ಎಲ್ಲರಿಗೂ ಆರೋಗ್ಯ ಭಾಗ್ಯ ಮತ್ತು ಜನಾರೋಗ್ಯ ಉಪಕೇಂದ್ರಗಳು
ಸಮುದಾಯ ಆರೋಗ್ಯಸೇವೆಗಳ ವಾತ್ಸಲ್ಯದ ಸೇತುವೆ ಇದೀಗ ಕುಸಿತಗೊಳ್ಳುತ್ತಲಿದೆ. ಒಂದೂವರೆ ಶತಮಾನ ಮೀರಿದ ಗ್ರಾಮೀಣ ಮತ್ತು ನಗರ ಸಮುದಾಯದ ಆರೋಗ್ಯ ಸೇವೆಯ ಆರೋಗ್ಯ ಸಹಾಯಕರ ಪರಂಪರೆ ಕುರಿತು ಗಂಭೀರ ಸಮಾಲೋಚನೆಗಳು ಜರುಗಬೇಕಿದೆ.
ಡೆಂಗಿಜ್ವರದಿಂದ ದಿನನಿತ್ಯವೂ ಸಾವು ನೋವುಗಳ ಕುರಿತು ಕೇಳುತ್ತಲೇ ಇದ್ದೇವೆ. ಆರೋಗ್ಯ ಮಂತ್ರಿಗಳು ಸೂಕ್ತ ಎಚ್ಚರಿಕೆ ಕ್ರಮಗಳ ಕುರಿತು ಆದೇಶ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದ ಆರೋಗ್ಯ ಸಹಾಯಕ ಸಿಬ್ಬಂದಿ ನೆರವಿಗೆ ಆಜ್ಞಾಪಿಸಿದ್ದಾರೆ. ಅದೇ ಸಮಯಕ್ಕೆ ಸಚಿವರ ಬಾಗಲಕೋಟೆ ಪ್ರವಾಸದಲ್ಲಿ ನಾಲ್ಕೈದು ಯುವತಿಯರು ಆರೋಗ್ಯ ಸಹಾಯಕರ ನೇಮಕಾತಿಗಾಗಿ ಮನವಿ ಸಲ್ಲಿಸಿದ್ದಾರೆ..
''Health for all by 2000 A.D''
ಇದು ಇಂದಿರಾಗಾಂಧಿ ಅವರು ಪ್ರಧಾನಮಂತ್ರಿ ಆಗಿದ್ದಾಗ ಒಟ್ಟಾವಾದಲ್ಲಿ ಜರುಗಿದ ಅಂತರ್ರಾಷ್ಟ್ರೀಯ ಆರೋಗ್ಯ ಸಮ್ಮೇಳನದಲ್ಲಿ ಭಾರತದ ಜನಾರೋಗ್ಯ ಕುರಿತು ಪ್ರಕಟಿಸಿದ ಘೋಷಣೆ. ಎಪ್ಪತ್ತರ ದಶಕ ಮುಕ್ತಾಯ ಕಾಲಘಟ್ಟದ ಅವರ ಈ ಹೇಳಿಕೆ ಸಹಜವಾಗಿ ಜನಾರೋಗ್ಯ ವಲಯದಲ್ಲಿ ಕೆಲಸ ಮಾಡುವ ಎಲ್ಲರಲ್ಲೂ ಅಪಾರ ಕುತೂಹಲ ಮತ್ತು ಕಾರ್ಯತತ್ಪರ ಜಿಜ್ಞಾಸೆಗೆ ತೊಡಗಿಸಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಕಟಿಸಿದ ಘೋಷಣೆಗೆ ಅಜಮಾಸು ಅರ್ಧ ಶತಮಾನ ಆಯುಷ್ಯ ಕಳೆದಿದೆ. ಅವರೇ ಹಮ್ಮಿಕೊಂಡ ‘ಎಲ್ಲರಿಗೂ ಆರೋಗ್ಯ’ ಎಂಬ ತಲುಪದ ಗುರಿಗೆ ಕಾಲು ಶತಮಾನ ಗತಿಸಿದೆ.
ಇವೆರಡು ‘ಕಾಲ’ಘಟ್ಟಗಳು ಕಳೆದು ಹೋಗಿ ಅರ್ಧ ಶತಮಾನವೂ ಕಳೆಯುತ್ತಿರುವ ಕಾಲಘಟ್ಟದಲ್ಲಿ ನಿಂತಿದ್ದೇವೆ. ಗತಿತ ಐವತ್ತು ವರ್ಷಗಳು ಇದೇನು ಸಣ್ಣ ಸಮಯವಲ್ಲ. ‘ಎರಡು ಸಾವಿರದ ಇಸವಿಗೆ ಎಲ್ಲರಿಗೂ ಆರೋಗ್ಯ’ ಎಂಬ ಘೋಷಣೆ ಕೇವಲ ಘೋಷಣೆಯಾಗಿ ಮಾತ್ರ ಕಳೆದು ಹೋಯಿತು. ಈ ಸುದೀರ್ಘ ಅವಧಿಯಲ್ಲಿ ಆರೋಗ್ಯ ಸೇವೆಗಳ ಕುರಿತು ಹೊಸದಾದ ಮತ್ತೆ ಕೆಲವು ಘೋಷಣೆಗಳು ಮಾತ್ರ ಅನಾವರಣಗೊಂಡಿವೆ. ಆದರೆ ಉಪಕ್ರಮಿಸಿ ಹೋದ ಕಾಲಘಟ್ಟದಲ್ಲಿ ಜನಾರೋಗ್ಯ ಸ್ಥಿತಿಯಲ್ಲಿ ಅಂತಹ ಘನಂಧಾರಿ ಬದಲಾವಣೆ ಮಾತ್ರ ಆಗಿಲ್ಲ. ಆನಂತರ ಮತ್ತೆ ಮತ್ತೆ ಅಂತಹದೇ ಹತ್ತಾರು ಘೋಷಣೆಗಳೇ ಬಂದು ಹೋಗುವುದು ಮಾತ್ರ ನಿಂತಿಲ್ಲ.
ಹೀಗೆ ಜನಾರೋಗ್ಯ ಕುರಿತಾದ ಬೆಳವಣಿಗೆಗಳು ಪದೇ ಪದೇ ಹೊಸವೇಷ, ವಿನ್ಯಾಸಗಳಲ್ಲಿ ವರ್ಣರಂಜಿತವಾಗಿ ಬರುತ್ತಲೇ ಇರುವುದು ಜನಾರೋಗ್ಯದ ಪ್ರಗತಿಯಂತು ಅಲ್ಲವೇ ಅಲ್ಲ. ಜನಾರೋಗ್ಯ ವ್ಯವಸ್ಥೆಯು ಪರಿವರ್ತನೆಯ ಪರಿಸ್ಥಿತಿ ತಲುಪುವ ಯಾವ ಲಕ್ಷಣಗಳೂ ಇಲ್ಲ. ಪಬ್ಲಿಕ್ ಹೆಲ್ತ್ ಕುರಿತು ಮಾತಾಡುವುದೆಂದರೆ ಹೊಸ ಹೊಸ ರೋಗಗಳ ಮತ್ತು ಘೋಷ ವಾಕ್ಯಗಳ ಕುರಿತು ಮಾತಾಡುವಂತಾಗಿದೆ. ಇನ್ನೂ ಹೆಚ್ಚೆಂದರೆ ‘ಜನಾರೋಗ್ಯ ಸೇವೆ’ ಎಂಬುದು ಮರಣ ಪ್ರಮಾಣ ಕುಗ್ಗಿಸುವ, ಜೀವಿತಕ್ಕಾಗಿ ಚುರುಕು ಚಿಕಿತ್ಸೆ ಮತ್ತು ಲಸಿಕೆಗಳನ್ನು ನೀಡುವ ಯಾಂತ್ರಿಕ ವ್ಯವಸ್ಥೆ ಆಗುತ್ತಲಿದೆ.
ಪಬ್ಲಿಕ್ ಹೆಲ್ತ್ ಅರ್ಥಾತ್ ಜನಾರೋಗ್ಯ ಎಂದರೆ ಸರಕಾರದ ಮೂಲಭೂತ ಕರ್ತವ್ಯಾಧಾರಿತ ಆರೋಗ್ಯ ವ್ಯವಸ್ಥೆ. ಅದು ಖಾಸಗಿ ಮತ್ತು ಸರಕಾರದ ಕೆಲವು ಹೈಟೆಕ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಅನಾರೋಗ್ಯಕರ ಪೈಪೋಟಿಯ ಪ್ರತಿಷ್ಠೆಯಲ್ಲಿ ಪೇಲವದ ವಸ್ತುವಾಗಿದೆ. ಜನಾರೋಗ್ಯ ಸಂರಕ್ಷಣೆಗೆ ಹೈಟೆಕ್ ಆಸ್ಪತ್ರೆಗಳೇ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ದುಬಾರಿ ಚಿಕಿತ್ಸೆಗಿಂತಲೂ ರೋಗಬಾರದಂತೆ ತಡೆಗಟ್ಟುವ ಮುನ್ನೆಚ್ಚರದ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ.
ಅಷ್ಟಕ್ಕೂ ಜನಾರೋಗ್ಯಇಲಾಖೆ ಎಂದರೆ ಸಾರ್ವತ್ರಿಕವಾಗಿ ಡಾಕ್ಟರ್, ನರ್ಸ್ ಮತ್ತು ಕಾಂಪೌಂಡರ್ ಎಂಬ ಮೂವರ ‘ಸಮೂಹ ಶಕ್ತಿ ಮಾತ್ರ’ ಎಂಬ ಸೀಮಿತ ತಿಳಿವಳಿಕೆ ಇದ್ದಂತಿದೆ. ಬಹುಪಾಲು ಇವರ ಸುತ್ತಮುತ್ತಲೇ ಸುತ್ತುವರಿದ ಚಿಕಿತ್ಸಕ ಕ್ರಮಗಳಿಗೆ ಆದ್ಯತೆ. ಸರಕಾರಗಳು ಬದಲಾದಾಗೆಲ್ಲ ಹೊಸದಾಗಿ ಬರುವ ಆರೋಗ್ಯ ಸಚಿವರಿಗೆ ಜನಾರೋಗ್ಯ ರಕ್ಷಣೆಯ ತಳಮಟ್ಟದ ಆರೋಗ್ಯ ಯೋಧ ಪಡೆಯ ಪಕ್ಕಾ ಮಾಹಿತಿ ಇರುವುದಿಲ್ಲ. ಅಕ್ಷರಶಃ ಜನಾರೋಗ್ಯ ಸಂರಕ್ಷಣಾನಿರತ ಆರೋಗ್ಯ ಸಹಾಯಕರ ಕೆಲಸ ಕುರಿತು ಹೆಚ್ಚೆಂದರೆ ಕುರುಡು ಮಾಹಿತಿ. ‘ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್’ ಎಂಬುದು ಪುಸ್ತಕದ ಬದನೆಕಾಯಿ ಗಾದೆಯಂತಾಗಿದೆ.
ಅಂತೆಯೇ ಬಹುತೇಕ ಸಂಪ್ರದಾಯಸ್ಥ ನಂಬಿಕೆಯ ಮನಸ್ಥಿತಿಯಿಂದ ಆರೋಗ್ಯ ಪ್ರಭುತ್ವ ಹೊರಬಂದಿಲ್ಲವೆಂದು ಕಾಣುತ್ತದೆ. ಹೆಚ್ಚೆಂದರೆ ಮಂತ್ರಿಗಳಿಗೆ ಐಎಎಸ್ ಮಾರ್ಗಪ್ರಣೀತ ಮಾಹಿತಿ. ದುರಂತವೆಂದರೆ ಜನಾರೋಗ್ಯದಂತಹ ಇಲಾಖೆಗೆ ವರ್ಷಕ್ಕೆ ಇಬ್ಬರು ಮೂವರು ಪ್ರಿನ್ಸಿಪಾಲ್ ಸೆಕ್ರೆಟರಿಗಳು ವರ್ಗವಾಗಿ ಬಂದು ಹೋಗುತ್ತಾರೆ. ಹಿರಿಯ ಐಎಎಸ್ ದರ್ಜೆಯವರಿಗಂತೂ ಜನಾರೋಗ್ಯ ಕುರಿತಾದ ಬುಕ್ಕಿಷ್ ಜ್ಞಾನವೂ ಕಮ್ಮಿಯೇ. ಮತ್ತೆ ಕೆಲವರಿಗಂತೂ ಅಧಿಕಾರಶಾಹಿ ದರ್ಪ. ರಾಷ್ಟ್ರೀಯ ಹೆಲ್ತ್ ಮಿಷನ್ ಎಂಬುದು ಕೇಳಲು ಸುಂದರವಾದ ಹೆಸರು. ಇಲ್ಲೂ ಐಎಎಸ್ ಮಹೋದಯರದೇ ಅಪರಾವತಾರ. ಇಂತಹ ನಾಲ್ಕೈದು ಐಎಎಸ್ ಮೇಲ್ದರ್ಜೆ ಅಧಿಕಾರಶಾಹಿಗಳ ನಡುವೆ ವೈದ್ಯಮೂಲದ ನಿರ್ದೇಶಕ ಅವರದು ಪೋಷ್ಟ್ ಮ್ಯಾನ್ ಕೆಲಸದಂತಾಗಿದೆ. ಐಎಎಸ್ ಬ್ಯುರಾಕ್ರಸಿಗೆ ಡಿಜಿಟಲ್ ಗಿಳಿಪಾಠದ ಅಂಕಿ ಅಂಶಗಳ ಮೇಲೆಯೇ ಪ್ರಬಲ ನಂಬಿಕೆ. ಈ ಹುಸಿ ನಂಬಿಕೆಗಳಿಂದಾಗಿ ಪಬ್ಲಿಕ್ ಹೆಲ್ತ್ ಎಂಬ ‘ಜನಾರೋಗ್ಯ’ ಪರಿಕಲ್ಪನೆಯು ಜೀವಸಂವೇದನೆ ಕಳೆದುಕೊಂಡಿದೆ. ಅದು ಕೇವಲ ವರದಿಗಾರಿಕೆ, ಡಾಟಾ ಎಂಟ್ರಿಗಳು ಮತ್ತು ಅವುಗಳ ಪ್ರದರ್ಶನ, ಪ್ರಸ್ತುತಿಗಳಲ್ಲೇ ಗಿರಕಿ ಹೊಡೆಯುವಂತಾಗಿದೆ.
ಮೂಲಭೂತವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನಾರೋಗ್ಯ ರಕ್ಷಣೆಯ ಬೇರುಮಟ್ಟದಲ್ಲಿರುವ ಉಪಕೇಂದ್ರಗಳ ಅಭಿವೃದ್ಧಿ ಕುಂಟಿತಗೊಂಡಿದೆ. ಪ್ರತೀ ಐದು ಸಾವಿರ ಜನಸಂಖ್ಯೆಗೆ ಜನಾರೋಗ್ಯ ರಕ್ಷಣೆ ಹೊಣೆ ಹೊತ್ತುದೇ ಸದರಿ ಉಪಕೇಂದ್ರ. ಅದರಲ್ಲಿ ಓರ್ವ ಮಹಿಳಾ ಮತ್ತು ಓರ್ವ ಪುರುಷ ಆರೋಗ್ಯ ಸಹಾಯಕರು ಕರ್ತವ್ಯ ನಿರ್ವಹಿಸುತ್ತಾರೆ. ಇವರು ಪಿಯುಸಿ ನಂತರದ ಪಬ್ಲಿಕ್ ಹೆಲ್ತ್ ಮತ್ತು ನರ್ಸಿಂಗ್ ಮಿಡ್ ವೈಫರಿ ತರಬೇತಿ ಪಡೆದಿರುತ್ತಾರೆ. ಅದು ಭಾರತ ಸರಕಾರದ ಜನಾರೋಗ್ಯ ನೀತಿ. ‘ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್’ ಎಂಬ ಕೇಂದ್ರ ಸರಕಾರದ ಆರೋಗ್ಯ ನೀತಿಯೂ ಅದಾಗಿದೆ. ಇದೇ ಆರೋಗ್ಯ ನೀತಿ ಆಧಾರಿತ ಪ್ರಾಥಮಿಕ ಆರೋಗ್ಯಕೇಂದ್ರಗಳು ಮುಂದುವರಿದ ಜನಾರೋಗ್ಯ ಹೆಜ್ಜೆಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಾಹಕ ಸೇವಾಸೂಚಿಯನ್ನು ಅನುಸರಿಸುತ್ತವೆ.
ಇಂತಹ ವೈಜ್ಞಾನಿಕ ನೆಲೆ ಮತ್ತು ನೀತಿ ಆಧಾರಿತ ರಾಷ್ಟ್ರೀಯ ಜನಾರೋಗ್ಯ ಕಾರ್ಯಕ್ರಮಗಳ ಪರಿಪಾಲನೆ. ತನ್ಮೂಲಕ ಸಮುದಾಯದ ಹತ್ತಾರು ರೋಗಗಳ ನಿಯಂತ್ರಣ ಮತ್ತು ನಿರ್ಮೂಲನೆ ಸಾಧ್ಯವಾಯಿತು. ಅಂತೆಯೇ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ನಿರ್ಮೂಲನೆಯ ಯೋಜನೆಗಳು ಯಶಸ್ವಿಯಾಗಿ ಜರುಗಿವೆ. ತತ್ಫಲವಾಗಿ ಸಿಡುಬು, ಕುಷ್ಠರೋಗ, ನಾರುಹುಣ್ಣು, ಪೋಲಿಯೊ ಹೀಗೆ ಹತ್ತಾರು ರೋಗಗಳ ನಿರ್ಮೂಲನೆ ಸಾಧ್ಯವಾಯಿತು.
ಸಿಡುಬು ಮತ್ತು ಕುಷ್ಠರೋಗದಂತಹ ವಿರೂಪ ಮತ್ತು ವಿಕಲಾಂಗತೆ ಉಂಟು ಮಾಡುವ ರೋಗಗಳಿಂದ ಮನುಷ್ಯ ಲೋಕವನ್ನೇ ಪಾರು ಮಾಡಿ ಇವತ್ತು ಸುಂದರವಾದ ಮುಖಗಳು ಕಾಣುವಂತಾಗಿದೆ. ಇಂತಹ ಸಾಂಕ್ರಾಮಿಕ ರೋಗಗಳು ಸೇರಿದಂತೆ ಹತ್ತು ಹಲವು ಸಾಂಕ್ರಾಮಿಕೇತರ ಸಣ್ಣಪುಟ್ಟ ರೋಗ ರುಜಿನಗಳು ಬಾರದಂತೆ ಶ್ರಮಿಸುತ್ತಿರುವ ಜನಾರೋಗ್ಯ ಸೈನ್ಯಪಡೆಯ ಹೆಸರು ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು. ಇವರು ಪಿಯುಸಿ. ನಂತರ ಮೂರು ವರ್ಷಗಳ ಪಬ್ಲಿಕ್ ಹೆಲ್ತ್ ಜೊತೆಗೆ ಮಿಡ್ ವೈಫರಿ ತರಬೇತಿ ಹೊಂದಿರುವ ತಜ್ಞರು. ಪ್ರತೀ ಐದು ಸಾವಿರ ಜನಸಂಖ್ಯೆಗೆ ಇಂತಹ ತರಬೇತಿ ಪಡೆದ ತಜ್ಞ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರಿಬ್ಬರ ಕರ್ತವ್ಯಕೇಂದ್ರವೇ ಜನಾರೋಗ್ಯ ಉಪಕೇಂದ್ರಗಳು. ಕರ್ನಾಟಕದಾದ್ಯಂತ ಇಂತಹ ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯ ಕಟ್ಟಡಯುತ ಉಪಕೇಂದ್ರಗಳಿವೆ. ಹಾಗೆಯೇ ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಾವಿರಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳಿವೆ. ಜನಾರೋಗ್ಯ ರಕ್ಷಣೆಯ ಇಲ್ಲೆಲ್ಲ ಆರೋಗ್ಯ ಸಹಾಯಕ ಹುದ್ದೆಗಳಿವೆ.
ಕರ್ನಾಟಕದ ಜನಸಂಖ್ಯೆಗನುಗುಣವಾಗಿ ನಿಯಮದಂತೆ ನಲವತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಆರೋಗ್ಯ ಸಹಾಯಕರ ಅಗತ್ಯವಿದೆ. ಆದರೆ ಪ್ರಸಕ್ತ ಹದಿನಾರು ಸಾವಿರದಷ್ಟು ಕಾರ್ಯನಿರತ ಆರೋಗ್ಯ ಸಹಾಯಕರು ಜನಾರೋಗ್ಯ ರಕ್ಷಣೆಯಲ್ಲಿ ನಲವತ್ತಕ್ಕೂ ಹೆಚ್ಚು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಅಹರ್ನಿಶಿ ದುಡಿದು ಪ್ರಗತಿ ಸಾಧಿಸಿದ್ದಾರೆ. ಉಪಕೇಂದ್ರ ಎಂಬ ಜನಾರೋಗ್ಯ ರಥದ ಎರಡು ಚಕ್ರಗಳಂತೆ ಜೋಡಿಯಾಗಿ ಆರೋಗ್ಯ ರಥ ಎಳೆಯುತ್ತಿರುವಾಗಲೇ ಇತ್ತೀಚೆಗೆ ಮೂರು ವರ್ಷಗಳ ಹಿಂದೆ ಇವರ ಪದನಾಮಗಳನ್ನೇ ಸರಕಾರ ಬದಲಾಯಿಸಿತು. ಆ ಮೂಲಕ ಮಹಿಳೆ ಮತ್ತು ಪುರುಷ ಆರೋಗ್ಯ ಸಹಾಯಕರಲ್ಲೇ ಸರಕಾರ ಒಡಕಿನ ವಿಷಬೀಜ ಬಿತ್ತಿ ಜನಾರೋಗ್ಯ ಸೇವೆಗಳ ಮೇಲೆ ಕೊಡಲಿಪೆಟ್ಟು ಕೊಟ್ಟು ಬಿಟ್ಟಿತು. ಮಿಡ್ಲ್ ಲೆವೆಲ್ ಹೆಲ್ತ್ ಪ್ರೊವೈಡರ್ (ಎಂಎಲ್ಎಚ್ಪಿ) ಎಂಬ ಕೇಂದ್ರ ಸರಕಾರದ ಪೈಲಟ್ ಪ್ರೊಗ್ರಾಮ್ ಅದೇ ಕಾಲಕ್ಕೆ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿತು. ಆನಂತರ ಅದೀಗ ರಾಜ್ಯಾದ್ಯಂತ ಸಿಎಚ್ಒ ಹೆಸರಲ್ಲಿ ಜಾರಿಗೆ ತರಲಾಗಿದೆ.
ಅದರಿಂದ ಜನಾರೋಗ್ಯ ಉಪಕೇಂದ್ರಗಳು ಒಡಕಿನ ಕೇಂದ್ರಗಳಾಗಿ ಬಿಟ್ಟವು. ಆರೋಗ್ಯ ಸಹಾಯಕಿಯರ ವಾಸಸ್ಥಾನವೂ ಆಗಿದ್ದ ಸರಕಾರದ ಸದರಿ ಉಪಕೇಂದ್ರಗಳ ಬಾಡಿಗೆ ಹಣವನ್ನು ಕಟ್ಟುತ್ತಿದ್ದ ಮಹಿಳೆಯರನ್ನು ಒಕ್ಕಲೆಬ್ಬಿಸುವ ಕ್ರಿಯೆಗೆ ನಾಂದಿ ಹಾಡಿತು. ಕೆಲವು ಕಡೆ ಎಂಎಲ್ಎಚ್ಪಿಗಳೆಂಬ ಗುತ್ತಿಗೆ ನೌಕರರಿಗೂ ಮಹಿಳಾ ಆರೋಗ್ಯ ಸಹಾಯಕಿಯರಿಗೂ ಸಂಘರ್ಷಗಳೇ ಏರ್ಪಟ್ಟವು. ತನ್ಮೂಲಕ ಗ್ರಾಮೀಣ ಆರೋಗ್ಯ ಸೇವೆಯ ಮಧುರ ಬಾಂಧವ್ಯಕ್ಕೆ ಧಕ್ಕೆ ಉಂಟಾಯಿತು.
ನೂರೈವತ್ತು ವರ್ಷಗಳಿಂದ ಹಳ್ಳಿಗಳ ಮನೆ ಮನೆಗೂ ಹೋಗಿ ಜನಸಮುದಾಯ ಮನದ ಕದವ ಬಡಿದು ಕುಟುಂಬ ಕಲ್ಯಾಣದಂತಹ ತಾಯಿ ಮಕ್ಕಳ ಆರೋಗ್ಯ ಕಾಪಾಡಿದವರು ಆರೋಗ್ಯ ಸಹಾಯಕರು. ಜನಾರೋಗ್ಯ ಉಪಕೇಂದ್ರಗಳ ಹೆಸರುಗಳನ್ನೇ ಹಂತ ಹಂತವಾಗಿ ಕೇಂದ್ರ ಸರಕಾರ ಬದಲಿಸುತ್ತಾ ಬಂದಿದೆ. ಮೂರು ವರ್ಷದ ಹಿಂದೆ ಅದರ ಹೆಸರು ‘ಆರೋಗ್ಯ ಕ್ಷೇಮ ಕೇಂದ್ರ’ ಎಂದು ಬದಲಿಸಿತು. ಮತ್ತೀಗ ‘ಆಯುಷ್ಮಾನ್ ಆರೋಗ್ಯ ಮಂದಿರ’ ಎಂದು ಬದಲಿಸಿದೆ. ಸರ್ವಧರ್ಮ, ಸರ್ವಜನಾಂಗಗಳಿಗೆ ಆರೋಗ್ಯ ಸೇವೆ ಸಿಗಬೇಕಾದ ಸರಕಾರದ ಆರೋಗ್ಯಕೇಂದ್ರಗಳಿಗೆ ಹೀಗೆ ‘ಮಂದಿರ’ ಎಂದು ಹೆಸರಿಡುವುದು ಎಷ್ಟು ಸರಿ.? ಇದು ಅತ್ಯಂತ ಸೂಕ್ಷ್ಮ ವಿಚಾರ.
ಅಲ್ಲದೆ ಆ ಮಂದಿರಗಳಿಗೆ ಕಡಿಮೆ ಸಂಬಳಕ್ಕೆ ಶುಶ್ರೂಷಕ ಪದವೀಧರರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವುದು ಅವರಿಗೆ ಸಲ್ಲುವ ಶೋಷಣೆ. ಅಷ್ಟು ಮಾತ್ರವಲ್ಲ ಜನಾರೋಗ್ಯ ಸೇವೆಗೈಯುವ ಮೂಲಕ ಸಿಡುಬು, ಕುಷ್ಠರೋಗ, ನಾರುಹುಣ್ಣು ಮೊದಲಾದ ಸಾಂಕ್ರಾಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನೇ ನಿರ್ಮೂಲನೆ ಮಾಡಿದ ಆರೋಗ್ಯ ಸಹಾಯಕರ ಹುದ್ದೆಗಳನ್ನೇ ನಿರ್ಮೂಲನೆ ಮಾಡುವ ಗಾಢವಾದ ಶಂಕೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜೂರಾದ ಹುದ್ದೆಗಳು ೨೨೮, ಕೇವಲ ಇಪ್ಪತ್ಮೂರು ಪುರುಷ ಆರೋಗ್ಯ ಸಹಾಯಕ ಹುದ್ದೆ ಭರ್ತಿ. ೨೦೫ ಹುದ್ದೆಗಳು ಖಾಲಿ. ರಾಜ್ಯಾದ್ಯಂತ ಶೇ. ಐವತ್ತರಷ್ಟು ಹುದ್ದೆಗಳು ಭರ್ತಿ ಆಗಿಲ್ಲ. ತುಂಬಲು ಸರಕಾರಕ್ಕೆ ಆಸಕ್ತಿ ಇಲ್ಲ. ಆ ಮೂಲಕ ಮಲೇರಿಯಾ, ಡೆಂಗಿ ಮತ್ತಿತರ ಕೀಟಜನ್ಯ ರೋಗಗಳ ತಡೆ ಮತ್ತು ಚಿಕಿತ್ಸೆಗೆ ಅಗತ್ಯವಾಗಿ ಬೇಕಾದ ಸಿಬ್ಬಂದಿಯ ಅಸ್ತಿತ್ವಕ್ಕೆ ಕುತ್ತು. ಡೆಂಗಿ, ಕಾಲರಾ ಮತ್ತಿತರ ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಕಾರಣ.
ಸಮುದಾಯ ಆರೋಗ್ಯಸೇವೆಗಳ ವಾತ್ಸಲ್ಯದ ಸೇತುವೆ ಇದೀಗ ಕುಸಿತಗೊಳ್ಳುತ್ತಲಿದೆ. ಒಂದೂವರೆ ಶತಮಾನ ಮೀರಿದ ಗ್ರಾಮೀಣ ಮತ್ತು ನಗರ ಸಮುದಾಯದ ಆರೋಗ್ಯ ಸೇವೆಯ ಆರೋಗ್ಯ ಸಹಾಯಕರ ಪರಂಪರೆ ಕುರಿತು ಗಂಭೀರ ಸಮಾಲೋಚನೆಗಳು ಜರುಗಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರಾದಿಯಾಗಿ ಇಂತಹ ಉಪಕೇಂದ್ರಗಳ ದಾದಿ (ಮಿಡ್‌ವೈಫ್) ಮಾಡಿದ ಹೆರಿಗೆಯಲ್ಲಿ ಜನ್ಮ ತಳೆದವರು. ಅಂತಹ ವೈಜ್ಞಾನಿಕ ಹಿನ್ನೆಲೆಯ ಜನಾರೋಗ್ಯ ಉಪಕೇಂದ್ರಗಳು ಉಳಿಯಬೇಕಿದೆ.