ಮಹಿಳೆಯರ ಟಿ20 ವಿಶ್ವಕಪ್ | ಭಾರತದ ಸೆಮಿ ಫೈನಲ್ ಹಾದಿ ಕಠಿಣ : ಬಿಜು ಜಾರ್ಜ್

Update: 2024-10-07 16:13 GMT

 ಬಿಜು ಜಾರ್ಜ್ |  PC : cricket.com 

ಹೊಸದಿಲ್ಲಿ : ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಸೋತಿರುವ ಹಾಗೂ ಪಾಕಿಸ್ತಾನದ ವಿರುದ್ಧ 106 ರನ್ ಚೇಸ್ ವೇಳೆ ರಕ್ಷಣಾತ್ಮಕ ಬ್ಯಾಟಿಂಗ್‌ಗೆ ಮೊರೆ ಹೋಗಿರುವ ಭಾರತ ಕ್ರಿಕೆಟ್ ತಂಡದ ಸೆಮಿ ಫೈನಲ್ ಹಾದಿ ಇದೀಗ ಕಠಿಣವಾಗಿದೆ.

ಭಾರತವು ರವಿವಾರ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಸುಲಭ ಸವಾಲು ಪಡೆದಿದ್ದರೂ 4 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 7 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತ್ತು.

ಎರಡು ಪಂದ್ಯಗಳಲ್ಲಿ ಒಂದರಲ್ಲಿ ಜಯ ಹಾಗೂ ಇನ್ನೊಂದರಲ್ಲಿ ಸೋತಿರುವ ಭಾರತ ತಂಡವು ಕಳಪೆ ರನ್‌ರೇಟ್(-1.217)ನಿಂದಾಗಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಪಾಕಿಸ್ತಾನ ತಂಡದ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವೈಖರಿಗೆ ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಬಿಜು ಜಾರ್ಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಅರುಂಧತಿ ರೆಡ್ಡಿ (3-19) ಹಾಗೂ ಶ್ರೇಯಾಂಕಾ ಪಾಟೀಲ್(2-12)ನೇತೃತ್ವದ ಭಾರತದ ಬೌಲರ್‌ಗಳು ಪಾಕಿಸ್ತಾನ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್‌ಗೆ ನಿಯಂತ್ರಿಸಿದರು. ಆದರೆ, ಭಾರತದ ಬ್ಯಾಟರ್‌ಗಳು ರನ್ ಗಳಿಸಲು ಪರದಾಟ ನಡೆಸಿದ್ದು, 106 ರನ್ ಗುರಿ ತಲುಪಲು 18.5 ಓವರ್ ತೆಗೆದುಕೊಂಡರು.

ಭಾರತವು ಉತ್ತಮವಾಗಿ ಬೌಲಿಂಗ್ ಮಾಡಿತ್ತು. ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ಸಾಧಾರಣ ಫೀಲ್ಡಿಂಗ್ ನಡೆಸಿತ್ತು. ಆದರೆ ಬ್ಯಾಟಿಂಗ್ ನನಗೆ ನಿರಾಸೆಗೊಳಿಸಿತು. ಕೇವಲ 106 ರನ್ ಗುರಿ ಪಡೆದಾಗ ನಮಗೆ ನೆಟ್‌ರನ್‌ರೇಟ್ ಹೆಚ್ಚಿಸಿಕೊಳ್ಳುವ ಉತ್ತಮ ಅವಕಾಶವಿತ್ತು. ಭಾರತ ತಂಡವು 14 ಓವರ್‌ನೊಳಗೆ ಗುರಿ ತಲುಪಬೇಕಾಗಿತ್ತು. ಇದರಿಂದ ತಂಡಕ್ಕೆ ಭಾರೀ ಲಾಭವಾಗುತ್ತಿತ್ತು ಎಂದು ಜಾರ್ಜ್ ಅಭಿಪ್ರಾಯಪಟ್ಟರು.

ಭಾರತವು ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಮೂರು ಬಾರಿಯ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಭಾರತ ತಂಡವು ಸೆಮಿ ಫೈನಲ್‌ನಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಶ್ರೀಲಂಕಾವನ್ನು ದೊಡ್ಡ ಅಂತರದಿಂದ ಮಣಿಸಬೇಕು ಹಾಗೂ ಆಸ್ಟ್ರೇಲಿಯ ತಂಡವನ್ನೂ ಸೋಲಿಸಬೇಕು.

ಭಾರತದ ನೆಗೆಟಿವ್ ನೆಟ್ ರನ್‌ರೇಟ್ ಸೆಮಿ ಫೈನಲ್ ಅವಕಾಶವನ್ನು ಕಡಿಮೆಗೊಳಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಜಾರ್ಜ್, ಭಾರತ ತಂಡವು ಶ್ರೀಲಂಕಾ ತಂಡವನ್ನು ಸೋಲಿಸಬಹುದು, ಶಾರ್ಜಾದ ಪಿಚ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು ಸೋಲಿಸುವುದು ಅಷ್ಟೊಂದು ಸುಲಭದ ಮಾತಲ್ಲ ಎಂದಿದ್ದಾರೆ.

ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ ಜಯ ಸಾಧಿಸಿದೆ. ಆದರೆ, ತಂಡದ ಪ್ರದರ್ಶನವು ತುಂಬಾ ನೋವುಂಟು ಮಾಡಿದೆ. ಇದೀಗ ಭಾರತ ತಂಡವು ಕಠಿಣ ಸವಾಲು ಎದುರಿಸುತ್ತಿದೆ. ಒಂದು ವೇಳೆ ಶ್ರೀಲಂಕಾ ವಿರುದ್ಧ ಭಾರೀ ಅಂತರದಿಂದ ಜಯ ಸಾಧಿಸದೇ ಇದ್ದರೆ, ಆಸ್ಟ್ರೇಲಿಯ ವಿರುದ್ಧ ಪಂದ್ಯವು ನಾಕೌಟ್ ಸ್ವರೂಪ ಪಡೆದುಕೊಳ್ಳಲಿದೆ ಎಂದು ಜಾರ್ಜ್ ಹೇಳಿದ್ದಾರೆ.

ಭಾರತ ತಂಡವು ಪಂದ್ಯಾವಳಿಗೆ ಉತ್ತಮ ಸಿದ್ಧತೆ ನಡೆಸಿರಲಿಲ್ಲವೇ ಎಂದು ಕೇಳಿದಾಗ, ಭಾರತ ತಂಡವು ತಯಾರಿ ನಡೆಸಿರಲಿಲ್ಲ ಎಂದು ನಾನು ಹೇಳಲಾರೆ. ಪಂದ್ಯಾವಳಿಗಿಂತ ಮೊದಲು ದೀರ್ಘ ಶಿಬಿರದಲ್ಲಿ ಪಾಲ್ಗೊಂಡಿತ್ತು. ಪ್ರಶಸ್ತಿ ಗೆಲ್ಲುವ ಓರ್ವ ನೆಚ್ಚಿನ ತಂಡವಾಗಿ ಟೂರ್ನಿಗೆ ಪ್ರವೇಶಿಸಿತ್ತು. ಆದರೆ ಹಲವು ಆಟಗಾರ್ತಿಯರಿಗೆ ಗಾಯದ ಸಮಸ್ಯೆಗಳಿದ್ದವು. ಪೂಜಾ ವಸ್ತ್ರಕರ್ ಗಾಯಗೊಂಡಿದ್ದರು. ಮೈದಾನದಲ್ಲಿ ಯಸ್ತಿಕಾ ಭಾಟಿಯಾ ಅವರ ಚಲನವಲನ ನೋಡಿದರೆ ಅವರು ಕೂಡ ಗಾಯದೊಂದಿಗೆ ಆಡುವಂತೆ ಕಾಣುತ್ತಿದೆ. ಇಂತಹ ದೊಡ್ಡ ಪಂದ್ಯಾವಳಿಯಲ್ಲಿ ಗಾಯಗೊಂಡಿರುವ ಆಟಗಾರ್ತಿಯರನ್ನು ಆಡಿಸುವ ಪ್ರಯತ್ನಕ್ಕೆ ಕೈಹಾಕಬಾರದು. ಆಟಗಾರ್ತಿಯರು ಸಂಪೂರ್ಣ ಫಿಟ್ ಇರುವ ಅಗತ್ಯವಿದೆ. ಭಾರತೀಯ ತಂಡವು ಉತ್ತಮ ಪ್ರದರ್ಶನ ನೀಡಬಲ್ಲದು ಎಂಬ ನಂಬಿಕೆ ಈಗಲೂ ಇದೆ ಎಂದು ಜಾರ್ಜ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News