ಕಾಲ್ತುಳಿತ: ಅಪಘಾತವಲ್ಲ, ಅಪರಾಧ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಮಂಗಳವಾರ ‘ಧಾರ್ಮಿಕ ಸಭೆ’ಗಳ ಬಗ್ಗೆ ಭಾರೀ ಕಳವಳವನ್ನು ವ್ಯಕ್ತಪಡಿಸಿತು. ಕ್ರೈಸ್ತ ಧಾರ್ಮಿಕ ಸಭೆಯೊಂದರಲ್ಲಿ ಮತಾಂತರ ನಡೆಯುತ್ತಿದೆ ಎನ್ನುವ ಆರೋಪ ಹೈಕೋರ್ಟ್ ಕಳವಳಕ್ಕೆ ಕಾರಣವಾಗಿತ್ತು. ‘ಇಂತಹ ಸಭೆಗಳು ಮತಾಂತರ ಮಾಡುವ ಉದ್ದೇಶವನ್ನು ಹೊಂದಿದ್ದರೆ ಅವುಗಳನ್ನು ತಡೆಯಬೇಕು. ಇಲ್ಲದೇ ಇದ್ದರೆ ಬಹುಸಂಖ್ಯಾತ ಸಮುದಾಯವು ಅಲ್ಪಸಂಖ್ಯಾತವಾಗಬಹುದು’’ ಎನ್ನುವುದು ಅದರ ಆತಂಕಕ್ಕೆ ಕಾರಣವಾಗಿತ್ತು. ಹೀಗೆ ಆತಂಕ ವ್ಯಕ್ತಪಡಿಸಿದ ದಿನವೇ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಧಾರ್ಮಿಕ ಸಭೆಯೊಂದರಲ್ಲಿ ಭಾರೀ ಕಾಲ್ತುಳಿತ ಸಂಭವಿಸಿ 120 ಕ್ಕೂ ಅಧಿಕ ಜನರು ಮೃತಪಟ್ಟರು. 50ಕ್ಕೂ ಅಧಿಕಮಂದಿ ಈ ದುರಂತದಲ್ಲಿ ಗಾಯಗೊಂಡಿದ್ದಾರೆ. ಬಹುಶಃ ಉತ್ತರ ಪ್ರದೇಶದ ಹೈಕೋರ್ಟ್ ಈ ಬಗ್ಗೆ ಇನ್ನೂ ಯಾವ ಹೇಳಿಕೆಯನ್ನೂ ನೀಡಿಲ್ಲ. ಮುಖ್ಯವಾಗಿ ಈ ಧಾರ್ಮಿಕ ಸಭೆಯನ್ನು ನಡೆಸಿರುವುದು ಯಾವುದೇ ಕ್ರೈಸ್ತ ಸಂಸ್ಥೆಯಲ್ಲ. ಜೊತೆಗೆ, ತುಳಿತ ಅಥವಾ ಕಾಲ್ತುಳಿತಗಳನ್ನು ಭಾರತೀಯ ಸಮಾಜ ಪರಂಪರೆಯ ಭಾಗವೆಂಬಂತೆ ಸ್ವೀಕರಿಸಿಕೊಂಡು ಬಂದಿದೆ. ಆದುದರಿಂದ ಇದು ಮತಾಂತರದಷ್ಟು ಗಂಭೀರ ವಿಷಯ ಅಲ್ಲ ಎಂದು ಹೈಕೋರ್ಟ್ ಭಾವಿಸಿರಬೇಕು.
ವರ್ಣಾಶ್ರಮ, ಜಾತಿಯ ಹೆಸರಿನಲ್ಲಿ ತಲೆ ತಲಾಂತರಗಳಿಂದ ಭಾರತೀಯ ಸಮಾಜದಲ್ಲಿ ಶೋಷಿತ ಸಮುದಾಯವನ್ನು ತುಳಿಯುತ್ತಾ ಬರಲಾಗಿದೆ. ವರ್ಣಾಶ್ರಮದಲ್ಲಿ ಶೂದ್ರರ ಸ್ಥಾನ ಕಾಲ ಬುಡದಲ್ಲಿದೆ. ಜಾತಿ ಅಸಮಾನತೆಯ ‘ಕಾಲ್ತುಳಿತ’ಕ್ಕೆ ಶತಮಾನಗಳಿಂದ ಶೋಷಿತ ಸಮುದಾಯ ಬೆಲೆತೆರುತ್ತಲೇ ಇದೆ. ಅವರ ಬದುಕಿನಲ್ಲಿ ಇದು ಬೇರೆ ಬೇರೆ ರೀತಿಯಲ್ಲಿ ದುಷ್ಪರಿಣಾಮಗಳನ್ನು ಬೀರುತ್ತಾ ಬಂದಿದೆ. ಇದಕ್ಕೆ ಹೋಲಿಸಿದರೆ ಧಾರ್ಮಿಕ ಸಭೆಗಳಲ್ಲಿ ನಡೆಯುವ ಕಾಲ್ತುಳಿತಗಳು ಏನೂ ಅಲ್ಲ. ಆದುದರಿಂದಲೇ ಇರಬೇಕು, ಇಂತಹ ಕಾಲ್ತುಳಿತಗಳನ್ನು ಸರಕಾರ, ಕಾನೂನು ವ್ಯವಸ್ಥೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶದ ಹಾಥರಸ್ ದಲಿತ ಮಹಿಳೆಯರ ಅತ್ಯಾಚಾರ, ಕೊಲೆಗಾಗಿ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಇದೇ ಹಾಥರಸ್ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ನಡೆದ ಭೀಕರ ಕಾಲ್ತುಳಿತದ ಮೂಲಕ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಮಹಾ ದುರಂತಕ್ಕೆ ಸಂಬಂಧಿಸಿ ಪ್ರಧಾನ ಆರೋಪಿ ಸ್ವಘೋಷಿತ ದೇವಮಾನವ ಭೋಲೆ ಬಾಬಾ ಮೇಲೆ ಇನ್ನೂ ಪ್ರಕರಣ ದಾಖಲಾಗಿಲ್ಲ. ಕಾರ್ಯವನ್ನು ಸಂಘಟಿಸಿದ ಕೆಲವರ ಮೇಲಷ್ಟೇ ಕಾಟಾಚಾರಕ್ಕೆ ದೂರು ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ಹಾಥರಸ್ ಕಾಲ್ತುಳಿತ ದುರಂತದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್‌ನ
ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯ ರಚನೆಗೆ ಆಗ್ರಹಿಸಿ ನ್ಯಾಯವಾದಿ ವಿಶಾಲ್ ತಿವಾರಿ ಎಂಬವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ. ಈ ಭೀಕರ ದುರಂತಕ್ಕೆ ಹೊಣೆಗಾರರಾದ ಸತ್ಸಂಗದ ಆಯೋಜಕರು ಹಾಗೂ ಕರ್ತವ್ಯಲೋಪವೆಸಗಿದ ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಅವರು ತಾನು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(ಪಿಐಎಲ್)ಯಲ್ಲಿ ಒತ್ತಾಯಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಲ್ತುಳಿತಗಳು ಭಾರತದಲ್ಲಿ ಇದೇ ಮೊದಲಾಗಿದ್ದರೆ ಈ ಪ್ರಕರಣವನ್ನು ಒಂದು ಅಪಘಾತವೆಂದು ಕರೆದು, ‘ವಿಧಿ’ಯ ತಲೆಗೆ ಕಟ್ಟಬಹುದಿತ್ತು. ಆದರೆ ಭಾರತದಲ್ಲಿ ಕಾಲ್ತುಳಿತಗಳು ಅಪಘಾತಗಳಲ್ಲ, ಅಪರಾಧಗಳಾಗಿ ಪರಿವರ್ತನೆಯಾಗಿವೆ. ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ, ಜನರನ್ನು ಸೇರಿಸಿ ಕೋಟಿ ಕೋಟಿ ರೂಪಾಯಿಗಳನ್ನು ಬಾಚುವ ಸತ್ಸಂಗ, ಅದರ ಹಿಂದಿರುವ ಸ್ವಯಂಘೋಷಿತ ಬಾಬಾಗಳು, ಸ್ವಾಮೀಜಿಗಳೇ ಈ ಅಪರಾಧಗಳಿಗೆ ನೇರ ಹೊಣೆಗಾರರು. ನೇರವಾಗಿ ಇವರ ಮೇಲೆ ಪ್ರಕರಣಗಳು ದಾಖಲಾಗದೇ ಇದ್ದರೆ ಇಂತಹ ದುರಂತಗಳು ಮರುಕಳಿಸುತ್ತಲೇ ಇರುತ್ತವೆ. 2013ರ ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶದ ರತನ್‌ಗಡ ದೇವಾಲಯದ ಕಾಲ್ತುಳಿತದಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ದೇವಸ್ಥಾನದೆಡೆಗೆಸಾಗುವ ಸಿಂಧ್ ನದಿಯ ಸೇತುವೆಯಲ್ಲಿ ಈ ದುರಂತ ಸಂಭವಿಸಿತ್ತು. 2011ರಲ್ಲಿ ಶಬರಿಮಲೆ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 100ಕ್ಕೂ ಅಧಿಕ ಯಾತ್ರಾರ್ಥಿಗಳು ಮೃತಪಟ್ಟಿದ್ದರು. 2010ರಲ್ಲಿ ಉತ್ತರ ಪ್ರದೇಶದ ಜೋಧ್‌ಪುರದಲ್ಲಿ ಸ್ವಯಂಘೋಷಿತ ಸ್ವಾಮೀಜಿಯೊಬ್ಬರ ಧಾರ್ಮಿಕ ಸಭೆಯಲ್ಲಿ ಕಾಲ್ತುಳಿತಕ್ಕೀಡಾಗಿ 60ಕ್ಕೂ ಅಧಿಕ ಮಂದಿ ಸತ್ತಿದ್ದರು. 2008ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ಸಂಭವಿಸಿದ ದುರಂತವಂತೂ ಅತ್ಯಂತ ಭೀಕರ. ಇಲ್ಲಿನ ಮೆಹ್ರಾನ್‌ಗಡ್ ಕೋಟೆ ಆವರಣದಲ್ಲಿರುವ ಚಾಮುಂಡಾದೇವಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 244 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಕಳೆದ ವರ್ಷ ಇಂದೋರ್‌ನಲ್ಲಿ ರಾಮನವಮಿಯ ದಿವಸ 36 ಮಂದಿ ಮೃತಪಟ್ಟಿದ್ದರು. 2015ರಲ್ಲಿ ಆಂಧ್ರ ಪ್ರದೇಶದ ಪುಷ್ಕರಂ ಹಬ್ಬದಲ್ಲಿ ನಡೆದ ದುರಂತಕ್ಕೆ 27 ಮಂದಿ ಮೃತಪಟ್ಟಿದ್ದರು. ಸಣ್ಣ ಪುಟ್ಟ ಕಾಲ್ತುಳಿತಗಳಿಗಂತೂ ಲೆಕ್ಕವೇ ಇಲ್ಲ ಎನ್ನುವಂತಾಗಿದೆ. ಹೀಗೆ ಪದೇ ಪದೇ ದುರಂತಗಳು ಸಂಭವಿಸುತ್ತಿದ್ದರೂ ಸರಕಾರ ಇಂತಹ ಧಾರ್ಮಿಕ ಸಭೆಗಳಿಗೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಯಾಕೆ ಜಾರಿಗೊಳಿಸಿಲ್ಲ? ಧಾರ್ಮಿಕ ಸಭೆಯಲ್ಲಿ ಯಾವನೋ ಒಬ್ಬ ಸ್ವ ಇಚ್ಛೆಯಿಂದ ಮತಾಂತರವಾಗಿದ್ದಾನೆ ಎಂದಾಕ್ಷಣ ‘ಇಂತಹ ಧಾರ್ಮಿಕ ಸಭೆಗಳನ್ನು ತಡೆಯಬೇಕು’ ಎಂದು ಹೇಳುವ ಹೈಕೋರ್ಟ್‌ಗೆ, ಯಾರದೋ ಸ್ವಾರ್ಥಕ್ಕಾಗಿ ಅಮಾಯಕ ಭಕ್ತರು ಅತ್ಯಂತ ಭೀಕರವಾಗಿ ಸಾಯುವುದು ಯಾಕೆ ಕಳವಳದ ವಿಷಯವಾಗುತ್ತಿಲ್ಲ?
ಈ ಹಿಂದೆ, ಸೌದಿಯಲ್ಲಿ ಹಜ್ ಯಾತ್ರೆಯ ಸಂದರ್ಭದಲ್ಲಿ ಇಂತಹ ಕಾಲ್ತುಳಿತಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದವು. ಆದರೆ ಅಲ್ಲಿನ ಸರಕಾರ ಇದನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿತು ಮಾತ್ರವಲ್ಲ, ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿತು. ಸುಮಾರು 18 ಲಕ್ಷ ಮಂದಿ ಭಾಗವಹಿಸುವ ಈ ಹಜ್ ಯಾತ್ರೆಯಲ್ಲಿ ಯಾವುದೇ ಕಾಲ್ತುಳಿತಗಳು ಸಂಭವಿಸಿದ ವರದಿಗಳು ಕಳೆದ ಹತ್ತು ವರ್ಷಗಳಿಂದ ಬೆಳಕಿಗೆ ಬಂದಿಲ್ಲ. ಸುಮಾರು 18 ಲಕ್ಷ ಮಂದಿ ಭಾಗವಹಿಸುವ ಹಜ್ ಯಾತ್ರೆಯಲ್ಲಿ ಕಾಲ್ತುಳಿತದಂತಹ ಅವಘಡಗಳು ಸಂಭವಿಸುವುದಿಲ್ಲ ಎಂದಾದರೆ, ಎರಡು ಲಕ್ಷ ಜನರು ಸೇರಿದ ಉತ್ತರ ಪ್ರದೇಶದ ಹಾಥರಸ್‌ನ ಧಾರ್ಮಿಕ ಸಭೆಯಲ್ಲಿ ಇಂತಹ ದುರಂತ ಹೇಗೆ ಸಂಭವಿಸಿತು? ಯಾಕೆಂದರೆ ಈ ಸ್ಥಳ 80,000 ಜನರು ಸೇರಲಷ್ಟೇ ಅವಕಾಶವಿರುವ ಸ್ಥಳದಲ್ಲಿ ಎರಡು ಲಕ್ಷ ಜನರನ್ನು ಸೇರಿಸಿದರೆ ಇನ್ನೇನಾಗುತ್ತದೆ? ಸಮಾಜ ಘಾತುಕ ಶಕ್ತಿಗಳು ಈ ದುರಂತದ ಹಿಂದಿದ್ದಾರೆ ಎಂದು ಬೋಲೆ ಸ್ವಾಮಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ನೇತೃತ್ವದಲ್ಲಿ ಈ ದುರಂತ ತನಿಖೆಗೊಳಪಡಬೇಕು. ಮಾತ್ರವಲ್ಲ, ಇಂತಹ ಧಾರ್ಮಿಕ ಸಭೆ, ಸಮ್ಮೇಳನಗಳು ಭಾರತದ ಯಾವ ಮೂಲೆಯಲ್ಲಿ ನಡೆಯಬೇಕಾದರೂ ಅದಕ್ಕೆ ಸೂಕ್ತ ಮಾರ್ಗಸೂಚಿಯನ್ನು ಹೊರಡಿಸಬೇಕು. ದುರಂತಗಳು ಸಂಭವಿಸಿದ್ದೇ ಆದರೆ, ಕಾರ್ಯಕ್ರಮ ಸಂಘಟಕರ ಮೇಲೆ ಮಾತ್ರವಲ್ಲ, ಸತ್ಸಂಗದ ನೇತೃತ್ವ ವಹಿಸಿದ ಸ್ವಯಂಘೋಷಿತ ಸ್ವಾಮೀಜಿ, ಬಾಬಾಗಳ ಮೇಲೆಯೂ ಪ್ರಕರಣ ದಾಖಲಾಗಬೇಕು. ದುರಂತಕ್ಕೆ ಕಾರಣವಾದ ಧಾರ್ಮಿಕ ಸಂಘಟನೆಗಳಿಗೆ ಮುಂದೆ ಯಾವತ್ತೂ ಅಂತಹ ಬೃಹತ್ ಸಮ್ಮೇಳನ ನಡೆಸದಂತೆ ಶಾಶ್ವತ ನಿಷೇಧವನ್ನು ಹೇರಬೇಕು.