ಪ್ರಜ್ವಲ್ ರೇವಣ್ಣ ಪ್ರಕರಣ | ರಾಹುಲ್ ಗಾಂಧಿಗೆ ತಕ್ಷಣವೇ ಎಸ್‌ಐಟಿ ನೊಟೀಸ್ ನೀಡಬೇಕು : ಎಚ್‌ಡಿಕೆ ಆಗ್ರಹ
ರಾಯಚೂರು: ಸಂಸದ ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿರುವ ಎಐಸಿಸಿ ಮುಖಂಡ ರಾಹುಲ್ ಗಾಂಧಿಗೆ ತಕ್ಷಣವೇ ವಿಶೇಷ ತನಿಖಾ ದಳ ನೊಟೀಸ್ ನೀಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಇಷ್ಟು ಕರಾರುವಕ್ಕಾಗಿ, ಅಂಕಿ-ಅಂಶಗಳ ಸಮೇತ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ. ಈ ಸರಕಾರಕ್ಕೆ ಗಂಡಸ್ತನ, ತಾಕತ್ತು ಎನ್ನುವುದು ಇದ್ದರೆ ಈ ಕೂಡಲೇ ಆತನಿಗೆ ತನಿಖಾ ದಳದಿಂದ ಕೂಡಲೇ ನೋಟಿಸ್ ಕೊಡಿಸಬೇಕು. ದೇಶದ ಮಾಜಿ ಪ್ರಧಾನಿ ಮಗನಾ ಇವನು? ಹಾಗಾದರೆ ಇವನ ಬಳಿ ಎಲ್ಲ ಮಾಹಿತಿಯೂ ಇದೆ ಎಂದಾಯಿತು. ಈತನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಕೊಟ್ಟಿರಬೇಕು. ಅವರನ್ನು ಕರೆದು ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವುದನ್ನು ರಾಹುಲ್ ಗಾಂಧಿ ಮಾಧ್ಯಮಗಳ ಮುಂದೆಯೂ ಹೇಳಿದ್ದಾರೆ, ಬಹಿರಂಗ ಸಭೆಯಲ್ಲೂ ಹೇಳಿದ್ದಾರೆ. ಕರೆದು ವಿಚಾರಣೆ ಮಾಡಿ. ಸತ್ಯ ಏನೆಂಬುದು ಹೊರಗೆ ಬರಲಿ. ಮೋದಿ ಬಂದು ಕ್ಷಮೆ ಕೇಳಬೇಕಿತ್ತಂತೆ ಇವನಿಗೆ. ಮೋದಿ ಅವರಿಗೇನು ಕನಸು ಬಿದ್ದಿತ್ತಾ? ಮೊದಲೇ ಮಾಹಿತಿ ಗೊತ್ತಿದ್ದವನು ಇವನ್ಯಾಕೆ ಹೇಳಲಿಲ್ಲ?’ ಎಂದು ಅವರು ವಾಗ್ದಾಳಿ ನಡೆಸಿದರು.
ಬಾಗಲಕೋಟೆಯ ಎಚ್.ವೈ.ಮೇಟಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಚುನಾವಣೆ ಪ್ರಚಾರ ಮಾಡುತ್ತೀರಲ್ಲಾ. ಲಜ್ಜೆ ಆಗುವುದಿಲ್ಲವೇ ನಿಮಗೆ? ನಿಮ್ಮ ಬಳಿ ಎಲ್ಲ ವಿಷಯ ಇತ್ತು ಅಲ್ಲವೇ? ಏಪ್ರಿಲ್ 21ರ ವರೆಗೆ ಯಾಕೆ ಕಾದು ಕೂತಿದ್ದಿರಿ? ಮೇ 7ನೆ ತಾರೀಖು ಮತದಾನ ಮುಗಿದ ಮೇಲೆ ಈ ಪ್ರಕರಣ ಎಲ್ಲಿಗೆ ಹೋಗಿ ಮುಟ್ಟುತ್ತೆ? ನಿಮಗೆ ಬೇಕಿರುವುದು ಮೇ 7ನೆ ತಾರೀಕು ನಡೆಯುವ ಮತದಾನ ಮತ್ತು ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು, ಅμÉ್ಟೀ ಅಲ್ಲವೇ? ಎಂದು ಅವರು ಕಿಡಿಕಾರಿದರು.
ಟೆಂಟ್‍ನಲ್ಲಿ ನೀಲಿಚಿತ್ರ ತೋರಿಸುತ್ತಿದ್ದವನೇ: ಈ ಹಿಂದೆ ನೀನು ಏನೆಲ್ಲಾ ಮಾಡಿದ್ದೆ ಎನ್ನುವುದು ಲೋಕಕ್ಕೆ ಗೊತ್ತು. ಟೆಂಟ್‍ನಲ್ಲಿ ನೀಲಿಚಿತ್ರ ತೋರಿಸಿ ಹಣ ಮಾಡಿದವನು ಆ ವ್ಯಕ್ತಿ. ಆತನಿಗೆ ಅಂತಹ ಅನುಭವ ಮೊದಲಿನಿಂದಲೂ ಇದೆ. ಹಿಂದೊಮ್ಮೆ ಒಬ್ಬ ಶಾಸಕನ ಜೀವನದಲ್ಲಿ ಏನೆಲ್ಲಾ ಆಟ ಆಡಿದ, ಹೆಣ್ಣುಗಳನ್ನು ಹೇಗೆಲ್ಲಾ ಬಳಸಿಕೊಂಡ ಎನ್ನುವುದು ಗೊತ್ತಿದೆ. ಪೆನ್‍ಡ್ರೈವ್ ಅನ್ನು ಕುಮಾರಸ್ವಾಮಿಯೇ ಬಿಟ್ಟಿರಬೇಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ಅಂತಹ ಕೆಟ್ಟ ಅನುಭವ ಇರುವವನೇ ಪೇನ್‍ಡ್ರೈವ್ ಬೀದಿಗೆ ಬಿಟ್ಟಿದ್ದಾರೆ ಎಂದು ಅವರು ಟೀಕಿಸಿದರು.
ನನ್ನ ತಂದೆ-ತಾಯಿ ಜೀವ ಮುಖ್ಯ: ನನಗೆ ನನ್ನ ತಂದೆ-ತಾಯಿ ಆರೋಗ್ಯ ಮುಖ್ಯ. ನನ್ನ ತಂದೆಯವರ ಅರವತ್ತು ವರ್ಷಗಳ ರಾಜಕೀಯ ಜೀವನ ಹೇಗಿತ್ತು ಎನ್ನುವುದು ನನಗೆ ಗೊತ್ತಿದೆ. ನನ್ನ ತಾಯಿ ಯಾವ ಸಂಸ್ಕೃತಿಯಲ್ಲಿ ಬದುಕಿದ್ದಾರೆ ಎನ್ನವುದು ನನಗೆ ಗೊತ್ತಿದೆ. ಅವರಿಬ್ಬರ ಜೀವಕ್ಕೆ ಅಪಾಯವಾಗಬಾರದು. ಅವರ ಜೀವಕ್ಕೆ ತೊಂದರೆ ಆಗಬಾರದು, ಮಗನಾಗಿ ಧೈರ್ಯ ಹೇಳಲು ಎರಡು ದಿನದಿಂದ ಅವರ ಮನೆಗೆ ಹೋಗಿದ್ದೆ. ಇವತ್ತು ನೀವು ಅವರನ್ನು ಟೀಕೆ ಮಾಡುತ್ತಿದ್ದೀರಿ. ಅಷ್ಟು ವರ್ಷ ಅವರ ಜತೆ ರಾಜಕೀಯ ಮಾಡಿ ಹೋಗಿದ್ದೀರಿ. ಅವರು ಯಾವ ರೀತಿ ಬದುಕಿದರು ಎಂಬುದನ್ನು ಮರೆತುಬಿಟ್ಟಿದ್ದೀರಿ. ನಿಮ್ಮ ಯೋಗ್ಯತೆಗೆ ತಂದೆ-ತಾಯಿ ಲೆಕ್ಕಕ್ಕೆ ಇಲ್ಲದಿರಬಹುದು. ನೀವು ಆ ಸಂಸ್ಕೃತಿಯಿಂದ ಬಂದವರಲ್ಲ ಎಂದು ಅವರು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.