ಬಿಬಿಎಂಪಿ ವಿಭಜನೆ ಅನಿವಾರ್ಯವೇಕೆ?

ಆಡಳಿತ ವಿಕೇಂದ್ರೀಕರಣದ ಆಶಯಕ್ಕೆ ಪೂರಕವಾಗಿರುವ ಬಿಬಿಎಂಪಿ ವಿಭಜನೆ ಪ್ರಸ್ತಾವದಿಂದ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಹಿಂದೆಗೆಯಬಾರದು. ಬದಲಿಗೆ ಆದಷ್ಟೂ ಶೀಘ್ರವಾಗಿ ಈ ಪ್ರಸ್ತಾವವನ್ನು ಅನುಷ್ಠಾನಗೊಳಿಸಿ, ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳ ಗೈರನ್ನು ಅನುಭವಿಸುತ್ತಿರುವ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕಿದೆ. ಆ ಮೂಲಕ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಬೇಕಿದೆ.

Update: 2024-06-20 06:18 GMT

ಸಣ್ಣ ಪ್ರಮಾಣದ ಆಡಳಿತಾತ್ಮಕ ಘಟಕಗಳಿದ್ದಾಗ, ಅವುಗಳ ಕಾರ್ಯದಕ್ಷತೆಯೂ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಈ ಮಾತಿಗೆ ಜ್ವಲಂತ ನಿದರ್ಶನ 2024ನೇ ಸಾಲಿನ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ. ಈ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿರುವ ಬಹುತೇಕ ನಗರಗಳು ವಿಸ್ತೀರ್ಣದಲ್ಲಿ ಸಾಕಷ್ಟು ಕಿರಿದಾಗಿವೆ. ಹಾಗೆಯೇ ಇಲ್ಲಿನ ಜನಸಂಖ್ಯೆ ಪ್ರಮಾಣವೂ ಗಮನಾರ್ಹವಾಗಿ ಕಡಿಮೆ ಇದೆ. ಉದಾಹರಣೆಗೆ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮಧ್ಯಪ್ರದೇಶದ ಇಂದೋರ್‌ನ ವಿಸ್ತೀರ್ಣ ಕೇವಲ 530 ಚದರ ಕಿ.ಮೀ. ಹಾಗೆಯೇ ಅಲ್ಲಿನ ಜನಸಂಖ್ಯೆ ಪ್ರಮಾಣ ಕೇವಲ 33.93 ಲಕ್ಷ.

ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ನಿರ್ವಹಣೆ, ಕಂದಾಯ ಸಂಗ್ರಹ, ರಸ್ತೆಗಳ ನಿರ್ವಹಣೆ, ಬೀದಿ ದೀಪ ಇತ್ಯಾದಿ ಮೂಲಭೂತ ನಾಗರಿಕ ಸೌಲಭ್ಯಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿವೆ. ಹೀಗಾಗಿ, ಅವುಗಳ ಆದಾಯ ಸಂಗ್ರಹ ಪ್ರಮಾಣವೂ ಸೀಮಿತವೇ ಆಗಿರುತ್ತದೆ. ಹೀಗಾಗಿ ನಗರಾಭಿವೃದ್ಧಿಗಾಗಿ ಸರಕಾರದ ಅನುದಾನವನ್ನೇ ಸ್ಥಳೀಯ ಸಂಸ್ಥೆಗಳು ಹೆಚ್ಚು ಅವಲಂಬಿಸಿರುತ್ತವೆ. ಇಂತಹ ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳಾಗಿ ಆರಿಸಿ ಬರುವವರು ಕೂಡಾ ಆಡಳಿತಾನುಭವ ಇಲ್ಲದ ಹೊಸಬರೇ ಆಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಶಾಹಿಯೇ ನೀತಿ-ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಆಡಳಿತವು ಜನಪ್ರತಿನಿಧಿಗಳ ಹಿಡಿತ ತಪ್ಪುವ ಸಾಧ್ಯತೆಯೇ ಹೆಚ್ಚು. ಈ ಮಾತಿಗೆ ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯೇ ನಿದರ್ಶನ.

2007ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಆಗ ಅಸ್ತಿತ್ವದಲ್ಲಿದ್ದ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಬೆಂಗಳೂರಿನ ಹೊರವಲಯದಲ್ಲಿದ್ದ ಏಳು ನಗರಸಭೆಗಳು, ಒಂದು ಪುರಸಭೆ ಹಾಗೂ 111 ಗ್ರಾಮಗಳನ್ನು ವಿಲೀನಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಅಸ್ತಿತ್ವಕ್ಕೆ ತಂದರು. ಈ ತರಾತುರಿಯ ನಿರ್ಧಾರದಿಂದ ಬೆಂಗಳೂರಿನ ಸಮತೋಲಿತ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವಾಯಿತೇ ಹೊರತು ‘ಉದ್ಯಾನನಗರಿ’ ಎಂಬ ಹಿರಿಮೆ ಹೊಂದಿದ್ದ ಬೆಂಗಳೂರಿಗೆ ನಯಾಪೈಸೆಯ ಲಾಭವೂ ಆಗಲಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಾತ್ಮಕ ವಲಯ ಏಕಾಏಕಿ ಎರಡು ಪಟ್ಟು ಹಿಗ್ಗಿದ್ದರಿಂದ, ಅದು ಆಡಳಿತ ನಿರ್ವಹಣೆಯ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡಿತೇ ಹೊರತು, ಬೆಂಗಳೂರಿನ ಜಾಗತಿಕ ಹಿರಿಮೆ ಮತ್ತಷ್ಟು ಹಿಗ್ಗಲು ಯಾವುದೇ ಕೊಡುಗೆಯನ್ನೂ ನೀಡಲಿಲ್ಲ. ಇದರ ಪರಿಣಾಮವೇ ‘ಸಿಲಿಕಾನ್ ಸಿಟಿ’ ಎಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಬೆಂಗಳೂರಿಂದು ಸ್ವಚ್ಛ ನಗರಗಳ ಪಟ್ಟಿಯಲ್ಲಿ 20ರ ಶ್ರೇಯಾಂಕದ ಒಳಗೂ ಇಲ್ಲ.

ಯಾವುದೇ ಒಂದು ನಗರ ಸ್ವಚ್ಛ ಮತ್ತು ಪರಿಸರ ಸ್ನೇಹಿಯಾಗಿರಬೇಕಾದರೆ, ಅದರ ವಿಸ್ತೀರ್ಣ ಮತ್ತು ಅಲ್ಲಿನ ಜನಸಂಖ್ಯೆ ಪ್ರಮಾಣವೂ ಕಡಿಮೆ ಇರಬೇಕಾಗುತ್ತದೆ. ಈ ಮಾತಿಗೆ ಇಂದೋರ್ ನಗರವೇ ಜ್ವಲಂತ ನಿದರ್ಶನ. ಯಾವುದೇ ನಗರದ ಜನಸಂಖ್ಯೆ ಪ್ರಮಾಣ ಕಡಿಮೆ ಇದ್ದಾಗ ಅಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯದ ಪ್ರಮಾಣ ಕೂಡಾ ನಿಯಂತ್ರಿತ ಪ್ರಮಾಣದಲ್ಲಿರುತ್ತದೆ. ಇದರಿಂದ ಘನ ತ್ಯಾಜ್ಯಗಳ ನಿರ್ವಹಣೆಯೂ ಸುಲಭವಾಗಿರುತ್ತದೆ. ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಇಂದೋರ್‌ನಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯದ ಪ್ರಮಾಣ ದಿನವಹಿ ಕೇವಲ 1.1 ಮೆಟ್ರಿಕ್ ಟನ್ ಮಾತ್ರವಾಗಿದೆ. ಇದಕ್ಕೆ ಪ್ರತಿಯಾಗಿ 1,741 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ, 1,40,08,000 ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಪ್ರತೀ ದಿನ ಉತ್ಪತ್ತಿಯಾಗುವ ಘನ ತ್ಯಾಜ್ಯದ ಪ್ರಮಾಣ ಬರೋಬ್ಬರಿ 5 ಮೆಟ್ರಿಕ್ ಟನ್ ಆಗಿದೆ. ಹಾಗೆಯೇ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಐದನೆಯ ಸ್ಥಾನದಲ್ಲಿರುವ ಕರ್ನಾಟಕದ ಮೈಸೂರಿನಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯದ ಪ್ರಮಾಣ 450 ಟನ್ ಮಾತ್ರವಾಗಿದೆ. ಹೀಗಾಗಿಯೇ ಒಂದು ಕಾಲದಲ್ಲಿ ಉದ್ಯಾನನಗರಿ ಎಂದೇ ಹೆಸರಾಗಿದ್ದ ಬೆಂಗಳೂರೀಗ, ‘ಗಾರ್ಬೇಜ್ ಸಿಟಿ’ (ಕಸದ ನಗರ) ಎಂಬ ಕುಖ್ಯಾತಿಗೆ ತುತ್ತಾಗಿರುವುದು.

ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರಿಂದ ಅಧಿಕಾರ ಕೇಂದ್ರೀಕರಣಗೊಂಡು, ಆಡಳಿತ ನಿರ್ವಹಣೆ ಕಳಪೆ ಹಾಗೂ ಜನವಿರೋಧಿಯಾಗಿರುವ ಆರೋಪಗಳು ಪ್ರತಿ ನಿತ್ಯ ಕೇಳಿ ಬರುತ್ತಿವೆ. ಅಧಿಕಾರ ಕೇಂದ್ರೀಕರಣಗೊಂಡ ಕೂಡಲೇ ಭ್ರಷ್ಟಾಚಾರದ ಪ್ರಮಾಣ ಏರಿಕೆಯಾಗುವುದೂ ಸಹಜ ವಿದ್ಯಮಾನ. ಈ ಮಾತಿಗೆ ಬಿಬಿಎಂಪಿ ಕೂಡಾ ಹೊರತಾಗಿಲ್ಲ. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಅಧಿಕಾರ ವಿಕೇಂದ್ರೀಕರಣದಿಂದ ಹೆಚ್ಚು ಜನಪರ ಆಡಳಿತವನ್ನು ನಿರೀಕ್ಷಿಸಬಹುದೇ ಹೊರತು ಅಧಿಕಾರದ ಕೇಂದ್ರೀಕರಣದಿಂದಲ್ಲ. ರಾಮಕೃಷ್ಣ ಹೆಗಡೆಯವರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ನಝೀರ್ ಸಾಬ್ ಅವರು ಪರಿಚಯಿಸಿದ ಗ್ರಾಮ ಪಂಚಾಯತ್ ಪರಿಕಲ್ಪನೆಯಿಂದಾಗಿ ಅಧಿಕಾರ ವಿಕೇಂದ್ರೀಕರಣ ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂಬುದು ಅಧ್ಯಯನ ಯೋಗ್ಯವಾಗಿದೆ.

ಸಣ್ಣ ಸಣ್ಣ ಆಡಳಿತಾತ್ಮಕ ಘಟಕಗಳಿದ್ದಾಗ ಆಡಳಿತ ನಿರ್ವಹಣೆಯು ದಕ್ಷವೂ, ಸುಲಭವೂ ಮತ್ತು ಜನಪರವೂ ಆಗಿರಲಿದೆ. ಇಂತಲ್ಲಿ ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿಯಾಗಿ ಜಾರಿಯಾಗುವುದರಿಂದ, ಮೂಲಭೂತ ನಾಗರಿಕ ಸೌಲಭ್ಯಗಳೂ ತ್ವರಿತ ಗತಿಯಲ್ಲಿ ದೊರೆಯುವಂತಾಗುತ್ತದೆ. ಇಡೀ ವಿಶ್ವದಾದ್ಯಂತ ಗಂಭೀರ ಸಮಸ್ಯೆಯಾಗಿ ಬೆಳೆದು ನಿಂತಿರುವ ಘನ ತ್ಯಾಜ್ಯ ನಿರ್ವಹಣೆಯನ್ನೂ ಅಚ್ಚುಕಟ್ಟಾಗಿ ಮಾಡಲು ಸಾಧ್ಯವಿದೆ.

ಸದ್ಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು, ಬಿಬಿಎಂಪಿಯನ್ನು ಐದು ಭಾಗಗಳನ್ನಾಗಿ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ) ವಿಭಜಿಸಲು ಮುಂದಾಗಿದೆ. ಈ ಪ್ರಸ್ತಾವದ ಕುರಿತು ಅಪಸ್ವರವೆತ್ತಿರುವ ವಿರೋಧಿಗಳು, ಇದರಿಂದ ಆರ್ಥಿಕ ಅಸಮತೋಲನ ತಲೆದೋರಲಿದೆ ಎಂದು ತಕರಾರು ಎತ್ತಿದ್ದಾರೆ. ನಿಜ, ಈಗಾಗಲೇ ಸಾಕಷ್ಟು ಅಭಿವೃದ್ಧಿ ಹೊಂದಿರುವ ಪ್ರದೇಶಗಳನ್ನು ಒಳಗೊಂಡಿರುವ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬಂದಾಗ, ಈಗಷ್ಟೆ ಪ್ರಗತಿಯ ಪಥದತ್ತ ಹೆಜ್ಜೆ ಹಾಕುತ್ತಿರುವ ಪ್ರದೇಶಗಳನ್ನೊಳಗೊಂಡಿರುವ ಪ್ರತ್ಯೇಕ ಪಾಲಿಕೆಯು ಆರ್ಥಿಕ ಕ್ರೋಡೀಕರಣದಲ್ಲಿ ಹಿಂದೆ ಬೀಳುವುದು ನಿಶ್ಚಿತ.

ಆದರೆ, ಹಾಲಿ ಬಿಬಿಎಂಪಿ ತನ್ನ ಸ್ವಂತ ಮೂಲಗಳಿಂದ ಸಂಗ್ರಹಿಸುತ್ತಿರುವ ಆದಾಯವೇ ಅಜಮಾಸು ಕೇವಲ 10,000 ಕೋಟಿ ರೂಪಾಯಿ. ಉಳಿದೆಲ್ಲವೂ ರಾಜ್ಯ ಸರಕಾರ ನೀಡುತ್ತಿರುವ ಅನುದಾನದಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು. ಹೀಗಾಗಿ ಬೆಂಗಳೂರನ್ನು ಐದು ಪ್ರತ್ಯೇಕ ಪಾಲಿಕೆಗಳನ್ನಾಗಿ ವಿಭಜಿಸಿದ ನಂತರ, ಆರ್ಥಿಕ ಕ್ರೋಡೀಕರಣದಲ್ಲಿ ಹಿಂದುಳಿಯುವ ಪಾಲಿಕೆಗಳಿಗೆ ರಾಜ್ಯ ಸರಕಾರವು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ, ಹೆಚ್ಚು ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಸಾಮರ್ಥ್ಯ ಹೊಂದಿರುವ ಪಾಲಿಕೆಗಳಿಗೆ ಕೊಡುವ ಅನುದಾನದಲ್ಲಿ ಕಡಿತ ಮಾಡಿದರೂ ಸಾಕು; ಬೆಂಗಳೂರಿನ ಸಮತೋಲಿತ ಪ್ರಗತಿ ತನಗೆ ತಾನೇ ಆಗಲಿದೆ.

ಈ ಹಿನ್ನೆಲೆಯಲ್ಲಿ, ಆಡಳಿತ ವಿಕೇಂದ್ರೀಕರಣದ ಆಶಯಕ್ಕೆ ಪೂರಕವಾಗಿರುವ ಬಿಬಿಎಂಪಿ ವಿಭಜನೆ ಪ್ರಸ್ತಾವದಿಂದ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಹಿಂದೆಗೆಯಬಾರದು. ಬದಲಿಗೆ ಆದಷ್ಟೂ ಶೀಘ್ರವಾಗಿ ಈ ಪ್ರಸ್ತಾವವನ್ನು ಅನುಷ್ಠಾನಗೊಳಿಸಿ, ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳ ಗೈರನ್ನು ಅನುಭವಿಸುತ್ತಿರುವ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕಿದೆ. ಆ ಮೂಲಕ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸದಾನಂದ ಗಂಗನಬೀಡು

contributor

Similar News