ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ |ಸಲ್ಮಾನ್ ಶತಕ, ಪಾಕಿಸ್ತಾನ 556 ರನ್

Update: 2024-10-08 15:52 GMT

PC : NDTV 

ಮುಲ್ತಾನ್ : ಮೊದಲ ಟೆಸ್ಟ್‌ನ ಎರಡನೇ ದಿನವಾದ ಮಂಗಳವಾರ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 556 ರನ್ ಗಳಿಸಿದ್ದು, ಇಂಗ್ಲೆಂಡ್ ತಂಡವು 1 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ ತಿರುಗೇಟು ನೀಡುವ ವಿಶ್ವಾಸದಲ್ಲಿದೆ.

ಔಟಾಗದೆ 104 ರನ್ ಗಳಿಸಿದ ಸಲ್ಮಾನ್ ಆಘಾ 2ನೇ ದಿನದಾಟದ ಕೊನೆಯ ಸೆಶನ್‌ನಲ್ಲಿ ಪಾಕ್ ತಂಡವು ಆಲೌಟಾಗುವ ಮೊದಲು ಪಂದ್ಯದಲ್ಲಿ ಶತಕ ಗಳಿಸಿದ ಪಾಕಿಸ್ತಾನದ ಮೂರನೇ ಬ್ಯಾಟರ್ ಎನಿಸಿಕೊಂಡರು. ಶಾನ್ ಮಸೂದ್(151 ರನ್)ಹಾಗೂ ಅಬ್ದುಲ್ಲಾ ಶಫೀಕ್(102 ರನ್) ಶತಕ ಗಳಿಸಿದ ಇನ್ನಿಬ್ಬರು ಆಟಗಾರರಾಗಿದ್ದಾರೆ.

ಔಟಾಗದೆ 64 ರನ್ ಗಳಿಸಿದ ಝಾಕ್ ಕ್ರಾವ್ಲೆ ಇಂಗ್ಲೆಂಡ್ ತಂಡ ದಿಟ್ಟ ಉತ್ತರ ನೀಡುವುದಕ್ಕೆ ನೇತೃತ್ವವಹಿಸಿದ್ದಾರೆ. 32 ರನ್ ಗಳಿಸಿರುವ ಜೋ ರೂಟ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಗರಿಷ್ಠ ಸ್ಕೋರರ್ ಎನಿಸಿಕೊಂಡು ಅಲಸ್ಟೈರ್ ಕುಕ್ ದಾಖಲೆಯನ್ನು ಹಿಂದಿಕ್ಕಲು ಇನ್ನೂ 39 ರನ್ ಅಗತ್ಯವಿದೆ.

►ಪಾಕಿಸ್ತಾನ 556 ರನ್: ಇದಕ್ಕೂ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 328 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ ತಂಡದ ಪರ ಶಕೀಲ್ ಹಾಗೂ ನಸೀಂ ಶಾ(33 ರನ್, 81 ಎಸೆತ) 5ನೇ ವಿಕೆಟ್‌ಗೆ 64 ರನ್ ಜೊತೆಯಾಟ ನಡೆಸಿದರು. ಶಾ ಹಾಗೂ ಮುಹಮ್ಮದ್ ರಿಝ್ವಾನ್(0)ಬೆನ್ನುಬೆನ್ನಿಗೆ ಔಟಾದಾಗ ಸಲ್ಮಾನ್ ಜೊತೆ ಕೈಜೋಡಿಸಿದ ಶಕೀಲ್ 7ನೇ ವಿಕೆಟ್‌ಗೆ 57 ರನ್ ಸೇರಿಸಿದರು.

ಶಾಹೀನ್ ಅಫ್ರಿದಿ(26 ರನ್) ಜೊತೆಗೆ 9ನೇ ವಿಕೆಟ್‌ಗೆ 85 ರನ್ ಸೇರಿಸಿದ ಸಲ್ಮಾನ್, ಪಾಕ್ ತಂಡದ ಸ್ಕೋರನ್ನು 556ಕ್ಕೆ ತಲುಪಿಸಿದರು.

ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಜಾಕ್ ಲೀಚ್(3-160)ಯಶಸ್ವಿ ಪ್ರದರ್ಶನ ನೀಡಿದರು. ಬ್ರೆಂಡನ್ ಕಾರ್ಸ್(2-74) ಹಾಗೂ ಅಟ್ಕಿನ್ಸನ್(2-99)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಮೊದಲ ಇನಿಂಗ್ಸ್: 556 ರನ್

(ಶಾನ್ ಮಸೂದ್ 151, ಸಲ್ಮಾನ್ ಔಟಾಗದೆ 104, ಶಫೀಕ್ 102, ಶಕೀಲ್ 82, ಜಾಕ್ ಲೀಚ್ 3-160, ಕಾರ್ಸ್ 2-74)

ಇಂಗ್ಲೆಂಡ್ ಮೊದಲ ಇನಿಂಗ್ಸ್: 96/1

(ಝಾಕ್ ಕ್ರಾವ್ಲೆ ಔಟಾಗದೆ 64, ಜೋ ರೂಟ್ ಔಟಾಗದೆ 32, ನಸೀಂ ಶಾ 1-29)

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News