ಎನ್‌ಡಿಎ ಮಿತ್ರಪಕ್ಷಗಳು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತವೆಯೇ?

ಎನ್‌ಡಿಎ ಪಾಲುದಾರ ಪಕ್ಷಗಳ ಮುಂದಿರುವ ಆಯ್ಕೆ ಎರಡೇ, ಹೋರಾಡಿ ತಮ್ಮ ಸ್ವತಂತ್ರ ಜಾತ್ಯತೀತ ಅಸ್ಮಿತೆ ಮತ್ತು ಅಲ್ಪಸಂಖ್ಯಾತ ಬೆಂಬಲದ ನೆಲೆಯನ್ನು ಉಳಿಸಿಕೊಳ್ಳುವುದು ಅಥವಾ ಮೋದಿಯ ಶಾಶ್ವತ ಚಿಯರ್ ಲೀಡರ್‌ಗಳಾಗಿ ಬೆನ್ನೆಲುಬಿಲ್ಲದ ಸ್ಥಿತಿಯಲ್ಲೇ ಉಳಿದುಬಿಡುವುದು ಮತ್ತು ಆ ಮೂಲಕ ಈ ಹಿಂದೆ ಮಿತ್ರಪಕ್ಷಗಳಾಗಿದ್ದ ಎಸ್‌ಎಡಿ, ಎಐಎಡಿಎಂಕೆ, ಬಿಜೆಡಿ, ವೈಎಸ್‌ಆರ್‌ಸಿಪಿ, ತೆಲಂಗಾಣದ ಬಿಆರ್‌ಎಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗಳ ಹಾಗೆಯೇ ತಮ್ಮ ರಾಜಕೀಯ ಸಮಾಧಿಗೆ ತಾವೇ ಹಳ್ಳ ತೋಡಿಕೊಳ್ಳುವುದು.

Update: 2024-10-03 06:36 GMT

ಎನ್‌ಡಿಎ ಮಿತ್ರಪಕ್ಷಗಳ ಮುಂದೆ ನಿಜವಾಗಿಯೂ ಇರುವ ಆಯ್ಕೆ ಏನು ಈಗ? ಅವು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತವೆಯೇ ಅಥವಾ ಮೋದಿ ಭಜನೆ ಬಿಟ್ಟರೆ ಬೇರೆ ಗತಿಯಿಲ್ಲ ಎಂದು ಚಿಯರ್‌ಲೀಡರ್ ಪಾತ್ರ ನಿರ್ವಹಿಸುತ್ತವೆಯೆ?

ಏಕೆ ಈ ಪ್ರಶ್ನೆಯೆಂದರೆ, ಈಗಾಗಲೇ ಕೆಲ ನಿರ್ಧಾರಗಳನ್ನು ಹಿಂದೆಗೆದುಕೊಳ್ಳಬೇಕಾದ ಸಂದರ್ಭದಲ್ಲೂ ಮೋದಿ ತಮ್ಮದೇ ಆದ ಅಜೆಂಡಾವನ್ನು ಮುಂದುವರಿಸಿದ್ದಾರೆ. ಹೀಗಿರುವಾಗ ಮಿತ್ರಪಕ್ಷಗಳ ಮಂದಿರುವ ಸವಾಲುಗಳು ಕುತೂಹಲ ಕೆರಳಿಸಿವೆ.

ಸರಕಾರಿ ನೌಕರರಿಗೆ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದರಿಂದ ಹಿಡಿದು ವಕ್ಫ್ ತಿದ್ದುಪಡಿ ಮಸೂದೆ, ಪ್ರಸಾರ ಮಸೂದೆ, ಹಿಂಬಾಗಿಲ ಮೂಲಕ ನಾಗರಿಕ ಸೇವೆಗಳಿಗೆ ನೇಮಕ ಮತ್ತು ಜಾತ್ಯತೀತ ನಾಗರಿಕ ಸಂಹಿತೆ ವಿಚಾರದವರೆಗೆ ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಕಡೆಗಣಿಸಿಯೇ ನಿರ್ಧಾರಗಳನ್ನು ತೆಗೆದುಕೊಂಡಿತ್ತು ಎಂಬುದು ನಿಜ.

ಈಗ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವಕ್ಕೆ ಮೋದಿ ಸರಕಾರದ ಸಂಪುಟ ಅನುಮೋದನೆ ನೀಡಿದೆ. ಇದು ಯಾವುದೇ ವ್ಯವಸ್ಥಿತ ಅಡೆತಡೆಗಳೇ ಇಲ್ಲದೆ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಅವಕಾಶ ಕೊಡಬಲ್ಲ ದಾರಿಯಾಗಿದೆ.

ಹಾಗಾದರೆ ಮುಂದೇನು?

ಐದು ವರ್ಷಗಳಿಗೊಮ್ಮೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರ ಕುರಿತ ಕೋವಿಂದ್ ಸಮಿತಿಯ ವರದಿಗೆ ಸೆಪ್ಟಂಬರ್ 18ರಂದು ಕೇಂದ್ರ ಸಚಿವ ಸಂಪುಟ ಔಪಚಾರಿಕ ಅನುಮೋದನೆ ನೀಡಿದೆ. ಆದರೆ ಇದು ಜಾರಿಯಾಗುವುದು ಸದ್ಯದ ಸಂದರ್ಭದಲ್ಲಿ ಅಷ್ಟು ಸುಲಭವಾಗಿಯೇನೂ ಕಾಣಿಸುತ್ತಿಲ್ಲ.

ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿರುವ ಕನಿಷ್ಠ ಐದು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ.

ಬಿಜೆಪಿ ಮಿತ್ರಪಕ್ಷಗಳಾದ ಟಿಡಿಪಿಯ 16, ಜೆಡಿಯುನ 12, ಮತ್ತು ಚಿರಾಗ್ ಪಾಸ್ವಾನ್ ಅವರ ಪಕ್ಷದ 6 ಸ್ಥಾನಗಳು ಸೇರಿ ಲೋಕಸಭೆಯಲ್ಲಿ ಎನ್‌ಡಿಎ ಪ್ರಸಕ್ತ ಸಂಖ್ಯಾಬಲ 293. ಇನ್ನೂ 69 ಸಂಸದರ ಬೆಂಬಲ ಬೇಕಾಗುತ್ತದೆ. ರಾಜ್ಯಸಭೆಯಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿಯಿದೆ. ಈ ಸನ್ನಿವೇಶದಲ್ಲಿ ಸಾಂವಿಧಾನಿಕ ತಿದ್ದುಪಡಿಗಾಗಿ ಗೆಲುವು ಸಾಧಿಸಲು ಬಿಜೆಪಿಯ ಪ್ಲಾನ್ ಏನು?

‘ಒಂದು ರಾಷ್ಟ್ರ ಒಂದು ಚುನಾವಣೆ’ಯನ್ನು ಇದೇ ಅವಧಿಯಲ್ಲಿ ಸರಕಾರ ಜಾರಿಗೆ ತರಲಿದೆ ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ಪ್ರತಿಪಾದಿಸಿದ ಕೆಲವು ದಿನಗಳಲ್ಲೇ ಕ್ಯಾಬಿನೆಟ್ ಅನುಮೋದನೆ ನೀಡಲಾಯಿತು. ಅಲ್ಲದೆ, ಮಿತ್ರಪಕ್ಷಗಳು ಮರುಪರಿಶೀಲನೆಗೆ ಒತ್ತಡ ಹೇರುತ್ತಿವೆ ಎಂಬುದನ್ನು ತಳ್ಳಿಹಾಕಲಾಯಿತು. ಈ ಸರಕಾರ ಹೇಗೆ ಕೆಲಸ ಮಾಡಬೇಕೋ ಹಾಗೆಯೇ ಕೆಲಸ ಮಾಡುತ್ತದೆ. ಗೊಂದಲಕ್ಕೆ ಅವಕಾಶವೇ ಇಲ್ಲ ಎನ್ನುವ ಮೂಲಕ, ಮೋದಿ ಸರಕಾರ ಕಳೆದ 10 ವರ್ಷಗಳಲ್ಲಿ ಇದ್ದಷ್ಟೇ ಗಟ್ಟಿಯಾಗಿದೆ ಎಂದು ಬಿಂಬಿಸುವ ಯತ್ನವೂ ಆಯಿತು. ಮತ್ತದಕ್ಕೆ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಸಾರ ಸಿಗುವಂತೆ ನೋಡಿಕೊಳ್ಳಲಾಯಿತು.

ಸರಕಾರ ತನ್ನ ಯಾವುದೇ ಪ್ರಮುಖ ನೀತಿಗಳ ಬಗ್ಗೆ ಮೃದು ಧೋರಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ಅದೇ ಹಿರಿಯ ಪದಾಧಿಕಾರಿ ಹೇಳಿದ್ದರು.

ಪಾರದರ್ಶಕತೆಯನ್ನು ತರಲು ವಕ್ಫ್ ಬೋರ್ಡ್ ಸುಧಾರಣೆಯಂತಹ ಕಠಿಣ ನಿರ್ಧಾರಗಳನ್ನೇ ಸರಕಾರ ಕೈಗೆತ್ತಿಕೊಂಡಿದೆ. ಇದು ತುಷ್ಟೀಕರಣದ ರಾಜಕೀಯಕ್ಕೆ ಹೊಡೆತ ಎಂದು ಅವರು ಹೇಳಿದ್ದರು.

ಹಾಗಾದರೆ, ಈ ಮೂಲಕ ಮಿತ್ರಪಕ್ಷಗಳನ್ನು ಬೆದರಿಸಲು ಮತ್ತು ನಿಮ್ಮ ಆಟವೇನೂ ಸಾಗದು, ನಾವೇನು ಹೇಳುತ್ತೇವೆಯೊ ಅದಕ್ಕೆ ಮಣಿಯಲೇಬೇಕು ಎಂಬ ಸಂದೇಶವನ್ನು ಮೋದಿ-ಶಾ ಜೋಡಿಯ ಬಿಜೆಪಿ ನೀಡುತ್ತಿದೆಯೆ?

‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವಕ್ಕೆ ಒಂದು ದಿನ ಮೊದಲು ಅಮಿತ್ ಶಾ, ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಖಂಡಿತವಾಗಿಯೂ ವಕ್ಫ್ ಬೋರ್ಡ್ ಮಸೂದೆ ಅಂಗೀಕರಿಸಲಾಗುವುದು ಎಂದು ಹೇಳಿದ್ದನ್ನು ಗಮನಿಸಬೇಕು.

ಮಸೂದೆ ಸದ್ಯ ಜಂಟಿ ಸಂಸದೀಯ ಸಮಿತಿಯ ಮುಂದೆ ಇದೆ.ಇದೇ ವೇಳೆ ಜನಗಣತಿ ಕಾರ್ಯಕ್ಕೆ ಚಾಲನೆ ನೀಡುವ ಮತ್ತು ಜಾತಿ ಗಣತಿ ವಿಚಾರದಲ್ಲಿ ಮುಕ್ತವಾಗಿರುವ ಭರವಸೆಯನ್ನೂ ಶಾ ನೀಡಿದ್ದಾರೆ.

ಕ್ಯಾಬಿನೆಟ್‌ನಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವಕ್ಕೆ ಅವಿರೋಧವಾಗಿ ಅನುಮೋದನೆ ನೀಡಿರುವುದನ್ನು ಮೋದಿ ಮೂರನೇ ಅವಧಿಯ 100 ದಿನಗಳ ಖಾತರಿಗಳಲ್ಲಿ ಒಂದು ಎಂದು ಬಿಂಬಿಸಲಾಗಿದೆ.

ಮಿತ್ರಪಕ್ಷಗಳಾದ ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಮತ್ತು ಚಂದ್ರಬಾಬು ನಾಯ್ಡು ಇದನ್ನು ಬೆಂಬಲಿಸಿದ್ದಾರೆ.

ಕೋವಿಂದ್ ಸಮಿತಿ ವರದಿ ಕುರಿತು ಸಂಪುಟದ ನಿರ್ಧಾರವನ್ನು ಒಮ್ಮತದ ಆಧಾರದ ಮೇಲೆ ಅನುಷ್ಠಾನಗೊಳಿಸಬೇಕು ಎಂದು ನಾಯ್ಡು ಹೇಳಿದ್ದಾರೆ.

ಇದೇ ನಾಯ್ಡು 2019ರಲ್ಲಿ ಕೋವಿಂದ್ ಸಮಿತಿ ವಿಚಾರವಾಗಿ ಮೋದಿ ಕರೆದಿದ್ದ ಸಭೆಯನ್ನು ಬಹಿಷ್ಕರಿಸಿದ ವಿಪಕ್ಷ ನಾಯಕರಲ್ಲಿ ಒಬ್ಬರಾಗಿದ್ದರು. ಹಾಗಾಗಿ, ಅವರ ಈಗಿನ ನಡೆಯ ಮರ್ಮ ಕೂಡ ಸ್ಪಷ್ಟವಾಗುತ್ತಿಲ್ಲ.

ಎನ್‌ಡಿಎ ಮಿತ್ರಪಕ್ಷಗಳು ಮೌನವಹಿಸಿರುವಾಗ, ವಕ್ಫ್ ಮಂಡಳಿ ಕುರಿತ ಸಂಸದೀಯ ಸಮಿತಿಯ ಸದಸ್ಯರು ಅಮಿತ್ ಶಾ ಹಸ್ತಕ್ಷೇಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಅಮಿತ್ ಶಾಗೆ ಹೇಗೆ ಅಷ್ಟು ಧೈರ್ಯ ಎಂಬುದರ ಹಿನ್ನೆಲೆ ಸ್ಪಷ್ಟವಿದೆ.

ಎನ್‌ಡಿಎ ಪಾಲುದಾರ ಪಕ್ಷಗಳು ಈಗಾಗಲೇ ಮೋದಿಯ ಸಮ್ಮಿಶ್ರ ನಾಯಕತ್ವವನ್ನು ಒಪ್ಪಿಕೊಂಡಿರುವುದರಿಂದ, ಅವು ಮೋದಿಯ ಸೂಪರ್ ಬಾಸ್ ಸ್ಥಾನವನ್ನೂ ಬೆಂಬಲಿಸಬೇಕಿದೆ ಮತ್ತು ಮೋದಿ ನಿರ್ಧಾರಗಳನ್ನು ಅವು ಪ್ರಶ್ನಿಸಲಾರವು ಎಂಬುದು ಅಮಿತ್ ಶಾಗೆ ಗೊತ್ತಿದೆ.

ಸರಕಾರದ ಅಜೆಂಡಾವನ್ನು ನಿರ್ಧರಿಸಲು ಮತ್ತು ಘೋಷಿಸಲು ಪ್ರಧಾನಿಗೆ ಪರಮಾಧಿಕಾರವಿದ್ದು, ಮಿತ್ರಪಕ್ಷಗಳೊಂದಿಗೆ ಪೂರ್ವ ಸಮಾಲೋಚನೆ ಮತ್ತು ಚರ್ಚೆಗಳಿಗೆ ಅವಕಾಶವಿಲ್ಲ ಎಂಬುದು ಅವರ ಪ್ರತಿಪಾದನೆ.

ಬಿಜೆಪಿಯ ಹಿರಿಯ ನಾಯಕರ ಹಾಗೆಯೇ ಮಿತ್ರಪಕ್ಷಗಳ ನಾಯಕರೂ ಚಿಯರ್ ಲೀಡರ್‌ಗಳಾಗಿ ಮಾತ್ರವೇ ಪಾತ್ರ ನಿರ್ವಹಿಸಬೇಕು. ಸ್ಥಿರತೆ ದೃಷ್ಟಿಯಿಂದ ಬಿಜೆಪಿ ಪ್ರಣಾಳಿಕೆಯನ್ನು ಮತ್ತು ಕಾಲಕಾಲಕ್ಕೆ ಮೋದಿ ಘೋಷಿಸುವ ನೀತಿಗಳನ್ನು ಎಲ್ಲಾ ಮಿತ್ರಪಕ್ಷಗಳು ಒಪ್ಪಿಕೊಳ್ಳಬೇಕು ಎಂಬ ಸಮ್ಮಿಶ್ರ ಧರ್ಮವನ್ನು ಅಮಿತ್ ಶಾ ಪ್ರತಿಪಾದಿಸುತ್ತಿರುವುದು ಸ್ಪಷ್ಟ.

ಹೀಗಿರುವಾಗ, ಎನ್‌ಡಿಎ ಪಾಲುದಾರ ಪಕ್ಷಗಳ ಮುಂದಿರುವ ಆಯ್ಕೆ ಎರಡೇ, ಹೋರಾಡಿ ತಮ್ಮ ಸ್ವತಂತ್ರ ಜಾತ್ಯತೀತ ಅಸ್ಮಿತೆ ಮತ್ತು ಅಲ್ಪಸಂಖ್ಯಾತ ಬೆಂಬಲದ ನೆಲೆಯನ್ನು ಉಳಿಸಿಕೊಳ್ಳುವುದು ಅಥವಾ ಮೋದಿಯ ಶಾಶ್ವತ ಚಿಯರ್ ಲೀಡರ್‌ಗಳಾಗಿ ಬೆನ್ನೆಲುಬಿಲ್ಲದ ಸ್ಥಿತಿಯಲ್ಲೇ ಉಳಿದುಬಿಡುವುದು ಮತ್ತು ಆ ಮೂಲಕ ಈ ಹಿಂದೆ ಮಿತ್ರಪಕ್ಷಗಳಾಗಿದ್ದ ಎಸ್‌ಎಡಿ, ಎಐಎಡಿಎಂಕೆ, ಬಿಜೆಡಿ, ವೈಎಸ್‌ಆರ್‌ಸಿಪಿ, ತೆಲಂಗಾಣದ ಬಿಆರ್‌ಎಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗಳ ಹಾಗೆಯೇ ತಮ್ಮ ರಾಜಕೀಯ ಸಮಾಧಿಗೆ ತಾವೇ ಹಳ್ಳ ತೋಡಿಕೊಳ್ಳುವುದು.

ಬಿಜೆಪಿಯ ಬಿಗ್ ಟು ಆಗಿರುವ ಮೋದಿ ಮತ್ತು ಶಾ ಚರ್ಚೆ, ಸಮಾಲೋಚನೆಯಲ್ಲಿ ನಂಬಿಕೆ ಇಲ್ಲದವರೆಂಬುದು ಮತ್ತೊಮ್ಮೆ ಸ್ಪಷ್ಟವಾಗಿರುವ ವಿಚಾರ. ಸರಕಾರದ ಉಳಿವಿಗಾಗಿ ಮಾತ್ರವೇ ಮಿತ್ರಪಕ್ಷಗಳ ಮೇಲೆ ಅವರು ಅವಲಂಬಿತರಾಗಿದ್ದಾರೆ.

ಜುಲೈ 21ರಂದು, ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ಸರಕಾರಿ ನೌಕರರ ಮೇಲಿನ 58 ವರ್ಷಗಳ ನಿಷೇಧ ತೆಗೆದುಹಾಕಲಾಯಿತು.

ಅದಾದ ಎರಡು ವಾರಗಳ ನಂತರ ವಕ್ಫ್ ಬೋರ್ಡ್ ತಿದ್ದುಪಡಿ ವಿಧೇಯಕ ಬಂತು ಮತ್ತು ವಿಪಕ್ಷಗಳ ಒತ್ತಾಯದ ಮೇರೆಗೆ ಅದನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು. ಈ ಮಧ್ಯೆ, ಡಿಜಿಟಲ್ ಮಾಧ್ಯಮದ ಮೇಲೆ ಹಿಡಿತ ಸಾಧಿಸುವ ಉದ್ದೇಶವಿದ್ದ ಪ್ರಸಾರ ಮಸೂದೆ ಕರಡಿನ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು.ಆನಂತರ ಅದನ್ನು ಹಿಂದೆಗೆದುಕೊಳ್ಳಲಾಯಿತು.

ಆಗಸ್ಟ್ 17ರಂದು ಮೋದಿ ಸರಕಾರ ಹಿಂಬಾಗಿಲ ಮೂಲಕ ನಾಗರಿಕ ಸೇವೆಗಳಿಗೆ ಜಂಟಿ ಕಾರ್ಯದರ್ಶಿ ಮಟ್ಟದ ಸಿಬ್ಬಂದಿ ನೇಮಕ ಮಾಡುವ ತನ್ನ ಏಕಪಕ್ಷೀಯ ನಿರ್ಧಾರವನ್ನು ಪ್ರಕಟಿಸಿತು.

ಇದು ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಬಹಿರಂಗವಾಗಿಯೇ ಕಿತ್ತುಕೊಳ್ಳುವ ಮತ್ತು ಹಿಂಬಾಗಿಲಿನ ಮೂಲಕ ಆರೆಸ್ಸೆಸ್ ಕಾರ್ಯಕರ್ತರನ್ನು ಸರಕಾರದಲ್ಲಿ ಸೇರಿಸುವ ಪ್ರಯತ್ನವಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಮೀಸಲಾತಿ ವಿಷಯ ಬಂದದ್ದರಿಂದ ಮಿತ್ರಪಕ್ಷಗಳಾದ ಜೆಡಿಯು ಮತ್ತು ಚಿರಾಗ್ ಪಕ್ಷ ತಮ್ಮ ಭಿನ್ನ ನಿಲುವು ವ್ಯಕ್ತಪಡಿಸಿದವು. ಇದೆಲ್ಲದರ ಹಿನ್ನೆಲೆಯಲ್ಲಿ ಪ್ರಸ್ತಾವವನ್ನು ತಕ್ಷಣವೇ ಹಿಂದೆಗೆದುಕೊಳ್ಳಲಾಯಿತು.

ಹೀಗೆ ಕೆಲವು ನಿರ್ಧಾರಗಳನ್ನು ಹಿಂದೆಗೆದುಕೊಂಡಿರುವುದು ನಿಜವೇ ಆದರೂ, ಮೋದಿ ತಮ್ಮ ಅಜೆಂಡಾದಿಂದ ಹಿಂದೆ ಸರಿದಿಲ್ಲ ಎಂಬುದೂ ಸ್ಪಷ್ಟವಿದೆ.

ಕೆಂಪು ಕೋಟೆಯ ಭಾಷಣದಲ್ಲಿ ಅವರು ಹೊಚ್ಚ ಹೊಸ ಜಾತ್ಯತೀತ ನಾಗರಿಕ ಸಂಹಿತೆಯ ಅಗತ್ಯವನ್ನು ಪ್ರತಿಪಾದಿಸಿದರು. ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತ ಕೋವಿಂದ್ ಸಮಿತಿಯ ವರದಿ ಅನುಷ್ಠಾನದ ಬಗ್ಗೆಯೂ ಘೋಷಿಸಿದರು. ಇದೇ ವೇಳೆ, ಭ್ರಷ್ಟಾಚಾರದ ವಿರುದ್ಧದ ಯುದ್ಧ ಮುಂದುವರಿಯುತ್ತದೆ ಎಂದೂ ಹೇಳಲು ಮೋದಿ ಮರೆಯಲಿಲ್ಲ.

ಅಲ್ಪಸಂಖ್ಯಾತರ ವಿರೋಧಿ ಎಂದು ಪರಿಗಣಿಸಲಾದ ವಕ್ಫ್ ಮಸೂದೆಯ ಬಗ್ಗೆ ಗದ್ದಲ ಜೋರಾದಾಗ, ಮೈತ್ರಿಪಕ್ಷಗಳನ್ನು ಸಮಾಧಾನಪಡಿಸಲು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮುಂದೆ ಮಾಡಲಾಯಿತು.

ಆಗಸ್ಟ್ 16ರಂದು ನಡೆದ ಸಭೆಯಲ್ಲಿ ಎನ್‌ಡಿಎ ಪಕ್ಷಗಳ ಮಾಸಿಕ ಸಮನ್ವಯ ಸಭೆ ಕರೆಯಲು ಬಿಜೆಪಿ ಒಪ್ಪಿಗೆ ನೀಡಿತು.

ಆದರೆ ಯಾವುದೇ ರೀತಿಯ ಔಪಚಾರಿಕ ಸಮನ್ವಯಕ್ಕೆ ಬಿಜೆಪಿ ಯಾವಾಗಲೂ ವಿಮುಖವಾಗಿಯೇ ಇದೆ.

ಚಂದ್ರಬಾಬು ನಾಯ್ಡು ಪ್ರಸ್ತಾವಕ್ಕೆ ಮೋದಿ ಮಣಿದಿರುವುದೇನೋ ನಿಜ. ಆದರೆ ನಡ್ಡಾ ನೇತೃತ್ವದ ಸಮನ್ವಯ ಸಮಿತಿಗೆ ಹೆಚ್ಚಿನ ಮಹತ್ವವೇನೂ ಇಲ್ಲ.

ಈ ಹಿಂದೆ, ದೇವೇಗೌಡ, ಐ.ಕೆ. ಗುಜ್ರಾಲ್ ಮತ್ತು ಮನಮೋಹನ್ ಸಿಂಗ್ ಈ ಎಲ್ಲಾ ಸಮ್ಮಿಶ್ರ ಪ್ರಧಾನಿಗಳು ಸಮನ್ವಯ ಸಮಿತಿ ಸಭೆಗಳನ್ನು ಕರೆದು ಸರಕಾರದ ನೀತಿಗಳನ್ನು ಚರ್ಚಿಸಿದ್ದಿತ್ತು.

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಕೋರ್ ಕಮಿಟಿ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ವಾಜಪೇಯಿ ಕಾಲದಲ್ಲಿ ಸಮನ್ವಯ ಸಮಿತಿ ಇರಲಿಲ್ಲ. ಆದರೆ ಅವರು ಯಾವಾಗಲೂ ಮಿತ್ರಪಕ್ಷಗಳ ಜೊತೆ ಸಂವಾದಕ್ಕೆ ಮುಕ್ತರಾಗಿದ್ದರು.

ಆಗಾಗ ಅವರು ಎನ್‌ಡಿಎ ಪಾಲುದಾರ ಪಕ್ಷಗಳು ಮತ್ತು ಆರೆಸ್ಸೆಸ್, ಬಿಜೆಪಿ ನಾಯಕರನ್ನು ಪ್ರತ್ಯೇಕವಾಗಿ ಅಥವಾ ತಮ್ಮ ನಿವಾಸದಲ್ಲಿನ ಭೋಜನ ಕೂಟದ ಸಭೆಗಳಲ್ಲಿ ಭೇಟಿಯಾಗುತ್ತಿದ್ದರು.

ಆದರೆ ನಿಜವಾದ ನಿರಂಕುಶಾಧಿಕಾರಿಯಂತಿರುವ ಮೋದಿ ಯಾವತ್ತೂ ವಾಜಪೇಯಿ ಬಯಸಿದ್ದ ರಾಜನೀತಿಯನ್ನು ಪಾಲಿಸಿದ್ದೇ ಇಲ್ಲ. ಅವರು ಎಲ್ಲ ನಾಯಕರನ್ನೂ ತನಗಿಂತ ಕಡಿಮೆ ಎಂದೇ ಭಾವಿಸುತ್ತಾರೆ ಮತ್ತು ಅವರೊಡನೆ ಕೂತು ಸಮಾಲೋಚಿಸಲು ನಿರಾಕರಿಸುತ್ತಾರೆ. ಹಾಗಾಗಿ ಮೋದಿ ಹಾಗೂ ಅಮಿತ್ ಶಾ ಜೊತೆ ತಾವು ಹೇಗೆ ಮುಂದುವರಿಯಬೇಕು ಎಂಬುದನ್ನು ಅವರ ಮಿತ್ರಪಕ್ಷಗಳ ನಾಯಕರು ನಿರ್ಧರಿಸಬೇಕಾಗಿದೆ.

ಅವರು ಎಷ್ಟು ಬೇಗ ಈ ಕುರಿತ ನಿರ್ಧಾರಕ್ಕೆ ಬರುತ್ತಾರೆ ಮತ್ತು ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬುದು ಅವರವರ ರಾಜ್ಯಗಳಲ್ಲಿ ಅವರ ರಾಜಕೀಯಕ್ಕೆ ಸಹಕಾರಿ ಅಥವಾ ಅಪಾಯಕಾರಿಯಾಗಿ ಪರಿಣಮಿಸಲಿದೆ.

***

thewireನಲ್ಲಿ ಪ್ರಕಟಿತ ಪಿ. ರಮಣ್ ಅವರ ಲೇಖನ ಆಧರಿತ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಚಂದ್ರಕಾಂತ್ ಎನ್.

contributor

Similar News