ಸಂಸತ್ತಿಗೂ ಬಂದ ದ್ವೇಷ ಭಾಷಣದ ಪಿಡುಗು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇಷ್ಟು ದಿನ ತಮ್ಮ ನಾಯಕರ ಮೌನ ಸಮ್ಮತಿಯೊಂದಿಗೆ ಬೀದಿಯಲ್ಲಿ ಕೇಳಿ ಬರುತ್ತಿದ್ದ ಒಂದು ಸಮುದಾಯವನ್ನು ದ್ವೇಷಿಸುವ ಭಾಷಣಗಳು, ಗೂಂಡಾಗಿರಿಗಳು ಈಗ ಸಂಸತ್ ಕಲಾಪವನ್ನೂ ಪ್ರವೇಶಿಸಿವೆ. ಕಳೆದ ವಾರ ನೂತನ ಸಂಸತ್ ಭವನದಲ್ಲಿ ನಡೆದ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲು ಮಸೂದೆ ಮಾತ್ರ ಮಂಡನೆಯಾಗಲಿಲ್ಲ, ಭಾರತದ ಸಂಸತ್ತಿನ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ಮುಸ್ಲಿಮ್‌ದ್ವೇಷದ ವಿಷವನ್ನು ಮಾತಿನ ಮೂಲಕ ಕಕ್ಕಲಾಯಿತು. ರಮೇಶ್ ಬಿದೂರಿ ಎಂಬ ಬಿಜೆಪಿ ಲೋಕಸಭಾ ಸದಸ್ಯ ಬಿಎಸ್‌ಪಿ ಸದಸ್ಯ ದಾನಿಶ್ ಅಲಿ ಮೇಲೆ ವಾಗ್ದಾಳಿ ನಡೆಸಿ ಮುಸ್ಲಿಮ್ ಸಮುದಾಯದ ಬಗ್ಗೆ ಹೀನಾಯವಾಗಿ ಮಾತನಾಡಿದ ಘಟನೆ ಗೃಹ ಸಚಿವ ರಾಜನಾಥ್ ಸಿಂಗ್ ಎದುರಲ್ಲೇ ನಡೆಯಿತು. ಸಣ್ಣಪುಟ್ಟ ಕಾರಣಗಳಿಗೆ ಪ್ರತಿಪಕ್ಷ ಸದಸ್ಯರನ್ನು ಅಮಾನತು ಮಾಡುವ ಲೋಕಸಭಾಧ್ಯಕ್ಷ ಓಂ ಬಿರ್ಲಾ ಬಿದೂರಿಗೆ ಕೇವಲ ಎಚ್ಚರಿಕೆ ನೀಡಿ ಅವರ ಮಾತುಗಳನ್ನು ಕಡತದಿಂದ ತೆಗೆದು ಹಾಕಿ ತಾವು ಎಷ್ಟು ನಿಷ್ಪಕ್ಷಪಾತಿ ಸ್ಪೀಕರ್ ಎಂಬುದನ್ನು ತೋರಿಸಿಕೊಟ್ಟರು.
ತನ್ನ ಧರ್ಮ ಮತ್ತು ಸಮುದಾಯದ ಬಗ್ಗೆ ಪ್ರಚೋದನಾಕಾರಿಯಾಗಿ ಗೂಂಡಾ ಭಾಷೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ರಮೇಶ ಬಿದೂರಿ ಮಾತಿನಿಂದ ರೋಸಿ ಹೋಗಿರುವ ದಾನಿಶ್ ಆಲಿ ದ್ವೇಷ ಭಾಷಣಗಳನ್ನು ಕೇಳಲು ತನ್ನನ್ನು ಚುನಾಯಿಸಿಲ್ಲ. ಮೊದಲು ಸಂಸತ್ತಿನ ಹೊರಗೆ ದ್ವೇಷ ಭಾಷಣ ಮಾಡಲಾಗುತ್ತಿತ್ತು, ಈಗ ಸದನಕ್ಕೆ ದ್ವೇಷ ಭಾಷಣ ಪ್ರವೇಶಿಸಿದೆ. ಹಾಗಾಗಿ ಪ್ರಚೋದನಾಕಾರಿ ಮಾತುಗಳನ್ನು ಆಡಿದ ಬಿದೂರಿಯನ್ನು ಲೋಕಸಭಾಧ್ಯಕ್ಷರು ಅಮಾನತು ಮಾಡದಿದ್ದರೆ ತಾನು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ನೋವಿನಿಂದ ಹೇಳಿದ್ದಾರೆ.
ತೊಂಭತ್ತರ ದಶಕದಲ್ಲಿ ಆರೆಸ್ಸೆಸ್‌ನ ರಾಜಕೀಯ ವೇದಿಕೆ ಬಿಜೆಪಿ ದೇಶದಲ್ಲಿ ಪ್ರಾಬಲ್ಯ ಗಳಿಸುತ್ತ ಬಂದ ನಂತರ ನಮ್ಮ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಹೀಗೆ ಎಲ್ಲ ಕಡೆ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿರಿಸಿಕೊಂಡು ದ್ವೇಷದ ವಿಷ ಕಕ್ಕುವುದು, ಅವರ ಮೇಲೆ ಹಿಂಸೆಗೆ ಪ್ರಚೋದಿಸುವುದು ಸಾಮಾನ್ಯವಾಗಿದೆ. ವಿಷಾದದ ಸಂಗತಿಯೆಂದರೆ ಅದೀಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಅಧಿಕಾರಾವಧಿಯಲ್ಲಿ ಉನ್ನತ ಜನತಾಂತ್ರಿಕ ವೇದಿಕೆಯಾದ ಸಂಸತ್ ಭವನವನ್ನು ಪ್ರವೇಶಿಸಿದೆ. ಇಂತಹ ಅನಾಗರಿಕ, ಅಸಭ್ಯ, ಪ್ರಚೋದನಾಕಾರಿ ಭಾಷಣಗಳನ್ನು ಆಡಳಿತ ಪಕ್ಷ ತನ್ನ ರಾಜಕೀಯ ಬಲವರ್ಧನೆಗೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ನಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಜನಾಂಗದ್ವೇಷದ ವಿಷ ಹೇಗೆ ವ್ಯಾಪಿಸುತ್ತದೆಂದರೆ ಬಿದೂರಿಯ ಪ್ರಚೋದನಾಕಾರಿ ಭಾಷಣವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಯುತ್ತಿದೆ. ಆತನ ಹೊಲಸು ಮಾತುಗಳನ್ನು ಬಹಿರಂಗವಾಗಿ ಸಮರ್ಥಿಸಲಾಗುತ್ತಿದೆ. ಬಿದೂರಿಯನ್ನು ಬೆಂಬಲಿಸಿ ರಾಜ್ಯಸಭೆಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಘೋಷಣೆಗಳ ಸುರಿಮಳೆಯಾಯಿತು. ಇದಕ್ಕಿಂತ ದುರಂತ ಇನ್ನೇನಿದೆ?
ಇಂತಹ ಪ್ರಚೋದನಾಕಾರಿ ಮಾತುಗಳ ಬಗ್ಗೆ ಜಾಣ ಮೌನ ತಾಳುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಸತ್ತಿನ ಹೊಸ ಕಟ್ಟಡದಲ್ಲಿ ವಿಶೇಷ ಅಧಿವೇಶನ ಆರಂಭವಾದಾಗ ‘‘ಹಿಂದೆ ಏನೇ ನಡೆದಿರಲಿ ಹೊಸ ಸಂಸತ್ ಭವನದಲ್ಲಿ ಅದನ್ನೆಲ್ಲ ಮರೆತು ಹೊಸ ಅಧ್ಯಾಯ ಆರಂಭಿಸೋಣ’’ ಎಂದು ಹೇಳಿದರು. ಅವರು ಹೀಗೆ ಹೇಳಿದ ಮರುದಿನವೇ ಅವರ ಪಕ್ಷದ ಬಿದೂರಿ, ಬಿಎಸ್‌ಪಿ ಸಂಸದ ದಾನಿಶ್ ಅಲಿ ವಿರುದ್ಧ ಅವರ ಸಮುದಾಯವನ್ನು ನಿಂದಿಸಿ ವಾಗ್ದಾಳಿಗೆ ಇಳಿದಿದ್ದಾರೆ. ಇದಕ್ಕೆ ಅವರ ಪಕ್ಷದ ಉಳಿದ ಸದಸ್ಯರು ಕರತಾಡನ ಮಾಡಿದರು.
ಸದನದಲ್ಲಿ ಕೋಲಾಹಲಕ್ಕೆ ಕಾರಣವಾದ ಬಿಜೆಪಿ ಸಂಸದ ರಮೇಶ್ ಬಿದೂರಿಗೆ ಅವರ ಪಕ್ಷ ಶೋಕಾಸ್ ನೋಟಿಸ್ ನೀಡಿದೆ. ಲೋಕಸಭಾಧ್ಯಕ್ಷ ಓಂ ಬಿರ್ಲಾ ಕಠೀಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಆದರೆ ಇದೆಲ್ಲ ಕೇವಲ ಕಣ್ಣೊರೆಸುವ ತಂತ್ರವಲ್ಲದೆ ಬೇರೇನೂ ಅಲ್ಲ. ರಮೇಶ್ ಬಿದೂರಿ ಆಕಾಶದಿಂದ ಇಳಿದು ಬಂದಿಲ್ಲ. ಸಂಘಪರಿವಾರದ ಶಾಖೆಯಲ್ಲಿ ಬೆಳೆದು ಅಲ್ಲಿ ಕಲಿತದ್ದನ್ನು ಸದನದಲ್ಲಿ ವಾಂತಿ ಮಾಡಿಕೊಂಡಿದ್ದಾರೆ. ಇದು ಬರೀ ಎಚ್ಚರಿಕೆ ನೀಡಿ ಕೈ ಬಿಡುವ ವಿಷಯವಲ್ಲ. ಆತನನ್ನು ಸದನದಿಂದ ಅಮಾನತು ಇಲ್ಲವೇ ವಜಾ ಮಾಡಿ ಕಾನೂನು ಪ್ರಕಾರ ಬಂಧನಕ್ಕೆ ಗುರಿಪಡಿಸಬೇಕು.
ಮುಸಲ್ಮಾನರು, ದಲಿತರು, ಹಿಂದುಳಿದವರು, ಕ್ರೈಸ್ತರು ಮತ್ತು ಮಹಿಳೆಯರನ್ನು ನಿಂದಿಸುವುದು ಬಿಜೆಪಿಯ ಸಂಘಪರಿವಾರದ ಸಂಸ್ಕೃತಿಯಾಗಿದೆ. ಬಿದೂರಿ ಪ್ರಚೋದನಾಕಾರಿ ಮಾತುಗಳನ್ನು ಅಡುವಾಗ ಅದನ್ನು ತಡೆಯಬೇಕಾದ ಅವರ ಪಕ್ಷದ ಹಿರಿಯ ನಾಯಕರಾದ ರವಿಶಂಕರ್ ಮತ್ತು ಹರ್ಷವರ್ಧನ್ ಖುಷಿಯಿಂದ ನಗುತ್ತ ಉತ್ತೇಜನ ನೀಡುತ್ತಿದ್ದರು ಎಂಬ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಹುರುಳಿಲ್ಲದಿಲ್ಲ. ಈ ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಬೇಕೆಂಬ ದಾನಿಶ್ ಅಲಿ ಮೊದಲಾದ ಪ್ರತಿಪಕ್ಷ ಸದಸ್ಯರ ಬೇಡಿಕೆ ನ್ಯಾಯ ಸಮ್ಮತವಾಗಿದೆ.
ಆಡಳಿತ ಪಕ್ಷದ ಸದಸ್ಯರೊಬ್ಬರು ಸಂಸತ್ತಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ಅಸಂಸದೀಯ ಹಾಗೂ ಬೆದರಿಕೆಯ ಭಾಷೆಯಲ್ಲಿ ಮಾತನಾಡಿದ್ದು ಭಾರತದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಕಳಂಕಕಾರಿಯಾದ ಕಪ್ಪು ಚುಕ್ಕೆಯಾಗಿದೆ. ಯಾವುದೇ ಸಮಜಾಯಿಷಿ ನೀಡಿ ಇದನ್ನು ಮುಚ್ಚಿ ಹಾಕುವ ಯತ್ನ ಬೇಡ. ತಕ್ಷಣ ಬಿದೂರಿಯನ್ನು ಅಮಾನತು ಮಾಡಲಿ.ಅಮಾನತು ಮಾಡದಿದ್ದರೆ ಬಿಜೆಪಿ ಸರಕಾರದ ಮೌನ ಸಮ್ಮತಿ ಇದೆ ಎಂದು ಭಾವಿಸಬೇಕಾಗುತ್ತದೆ.
ಈ ರೀತಿ ಸಂಸತ್ತಿನ ಸಹ ಸದಸ್ಯರಿಗೆ ಅವರು ಜನಿಸಿದ ಸಮುದಾಯದ ಹೆಸರು ಹೇಳಿ ನಿಂದನೆ ಮಾಡುವುದು ಅತ್ಯಂತ ಘೋರ ಅಪರಾಧ. ಇಂತಹವರಿಗೆ ಬರೀ ಎಚ್ಚರಿಕೆ ನೀಡಿ ತಿಪ್ಪೆ ಸಾರಿಸುವುದು ಲೋಕಸಭಾಧ್ಯಕ್ಷರ ಘನತೆಗೆ ತಕ್ಕುದಲ್ಲ. ಇಂತಹವರ ಸದಸ್ಯತ್ವ ರದ್ದು ಮಾಡುವುದು ಮಾತ್ರವಲ್ಲ ಮತ್ತೆ ಹತ್ತು ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಜನತಾ ಪ್ರಾತಿನಿಧ್ಯ ಕಾನೂನಿಗೆ ತಿದ್ದುಪಡಿ ತರಬೇಕು.
ಚುನಾವಣಾ ಆಯೋಗ ಕೂಡ ಇಂತಹವರು ಚುನಾವಣೆಗೆ ಸ್ಪರ್ಧಿಸಿ ಗೆದ್ದು ಸದನಕ್ಕೆ ಬರುವುದನ್ನು ತಡೆಯಲು ಅಗತ್ಯದ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂತಹ ಸೂಕ್ಷ್ಮ ವಿಷಯಗಳಲ್ಲಿ ಜಾಣ ಮೌನವನ್ನು ತಾಳದೆ ತಮ್ಮ ಪಕ್ಷದ ಸಂಸದರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು.