ಭಾರತ ರತ್ನದ ಗೌರವ ಮಂಕಾಗದಿರಲಿ...

Update: 2024-02-10 08:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೋದಿ ಯುಗದಲ್ಲಿ ಭಾರತ ರತ್ನಗಳ ಸಂಖ್ಯೆ ಹೆಚ್ಚುತ್ತಿದೆ. ಕರ್ಪೂರಿ, ಅಡ್ವಾಣಿಯವರಿಗೆ ಭಾರತ ರತ್ನ ಘೋಷಿಸಿದ ಬೆನ್ನಿಗೇ ಮಾಜಿ ಪ್ರಧಾನಿ ನರಸಿಂಹ ರಾವ್, ಚರಣ್ ಸಿಂಗ್ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ. ಇವರ ಜೊತೆ ಜೊತೆಗೇ ಹಸಿರು ಕ್ರಾಂತಿಗಾಗಿ ಹೆಸರುವಾಸಿಯಾಗಿದ್ದ ಕೃಷಿ ವಿಜ್ಞಾನಿ ಸ್ವಾಮಿನಾಥನ್ ಕೂಡ ಭಾರತ ರತ್ನರಾಗಿ ಕಂಗೊಳಿಸಿದ್ದಾರೆ. ಪಿ. ವಿ. ನರಸಿಂಹ ರಾವ್ ಅವರನ್ನು ಭಾರತ ರತ್ನಕ್ಕೆ ಆಯ್ಕೆ ಮಾಡುವ ಮೂಲಕ, ರಾಮಮಂದಿರ ನಿರ್ಮಾಣದ ಹಿಂದಿರುವ ಇನ್ನೋರ್ವ ವ್ಯಕ್ತಿಯನ್ನು ಮೋದಿ ಸರಕಾರ ಗುರುತಿಸಿದಂತಾಗಿದೆ. ಈ ಮೂಲಕ ಅಡ್ವಾಣಿ ಮತ್ತು ನರಸಿಂಹರಾವ್ ಅವರು ರಾಮಮಂದಿರ ನಿರ್ಮಾಣದ ಗೌರವದ ಸಮಪಾಲುಗಳನ್ನು ಹಂಚಿಕೊಂಡಿದ್ದಾರೆ. ಕಾಂಗ್ರೆಸನ್ನು ವಿರೋಧಿಸುವ ಮೂಲಕವೇ ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಾ ಬಂದಿರುವ ಚರಣ್‌ಸಿಂಗ್, ತುರ್ತುಪರಿಸ್ಥಿಯ ಬೆಳವಣಿಗೆಗಳ ಬಳಿಕ ಆರು ತಿಂಗಳ ಪ್ರಧಾನಿಯಾಗಿ ಗುರುತಿಸಿಕೊಂಡವರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗಿದ್ದುಕೊಂಡೇ ಆ ಪಕ್ಷವನ್ನು ದುರ್ಬಲಗೊಳಿಸಿದ ಪಿ.ವಿ. ನರಸಿಂಹ ರಾವ್ ಅವರನ್ನು ಬಿಜೆಪಿ ಸ್ಮರಿಸಲೇ ಬೇಕಾಗಿದೆ. ಬಾಬರಿ ಮಸೀದಿ ಧ್ವಂಸವಾಗುವ ಬಗ್ಗೆ ಪೂರ್ಣ ಮಾಹಿತಿಯಿದ್ದರೂ, ಅದನ್ನು ತಡೆಯದೇ ಅಡ್ವಾಣಿ ಬಳಗಕ್ಕೆ ಪರೋಕ್ಷ ನೆರವಾದವರು ಎಂಬ ಆರೋಪ ಪಿ.ವಿ. ನರಸಿಂಹರಾವ್ ಮೇಲಿದೆ.

ಮೀಸಲಾತಿ, ಕೃಷಿ ಎರಡಕ್ಕೂ ಮರಣ ಶಾಸನಗಳನ್ನು ಬರೆಯುತ್ತಿರುವ ಸಂದರ್ಭದಲ್ಲಿ ಸಾಂಕೇತಿಕವಾಗಿ ಮೀಸಲಾತಿಗಾಗಿ ದುಡಿದ ಕರ್ಪೂರಿ ಮತ್ತು ರೈತರಿಗಾಗಿ ಮಿಡಿದ ಚರಣ್ ಸಿಂಗ್‌ಗೆ ಮೋದಿಯವರು ಭಾರತ ರತ್ನವನ್ನು ಘೋಷಿಸಿದ್ದಾರೆ. ಒಂದೆಡೆ ಅಂಬೇಡ್ಕರ್ ಆಶಯಗಳಿಗೆ ಗೋರಿ ಕಟ್ಟುತ್ತಲೇ, ಅವರ ಬೃಹದೆತ್ತರದ ಪ್ರತಿಮೆಗಳನ್ನು ಬೀದಿಗಳಲ್ಲಿ ನಿಲ್ಲಿಸಿದಂತೆಯೇ ಇದು. ಅರ್ಹ ಹಿಂದುಳಿದವರ್ಗಗಳಿಗೆ ಮೀಸಲಾತಿಯನ್ನು ತಲುಪಿಸುವುದಕ್ಕೆ ತನ್ನ ಮುಖ್ಯಮಂತ್ರಿ ಕುರ್ಚಿಯನ್ನೇ ಬಲಿಕೊಟ್ಟವರು ಬಿಹಾರದ ಅಂದಿನ ಮುಖ್ಯಮಂತ್ರಿ ಕರ್ಪೂರಿಯವರು. ಅವರು ಜಾರಿಗೊಳಿಸಲು ಮುಂದಾಗಿದ್ದ ಮೀಸಲಾತಿಯನ್ನು ಬೀದಿಗಿಳಿದು ಪ್ರತಿಭಟಿಸಿದ್ದು ಅಂದಿನ ಜನಸಂಘ. ಕರ್ಪೂರಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವಲ್ಲೂ ಜನಸಂಘ ಯಶಸ್ವಿಯಾಯಿತು. ಅದೇ ಜನಸಂಘ ಇಂದು ಬಿಜೆಪಿಯಾಗಿ ದೇಶವನ್ನು ಆಳುತ್ತಿದೆ ಮತ್ತು ಹಂತಹಂತವಾಗಿ ಮೀಸಲಾತಿಯನ್ನು ದುರ್ಬಲಗೊಳಿಸುತ್ತಾ, ಕರ್ಪೂರಿಯವರಿಗೆ ಭಾರತರತ್ನವನ್ನು ನೀಡಿ ತನ್ನನ್ನು ತಾನು ಹಿಂದುಳಿದ ವರ್ಗದ ಮಿತ್ರನೆಂದು ಬಿಂಬಿಸಲು ಮುಂದಾಗಿದೆ. ಬಿಹಾರದಲ್ಲಿ ನಿತೀಶ್ ಜೊತೆಗೆ ಮೈತ್ರಿಯನ್ನು ಕುದುರಿಸುವುದಕ್ಕಾಗಿಯೂ ಭಾರತ ರತ್ನವನ್ನು ಬಿಜೆಪಿ ಬಳಸಿಕೊಂಡಿದೆ. ಚರಣ್ ಸಿಂಗ್ ವಿಷಯದಲ್ಲೂ ಇದು ಮುಂದುವರಿದಿದೆ. ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳದ ಜೊತೆಗೆ ಕೈ ಜೋಡಿಸುವ ನಿಟ್ಟಿನಲ್ಲಿ ಚರಣ್ ಸಿಂಗ್‌ಗೆ ಭಾರತ ರತ್ನವನ್ನು ನೀಡಲಾಗಿದೆ ಎನ್ನುವ ಆರೋಪಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ, ರೈತಪರ ಆಡಳಿತದ ಮೂಲಕ ಉತ್ತರ ಪ್ರದೇಶದಲ್ಲಿ ಜನಪ್ರಿಯರಾಗಿದ್ದ ಚರಣ್ ಸಿಂಗ್ ಅವರು ಭಾರತ ರತ್ನ ಗೌರವಕ್ಕೆ ಅರ್ಹರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿ ಈ ಭಾರತ ರತ್ನವನ್ನು ತನ್ನ ರಾಜಕೀಯ ಚಟುವಟಿಕೆಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪಗಳು ಪ್ರಶಸ್ತಿಯ ಹೊಳಪನ್ನು ಮಂಕಾಗಿಸುತ್ತಿದೆ. ಪ್ರಶಸ್ತಿ ಘೋಷಣೆಯಾಗಿರುವ ಬೆನ್ನಿಗೇ, ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಚೌಧರಿ ಅವರು, ರಾಷ್ಟ್ರೀಯ ಲೋಕ ದಳವು ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡಿರುವುದನ್ನು ದೃಢ ಪಡಿಸಿದ್ದಾರೆ. ‘ಭಾರತ ರತ್ನ’ ಗೌರವದ ಮೂಲಕ ಬಿಜೆಪಿಯು ಈ ಮೈತ್ರಿಯನ್ನು ಕುದುರಿಸಿಕೊಂಡಿತೇ ಎಂದು ಜನರು ಸಹಜವಾಗಿಯೇ ಅನುಮಾನ ಪಡುವಂತಾಗಿದೆ.

ಪಿ.ವಿ. ನರಸಿಂಹ ರಾವ್ ಅವರು ಏಕಕಾಲಕ್ಕೆ ಸಂಘಪರಿವಾರ ಮತ್ತು ಕಾರ್ಪೊರೇಟ್ ವಲಯಗಳಿಗೆ ಮಿತ್ರರು. ಉದಾರೀಕರಣದ ಹೆಸರಿನಲ್ಲಿ ವಿದೇಶಿ ಬಂಡವಾಳಶಾಹಿಗಳಿಗೆ ಭಾರತದ ಆರ್ಥಿಕತೆಯ ಹೆಬ್ಬಾಗಿಲನ್ನು ತೆರೆದುಕೊಟ್ಟವರು ಅಂದಿನ ಪ್ರಧಾನಿ ನರಸಿಂಹ ರಾವ್. ಇಂದು ಪ್ರಧಾನಿ ಮೋದಿಯವರು ಇಡೀ ಕೋಟೆಯನ್ನೇ ಕಾರ್ಪೊರೇಟ್ ಶಕ್ತಿಗಳಿಗೆ ಒಪ್ಪಿಸಿ ಬಿಟ್ಟಿದ್ದಾರೆ. ನರಸಿಂಹ ರಾವ್ ಅವರು ಸಂಘಪರಿವಾರಕ್ಕೂ ಹತ್ತಿರವಾದವರು. ಕಾಂಗ್ರೆಸ್‌ನೊಳಗಿದ್ದುಕೊಂಡೇ ಸಂಘಪರಿವಾರದ ಬೆಳವಣಿಗೆಗಳಿಗೆ ದುಡಿದವರು. ಬಾಬರಿ ಮಸೀದಿ ಧ್ವಂಸವಾಗುವ ಸಂದರ್ಭದಲ್ಲಿ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸುವ ಬದಲು ಪೂಜಾಕೋಣೆಯಲ್ಲಿ ಬಾಗಿಲು ಹಾಕಿ ಕುಳಿತು ಅಡ್ವಾಣಿ ಬಳಗದ ಕೃತ್ಯಗಳಿಗೆ ಪರೋಕ್ಷವಾಗಿ ಸಹಕರಿಸಿದರು. ಅದರ ಫಲವನ್ನು ಇಂದಿಗೂ ಕಾಂಗ್ರೆಸ್ ಪಕ್ಷ ಉಣ್ಣುತ್ತಿದೆ. ಇಂದು ಈ ದೇಶವನ್ನು ಕಾರ್ಪೊರೇಟ್ ಮತ್ತು ಸಂಘಪರಿವಾರ ಜೊತೆ ಸೇರಿಕೊಂಡು ಆಳುತ್ತಿದೆ. ಈ ಸಂದರ್ಭದಲ್ಲಿ ಪಿ. ವಿ. ನರಸಿಂಹ ರಾವ್ ಅವರಿಗೆ ಭಾರತ ರತ್ನ ದೊರಕಲೇ ಬೇಕು. ಇದೇ ಸಂದರ್ಭದಲ್ಲಿ ಸ್ವಾಮಿನಾಥನ್ ಅವರಿಗೆ ನೀಡಿರುವ ಭಾರತ ರತ್ನ ಇನ್ನೊಂದು ಅಣಕವಾಗಿದೆ. ಒಂದೆಡೆ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಾ, ಸ್ವಾಮಿನಾಥನ್ ಅವರಿಗೆ ನೀಡುವ ಭಾರತ ರತ್ನದಿಂದ ಈ ದೇಶದ ಕೃಷಿ ವಲಯಕ್ಕೆ ಯಾವುದೇ ಪ್ರಯೋಜನವಾಗದು. ತನ್ನ ಕೃಷಿ ವಿರೋಧಿ ನೀತಿಗಳ ಕಳಂಕವನ್ನು ತೊಡೆದು ಹಾಕಲು ಸರಕಾರ ಸ್ವಾಮಿನಾಥನ್ ಅವರನ್ನು ಬಳಸಿಕೊಳ್ಳಲು ಮುಂದಾಗಿದೆ.

ಭತ್ತ, ಗೋಧಿ ಹಾಗೂ ಬಟಾಟೆಯ ಸಮೃದ್ಧ ಇಳುವರಿಯನ್ನು ರೈತರು ಪಡೆಯುವಂತೆ ಮಾಡಲು ಹಲವಾರು ತಳಿಗಳನ್ನು ಪರಿಚಯಿಸಿದವರು ಸ್ವಾಮಿನಾಥನ್. ಭಾರತೀಯ ಕೃಷಿ ವಿಜ್ಞಾನ ಸಂಶೋಧನಾ ಸಂಸ್ಥೆ (ಐಎಆರ್‌ಐ) ಹಾಗೂ ಬ್ರಿಟನ್‌ನ ಕೇಂಬ್ರಿಜ್ ವಿವಿಯಿಂದ ಅವರು ಕೃಷಿ ವಿಜ್ಞಾನ (ವಂಶವಾಹಿ ತಂತ್ರಜ್ಞಾನ ಹಾಗೂ ಸಸ್ಯ ಸಂತಾನೋತ್ಪತ್ತಿ)ದಲ್ಲಿ ಎಂಎಸ್‌ಸಿ ಪದವಿ ಪಡೆದವರು. ಭಾರತದ ಅರೆಶುಷ್ಕ ಪ್ರದೇಶದ ಬೆಳೆಗಳಿಗಾಗಿನ ಅಂತರ್‌ರಾಷ್ಟ್ರೀಯ ಸಂಶೋಧನಾ ಕೇಂದ್ರದ ಸ್ಥಾಪನೆಗೂ ಅವರು ಕಾರಣರಾಗಿದ್ದರು. ಟೈಮ್ ಪತ್ರಿಕೆಯು ಮಹಾತ್ಮಾಗಾಂಧಿ ಹಾಗೂ ಠಾಗೋರ್ ಜೊತೆ ಸ್ವಾಮಿನಾಥನ್ ಅವರನ್ನು ಕೂಡಾ 20ನೇ ಶತಮಾನದ ಪ್ರಭಾವಿ ಏಶ್ಯನ್ನರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು. ಕೃಷಿಯೊಂದಿಗೆ ಬೆಸೆದುಕೊಂಡಿರುವ ಭಾರತಕ್ಕೆ ಸ್ವಾಮಿನಾಥನ್ ರತ್ನವೇ ಸರಿ. ಭಾರತೀಯ ಕೃಷಿಯ ಕುರಿತಂತೆ ಸ್ವಾಮಿನಾಥನ್ ಮಂಡಿಸಿರುವ ಅಭಿಪ್ರಾಯಗಳಿಗೂ ಸರಕಾರ ಇದೇ ಸಂದರ್ಭದಲ್ಲಿ ಗೌರವವನ್ನು ನೀಡಿ ಅವುಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದರೆ ಈ ಭಾರತ ರತ್ನದ ಗೌರವಕ್ಕೆ ಅರ್ಥ ಸಿಗುತ್ತಿತ್ತು. ಮೋದಿ ಆಡಳಿತದಲ್ಲಿ ಕೃಷಿಕರು ಬೀದಿಯಲ್ಲಿದ್ದಾರೆ. ಕೃಷಿಕರ ಮೇಲೆ ಲಾಠಿ ಬೀಸುತ್ತಾ ಮತ್ತೊಂದೆಡೆ ಸ್ವಾಮಿನಾಥನ್, ಚರಣ್‌ಸಿಂಗ್‌ರಂತಹ ಹಿರಿಯರಿಗೆ ಭಾರತರತ್ನವನ್ನು ನೀಡುವ ಮೂಲಕ ಈ ದೇಶದಲ್ಲಿ ಕೃಷಿಯನ್ನು ಮೇಲೆತ್ತಲು ಸಾಧ್ಯವಿಲ್ಲ. ಕರ್ಪೂರಿ ಮತ್ತು ಅಡ್ವಾಣಿ ಈ ದೇಶದ ಎರಡು ವಿರೋಧಾಭಾಸಗಳು. ಒಬ್ಬರು ಹಿಂದುಳಿದ ವರ್ಗದ ಮೀಸಲಾತಿಗಾಗಿ ಅಧಿಕಾರವನ್ನು ಕಳೆದುಕೊಂಡವರಾದರೆ, ಇನ್ನೊಬ್ಬರು ಮೀಸಲಾತಿಯ ವಿರುದ್ಧ ರಥಯಾತ್ರೆಯನ್ನು ಹಮ್ಮಿಕೊಂಡು ಅಧಿಕಾರ ಹಿಡಿದವರು. ಕೃಷಿಕರು ತಮ್ಮ ಹಕ್ಕುಗಳಿಗಾಗಿ ಬೀದಿಯಲ್ಲಿ ಹೋರಾಡಿ ಪ್ರಾಣ ಕಳೆದುಕೊಳ್ಳುತ್ತಿರುವಾಗ, ಕೃಷಿ ತಜ್ಞನಿಗೆ ಭಾರತರತ್ನ ನೀಡಿ ಸರಕಾರ ತನ್ನನ್ನು ಕೃಷಿಕರ ಪರವೆಂದು ಬಿಂಬಿಸಿಕೊಳ್ಳಲು ಸಾಧ್ಯವಿಲ್ಲ. ಕನಿಷ್ಠ ಬೆಂಬಲಬೆಲೆಯೂ ಸೇರಿದಂತೆ ರೈತರ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳುವುದು, ತಳಸ್ತರದ ಹಿಂದುಳಿದ ವರ್ಗಗಳಿಗೂ ಮೀಸಲಾತಿಯ ಲಾಭವನ್ನು ತಲುಪಿಸಲು ಜಾತಿಗಣತಿಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವುದೇ ಕರ್ಪೂರಿ, ಚರಣ್ ಸಿಂಗ್, ಸ್ವಾಮಿನಾಥನ್ ಅವರಂತಹ ಗಣ್ಯರಿಗೆ ಗೌರವ ಸಲ್ಲಿಸಲು ಸರಕಾರಕ್ಕಿರುವ ಮಾರ್ಗ. ಇದರ ಜೊತೆ ಜೊತೆಗೆ ಈ ಸಾಧಕರಿಗೆ ಭಾರತರತ್ನ ಸಂದರೆ ಈ ಭಾರತದಲ್ಲಿ ಹಿಂದುಳಿದವರ್ಗಗಳು ನಿಜವಾದ ಅರ್ಥದಲ್ಲಿ ಮುಂದುವರಿಯುವಂತಾಗುತ್ತದೆ, ರೈತಾಪಿ ಜನಗಳು ಭಾರತದ ಪಾಲಿಗೆ ಬೆಲೆಬಾಳುವ ರತ್ನಗಳಾಗಿ ಬದಲಾಗುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News