ಮೈತ್ರಿಗೆ ಇಬ್ರಾಹೀಂ ಆಕ್ಷೇಪ ಎಷ್ಟು ಸರಿ?

Update: 2023-10-18 04:03 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಬಿಜೆಪಿ ಜೊತೆಗೆ ಮೈತ್ರಿ ಇಲ್ಲ’ ಎಂದು ಸೋಮವಾರ ನಗರದಲ್ಲಿ ನಡೆದ ಜೆಡಿಎಸ್ ಚಿಂತನ ಮಂಥನ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರೆಂದು ಇನ್ನೂ ನಂಬಿಕೊಂಡಿರುವ ಸಿ. ಎಂ. ಇಬ್ರಾಹೀಂ ಅವರು ಘೋಷಿಸಿದ್ದಾರೆ. ಜೆಡಿಎಸ್ನಲ್ಲೂ ಚಿಂತನೆ ಮತ್ತು ಮಂಥನಗಳು ನಡೆಯುತ್ತವೆ ಎನ್ನುವುದು ಈ ಮೂಲಕ ಬಹಿರಂಗವಾಗಿದೆ. ಈವರೆಗೆ ಜೆಡಿಎಸ್ ಮಂಥನಗಳೆಲ್ಲವೂ ‘ದೊಡ್ಡಮನೆ’ಯಲ್ಲೇ ತಂದೆ ಮಕ್ಕಳ ನಡುವೆ ನಡೆದು ಅಲ್ಲಿಂದಲೇ ಚಿಂತನೆಗಳು ಹೊರಬರುತ್ತಿದ್ದವು. ಇದೀಗ ಮೊದಲ ಬಾರಿಗೆ ಪಕ್ಷಾಧ್ಯಕ್ಷರೆಂದು ಕರೆದುಕೊಳ್ಳುತ್ತಿರುವ ಸಿ. ಎಂ. ಇಬ್ರಾಹೀಂ ನೇತೃತ್ವದಲ್ಲಿ ದೊಡ್ಡ ಮನೆಯ ವಿರುದ್ಧ ಚಿಂತನ ಮಂಥನ ನಡೆದಿದೆ. ಅದನ್ನು ಸಾಧ್ಯವಾಗಿಸಿದ ಕಾರಣಕ್ಕೆ ಇಬ್ರಾಹೀಂ ಅವರನ್ನು ಅಭಿನಂದಿಸಬೇಕು. ಬಹುಶಃ ಜೆಡಿಎಸ್ನ ಪಕ್ಷಾಧ್ಯಕ್ಷರಾಗಿ ಅವರು ನಿರ್ವಹಿಸಿದ ಮೊತ್ತ ಮೊದಲ ಮತ್ತು ಕಟ್ಟಕಡೆಯ ಚಿಂತನ ಮತ್ತು ಮಂಥನ ಇದಾಗಿ ಬಿಡುವ ಎಲ್ಲ ಸಾಧ್ಯತೆಗಳಿವೆ.

‘‘ಜೆಡಿಎಸ್ ಯಾವ ಕಾರಣಕ್ಕೂ ಎನ್ಡಿಎ ಜೊತೆಗೆ ಹೋಗಲ್ಲ. 19 ಜನ ಶಾಸಕರ ಜೊತೆಗೆ ನಾನೇ ಮಾತನಾಡುತ್ತೇನೆ. ಇಂದಿನ ಸಭೆಯ ಚರ್ಚೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ತಿಳಿಸುತ್ತೇನೆ. ಹೊಸ ಸಮಿತಿ ರಚನೆ ಮಾಡಿ ಅದರ ಸಭೆ ಕರೆಯುತ್ತೇನೆ. ಆನಂತರ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ’’ ಎಂದು ಚಿಂತನ ಮಂಥನ ಸಭೆಯ ಬಳಿಕ ಸಿ.ಎಂ. ಇಬ್ರಾಹೀಂ ತಿಳಿಸಿದ್ದಾರೆ. ಅಷ್ಟೇ ಅಲ್ಲ, ‘‘ಎನ್ಡಿಎ ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತೇವೆ’’ ಎಂದೂ ಘೋಷಿಸಿದ್ದಾರೆ. ‘‘ನನ್ನನ್ನು ತೆಗೆದು ಹಾಕಲು ಸಾಧ್ಯವೇ ಇಲ್ಲ. ಈ ಪಕ್ಷ ಕುಟುಂಬದ ಆಸ್ತಿಯಲ್ಲ. ಜೆಡಿಎಸ್ ಪಕ್ಷದ್ದು ಜಾತ್ಯತೀತ ಸಿದ್ಧಾಂತ. ಬಿಜೆಪಿ ಸಿದ್ಧಾಂತವೇ ಬೇರೆ. ಅವರ ಜೊತೆಗೆ ಮೈತ್ರಿ ಸಾಧ್ಯವೇ ಇಲ್ಲ’’ ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ. ಸದ್ಯಕ್ಕೆ ಸಿ. ಎಂ. ಇಬ್ರಾಹೀಂ ಅವರದು ಅಸಹಾಯಕತೆಯ ಚೀತ್ಕಾರವೇ ಹೊರತು, ಇದು ಘರ್ಜನೆಯಲ್ಲ. ಶೀಘ್ರದಲ್ಲೇ ಜೆಡಿಎಸ್ನಿಂದ ಹೊರತಳ್ಳಲ್ಪಡುವ ಎಲ್ಲ ಸಾಧ್ಯತೆಗಳಿರುವ ಸಿ.ಎಂ. ಇಬ್ರಾಹೀಂ ಅವರ ರಾಜಕೀಯ ಬದುಕು ಅಲ್ಲಿಂದ ಕೊನೆಗೊಳ್ಳುವ ಸಾಧ್ಯತೆಗಳೇ ಹೆಚ್ಚು. ಯಾಕೆಂದರೆ ಅವರನ್ನು ಕಾಂಗ್ರೆಸ್ ಪಕ್ಷ ಮರಳಿ ಸೇರಿಸಿಕೊಳ್ಳುತ್ತದೆ ಎನ್ನುವ ಯಾವ ಭರವಸೆಯೂ ಇಲ್ಲ. ಸೇರಿಸಿಕೊಂಡರೂ ವಿಧಾನಪರಿಷತ್ ಸದಸ್ಯನನ್ನಾಗಿಯಾದರೂ ಮಾಡುತ್ತದೆ ಎನ್ನುವ ‘ಗ್ಯಾರಂಟಿ’ಯೂ ಇಲ್ಲ. ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವಾಗ ಕಾಂಗ್ರೆಸನ್ನು ತೊರೆದ ವರು ಸಿ. ಎಂ. ಇಬ್ರಾಹೀಂ. ಅವರು ಇಲ್ಲದೆಯೂ ಕಾಂಗ್ರೆಸನ್ನು ಈ ನಾಡಿನ ಮುಸ್ಲಿಮರು ಹಿಂದೆಂದಿಗಿಂತಲೂ ಬಹುಮತದಿಂದ ಗೆಲ್ಲಿಸಿದ್ದಾರೆ. ಹೀಗಿರುವಾಗ ಯಾವ ಕಾರಣಕ್ಕಾಗಿ ಸಿಎಂ ಇಬ್ರಾಹೀಂ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಬೇಕು? ಇನ್ನು ಅವರ ಒರಿಜಿನಲ್ ಜೆಡಿಎಸ್ನಿಂದ ಬೆಂಬಲವನ್ನು ಸ್ವೀಕರಿಸುವ ಮಾತು? ಕುಮಾರ ಸ್ವಾಮಿ, ದೇವೇಗೌಡರಿದ್ದಾಗಲೇ ಜೆಡಿಎಸ್ನ ಬೆಂಬಲದ ಬಗ್ಗೆ ಆಸಕ್ತಿ ವಹಿಸದ ಕಾಂಗ್ರೆಸ್, ಮನೆಯೂ ಇಲ್ಲದೆ, ಮನೆಯೊಡೆಯನೇ ಇಲ್ಲದೆ ಬೀದಿ ಬದಿಯಲ್ಲಿರುವ ಜೆಡಿಎಸ್ನ ಬೆಂಬಲದಿಂದ ಪಡೆದುಕೊಳ್ಳುವುದಾದರೂ ಏನು? ಸಿ. ಎಂ. ಇಬ್ರಾಹೀಂ ಈ ಘೋಷಣೆಯ ಮೂಲಕ ಸ್ವತಃ ನಗೆ ಪಾಟಲಿಗೀಡಾಗಿದ್ದಾರೆ.

ಕುಮಾರ ಸ್ವಾಮಿಯ ವಿರುದ್ಧ ದೇವೇಗೌಡರಿಗೆ ದೂರು ಸಲ್ಲಿಸುವ ಇನ್ನೊಂದು ಪ್ರಸ್ತಾವವನ್ನು ಅವರು ಮುಂದಿಟ್ಟಿದ್ದಾರೆ. ಬಿಜೆಪಿಯೊಂದಿಗೆ ಮೊತ್ತ ಮೊದಲ ಬಾರಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಏನಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಆಗ ಬಹಿರಂಗವಾಗಿಯೇ ಆ ಮೈತ್ರಿಯನ್ನು ದೇವೇಗೌಡರು ವಿರೋಧಿಸಿದ್ದರು. ಅಥವಾ ವಿರೋಧಿಸಿದ ನಾಟಕವಾಡಿದ್ದರು. ದೇವೇಗೌಡರನ್ನು ನಂಬಿ ಹಲವು ಹಿರಿಯ ನಾಯಕರು ಅವರ ಜೊತೆಗೆ ನಿಂತರು. ಆದರೆ ನಿಧಾನಕ್ಕೆ ದೇವೇಗೌಡರೇ ಕುಮಾರಸ್ವಾಮಿಯ ನಿರ್ಧಾರವನ್ನು ಬೆಂಬಲಿಸತೊಡಗಿದರು. ಮೊದಲು ಪರೋಕ್ಷವಾಗಿ, ಬಳಿಕ ನೇರವಾಗಿ. ದೇವೇಗೌಡರ ಜೊತೆಗೆ ಗುರುತಿಸಿಕೊಂಡವರು ಹಲವರು ರಾಜಕೀಯದಿಂದ ಮರೆಗೆ ಸರಿಯಬೇಕಾಯಿತು. ತನ್ನ ಮಗನಿಗಾಗಿ ಹಲವು ನಾಯಕರನ್ನು ಅವರು ಆ ಸಂದರ್ಭದಲ್ಲಿ ಬಲಿಕೊಟ್ಟರು. ಈಗ ಪರಿಸ್ಥಿತಿ ಬದಲಾಗಿದೆ.

ಸ್ವತಃ ದೇವೇಗೌಡರ ನೇತೃತ್ವದಲ್ಲೇ ಚುನಾವಣಾ ಪೂರ್ವ ಮೈತ್ರಿ ನಡೆದಿದೆ ಎನ್ನುವುದನ್ನು ಕುಮಾರಸ್ವಾಮಿ ಘೋಷಿಸಿದ್ದಾರೆ. ಬಹಿರಂಗವಾಗಿಯೇ ತಂದೆ-ಮಗ ತಮ್ಮ ನಿರ್ಧಾರಗಳನ್ನು ಹೇಳಿಕೊಂಡಿದ್ದಾರೆ. ಹೀಗಿದ್ದರೂ ರಾಜ್ಯಾಧ್ಯಕ್ಷರಾಗಿ ತನ್ನ ಮೂಗು ಮಣ್ಣಾಗಿಲ್ಲ ಎನ್ನುವುದನ್ನು ಸಾಬೀತು ಮಾಡಲು ಸಿಎಂ ಇಬ್ರಾಹೀಂ ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ತನ್ನ ಜಾತ್ಯತೀತ ಹೇಳಿಕೆಗಳ ಮೂಲಕ ಮತ್ತೆ ಕಾಂಗ್ರೆಸ್ ಕದ ತಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ‘ಮೈತ್ರಿ ಮಾಡುವ ಮುಂಚೆ ತನ್ನನ್ನು ಸಂಪರ್ಕಿಸಿಲ್ಲ’ ಎನ್ನುವ ಅವಮಾನವನ್ನು ಅವರು ಒಪ್ಪಿಕೊಳ್ಳಲು ಸಿದ್ಧರಿದ್ದಂತಿಲ್ಲ. ಪಕ್ಷದಲ್ಲಿ ಸಿ.ಎಂ. ಇಬ್ರಾಹೀಂ ಅವರ ಸ್ಥಾನವೇನು ಎನ್ನುವುದನ್ನು ಕುಮಾರಸ್ವಾಮಿಯವರು ‘ಮೈತ್ರಿ ಘೋಷಣೆಯ ಮೂಲಕ’ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದನ್ನು ಒಪ್ಪಿಕೊಳ್ಳುವುದನ್ನು ಹೊರತು ಪಡಿಸಿ ಬೇರೆ ಯಾವ ದಾರಿಯೂ ಅವರಿಗಿಲ್ಲ.

ಒಂದು ವೇಳೆ ಕಳೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದರೆ ಆಗ ಅದನ್ನು ಸಿ. ಎಂ. ಇಬ್ರಾಹೀಂ ಒಪ್ಪಿಕೊಳ್ಳುತ್ತಿರಲಿಲ್ಲವೆ? ಅಲ್ಪಸಂಖ್ಯಾತ ಮುಖಂಡ ಎನ್ನುವ ಹೆಸರಿನಲ್ಲಿ ಆ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನೇನಾದರೂ ನೀಡಿದ್ದಿದ್ದರೆ ಅವರು ಬೇಡ ಅನ್ನುತ್ತಿದ್ದರೆ? ಜಾತ್ಯತೀತ ತತ್ವದ ಹೆಸರಿನಲ್ಲಿ ಮತಗಳನ್ನು ಯಾಚಿಸಿ, ಚುನಾವಣಾ ಫಲಿತಾಂಶದ ಬಳಿಕ ಕೋಮುವಾದಿ ಪಕ್ಷದ ಜೊತೆಗೆ ಸೇರಿಕೊಂಡು ಸರಕಾರ ರಚಿಸುವುದಕ್ಕಿಂತ ಚುನಾವಣಾ ಪೂರ್ವದಲ್ಲೇ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಹೆಚ್ಚು ಪ್ರಾಮಾಣಿಕತನದಿಂದ ಕೂಡಿದ್ದು. ಈ ಹಿಂದೆ ಬಿಜೆಪಿಯ ಜೊತೆಗೆ ಎರಡೆರಡು ಬಾರಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದು ಗೊತ್ತಿದ್ದೂ ಸಿ. ಎಂ. ಇಬ್ರಾಹೀಂ ಆ ಪಕ್ಷಕ್ಕೆ ಸೇರಿದ್ದು ಯಾಕೆ? ಇದೀಗ ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಳ್ಳುತ್ತೇನೆ ಎನ್ನುವಾಗ ಸಿ. ಎಂ. ಇಬ್ರಾಹೀಂ ಅವರು ಯಾಕೆ ಆಕ್ಷೇಪ ವ್ಯಕ್ತಪಡಿಸಬೇಕು? ಚುನಾವಣೆಗೆ ಮುನ್ನ ಬಿಜೆಪಿಗೆ ಬಯ್ದು, ಅಲ್ಪಸಂಖ್ಯಾತರನ್ನು ಜಾತ್ಯತೀತತೆಯ ಬಣ್ಣದ ಮಾತುಗಳಿಂದ ವಂಚಿಸಿ ಬಳಿಕ ಬಿಜೆಪಿಯ ಜೊತೆಗೆ ಸರಕಾರ ರಚಿಸುವುದಕ್ಕಿಂತ ಇದು ಹೆಚ್ಚು ಸರಿಯಲ್ಲವೆ?

ಇಷ್ಟಕ್ಕೂ ಪ್ರತ್ಯೇಕ ಜಾತ್ಯತೀತ ಜನತಾದಳವನ್ನು ಉಳಿಸಿ ಕಟ್ಟಿ ಬೆಳೆಸುವ ಬದ್ಧತೆಯಾದರೂ ಸಿ. ಎಂ. ಇಬ್ರಾಹೀಂ ಅವರಿಗೆ ಇದೆಯೆ? ಕಾಂಗ್ರೆಸ್ ಪಕ್ಷವನ್ನು ಯಾಕೆ ತೊರೆದರು? ಎನ್ನುವುದನ್ನೊಮ್ಮೆ ನಾವು ಸ್ಮರಿಸಿದರೆ ಸಾಕು. ಕಾಂಗ್ರೆಸ್ ತೊರೆಯುವ ಸಂದರ್ಭದಲ್ಲಿ ‘‘ನನಗೆ ಇಷ್ಟು ಸಾಲವಿದೆ...ಮಕ್ಕಳ ಮದುವೆಯಾಗಿಲ್ಲ’’ ಎಂದು ವೈಯಕ್ತಿಕ ಸಮಸ್ಯೆಗಳನ್ನು ಮುಂದಿಟ್ಟು ಗೊಳೋ ಎಂದು ಅತ್ತರೇ ಹೊರತು, ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳನ್ನು, ನೋವುಗಳನ್ನು ಮುಂದಿಟ್ಟು ಅವರು ಅತ್ತಿರಲಿಲ್ಲ. ಭವಿಷ್ಯದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಬಹುದು ಎನ್ನುವ ದೂರದೃಷ್ಟಿಯಿಂದ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನ ನೀಡಲಿಲ್ಲ ಎನ್ನುವುದನ್ನು ಹೊರತು ಪಡಿಸಿ ಬೇರಾವ ಬದ್ಧತೆಯೂ ಅವರ ಪಕ್ಷಾಂತರಕ್ಕೆ ಇರಲಿಲ್ಲ.ಹೀಗಿರುವಾಗ, ‘ನನ್ನದೇ ನಿಜವಾದ ಜೆಡಿಎಸ್’ ಎಂದು ಘೋಷಿಸಿ ಪಕ್ಷವನ್ನು ಅವರು ಮುನ್ನಡೆಸುತ್ತಾರೆ ಎಂದು ನಂಬುವ ಶಾಸಕರು ಜೆಡಿಎಸ್ನಲ್ಲಿ ಇದ್ದಾರೆಯೆ? ಕಳೆದ ಚುನಾವಣಾ ಫಲಿತಾಂಶವೇ ಸಿ. ಎಂ. ಇಬ್ರಾಹೀಂ ಅವರ ಭಾಷಣಗಳು ಸವಕಲು, ಅಪ್ರಸ್ತುತವಾಗಿವೆ ಎನ್ನುವುದನ್ನು ಸಾಬೀತು ಪಡಿಸಿದೆ. ಸದ್ಯಕ್ಕೆ ಸಿ.ಎಂ. ಇಬ್ರಾಹೀಂ ಜೆಡಿಎಸ್ಗೆಂದಲ್ಲ ಎಲ್ಲ ರಾಜಕೀಯ ಪಕ್ಷಗಳಿಗೂ ಬೇಡವಾದ ಸರಕು. ಅವರಿಗೆ ಸದ್ಯಕ್ಕೆ ಸೇರುವುದಕ್ಕಿರುವ ಒಂದೇ ಪಕ್ಷ ಬಿಜೆಪಿ ಮಾತ್ರ. ಆದರೆ ಸದ್ಯಕ್ಕೆ ರಾಜ್ಯ ಬಿಜೆಪಿಯ ಸ್ಥಿತಿ ಎಷ್ಟು ದಯನೀಯವಾಗಿದೆಯೆಂದರೆ, ಸ್ವತಃ ಸಿ. ಎಂ. ಇಬ್ರಾಹೀಂ ಕೂಡ ಆ ಪಕ್ಷವನ್ನು ಸೇರಲು ಹಿಂಜರಿಯುವಷ್ಟು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News