ರಾಯಚೂರು | ರೈಲ್ವೆ ನಿಲ್ದಾಣದಲ್ಲಿ 150 ಲೀಟರ್ ಕಲಬೆರಕೆ ಶೇಂದಿ ವಶ : 6 ಮಂದಿಯ ಬಂಧನ
Update: 2024-11-13 12:23 GMT
ರಾಯಚೂರು: ಬೀದರ್- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ರಮ ಸಿಎಚ್ ಪೌಡರ್, ಕಲಬೆರಕೆ ಶೇಂದಿ ಮಾರಾಟ ಮಾಡಲು ಯತ್ನಿಸಿದ್ದ 6 ಆರೋಪಿಗಳನ್ನು ಅಬಕಾರಿ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ ಬಂಧಿಸಿ, 150 ಲೀಟರ್ ಕಲಬೆರಕೆ ಶೇಂದಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಸವರಾಜ, ಶ್ರೀಕಾಂತ್, ಶಿವರಾಜ, ತಿಮ್ಮಪ್ಪ, ನರಸಮ್ಮ ಮತ್ತು ಮಾರೆಪ್ಪ ಎಂದು ಹೇಳಲಾಗಿದೆ.
ತೆಲಂಗಾಣದ ಕೃಷ್ಣಾದಿಂದ ರಾಯಚೂರಿಗೆ ಕಲಬೆರಕೆ ಶೇಂದಿ ಮಾರಾಟ ಮತ್ತು ಸಾಗಣೆ ಮಾಡಲು ಮುಂದಾಗಿದ್ದು, ಖಚಿತ ಮಾಹಿತಿ ಮೇರೆಗೆ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ, ಬಾಟಲಿಗಳಲ್ಲಿ ತುಂಬಿರುವ 150 ಲೀಟರ್ ಶೇಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ದ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ರಾಯಚೂರಿನ ವಿವಿಧ ಬಡಾವಣೆಯ ಮನೆಗಳಲ್ಲಿ ಅಕ್ರಮವಾಗಿ ಶೇಂದಿ ಸಂಗ್ರಹಿಸಿಟ್ಟು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.