ನೆಲದ ಕರುಣೆಯ ಪದಗಳು!

Update: 2024-01-29 05:59 GMT

‘‘ಇರುವೆಯ ಬಲ, ಮಹಿಳೆಯ ಶಕ್ತಿ ಬಹಳ ದೊಡ್ಡದು’’

ಇದು ನಮ್ಮ ಕೆ. ರಾಮಯ್ಯ ಒಂದು ನಾಟಕದಲ್ಲಿ ಬಳಸಿದ ವಾಕ್ಯ. ನಿಜ ಅನ್ನಿಸುತ್ತದೆ. ಈ ಭೂಮಿ ಇರುವವರೆಗೂ ನಾನು ಇರುವೆ ಎನ್ನುವುದು ಇರುವೆಯ ಮಾತು. ಮಹಿಳೆ ಮನಸ್ಸು ಮಾಡಿದರೆ ಏನೆಲ್ಲಾ ಮಾಡಲು ಸಾಧ್ಯ ಎನ್ನುವುದು ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ, ಊರು ಕೇರಿಗಳಲ್ಲಿ ಮಾತ್ರವಲ್ಲ ಎಲ್ಲೆಡೆ ಅನಾದಿ ಕಾಲದಿಂದ ನೋಡುತ್ತಿದ್ದೇವೆ. ಈ ಹೆಣ್ಣು ಮಗಳ ಬಗ್ಗೆ ಹೇಳಲೇಬೇಕೆಂದು ಬರೆಯುತ್ತಿದ್ದೇನೆ.

ಸಾಹಿತ್ಯ ಲೋಕದಲ್ಲಿ ನಮ್ಮ ಕವಿ ವೀರಣ್ಣ ಮಡಿವಾಳ ಅವರದು ಚಿರಪರಿಚಿತ ಹೆಸರು. ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕಡೆಯ ಒಂದು ಪುಟ್ಟ ಹಳ್ಳಿಯ ಅಂಬೇಡ್ಕರ್ ನಗರದಲ್ಲಿ ಪ್ರಾಥಮಿಕ ಪಾಠ ಶಾಲೆಯ ಮಾಸ್ತರರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರ ಶಾಲೆಯ ಚಟುವಟಿಕೆಗಳ ಬಗ್ಗೆ ಅವರೇ ಪತ್ರಿಕೆಗಳಲ್ಲಿ, ಫೇಸ್‌ಬುಕ್‌ನಲ್ಲಿ, ಬರೆದುಕೊಂಡಿದ್ದಾರೆ. ಹಿಂದಿನ ಸರಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಸುರೇಶ್ ಕುಮಾರ್ ಕೂಡ ವೀರಣ್ಣನ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚಿಕೊಂಡಿದ್ದರು. ಅವರು ಶಾಲೆಯಲ್ಲಿರುವ ಅಷ್ಟೂ ಮಕ್ಕಳನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಸಿದ್ದಗೊಳಿಸುತ್ತಾ ಬರುತ್ತಿದ್ದಾರೆ. ವೀರಣ್ಣ ಪ್ರತಿಭಾವಂತ ಕವಿ. ತನ್ನ ಮೊದಲನೇ ಕವನ ಸಂಕಲನ ‘‘ನೆಲದ ಕರುಣೆಯ ದನಿ’’ ಈ ಸಂಕಲನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾದವರು. ಗುಲ್ಬರ್ಗ ಕೇಂದ್ರಿಯ ವಿಶ್ವ ವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಪದವಿಯನ್ನು, ಚಿನ್ನದ ಪದಕವನ್ನು ಮಾಜಿ ರಾಷ್ಟ್ರಪತಿ ಶ್ರೀ ಪ್ರಣವ್‌ಮುಖರ್ಜಿ ಅವರಿಂದ ಪಡೆದವರು. ಇದೀಗ ಮರಳಿ ಹಳ್ಳಿಗೆ ಹೋಗಿ ಅದೇ ಶಾಲೆಯಲ್ಲಿ ಪಾಠ ಹೇಳಿಕೊಡುತ್ತಿದ್ದಾರೆ. ಗುರುಗಳಿಗೆ ಎಲ್ಲ ಮಕ್ಕಳು ಒಂದೇ. ಆದರೆ ಅದರಲ್ಲಿ ಕೆಲವರು ವಿಶೇಷ ಮಕ್ಕಳು. ಅಂದರೆ ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟವರು. ಹಸಿದುಕೊಂಡು ಬಂದರೂ ಗುರುಗಳು ‘ತಿಂಡಿ ಆಯಿತ?’ ಎಂದು ಕೇಳಿದರೆ, ‘ಊಂ ಸರ್, ತಿಂಡಿ ಆಯಿತು’ ಅಂತ ಹೇಳುವ ಮಕ್ಕಳು. ಕೆಲವು ಗುರುಗಳಿಗೆ ಮಾತ್ರ ಇದು ಅರ್ಥವಾಗುತ್ತದೆ. ಹಾಗೇ ಎರಡು ಮೂರು ಜೊತೆ ಬಟ್ಟೆಗಳಲ್ಲೇ ಇಡೀ ವರ್ಷ ಅವುಗಳನ್ನೇ ಧರಿಸಿ ಕಾಲ ತಳ್ಳುವ ವಿದ್ಯಾರ್ಥಿಗಳು ಇರುತ್ತಾರೆ. ಆದರೆ ಈಗ ಶಾಲೆಗಳಲ್ಲಿ ಸರಕಾರವೇ ಬಟ್ಟೆಕೊಡುವುದರಿಂದ ಪರವಾಗಿಲ್ಲ. ನಾನು ಓದುವ ಕಾಲಕ್ಕೆ ಒಂದೇ ಜೊತೆ. ಅದು ಹರಿದು ಚಿಂದಿಯಾಗುವವರೆಗೂ ಇನ್ನೊಂದು ಕೊಡಿಸುತ್ತಿರಲಿಲ್ಲ, ಬಿಡಿ.

ಆದರೆ ಇಲ್ಲಿ ಒಂದು ಹೆಣ್ಣು ಮಗು ತುಂಬ ಚುರುಕು, ಬುದ್ಧಿವಂತೆ. ಮೇಸ್ಟ್ರು ಹೇಳಿದನ್ನು ಪಾಠ ಒಪ್ಪಿಸುವ ಮತ್ತು ಶಿಸ್ತಾಗಿ ಶಾಲೆಗೆ ಬರುವ ಮಕ್ಕಳೆಂದರೆ, ಗುರುಗಳಿಗೆ ಅಚ್ಚುಮೆಚ್ಚು ಆಗಿರುವುದರಿಂದ ಸಹಜವಾಗಿ, ಈ ಹೆಣ್ಣುಮಗಳ ಬಗ್ಗೆ ವೀರಣ್ಣನಿಗೆ ವಿಶೇಷ ಗಮನ. ತುಂಬಾ ತೊಂದರೆಯಲ್ಲಿದ್ದರೂ, ಏನೂ ಹೇಳಿಕೊಳ್ಳದ ಮುಜುಗರದ ಹೆಣ್ಣು ಮಗಳು ಇವಳು ಎನ್ನುವುದನ್ನು ವೀರಣ್ಣ ಗ್ರಹಿಸಿದ್ದರು. ಎಲ್ಲರಿಗೂ ಪಾಠ ಹೇಳಿದಂತೆ ಈಕೆಗೂ ಪಾಠ ಮಾಡುತ್ತಿದ್ದರು ವೀರಣ್ಣ. ಆದರೆ ಆ ಹೆಣ್ಣು ಮಗುವನ್ನು ನಿರಂತರ ಗಮನಿಸುತ್ತಲೇ ಇದ್ದರು. ಆಕೆ ಪ್ರಾಥಮಿಕ ಶಾಲೆಯನ್ನು ಮುಗಿಸಿ ಪ್ರೌಢ ಶಾಲೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಳು. ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಶ್ರೇಣಿ ಪಡೆದಾಗ ತುಂಬಾ ಸಂತೋಷಪಟ್ಟರು. ಇವರು ಅಂದುಕೊಂಡರಂತೆ ಆಕೆ ಜಾಣೆಯಾಗಿದ್ದಳು. ಆದರೆ ಮುಂದಿನ ವ್ಯಾಸಂಗ ಮಾಡುವುದಕ್ಕೆ ಬಿಡಿಗಾಸಿಲ್ಲ. ಅಪ್ಪ ಅಮ್ಮ ಕೂಲಿ ಕೆಲಸ ಮಾಡಿ ಓದಿಸಬೇಕು. ಒಡ ಹುಟ್ಟಿದವರು ನಾಲ್ಕು ಮಂದಿ, ಎಲ್ಲರೂ ಓದುತ್ತಿದ್ದಾರೆ. ಮನೆ ಎಂದರೆ ಹೆಸರಿಗಷ್ಟೇ ಮನೆ. ಪ್ಲಾಸ್ಟಿಕ್‌ನ ತೇಪೆಯಿಂದ ಮನೆ ಮುಚ್ಚಿಕೊಂಡಿದೆ. ಮಳೆ ಬಂದರೆ ನೆಲಮುಗಿಲುಗಳಿಗೆ ಇವರು ನೀರಿನ ಸಂಬಂದಿಗಳು. ಇಂತಹ ಪರಿಸ್ಥಿತಿಯಲ್ಲೂ ಎಸ್‌ಎಸ್‌ಎಲ್‌ಸಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸ್ ಮಾಡಿದ್ದಾಳೆ. ಆಕೆಯ ಬೇಡಿಕೆ, ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳಬೇಕು ಮತ್ತು ರಾತ್ರಿ ಓದಿಕೊಳ್ಳುವುದಕ್ಕೆ ಸೋಲಾರ್ ಲೈಟ್ ಬೇಕೆ ಬೇಕು. ಈ ಎರಡು ಬೇಡಿಕೆಗಳನ್ನು ತನ್ನ ಗುರುಗಳಾದ ವೀರಣ್ಣನಲ್ಲಿ ಹೇಳಿಕೊಂಡಿದ್ದಾಳೆ. ಮತ್ತು ತಾನು ಸರಕಾರಿ ಕಾಲೇಜಿನಲ್ಲೇ ಕಲಿಯುತ್ತೇನೆ ಎನ್ನುವ ದೃಢಸಂಕಲ್ಪಕ್ಕೆ ವೀರಣ್ಣನ ಕಡೆಯಿಂದ ಅಲ್ಪ ಸ್ವಲ್ಪ ಹಣದ ಅಗತ್ಯವನ್ನು ಕೇಳಿದ್ದಾಳೆ. ವೀರಣ್ಣ ವಿದ್ಯಾರ್ಥಿನಿಯ ಕನಸಿಗೆ ಇನ್ನಷ್ಟು ಜೀವ ತುಂಬಿ ‘ಖಂಡಿತ ಪ್ರಯತ್ನಿಸೋಣ, ನೀನು ಎದೆಗುಂದಬೇಡ’ ಎಂದಿದ್ದಾರೆ. ಇಷ್ಟೆಲ್ಲ್ಲಾ ವಿಷಯಗಳನ್ನು ನನ್ನಲ್ಲಿ ಹಂಚಿಕೊಂಡ ವೀರಣ್ಣ, ‘ಆಕೆ ಪರಿಶಿಷ್ಟ ಜಾತಿಯ ಬೋವಿ ಸಮುದಾಯಕ್ಕೆ ಸೇರಿದವರು’ ಎಂದರು. ನಾನು ವೀರಣ್ಣನಿಗೆ ‘ಇದೆಲ್ಲ ಮುಖ್ಯವಲ್ಲ , ಹೆಣ್ಣುಮಗುವಿನ ಕನಸು ನನಸು ಮಾಡಬೇಕು. ನಾವಿಬ್ಬರೂ ಏನಾದರೂ ಪ್ರಯತ್ನ ಮಾಡೋಣ’ ಎಂದೆ.

‘ಒಂದು ಕೆಲಸ ಮಾಡೋಣ. ನಾನು ಸ್ವಲ್ಪ ಹಣ ಹಾಕುತ್ತೇನೆ. ಬಳಿಕ ವಾಟ್ಸ್‌ಆ್ಯಪ್ (ಏಅಖಅ)ಮೂಲಕ ಕೆಲವರಲ್ಲಿ ಸಹಾಯ ಕೋರೋಣ. ಎಷ್ಟು ಬರುತ್ತೋ ನೋಡಿ ಅಂತಿಮವಾಗಿ ನಾವಿಬ್ಬರೂ ನಿಂತು ಮಗುವನ್ನು ಓದಿಸೋಣ’ ಎಂದೆ.

ಸರಿ ಸಮಯಕ್ಕೆ ಆ ಜಿಲ್ಲೆಯ ಡೆಕ್ಕನ್ ಹೆರಾಲ್ಡ್ ವರದಿಗಾರರಿಗೂ ವಿಷಯ ಮುಟ್ಟಿಸಿದ್ದರು. ಅವರು ಕೂಡ ಪುಟ್ಟ ವರದಿಮಾಡಿದ್ದರು. ವಾಟ್ಸ್‌ಅಪ್ ನೋಡಿದ ಅನೇಕರು ನೆರವಿಗೆ ಬಂದರು. ವಿದೇಶದಿಂದ ಯಾರೋ ಹೆಸರನ್ನು ಹಾಕದೇ ಐವತ್ತು ಸಾವಿರ ರೂಪಾಯಿಗಳನ್ನು ಹಾಕಿದ್ದರು. ಒಂದು ವಾರಕ್ಕೆ ಆ ಖಾತೆಗೆ ಬಂದ ಹಣ ಒಂದು ಲಕ್ಷ

ಎಪತ್ತು ಸಾವಿರ ರೂ. ಆಗಿತ್ತು( 1,70,000).

‘ಇದು ನಿಜನಾ ವೀರಣ್ಣ?’ ಅಂದೆ.

‘ ನಿಜ ಸರ್’ ಆತನ ಸಂತೋಷಕ್ಕೆ ಮಿತಿ ಇರಲಿಲ್ಲ .

ಈತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಾಗಲೂ ಇಷ್ಟು ಸಂಭ್ರಮಿಸಿರಲಿಲ್ಲ. ಈ ಹೆಣ್ಣು ಮಗಳು ಹೀಗೆ ಬಂದ ಪ್ರತೀ ಪೈಸೆಯನ್ನ್ನೂ ಚಿನ್ನದಂತೆ ಜಾಗರೂಕತೆಯಿಂದ ಬಳಸಿಕೊಂಡಳು. ಪಿ.ಯು.ಸಿಯಲ್ಲಿ ಕೂಡ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಮುಂದೆ ತನಗೆ ಇಷ್ಟವಾದ ಕೋರ್ಸ್ ಆಯ್ಕೆ ಮಾಡಿಕೊಂಡಳು. ಎಂದಿನಂತೆ ಶ್ರದ್ದೆ, ಶಿಸ್ತಿನಿಂದ ಕಲಿಕೆಯಲ್ಲಿ ತೊಡಗಿಕೊಂಡಳು. ಅಂತಿಮ ವರ್ಷದ ಸೆಮಿಸ್ಟರ್‌ನಲ್ಲಿ ಎಲ್ ಆ್ಯಂಡ್‌ಟಿಗೆ ಕ್ಯಾಂಪಸ್ ಸೆಲೆಕ್ಷನ್ ಆದಳು. ನಾನು ಇದನ್ನೆಲ್ಲ ಮರೆತು ನನ್ನ ಕೆಲಸ,ಮನೆ, ಕವಿತೆ, ಲೇಖನ ಎಂದು ಮಗ್ನನಾಗಿದ್ದೆ. ಆಗಾಗ ವೀರಣ್ಣನೊಟ್ಟಿಗೆ ಮಾತುಕತೆ. ಹೀಗಿರುವಾಗ, ಇದ್ದಕ್ಕಿದ್ದ ಹಾಗೆ ವೀರಣ್ಣ ಕಡೆಯಿಂದ ಪೋನ್ ಬಂತು.

‘ಸರ್, ವಿದ್ಯಾಶ್ರೀ ಕೆಲಸಕ್ಕೆ ಸೇರಿಕೊಂಡಳು’ ಎಂದರು.

ನನಗೆ ತಕ್ಷಣಕ್ಕೆ ನೆನಪಾಗಲಿಲ್ಲ. ‘ಯಾರೋ...’ ಅಂದೆ.

‘ಅದೇ ಸರ್, ನಾವು ಹೀಗೆಲ್ಲ ಮಾಡಿದ್ದೆವಲ್ಲ...ಆಕೆ’ ಅಂದಾಗ ಆಶ್ಚರ್ಯ. ಸಂತೋಷ!

ಮೊನ್ನೆ ಇದು ನೆನಪಾಗಿ ಮತ್ತೆ ವೀರಣ್ಣನಿಗೆ ಪೋನ್ ಮಾಡಿದ್ದೆ.

‘ವಿದ್ಯಾಶ್ರೀ ಮನೆ ಏನಾದರೂ ಮಾಡಿಕೊಂಡಿದ್ದಾರಾ?’ ಕೇಳಿದೆ.

‘ಪೂನಾದ ಎಲ್‌ಆ್ಯಂಡ್ ಟಿ. ಕಂಪೆನಿಯಲ್ಲೇ ಆಕೆ ಮುಂದುವರಿದಿದ್ದಾಳೆ. ಅಣ್ಣನನ್ನು ಎಲ್.ಎಲ್.ಬಿ. ಗೆ ಸೇರಿಸಿದ್ದಾಳೆ. ತಮ್ಮ ತಂಗಿಯನ್ನು ಓದಿಸುತ್ತಿದಾಳೆ. ಮನೆಯ ಎಲ್ಲಾ ಜವಾಬ್ದಾರಿ ಅವಳದೇ’ ಎಂದು ಹೇಳುವಾಗ ವೀರಣ್ಣನ ಮಾತಿನಲ್ಲಿ ಹೆಮ್ಮೆ ಇತ್ತು.

ಶಿಕ್ಷಣಕ್ಕೆ ಎಂತಹ ಶಕ್ತಿ ಇದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತದೆ. ಈ ದೇಶದಲ್ಲಿ ಒಂದು ಕಾಲಕ್ಕೆ ಮೌಢ್ಯಗಳು, ಜಾತಿ, ಧರ್ಮ ದೇವರುಗಳಿಂದ ಅಸಮಾನತೆ, ಲಿಂಗ ತಾರತಮ್ಯತೆ ತುಂಬಿ ತುಳುಕಾಡುತ್ತಿತ್ತು. ಈಗಲೂ ಹಾಗೇ ಇದೆ. ಆದರೆ ಅಕ್ಷರ ಕಾ್ಂರತಿ ಬಹಳ ದೊಡ್ಡ ಬದಲಾವಣೆಯನ್ನು ತಂದಿದೆ. ವೀರಣ್ಣ ವಿದ್ಯಾಶ್ರೀಗೆ ಸಹಾಯ ಮಾಡಿದಂತೆ ಸಾವಿರಾರು ಗುರುಗಳು ಎಲೆ ಮರೆ ಕಾಯಿಯಂತೆ ಸಹಾಯ ಮಾಡುತ್ತಲೇ ಇದ್ದಾರೆ. ದೇವರು ಧರ್ಮಗಳು ನಮ್ಮನ್ನು ದೊಡ್ಡವರನ್ನಾಗಿ ಮಾಡುವುದಿಲ್ಲ . ಅರಿವು, ಶಿಕ್ಷಣ, ಸಹನೆ, ನಮ್ಮ ನಡೆ ನುಡಿಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ.

ಈ ಸಂದರ್ಭದಲ್ಲಿ ಲಂಕೇಶರು ನೆನಪಾಗುತ್ತಾರೆ. ಒಂದು ದಿನ ಹೀಗೆ ಮಾತಾನಾಡುತಿದ್ದಾಗ, ‘ನಿನಗೆ ಯಾವ ರೀತಿಯ ಎಂತಹ ಸ್ನೇಹಿತರಿದ್ದಾರಯ್ಯ?’ ಎಂದು ಕೇಳಿದರು.

ಮೇಷ್ಟ್ರು ಪ್ರಶ್ನೆಯನ್ನು ಸರಿಯಾಗಿ ಗ್ರಹಿಸದ ನಾನು ‘ಸರ್ ನನಗೆ ಗೌಡ್ರು, ಲಿಂಗಾಯತರು, ಬ್ರಾಹ್ಮಣರು ಹೀಗೆ ಎಲ್ಲಾ ಜಾತಿಯಲ್ಲೂ ಸ್ನೇಹಿತರಿದ್ದಾರೆ’’ ಎಂದೆ.

‘ಅಲ್ಲಾ ಕಣಯ್ಯ, ನಿನ್ನ ಸಮುದಾಯವನ್ನು ಹೊಡೆಯುವ, ಬಡಿಯುವವರನ್ನೇ ಸ್ನೇಹಿತರು ಮಾಡಿ ಕೊಂಡಿದ್ದೀಯಲ್ಲಯ್ಯ’ ಎನ್ನುವ ಹಾಗೇ ನೋಡುತ್ತ ‘ಇವೆಲ್ಲ ನಿನಗೆ ಅಪಾಯ ಮಾಡುವ ಶಬ್ದಗಳ ತರ ಕೇಳಿಸುತ್ತಿದೆಯಲ್ಲ?’ ಎಂದರು.

‘‘ ಹೌದು ಸರ್, ಹೌದು ಸರ್’’ ತಲೆಯಾಡಿಸಿದೆ.

‘‘ನಿನಗೆ ಮಾಡಿವಾಳರು ಯಾರು ಸ್ನೇಹಿತರಿಲ್ಲವೆ?’’ ಎಂದು ಕೇಳಿದರು.

ನನಗೆ ಈ ಪ್ರಶ್ನೆ ತುಂಬಾ ಶಾಕಿಂಗ್ ಆಗಿತ್ತು. ಲಂಕೇಶ್ ಮೇಷ್ಟ್ರಿಗೆ ಅಲ್ಲೇ ಕೈ ಮುಗಿಯಬೇಕು ಅನ್ನಿಸಿತ್ತು. ‘ನಿನ್ನಂತೆಯೆ ನೊಂದ ಸಮುದಾಯ ಅದು. ಇಂತಹ ಸಣ್ಣ ಪುಟ್ಟ ಸಮುದಾಯಗಳ ಜೊತೆ ನೀನಿರಬೇಕು ಕಣಯ್ಯ’ ಎನ್ನುವ ಮನಸ್ಥಿತಿ ಮೇಷ್ಟ್ರ ಮಾತಲ್ಲಿತ್ತು.

ಸಮಾಜದ ಕಸಗುಡಿಸುವವರು ನಾವಾದರೆ, ಸಮಾಜದ ಕೊಳಕನ್ನು, ಕಲೆಯನ್ನು ತೊಳೆಯುವವರು ಮಡಿವಾಳರು. ಇಂತಹ ಸಮುದಾಯಗಳು ಒಂದಾಗಿರಬೇಕೆನ್ನುವುದು ಮೇಷ್ಟ್ರ ಆಶಯವಾಗಿತ್ತು. ಬಸವಣ್ಣನವರು ಮಾಡಿದ್ದು ಇದನ್ನೇ ಅಲ್ಲವೆ? ಇದಕ್ಕೆ ಸಂಬಂಧಿಸಿದಂತೆ ಅಂದರೆ ಮಡಿವಾಳರ ಬಗ್ಗೆ ನಮ್ಮಪ್ಪ ನನಗೊಂದು ಕಥೆ ಹೇಳುತಿತ್ತು. ಮಡಿವಾಳರನ್ನು ನಾವು ಅಪ್ಪ-ಅಪ್ಪರೇ ಅಂತ ಕರಿಬೇಕು ಎಂದು ಹೇಳುತಿತ್ತು.

ಆಗಿನ ಕಾಲದಲ್ಲಿ ಊರು ಒಳಗಿನ ಬಾವಿ ಹತ್ರ ಬಾಯಾರಿದ ತಳ ಸಮುದಾಯದ ಒಬ್ಬ ಹುಡುಗ ‘ಯಾರಾದ್ರು ನೀರು ಕೊಡುತ್ತಾರಾ?’ ಅಂತ ಕಾಯುತಿದ್ದ . ಎಷ್ಟು ಹೊತ್ತಾದರೂ ಆ ಬಿರು ಬಿಸಿಲಿನಲ್ಲಿ ಯಾರೂ ಬಾವಿಯ ಬಳಿ ಸುಳಿಯಲಿಲ್ಲ. ಆಗ ಆ ಹುಡುಗ ಬಾವಿಯನ್ನು ಬಗ್ಗಿ ನೋಡಿದ. ಬಾವಿಯ ನೀರಿನಲ್ಲಿ ಆತನ ಪ್ರತಿಬಿಂಬ ಕಾಣಿಸಿತು. ಅದನ್ನೇ ಮತ್ತೇ ಮತ್ತೇ ನೋಡಿಕೊಳ್ಳುತ್ತಿದ್ದ. ಅದೇ ಸಮಯಕ್ಕೆ ಮೇಲ್‌ಜಾತಿ ಸಮುದಾಯದ ದಾರಿ ಹೋಕರೊಬ್ಬರು ‘‘ಅಯ್ಯೋ, ಕೆಳ ಜಾತಿಯ ಹುಡುಗ ನಮ್ಮ ಬಾವಿಯನ್ನು ಮುಟ್ಟಿದಲ್ಲದೆ ಬಾವಿಯಲ್ಲಿರುವ ನೀರಿನಲ್ಲಿ ಮುಖನೋಡಿಕೊಂಡು ಬಾವಿಯ ನೀರನ್ನು ಮೈಲಿಗೆ ಮಾಡಿಬಿಟ್ಟ. ಎಲ್ಲ ಬನ್ರೊ’’ ಎಂದು ಹೇಳುವ ಹೊತ್ತಿಗೆ ಆ ಹುಡುಗ ಅಲ್ಲಿಂದ ಕಾಲು ಕಿತ್ತ . ಕ್ಷಣ ಮಾತ್ರದಲ್ಲಿ ಈ ಸುದ್ದಿ ಊರಿಗೆಲ್ಲ ಹಬ್ಬಿತ್ತು. ಉಳಿದ ಸಮುದಾಯದ ಜನ ಹುಡುಗನನ್ನು ಓಡಿಸಿಕೊಂಡು ಹೋದರು. ಹೇಗೊ ತಪ್ಪಿಸಿಕೊಂಡು ಯಾರದೋ ಮನೆಯೊಳಗೆ ಸೇರಿಕೊಂಡ. ಆ ಮನೆಯ ಯಜಮಾನರು ಹಾಸಿದ ಎಲೆಯ ಮೇಲೆ ಊಟ ಮಾಡುತಿದ್ದರು. ಆಕಸ್ಮಿಕವಾಗಿ ಒಳಗೆ ಬಂದ, ಭಯ ಭೀತಿಗೊಂಡಿದ್ದ ಹುಡುಗನನ್ನು, ಮಾತನಾಡಿಸಿದರು. ಹುಡುಗ ನಡೆದುದನ್ನು ಹೇಳುತ್ತಾನೆ. ಆ ಹುಡುಗನಿಗೆ ಮೊದಲು ಕುಡಿಯಲು ನೀರು ಕೊಟ್ಟು, ತನ್ನ ಎಡೆಯಲ್ಲೇ ಊಟ ಮಾಡುವಂತೆ ಕರೆಯುತ್ತಾರೆ. ‘ಹುಡುಗ ಊಟಕ್ಕೆ ಕುಳಿತುಕೊಳ್ಳಬೇಕು’ ಎನ್ನುವ ಹೊತ್ತಿಗೆ ಸರಿಯಾಗಿ ಊರಿನ ಜನ ಕತ್ತಿ, ದೊಣ್ಣೆ ಹಿಡಿದುಕೊಂಡು ದಭ ದಭ ಅಂತ ಬರುತ್ತಾರೆ, ಬಂದವರೇ ಹೆದರಿಸುವ ಧ್ವನಿಯಲ್ಲಿ ‘ಇಲ್ಲಿ ಯಾರಾದರೂ ಹುಡುಗ ಬಂದನಾ?’ ಎಂದು ಕೇಳುತ್ತಾರೆ. ಅದಕ್ಕೆ ಮನೆ ಯಜಮಾನರು ‘ಇಲ್ಲ ಸ್ವಾಮಿ, ಇಲ್ಲಿ ಯಾರು ಬಂದಿಲ್ಲ?’ ಎಂದು ಹೇಳುತ್ತಾರೆ.

‘ಈ ಹುಡುಗ ಯಾರು?’ ಎಂದು ದಬಾಯಿಸುತ್ತಾರೆ. ಆಗ ಯಜಮಾನರು ‘ಇವನು ನನ್ನ ಮಗ ಸ್ವಾಮಿ’ ಎನ್ನುತ್ತಾರೆ.

ಬಂದವರು ಇನ್ನೊಂದು ಮನೆಯ ಕಡೆ ಹುಡುಕುವುದಕ್ಕೆ ಹೋಗುತ್ತಾರೆ. ಒಂದು ಕ್ಷಣ ಆ ಹುಡುಗನ ಜೀವ ಬಾಯಿಗೆ ಬಂದಿರುತ್ತದೆ. ಅಸ್ಪಶ್ಯ ಸಮುದಾಯದ ಹುಡುಗನೊಬ್ಬನನ್ನು ತನ್ನ ಮಗನೆಂದು ನೀರು, ಅನ್ನ ಕೊಟ್ಟು ಜೀವ ಉಳಿಸಿದವರು ಆ ಊರಿನ ಅಗಸರಾದ ಮಡಿವಾಳಪ್ಪನವರು. ಎಂತಹ ಹೃದಯವಂತಿಕೆಯ ಮನುಷ್ಯ? ಇದು ಹೇಳುವುದಕ್ಕೆ ಮತ್ತು ಕೇಳುವುದಕ್ಕೆ ಕಥೆಯಂತೆ ಕಾಣಿಸುತ್ತದೆ. ಆದರೆ ಇದು ನಡೆದಿರಬಹುದಾದ ನಿಜವಾದ ಘಟನೆಯೆಂದು ನನಗೆ ಅನ್ನಿಸುತ್ತದೆ. ಮೌಖಿಕ ಪರಂಪರೆಯ ಈ ಕಥನಗಳು ಜಾತಿ ಅಸಮಾನತೆಯನ್ನು ಮತ್ತು ಮಾನವೀಯತೆಯನ್ನು ದೃಢಪಡಿಸುತ್ತದೆ. ಬಸವಣ್ಣನವರು ಮಾಡಿದ ಕ್ರಾಂತಿ ನಮ್ಮನ್ನು ಮತ್ತೆ ಮತ್ತೆ ಒಳ್ಳೆಯದಕ್ಕೆ ಪ್ರೇರೆಪಿಸುತ್ತದೆ. ಲಂಕೇಶರು ಕೇಳಿದ ‘ನಿನಗೆ ಮಡಿವಾಳ ಸ್ನೇಹಿತರಿಲ್ಲವೆ?’ ಎಂಬ ಮಾನವೀಯ ಕಾಳಜಿಯ ಪ್ರಶ್ನೆ ನ್ನನಂಥವರಿಗೆ ಸದಾ ಜಾಗೃತಿ ಮತ್ತು ಎಚ್ಚರದಲ್ಲಿರುವಂತೆ ಮಾಡುತ್ತದೆ. ವೀರಣ್ಣನ ಸ್ನೇಹ ಸಹೋದರತ್ವ ಮಾನವೀಯ ಸಂಬಂಧಗಳಿಗೆ ಸಾಕ್ಷಿಯಾಗಿ ನಿಲ್ಲುವಂಥದು. ಬಹುಷಃ ‘ಇದೇ ನೆಲದ ಕರುಣೆಯ ದನಿ’.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಸುಬ್ಬು ಹೊಲೆಯಾರ್

contributor

Similar News