸ್ಸಾಮಿನ ಕಾಮರೂಪ, ಮಹಾರಾಷ್ಟ್ರದ ಭಿವಂಡಿ, ಬಾಂದ್ರಾ ಮತ್ತು ಥಾಣೆಗಳಲ್ಲಿ ರಾಹುಲ್ ವಿರುದ್ಧದ ಪ್ರಕರಣಗಳು ನಡೆಯುತ್ತಿವೆ.

ಸುಮಾರು 16 ಕೇಸುಗಳು ದೇಶದ ವಿವಿಧೆಡೆಯ ನ್ಯಾಯಾಲಯಗಳಲ್ಲಿ ರಾಹುಲ್ ವಿರುದ್ಧ ನಡೆದಿವೆ.

ಇನ್ನು ಮೋದಿ, ಅಮಿತ್ ಶಾ ಹೆಸರಿಗೆ ಸಂಬಂಧಿಸಿ ರಾಹುಲ್ ಮೇಲೆ ಹಾಕಿರುವ ಕೇಸುಗಳೂ ಡಝನ್‌ಗಿಂತ ಹೆಚ್ಚಿವೆ.

ಬಿಜೆಪಿ ಮತ್ತು ಆರೆಸ್ಸೆಸ್ ರಾಜಕಾರಣವನ್ನು ಹಿಂದುತ್ವ, ಮಂದಿರ ಇತ್ಯಾದಿಗಳ ಜೊತೆಗೆ ತಳುಕು ಹಾಕಿರುವಾಗ, ಆರೆಸ್ಸೆಸ್ ವಿಚಾರಧಾರೆ ಅಪಾಯಕಾರಿ, ಅದು ಈ ದೇಶವನ್ನು ಹಾಳುಮಾಡುತ್ತದೆ ಎಂದು ರಾಹುಲ್ ಪ್ರತಿಪಾದಿಸುತ್ತಿದ್ದಾರೆ.

ಆದರೆ, 2025ರಲ್ಲಿ ಆರೆಸ್ಸೆಸ್‌ಗೆ 100 ವರ್ಷ ತುಂಬುತ್ತಿರುವಾಗ, ಅದು ಹಿಂದುತ್ವ, ಮಂದಿರ ಇತ್ಯಾದಿಗಳಿಗೆ ಹೊರತಾದ ರಾಜಕೀಯಕ್ಕೆ ಮುಂದಾಗಿದೆ.

ಹೀಗಾಗಿಯೇ ಕೇರಳದಲ್ಲಿ ಶನಿವಾರ ಶುರುವಾಗಿರುವ ಆರೆಸ್ಸೆಸ್ ಬೈಠಕ್‌ನಲ್ಲಿ ಹಿಂದುತ್ವದ ವಿಚಾರ ಬದಿಗಿಟ್ಟು, ಜಾತಿಜನಗಣತಿಯ ವಿಚಾರ ಎತ್ತಿಕೊಳ್ಳಲಾಗಿದೆ. ಈ ಮಹತ್ವದ ಬದಲಾವಣೆಗೆ ಮುಖ್ಯ ಕಾರಣ ರಾಹುಲ್ ಗಾಂಧಿ. ಆರೆಸ್ಸೆಸ್ ಹಿಂದುತ್ವದ ವಿಚಾರಕ್ಕಿಂತ ಹೆಚ್ಚು ಜಾತಿಯ, ಜಾತಿ ಗಣತಿಯ ವಿಚಾರ ಮಾತಾಡುವ, ಚರ್ಚಿಸುವ ಹಾಗೆ ಮಾಡಿದ್ದು ರಾಹುಲ್ ಗಾಂಧಿ.

ಬಿಜೆಪಿಯ ಮಿತ್ರಪಕ್ಷಗಳು ಕೂಡ ಜಾತಿ ಜನಗಣತಿಯನ್ನು ಬದಿಗೆ ಸರಿಸುವ ಯೋಚನೆಯನ್ನು ಒಪ್ಪಲಾರವು ಎಂಬುದು ನಿಜ.

ಮೋದಿ ಮತ್ತು ಶಾ ಇಬ್ಬರೂ ಜಾತಿ ರಾಜಕಾರಣಕ್ಕೆ ಹೊರತಾದ ತಂತ್ರದಿಂದ ಬಿಜೆಪಿಗೆ ಮತಗಳನ್ನು ಸೆಳೆಯುತ್ತಿದ್ದರು. ಆದರೆ ಈಗ ಆರೆಸ್ಸೆಸ್ ಎದುರು ಭೀತಿ ಇದೆ, ಸವಾಲುಗಳು ಕಾಡುತ್ತಿವೆ.

ಚುನಾವಣೆಗೆ ಇಳಿಯಲು ಹಿಂದುತ್ವದ ಅಜೆಂಡಾ ಬೇಕೆಂಬುದು ಆರೆಸ್ಸೆಸ್ ನಿಲುವು. ಮೀಸಲಾತಿ ಹಾಗೂ ಜಾತಿ ಕುರಿತ ಅದರ ಅಸಹನೆ ಎಲ್ಲರಿಗೂ ಗೊತ್ತಿದೆ.

ಆದರೆ ಅದಕ್ಕೀಗ ದಿಲ್ಲಿ ನಾಯಕತ್ವ ತಯಾರಿಲ್ಲ,

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಸರೆಯಾಗಬಹುದಾಗಿದ್ದ ವಿಷಯಕ್ಕೆ ದಿಲ್ಲಿ ನಾಯಕರ ಸಮ್ಮತಿಯಿಲ್ಲ.

ಯಾವುದು ಬಿಜೆಪಿಗೆ ಬೇಕಿದೆಯೊ ಅದು ಆರೆಸ್ಸೆಸ್‌ಗೆ ಬೇಡವಾಗಿದೆ. ಅದಕ್ಕೆ ತನ್ನ ದಾರಿಯಲ್ಲಿರುವ ಅಡ್ಡಿಗಳನ್ನು ನಿವಾರಿಸಿಕೊಳ್ಳುವುದು ಅದರ ಉದ್ದೇಶವಾಗಿದೆ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಆರೆಸ್ಸೆಸ್ ಪಾತ್ರ ಏನಿರಲಿದೆ ಎಂಬುದು ಈಗ ದೊಡ್ಡ ಸವಾಲಾಗಿದೆ.

ಕೇರಳದ ಆರೆಸ್ಸೆಸ್ ಸಭೆಯಲ್ಲಿ ಸಭಿಕರ ಮೊದಲ ಸಾಲಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂತಿದ್ದರು. ಇದೇ ಜೆ.ಪಿ. ನಡ್ಡಾ ಕೇವಲ ಮೂರೂವರೆ ತಿಂಗಳ ಹಿಂದೆ ಬಿಜೆಪಿಗೆ ಇನ್ನು ಆರೆಸ್ಸೆಸ್‌ನ ಅಗತ್ಯವಿಲ್ಲ, ಅದೀಗ ಬಹಳ ದೊಡ್ಡದಾಗಿ ಬೆಳೆದು ಬಿಟ್ಟಿದೆ ಎಂದಿದ್ದರು. ಈಗ ಆರೆಸ್ಸೆಸ್ ಮುಖ್ಯಸ್ಥರು ವೇದಿಕೆಯಲ್ಲಿ ಭಾಷಣ ಮಾಡುವಾಗ ಸಭಿಕರ ಸಾಲಿನಲ್ಲಿ ವಿಧೇಯರಾಗಿ ಕೂತಿದ್ದಾರೆ ಜೆ.ಪಿ. ನಡ್ಡಾ.

ದಿಲ್ಲಿಯಿಂದ ಮೋದಿಯವರ ಸಂದೇಶವನ್ನೂ ತೆಗೆದುಕೊಂಡು ಹೋಗಿದ್ದಾರೆ ನಡ್ಡಾ. ಈಗ ಮೊದಲಿನಂತಿಲ್ಲ ರಾಜಕೀಯ, ನಾವು ನಮ್ಮ ನಡೆ ಬದಲಿಸಬೇಕಾಗುತ್ತದೆ ಎಂಬುದನ್ನೂ ಅವರು ಆರೆಸ್ಸೆಸ್‌ಗೆ ಹೇಳುತ್ತಾರೆ. ಆದರೆ ಅದನ್ನು ಎಷ್ಟರಮಟ್ಟಿಗೆ ಕೇಳಲಿದೆ ಆರೆಸ್ಸೆಸ್?

ಕೇರಳದಲ್ಲಿ ಆರೆಸ್ಸೆಸ್ ಶಾಖೆಗಳು ದೊಡ್ಡ ಮಟ್ಟದಲ್ಲಿ ಹೆಚ್ಚಿವೆ. ಐದು ಸಾವಿರಕ್ಕೂ ಹೆಚ್ಚು ಶಾಖೆಗಳಿವೆ. ಮೊದಲ ಬಾರಿಗೆ ಕೇರಳದಿಂದ ಬಿಜೆಪಿ ಎಂಪಿಯೊಬ್ಬರು ಸಂಸತ್ತಿಗೆ ಹೋಗಿದ್ದಾರೆ. ಪಾಲಕ್ಕಾಡ್‌ನಲ್ಲಿ ಶೇ.24ರಷ್ಟು ಮತ ಸಿಕ್ಕಿದೆ. ಕೇರಳದಲ್ಲಿ ಬಿಜೆಪಿಗೆ 2014ರಲ್ಲಿಶೇ.10, 2019ರಲ್ಲಿ ಶೇ.13 ಮತಗಳು ಬಂದಿದ್ದವು. 2024ರಲ್ಲಿ ಅದು ಶೇ.16.8ಕ್ಕೆ ಏರಿದೆ.

ಹಿಂದುತ್ವವನ್ನು ಬಿಡಲಾರದ ಆರೆಸ್ಸೆಸ್, ಮತ್ತೊಂದೆಡೆ ಜಾತಿ ಜನಗಣತಿ ವಿಚಾರವನ್ನೂ ಮುಂದೆ ಮಾಡುತ್ತಿದೆ.ಆದರೆ ಹಿಂದುತ್ವ ಮತ್ತು ಜಾತಿ ರಾಜಕಾರಣ ಇವೆರಡನ್ನೂ ಹೇಗೆ ಅದು ನಿಭಾಯಿಸಲು ಸಾಧ್ಯವಿದೆ?

ಬಿಜೆಪಿ ವಿಚಾರದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ದೊಡ್ಡ ಅಸಮಾಧಾನವಿರುವುದೇ ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರ ಆರೆಸ್ಸೆಸ್ ಅನ್ನು ದುರ್ಬಲಗೊಳಿಸಿದೆ ಎಂಬುದು.

ರೈತರು, ಕಾರ್ಮಿಕರೆಲ್ಲ ‘ಇಂಡಿಯಾ’ ಮೈತ್ರಿಕೂಟದೆಡೆಗೆ ಒಲವು ತೋರಿದ್ದಾರೆ. ಆದಿವಾಸಿಗಳು, ದಲಿತರ ಮತಗಳು ‘ಇಂಡಿಯಾ’ ಮೈತ್ರಿಕೂಟಕ್ಕೆ ಹೆಚ್ಚು ಬಂದಿವೆ.

ಈ ಹತ್ತು ವರ್ಷಗಳಲ್ಲಿ ಆರೆಸ್ಸೆಸ್‌ನ ರೈತ ಸಂಘಟನೆ, ಕಾರ್ಮಿಕ ಸಂಘಟನೆ ಇವೆಲ್ಲವೂ ಸಂಪೂರ್ಣ ಅಪ್ರಸ್ತುತವಾಗಿವೆ. ಹಾಗೆ ಅದನ್ನು ಅಪ್ರಸ್ತುತಗೊಳಿಸಿದ್ದು ದಿಲ್ಲಿಯ ಗದ್ದುಗೆ ಎಂಬ ವ್ಯಾಪಕ ಅಸಮಾಧಾನ ಆರೆಸ್ಸೆಸ್‌ನೊಳಗಿದೆ. ಬಿಜೆಪಿ ಹೆಚ್ಚು ಮತಗಳನ್ನು ಪಡೆಯಲಾಗಿಲ್ಲ ಎನ್ನುವ ಹಿನ್ನೆಲೆಯಲ್ಲಿ ಅಧ್ಯಕ್ಷ ನಡ್ಡಾ ವಿರುದ್ಧವೂ ಆರೆಸ್ಸೆಸ್‌ಗೆ ಅಸಮಾಧಾನವಿದೆ.

ಜಾತಿ ಗಣತಿಯಷ್ಟೇ ದೊಡ್ಡ ವಿಷಯ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಕುರಿತದ್ದು. ಆರೆಸ್ಸೆಸ್‌ಗೆ ತನ್ನ ಇಶಾರೆಗೆ ತಕ್ಕಂತೆ ಪಕ್ಷ ನಡೆಸುವವರು ಆ ಹುದ್ದೆಯಲ್ಲಿ ಬೇಕಾಗಿದ್ದಾರೆ. ಆದರೆ ಅದಾಗದು ಎಂದು ದಿಲ್ಲಿ ಗದ್ದುಗೆ ಹೇಳುತ್ತಿದೆ.

ಎಲ್ಲ ಉಳಿಯುವುದು ಅಧಿಕಾರ ಉಳಿದರೆ ಮಾತ್ರ. ಅದಕ್ಕೆ ನೀವು ಸರಕಾರದ ಜೊತೆ ಸಮನ್ವಯದಲ್ಲಿ ಸಾಗುವವರನ್ನೇ ಪಕ್ಷದ ಅಧ್ಯಕ್ಷರಾಗಿ ಮಾಡಬೇಕಾಗುತ್ತದೆ, ಖಟ್ಟರ್ ಸ್ವಯಂ ಸೇವಕನನ್ನು ಅಲ್ಲ ಎಂದು ದಿಲ್ಲಿ ಗದ್ದುಗೆ ಆರೆಸ್ಸೆಸ್‌ಗೆ ಹೇಳುತ್ತಿದೆ.

ಆದರೆ ಚುನಾವಣೆಯಲ್ಲಿ ಕಡಿಮೆ ಮತ, ಕಡಿಮೆ ಸೀಟು ಗಳಿಸಿರುವ ನೀವು ಈಗ ಇಂತಹವರೇ ರಾಷ್ಟ್ರೀಯ ಅಧ್ಯಕ್ಷರಾಗಬೇಕು, ಇಂತಹದ್ದೇ ನಮ್ಮ ರಾಜಕೀಯ ನಿಲುವಾಗಬೇಕು ಎಂದು ಹೇಳುವುದು ಹೇಗೆ ಅಂತ ಆರೆಸ್ಸೆಸ್ ಬಿಜೆಪಿಯನ್ನು ಕೇಳುತ್ತಿದೆ. ಈ ಜಿದ್ದಾಜಿದ್ದಿ ಎಲ್ಲಿಗೆ ಹೋಗಿ ತಲುಪಲಿದೆ ? ಯಾರ ಕೈ ಮೇಲಾಗಲಿದೆ?

ಈ ಹೊತ್ತಲ್ಲಿ ಜಾತಿ ರಾಜಕಾರಣದ ಸವಾಲು ಸಂಘದೆದುರು ದೊಡ್ಡದಾಗಿದೆ. ತನ್ನ ಅಸ್ತಿತ್ವದ ಪ್ರಶ್ನೆಯನ್ನು ಕೂಡ ಈಗ ಅದು ಎದುರಿಸುತ್ತಿದೆ.

ದೇಶದಲ್ಲಿ ಸೋಷಿಯಲ್ ಇಂಜಿನಿಯರಿಂಗ್ ಜಾತಿ ಹೆಸರಲ್ಲಿ ನಡೆಯುತ್ತಿದೆ. ಈಗ ದೇಶದಲ್ಲಿ ಅಧಿಕಾರ ಹಿಡಿಯಲು ಹಿಂದುತ್ವ ಅಲ್ಲ, ಜಾತಿಯೊಂದೇ ದಾರಿ ಎಂಬುದು ಆರೆಸ್ಸೆಸ್‌ಗೆ ಸ್ಪಷ್ಟವಾಗಿದೆ.

ತನ್ನ ನೂರನೇ ವರ್ಷದಲ್ಲಿ ತನ್ನ ಅಸ್ತಿತ್ವ, ತನ್ನ ಮೂಲ ಸಿದ್ಧಾಂತವನ್ನೇ ಪ್ರಶ್ನಿಸುವ, ಚರ್ಚಿಸುವ, ಅದನ್ನು ಬಿಟ್ಟು ಬೇರೇನನ್ನೂ ಮಾಡುವ ಬಗ್ಗೆ ಯೋಚಿಸುವ ಅನಿವಾರ್ಯತೆಗೆ ಆರೆಸ್ಸೆಸ್ ತಲುಪಿದೆ.

ಇದಕ್ಕೆ ಕಾರಣ ರಾಹುಲ್ ಗಾಂಧಿ ಹಾಗೂ ಅವರ ಹೊಸ ರಾಜಕೀಯ.

ಈಗ ಆರೆಸ್ಸೆಸ್ ಎದುರು ಹಲವು ಪ್ರಶ್ನೆಗಳು ದೊಡ್ಡದಾಗಿ ಮೂಡಿವೆ.

ಇನ್ನು ಮುಂದೆ ನಡೆಯುವುದು ದಿಲ್ಲಿ ಗದ್ದುಗೆಯ ಮಾತೇ ಅಥವಾ ಸಂಘದ ಅಜೆಂಡಾವೇ?

ಬಿಜೆಪಿಯ ಕಾರ್ಪೊರೇಟ್ ಪ್ರೇಮ ಅಪ್ರಸ್ತುತಗೊಳಿಸಿರುವ ಆರೆಸ್ಸೆಸ್‌ನ ಕಾರ್ಮಿಕ, ರೈತ, ಆದಿವಾಸಿ ಸಂಘಟನೆಗಳಿಗೆ ಹೇಗೆ ಹೊಸ ರೂಪ ಕೊಡುವುದು?

ಆದಿವಾಸಿಗಳು, ದಲಿತರನ್ನು ಒಳಗೊಂಡೇ ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಹೇಗೆ ಸಾಕಾರ ಮಾಡುವುದು?

ಜನಸಾಮಾನ್ಯರ ಸಂಕಷ್ಟ ನಿವಾರಣೆಗೆ ಮೋದಿ ಸರಕಾರ ಮುಂದಾಗುವ ಹಾಗೆ ಮಾಡುವುದು ಹೇಗೆ?

ಬಿಜೆಪಿ ಸರಕಾರದಲ್ಲಿ ಯಾವುದು ಪ್ರಭಾವಶಾಲಿಯಾಗಲಿದೆ?

ಅಲ್ಲಿ ಸಂಘದ ಅಜೆಂಡಾ ನಡೆಯುವುದೆ?

ಹಿಂದೆಂದೂ ತೋರಿಸದ ಪ್ರವೃತ್ತಿ ಈಗ ಒಮ್ಮೆಲೆ ಬರುವುದು, ಬದಲಾಗುವುದು ಸಾಧ್ಯವೆ?

ಇವೆಲ್ಲವೂ ಬರಲಿರುವ ಚುನಾವಣೆಗಳಲ್ಲಿ ಪ್ರಭಾವ ಬೀರಲಿವೆಯೆ? ಮತ್ತು ಚುನಾವಣೆಗಳಲ್ಲಿ ಆರೆಸ್ಸೆಸ್ ಪಾತ್ರವೇನಿರಲಿದೆ?

ಎಲ್ಲಕ್ಕಿಂತ ಮುಖ್ಯವಾಗಿ ಈ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಯಾರು? ಪ್ರಧಾನಿ ಮೋದಿಯೇ ಇದಕ್ಕೆ ಕಾರಣರಾದರೇ ?

ಸಂಘದ ಎದುರು ಇರುವ ರಾಹುಲ್ ಭಯ ಹೇಗೆ ಚುನಾವಣೆಗಳಲ್ಲಿಯೂ ಅದಕ್ಕೆ ಸವಾಲಾಗಿ ಪರಿಣಮಿಸಲಿದೆ?

ಆರೆಸ್ಸೆಸ್‌ನ ನಾಳೆಗಳನ್ನು ನಿರ್ಧರಿಸಲಿರುವ ಈ ಎಲ್ಲ ಪ್ರಶ್ನೆಗಳಿಗೆ ಕೇರಳದಲ್ಲಿ ಉತ್ತರ ಕಂಡುಕೊಳ್ಳುವ ಯತ್ನ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News