ಮುಡಾ ಭೂತ: ಸಿದ್ದರಾಮಯ್ಯ ಬಲಿಪಶುವಾಗುವರೆ?

Update: 2024-08-26 06:57 GMT

ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಹಗರಣ ನಡೆಯದ ಕಾಲ-ಗಳಿಗೆಗಳನ್ನು ಹುಡುಕಿದವರೆಲ್ಲರೂ ಬೇಸ್ತುಬಿದ್ದಿದ್ದಾರೆ. ಏಕೆಂದರೆ, ಇಲ್ಲಿ ನಡೆಯುವ ಭೂ ಹಗರಣಗಳು ಬಡಬೋರಣ್ಣನ ಉಳಿವಿಗಾಗಿ ನಡೆದಿರೋದಿಲ್ಲ. ಅವುಗಳೆಲ್ಲವೂ ಅಪವಿತ್ರ ಮೈತ್ರಿಗಳಿಂದ ನಡೆದಿರುತ್ತವೆ. ಆದರೆ ಭೂಮಿ ಕಳೆದುಕೊಂಡ ರೈತರು ಮಾತ್ರ ಅತಂತ್ರರಾಗಿದ್ದಾರೆ. ಮೈಸೂರು ನಗರ ಎಂದಿನಂತೆ ತನ್ನ ವಿಸ್ತಾರ ಮತ್ತು ಅಭಿವೃದ್ಧಿಯಲ್ಲಿ ದಾಪುಗಾಲಿಡುತ್ತಿದೆ. ಅದರಲ್ಲಿಯೂ ಮೈಸೂರು ತಾಲೂಕಿನ ಅದರ ಸುತ್ತಮುತ್ತಲ ಗ್ರಾಮೀಣ ರೈತರು ಇದ್ದಷ್ಟು ಭೂಮಿಯನ್ನು ಮುಡಾ ಮತ್ತು ಖಾಸಗಿ ಭೂ ವ್ಯವಹಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ ಸಹ ಕೆಸರೆ ಭಾಗದಲ್ಲಿ ಭೂಮಿ ಖರೀದಿಸಿದ್ದಾರೆ. ಖರೀದಿಸಿದ್ಧ ಸದರಿ ಭೂಮಿಯನ್ನು ತನ್ನ ಸಹೋದರಿ ಪಾರ್ವತಮ್ಮರಿಗೆ ಅಂದರೆ ಸಿದ್ದರಾಮಯ್ಯ ಅವರ ಮಡದಿಗೆ ದಾನ ನೀಡಿದ್ದಾರೆ. ಆಸ್ತಿ ವರ್ಗಾವಣೆಗಳು ಅನೇಕ ಸ್ವರೂಪ ಮತ್ತು ಪ್ರಕಾರಗಳಲ್ಲಿ ನಡೆಯುತ್ತವೆ. ಉದಾಹರಣೆಗೆ ಪಿತ್ರಾರ್ಜಿತ ಆಸ್ತಿಯ ಹಕ್ಕುದಾರಿಕೆಯು ವಂಶವಾಹಿನಿಗಳ ನಡುವೆ ಹಂಚಿಕೆ ಆಗುತ್ತದೆ. ಸ್ವಯಾರ್ಜಿತ ಆಸ್ತಿಯು ಸಂಪಾದಿತರ ಮಕ್ಕಳಿಗೆ ಆತನ ಮರಣ ತರುವಾಯ ವಾರಸುದಾರರಿಗೆ ವರ್ಗಾವಣೆ ಆಗುತ್ತದೆ ಅಥವಾ ಸಂಪಾದಿತನು ಅಂತಹ ಆಸ್ತಿಯನ್ನು ಉಯಿಲು ಮೂಲಕ ಹಂಚಬಹುದು ಇಲ್ಲವೆ ನೇರವಾಗಿ ಹಂಚಲಿಕ್ಕೆ ಅವಕಾಶವುಂಟು. ಒಂದು ವೇಳೆ ಹೆಣ್ಣು ಮಗಳಿಗೆ ತಾಯಿ/ತವರಿನಿಂದ ದಾನ ನೀಡಿದರೆ ಅವಳ ಜೀವಿತ ಅವಧಿಯಲ್ಲಿ ಅವಳ ಮಕ್ಕಳಿಗೆ ಸಹ ಅಂತಹ ಆಸ್ತಿ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಇರುವುದಿಲ್ಲ. ಇದನ್ನೇ ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ಸಹ ನಿಖರವಾಗಿ ವ್ಯಾಖ್ಯಾನ ಮಾಡಿದೆ. ಯಾರಿಗಾದರೂ ಸರಕಾರದ ಸ್ಥಾಪಿತ ಕಾನೂನಿನಡಿ ಇನಾಮು, ಕೊಡುಗೆ ಇತರ ಸ್ವರೂಪದಲ್ಲಿ ವ್ಯಕ್ತಿಯೊಬ್ಬನಿಗೆ ಆಸ್ತಿಯು ಬಂದಿದ್ದರೆ ಅದರ ಆಸ್ತಿಯ ಹಕ್ಕು ಆತ ಮೃತನಾದ ನಂತರ ಮಕ್ಕಳಿಗೆ ವರ್ಗವಾಗುತ್ತದೆ. ಮಕ್ಕಳಿಲ್ಲದೆ ಅಥವಾ ಹೆಂಡತಿಯೂ ಇರದಿದ್ದರೆ ಅದಕ್ಕೆ ಬೇರೊಂದು ವರ್ಗಾವಣೆ ಸ್ವರೂಪದಲ್ಲಿ ಪ್ರಕ್ರಿಯೆಗಳು ಜರುಗುತ್ತವೆ.

ಮುಡಾ ಬದಲಿ ನಿವೇಶನದ ರಗಳೆ ರಾಜ್ಯಾದ್ಯಂತ ಎರಡಲಗಿನ ಕತ್ತಿ ಮೇಲೆ ನಡೆಯುವಾಗ ಬರುವ ಭಯದ ವಾತಾವರಣವನ್ನು ಸಿದ್ದರಾಮಯ್ಯ ಅವರ ಅನುಯಾಯಿಗಳಲ್ಲಿ ಸೃಷ್ಟಿಸಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ-1987 ನಿಯಮ-14 ಪ್ರಕಾರ ಪ್ರಾಧಿಕಾರಗಳು ನಗರಾಭಿವೃದ್ಧಿಗಾಗಿ ‘‘ ಯೋಜನೆ (Planning) ಮತ್ತು ಉತ್ತೇಜನ (Promotion) ಹಾಗೂ ಅಭಿವೃದ್ಧಿಗಾಗಿ (Development) ಭೂಮಿಯನ್ನು ಸ್ವಾಧೀನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮುಂದುವರಿದು ಅದರ ನಿಯಮ-15 ಈ ಕಾರ್ಯಗಳಿಗೆ ಬೇಕಾದ ಹಣಕಾಸನ್ನು ಪೂರೈಕೆ ಮಾಡುವ ಅಧಿಕಾರವನ್ನು ಪ್ರಾಧಿಕಾರಗಳಿಗೆ ಪ್ರದತ್ತವಾಗಿಸಿದೆ. ಹಾಗೆಯೇ ಪ್ರಾಧಿಕಾರಗಳು ನಗರಾಭಿವೃದ್ಧಿಗಾಗಿ ಬೇಕಾದ ಕಾರ್ಯಕ್ರಮ ನಿರೂಪಿಸುವ ಹೊಣೆಗಾರಿಕೆಯನ್ನು 16-17 ನಿಯಮಗಳ ಮೂಲಕ ಪಡೆದಿವೆ. ಸದರಿ ಕಾಯ್ದೆಯಲ್ಲಿ ಅಡಕವಾಗಿರುವ ನಿಯಮ-35 ಮತ್ತು 36 ಅದರ ಆತ್ಮವಾಗಿವೆ. ನಗರಾಭಿವೃದ್ಧಿ ಪ್ರಾಧಿಕಾರಗಳು ನಗರಾಭಿವೃದ್ಧಿಗಳಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರದಿಂದ ಅನುಮೋದನೆ ಸ್ವೀಕೃತವಾದ ಮೇಲೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತದೆ. ಈ ಪ್ರಕಾರದಲ್ಲಿ ಪಾರ್ವತಮ್ಮನವರ ಭೂಮಿ ಸಹ ಪ್ರಾಥಮಿಕವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಭೂ ಸ್ವಾಧೀನವಾಗಿದೆ. ದ್ವಿತೀಯ ಹಂತದಲ್ಲಿ ಸದರಿ ಭೂಮಿಯು ಸ್ವಾಧೀನದಿಂದ ಕೈಬಿಟ್ಟ ಮೇಲೆ ಆ ಭೂಮಿ ಸಹಜವಾಗಿ ಮೂಲ ಹಕ್ಕುದಾರರ ಸ್ವತ್ತಾಗುತ್ತದೆ. ಈ ಬಗೆಯ ಅರಿವುಗಳಿಲ್ಲದೆ ಮುಡಾ ಆ ಭೂಮಿಯನ್ನು ನಗರಾಭಿವೃದ್ಧಿಗೆ ಮರುಬಳಕೆ ಮಾಡಿದ್ದು ಘೋರ ಅಪರಾಧವಾಗುತ್ತದೆ ಹಾಗೂ ಕಾನೂನುಬಾಹಿರ ಚಟುವಟಿಕೆ ಸಹ ಆಗುತ್ತದೆ.

ಎಲ್ಲಾ ರೈತರಂತೆ ಪಾರ್ವತಮ್ಮನವರೂ ಸಹ ಮುಡಾದಿಂದ ಪರಿಹಾರ ಕೋರಿ ಮನವಿ ಮೂಲಕ ಬಯಸಿದ್ದಾರೆ. ಅದರನ್ವಯ 2021ರಲ್ಲಿ ಬೇರೆ ಬಡಾವಣೆಯಲ್ಲಿ ಬದಲಿ ನಿವೇಶನಗಳು ಲಭ್ಯವಾಗಿವೆ. ಆವಾಗ ಸಿದ್ದರಾಮಯ್ಯ ನವರು ಸಹ ಮುಖ್ಯಮಂತ್ರಿ ಆಗಿರಲಿಲ್ಲ. ಆವಾಗ ಆಪರೇಷನ್ ಕಮಲದ ಮೂಲಕ ಬಹುಮತ ಪಡೆದಿದ್ದ ಭಾಜಪ ಸರಕಾರವಿತ್ತು. ಮುಡಾ ಅಧ್ಯಕ್ಷರು ಸಹ ಅವರ ಪಕ್ಷದವರೇ ಆಗಿದ್ದರು. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ-1987 ನಿಯಮ-03 ಪ್ರಕಾರ ಅದರ ವ್ಯವಸ್ಥಾಪನ ಮಂಡಳಿ ಸಹ ರಚನೆ ಆಗಿತ್ತು. ಇದರೊಳಗೆ ಮೂರು ಪ್ರಮುಖ ಪಕ್ಷಗಳ ಚುನಾಯಿತ ಪ್ರತಿನಿಧಿಗಳಿದ್ದರು. ಆ ಸಂದರ್ಭದಲ್ಲಿ ಸರಿಸುಮಾರು 125 ಬದಲಿ ನಿವೇಶನಗಳ ಮಂಜೂರಾತಿ ನೀಡಲಾಗಿದೆ ಎಂಬ ಮಾಹಿತಿ ಸಾದರವಾಗಿವೆ. ಯಾವುದಾದರೊಂದು ಪ್ರಾಧಿಕಾರ ಇಂತಹ ನಿರ್ಧಾರ ಮಾಡಿದೆ ಅಂದರೆ ಅದರ ‘ವ್ಯವಸ್ಥಾಪನ ಮಂಡಳಿ’ ಸಾಮೂಹಿಕ ಹೊಣೆಗಾರಿಕೆಯ ತೀರ್ಮಾನದ ಜೊತೆಗೆ ಶ್ರೇಣೀಕೃತ ಆಡಳಿತದ ಸಕ್ಷಮ ಪ್ರಾಧಿಕಾರಿಗಳ ಮುದ್ರೆಯು ಸಹ ಬಿದ್ದಿರುತ್ತದೆ. ನೈಜವಾಗಿ ಸಮಸ್ಯೆ ಹೀಗಿದ್ದರೂ ಸಹ ಭೂಮಿ ಕಳೆದುಕೊಂಡ ಸಂತ್ರಸ್ತೆ ಪಾರ್ವತಮ್ಮನವರ ಪತಿಯಾದ ಸಿದ್ದರಾಮಯ್ಯ ಅಧಿಕಾರ ಗದ್ದುಗೆಯ ಸುತ್ತಲೂ ಈಗ ಗಿರಕಿ ಹೊಡೆಯುತ್ತಿದೆ. ನಾಡಿನ ಜನತೆಯ ಮುಂದೆ ಯಕ್ಷ ಪ್ರಶ್ನೆಯಂತೆ ಕಾಣತೊಡಗಿದೆ.

ಕಳೆದ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ನಿರೀಕ್ಷಿಸಿದಂತೆ ಪಡೆಯದಿದ್ದರೂ ಸಹ ಅದು ಗಳಿಸಿದ ಮತಗಳಲ್ಲಿ ಗಂಭೀರ ಸಾಧನೆ ಮಾಡಿದೆ. ಕಾಂಗ್ರೆಸ್ 2019ರಲ್ಲಿ ಗಳಿಸಿದ ಮತಗಳನ್ನು ಮೀರಿಸಿ ಹೆಚ್ಚುವರಿಯಾಗಿ ಶೇ.13.55ರಷ್ಟು ಮತಗಳಿಕೆಯನ್ನು ದಾಖಲಿಸಿದೆ. ಈ ಅಂಶ ಸಹಜವಾಗಿ ದೋಸ್ತಿಗಳಾದ ಭಾಜಪ ಮತ್ತು ಜಾತ್ಯತೀತ ಜನತಾ ದಳ ಪಕ್ಷವನ್ನು ನಿದ್ದೆಗೆಡಿಸಿರುವುದಂತೂ ಸತ್ಯ. ಸಿದ್ದರಾಮಯ್ಯನವರನ್ನು ಹೇಗಾದರೂ ಮಾಡಿ ಒಂದು ಹಗರಣದ ಕುಣಿಕೆಗೆ ಸಿಲುಕಿಸಲು ಮುಡಾ ಬದಲಿ ನಿವೇಶನ ಸದ್ದುಗದ್ದಲವಿಲ್ಲದೆ ರಾಜಕೀಯ ಹೋರಾಟದ ಮಂಚದ ಮೇಲೆ ನಿಂತು ಕುಣಿಯುತ್ತಿದೆ. ಜನತಾ ನ್ಯಾಯಾಲಯದಲ್ಲಿ ಬಹುಮತ ಪಡೆದ ಒಂದು ಸರಕಾರವನ್ನು ಪತನ ಮಾಡುವ ವ್ಯರ್ಥ ಸಾಹಸವನ್ನು ಭಾಜಪ ಖಂಡಿತಾ ಮಾಡಬಾರದು. ಅದು ಅಧಿಕಾರ ಇಲ್ಲದಿದ್ದಾಗ ಪ್ರತಿಪಾದಿಸುತ್ತಿದ್ದ ರಾಜಕೀಯ ರಾಜಧರ್ಮವನ್ನು ಮತ್ತೊಮ್ಮೆ ಅವಲೋಕಿಸುವ ಕಾಲ ಇದಾಗಿದೆ. ಕಾಂಗ್ರೆಸ್ ಸರಕಾರ ರಾಜ್ಯಾಡಳಿತವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಅದರ ಪತನಕ್ಕೆ ಕುಮ್ಮಕ್ಕು ನೀಡುವುದು ಒಂದು ಉತ್ತಮ ಸಂಸದೀಯ ಗುಣಗಳಲ್ಲ. ಅದರ ತಪ್ಪುಗಳಿಂದಲೇ ಅದು ಸಾಯಲು ಬಿಟ್ಟಾಗ ಭಾಜಪದ ಸಂಸದೀಯ ರಾಜಧರ್ಮ ಅಪಕೀರ್ತಿಗಂತೂ ಸಿಲುಕುವುದಿಲ್ಲ.

ಪಾರ್ವತಮ್ಮ ಅವರ ಸ್ಥಾನದಲ್ಲಿ ಬೇರೊಬ್ಬ ರೈತರಿದ್ದರೂ ಸಹ ಭೂಮಿ ಕಳೆದುಕೊಂಡ ಕಾರಣಕ್ಕಾಗಿ ಸಕಾಲಿಕ ಪರಿಹಾರ ಪಡೆಯಲು ಹೋರಾಟ ಮಾಡುತ್ತಿದ್ದರು. ಅಂತಹ ಪ್ರಕ್ರಿಯೆಗಳನ್ನು ಪಾರ್ವತಮ್ಮ ಸಹ ಮುಡಾ ಜೊತೆ ನಡೆಸಿದ್ದಾರೆ ಎಂದು ಅಂಬೋಣ. ಒಂದುವೇಳೆ ಪಾರ್ವತಮ್ಮ ಅವರ ಆಸ್ತಿಯು ಸಿದ್ದರಾಮಯ್ಯ ಅವರ ವಂಶವಾಹಿನಿ ಮೂಲಕ ಪಿತ್ರಾರ್ಜಿತ ಸ್ವರೂಪದಲ್ಲಿ ಬಂದಿದ್ದರೂ ಸಹ ಸಿದ್ದರಾಮಯ್ಯ ಅವರಿಗೆ ಕಾನೂನಿನ ಸಲುಗೆ ಇರುತ್ತಿತ್ತು. ಆದರೆ ತಾಯಿ ಮನೆಯಿಂದ ಬಂದಿರುವ ಕಾರಣ ಕೊಂಚ ಕಾನೂನಿನ ಹಕ್ಕುದಾರಿಕೆ ಅವರಿಗಿರುವುದಿಲ್ಲ. ಪಡೆದಿರುವ ನಿವೇಶನಗಳು ಸಿದ್ದರಾಮಯ್ಯ ಅವರ ಹೆಸರಿಗೆ ವರ್ಗವಾಗಿದ್ದರೆ ಅದರ ಕಥೆಯೊಂದು ಬೇರೆಯೇ ಆಗಿರುತ್ತಿತ್ತು. ಈ ವಿಚಾರದಲ್ಲಿ ಘನತೆವೆತ್ತ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಿದ್ದಾರೋ ಇಲ್ಲವೋ ಎಂಬ ಗಂಭೀರ ಪ್ರಶ್ನೆಗಳಿಗೆ ಮಾನ್ಯ ಉಚ್ಚ ನ್ಯಾಯಾಲಯ ನೀಡುವ ತೀಪಿನಲ್ಲಿ ಮಾತ್ರ ಸಾಕ್ಷ್ಯ ಸಿಗುತ್ತವೆ. ಈ ತೀರ್ಪು ರಾಜ್ಯದ ಕಾನೂನು ಅವಲೋಕನ ಆಯಾಮಗಳಲ್ಲಿ ದಾಖಲಾರ್ಹವಾದ ತೀರ್ಪು ಸಹ ಆಗಲಿದೆ.

ಪಾರ್ವತಮ್ಮ ಜಮೀನಿನ ವಿಚಾರದಲ್ಲಿ ಎಡವಟ್ಟು ಮಾಡಿದ್ದ ಮುಡಾ ಅವರಿಗೆ ವಿತರಣೆ ನ್ಯಾಯ ನೀಡಲು 2014 ರಿಂದ 2021 ತನಕ ಕಾಲಹರಣ ಮಾಡಿ ಸತಾಯಿಸಿದೆ. ಯಾರಾದರೂ ನಗರಾಭಿವೃದ್ಧಿ ಅಥವಾ ಇತರ ಅಭಿವೃದ್ಧಿಗಾಗಿ ಭೂಮಿ/ಮನೆಗಳನ್ನು ಬಿಟ್ಟುಕೊಡುವವರು ಪರಿಹಾರ ಕೇಳುವುದಕ್ಕೆ ಅಥವಾ ಪಡೆಯಲಿಕ್ಕೆ ಅರ್ಹರಿರುತ್ತಾರೆ. ಅಂದಮೇಲೆ ಪಾರ್ವತಮ್ಮ ಸಹ ಈ ಸ್ವರೂಪದ ಪರಿಹಾರ ಪಡೆಯಲಿಕ್ಕೆ ಅರ್ಹರಲ್ಲವೆ? ಎಂಬ ಪ್ರಶ್ನೆ ಸಹಜವಾಗಿ ಕಾನೂನಿನ ಪರಾಮರ್ಶೆಯಲ್ಲಿ ಉದ್ಭವಿಸುತ್ತದೆ. ಅವರನ್ನು ಕೇವಲ ಮುಖ್ಯಮಂತ್ರಿಗಳ ಪತ್ನಿ ಎಂದು ನೋಡದೆ ಭೂಮಿ ಕಳೆದುಕೊಂಡ ಸಂತ್ರಸ್ತರಂತೆ ನೋಡಿದಾಗ ಖಂಡಿತವಾಗಿಯೂ ಕಾನೂನಿನ ಪರಿಹಾರೋತ್ತರ ಸಿಗುತ್ತದೆ. ಬಹುಶಃ ರಾಜಕೀಯ ವರಸೆ ಅಥವಾ ದ್ವೇಷ ರಾಜಕಾರಣದ ಮೂಲಕ ಪಾರ್ವತಮ್ಮನವರ ಪ್ರಕರಣವನ್ನು ವಿಶ್ಲೇಷಿಸಿ ನೋಡಿದಾಗ ಮೇಲುನೋಟಕ್ಕೆ ಅದೊಂದು ಗಂಭೀರ ಸ್ವರೂಪದ ಅಪರಾಧದಂತೆ ಕಾಣುತ್ತದೆ.

ಮಾನ್ಯ ರಾಜ್ಯಪಾಲರು ಮುಖ್ಯಮಂತ್ರಿಗಳ ಪತ್ನಿ ವಿರುದ್ಧ ದೂರೊಂದು ಸ್ವೀಕೃತವಾದ ಮೇಲೆ ಅವರೊಂದು ಜಾಣ ನಡೆಯನ್ನು ತುಳಿಯಬೇಕಿತ್ತು. ಅಂದರೆ ಮುಡಾದಲ್ಲಿ ಕೇವಲ ಇದೊಂದೇ ಪ್ರಕರಣ ನಡೆದಿದೆಯೇ? ಇಲ್ಲವೆ, ಇಂತಹ ಸಮಾನಾಂತರ ಸ್ವರೂಪದ ಪ್ರಕರಣಗಳ ಬಗ್ಗೆ ಕೂಲಂಕಷವಾದ ಸಮಗ್ರ ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿಗಳಿಂದ ಪಡೆದು ಅವುಗಳ ಮೇಲೆ ತಮ್ಮ ಕಾನೂನು ಪರಿಣಿತರ ಸಲಹೆ ಪಡೆದು ಅಪರಾಧ ತನಿಖೆಗೆ ಆದೇಶ ನೀಡಿದ್ದರೆ ಅದೊಂದು ಹಂಸಕ್ಷೀರ ನ್ಯಾಯದಂತೆ ಕಾಣುತ್ತಿತ್ತು. ಮುಡಾದಲ್ಲಿ ಇಲ್ಲಿಯ ತನಕ 125ಕ್ಕೂ ಮಿಗಿಲಾದಷ್ಟು ಬದಲಿ ನಿವೇಶನ ಹಂಚಿಕೆ ಪ್ರಕರಣಗಳಿರುವಾಗ ಪಾರ್ವತಮ್ಮನವರ ಪ್ರಕರಣ ಮಾತ್ರ ಕಾನೂನು ಬಾಹಿರವಾದ ಹಂಚಿಕೆ ಎನ್ನಲು ಹೇಗೆ ಸಾಧ್ಯವಾಗುತ್ತದೆ. ಈ ವಿಚಾರ ನ್ಯಾಯ ಅಭಿದಾನದಡಿ ಮಾನ್ಯ ಉಚ್ಚ ನ್ಯಾಯಾಲಯ ನೀಡುವ ತೀರ್ಪಿನ ಮೇಲಿದೆ ಅಂದರೆ ತಪ್ಪಾಗದು.

ಒಟ್ಟಾರೆ, ಮುಡಾ ಮತ್ತು ಬಿಡಿಎ ಹಾಗೂ ಇತರ ಅಭಿವೃದ್ಧಿ ಪ್ರಾಧಿಕಾರಗಳ ಭೂ ಸ್ವಾಧೀನ ಮತ್ತು ನಿವೇಶನ ಹಂಚಿಕೆಗಳು ಅಷ್ಟೊಂದು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎನ್ನುವ ವಿಚಾರ ಇಂದಿಗೂ ಚರ್ಚಾ ವಸ್ತುವಾಗಿದೆ. ಇವುಗಳಲ್ಲಿರುವ ನೌಕರರಿಗೆ ಪ್ರಾಧಿಕಾರದಿಂದ ಪ್ರಾಧಿಕಾರಗಳಿಗೆ ವರ್ಗಾವಣೆಗಳಿಲ್ಲದೆ ಇರುವ ಕಾರಣ, ಸ್ಥಾವರದಂತೆ ಒಂದೇ ಸ್ಥಳದಲ್ಲಿ ನಿವೃತ್ತಿ ತನಕ ಇರುವ ಕಾರಣ ಅನೇಕ ಅಪವಿತ್ರ ಕಾರ್ಯಚಟುವಟಿಕೆಗಳು ಅವರ ನೇರ ಹಸ್ತಕ್ಷೇಪಗಳಿಂದ ನಡೆಯುತ್ತಿವೆ ಎಂಬ ಆರೋಪಗಳಿವೆ. ಇಂತಹ ಅಪಕೃತ್ಯಗಳ ತಡೆಗಾಗಿ ಸರಕಾರ ಪ್ರಾಧಿಕಾರಗಳಿಗಾಗಿ ಒಂದು ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ನಿರೂಪಿಸಿ ಅವುಗಳಲ್ಲಿ ಒಂದು ಶ್ರೇಣೀಕೃತ ಆಡಳಿತದ ಶಿಸ್ತು ಸ್ಥಾಪಿಸಲು ಮುಂದಾಗಬೇಕಿದೆ. ಪ್ರಾಧಿಕಾರಗಳ ಸುತ್ತಮುತ್ತ ಓಡಾಡುವ ಮಧ್ಯವರ್ತಿಗಳಷ್ಟು/ಭ್ರಷ್ಟ ಅಧಿಕಾರಶಾಹಿಗಳಷ್ಟು ಸುಖಿ ಜೀವನವನ್ನು ಭೂಮಿಯನ್ನು ಪ್ರಾಧಿಕಾರಗಳಿಗೆ ನೀಡಿರುವ ರೈತರ ಪಾಲಿಗೆ ಸಿಗುವುದಂತೂ ಗಗನ ಕುಸುಮವಾಗಿದೆ.

ರಾಜಕಾರಣಿಗಳು ಬಹಿರಂಗವಾಗಿ ಕಾಣುವ ಭ್ರಷ್ಟರೆಂದು ಪರಿಭಾವಿಸಿದರೂ, ಅವರನ್ನು ವಾಮಾಗೋಚರವಾಗಿ ನಿಂದಿಸುವ ಇನ್ನಿತರರು ಪ್ರಾಧಿಕಾರಗಳಿಂದ ಕಾನೂನು ಕಣ್ಣಿಗೆ ಮಣ್ಣು ಎರಚಿ ನಿವೇಶನ ಮತ್ತು ಮನೆಗಳನ್ನು ಪಡೆದಿದ್ದಾರೆ ಎಂದರೆ ತಪ್ಪಾಗದು. ಮುಡಾದಿಂದ/ ಇತರ ಪ್ರಾಧಿಕಾರಗಳಿಂದ ನಿವೇಶನ ಪಡೆದಿರು ವವರನ್ನು ಆಮೂಲಾ ಗ್ರವಾಗಿ ತನಿಖೆಗೆ ಒಳಪಡಿಸಿದರೆ ಈ ಹೇಳಿಕೆಗಳಿಗೆ ಸಾಕ್ಷ್ಯಗಳು ಸಿಗದೆ ಇರದು. ಉದಾಹರಣೆಗೆ ಮುಡಾದಿಂದ ಓರ್ವ ಶಿಕ್ಷಕ ತನಗೆ ಮನೆ ಯಿದ್ದರೂ ತನ್ನ ಮನೆಯನ್ನೇ ಬಾಡಿಗೆ ಮನೆ ಯೆಂದು ಸಾಬೀತು ಪಡಿಸಿ, ತನ್ನ ಮಡದಿ ವಿಶ್ವವಿದ್ಯಾ ನಿಲಯದ ನೌಕರರೆಂಬ ಮಾಹಿತಿ ಯನ್ನು ಅದುಮಿಟ್ಟು ಕಡುಬಡವರಿಗೆ ನೀಡುವ ನಿವೇಶನ (ಇWS) ಪಡೆದಿದ್ದಾರೆ. ಇಂತಹ ಬೃಹಸ್ಪತಿಗಳು ರಾಜ್ಯದಲ್ಲಿ ಸಾಕಷ್ಟಿದ್ದಾರೆ. ಮುಡಾ ಮತ್ತು ಇತರ ಪ್ರಾಧಿಕಾರಗಳಲ್ಲಿ ಕಾನೂನು ನಿರ್ದೇಶಿತ ನಿಯಮಾವಳಿಗಳ ಪ್ರಕಾರ ಯಾವುದೂ ನಡೆಯುತ್ತಿಲ್ಲ ಎಂಬ ಲೋಕ ಸತ್ಯಗಳು ಸರಕಾರದ ಅರಿವಿಗೆ ಬಂದರೆ ಬಹುಶಃ ಹೊಸ ಆಯಾಮಗಳಲ್ಲಿ ಅವುಗಳ ಸಬಲೀಕರಣಕ್ಕೆ ಪಾರ್ವತಮ್ಮ ಅವರ ಪ್ರಕರಣ ದಾರಿದೀಪ ವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದಾಸನೂರು ಕೂಸಣ್ಣ

ಸಮುದಾಯ ಚಿಂತಕರು

Similar News