ಎರಡನೇ ಯೂತ್ ಟೆಸ್ಟ್ | ಹರ್ವಂಶ್ ಸಿಂಗ್ ಶತಕ, ಭಾರತ 492 ರನ್

Update: 2024-10-08 15:54 GMT

 ಹರ್ವಂಶ್ ಸಿಂಗ್ ಪಾಂಗ್ಲಿ |  PC : PTI 

ಚೆನ್ನೈ : ಸೌರಾಷ್ಟ್ರದ ವಿಕೆಟ್‌ಕೀಪರ್-ಬ್ಯಾಟರ್ ಹರ್ವಂಶ್ ಸಿಂಗ್ ಪಾಂಗ್ಲಿಯ ಶತಕವನ್ನು ಗಳಿಸಿದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡ ಎರಡನೇ ಯೂತ್ ಟೆಸ್ಟ್‌ನ ಎರಡನೇ ದಿನವಾದ ಮಂಗಳವಾರ ಆಸ್ಟ್ರೇಲಿಯದ ವಿರುದ್ಧ 492 ರನ್ ಕಲೆ ಹಾಕಿದೆ.

ಹರ್ವಂಶ್ ಕೇವಲ 143 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 117 ರನ್ ಗಳಿಸಿದರು. ಭಾರತವು ಎರಡು ವಿಕೆಟ್‌ಗಳನ್ನು ಕ್ಷಿಪ್ರವಾಗಿ ಕಳೆದುಕೊಂಡಾಗ 9 ವಿಕೆಟ್‌ಗಳ ನಷ್ಟಕ್ಕೆ 402 ರನ್ ಗಳಿಸಿತ್ತು. ಆಗ 45 ರನ್ ಗಳಿಸಿದ್ದ 17ರ ಹರೆಯದ ಹರ್ವಂಶ್ ಕೊನೆಯ ವಿಕೆಟ್‌ನಲ್ಲಿ ಅನ್ಮೋಲ್‌ಜೀತ್ ಸಿಂಗ್(11 ರನ್)ಅವರೊಂದಿಗೆ ಕೇವಲ 107 ಎಸೆತಗಳಲ್ಲಿ 90 ರನ್ ಜೊತೆಯಾಟ ನಡೆಸಿದ್ದಲ್ಲದೆ, ತನ್ನ ಶತಕವನ್ನು ಪೂರೈಸಿದರು.

ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಆಸ್ಟ್ರೇಲಿಯ ತಂಡ 44 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಿದೆ. ಭಾರತಕ್ಕಿಂತ 350 ರನ್ ಹಿನ್ನಡೆಯಲ್ಲಿದೆ.

ನಾಯಕ ಒಲಿವೆರ್ ಪೀಕ್ 113 ಎಸೆತಗಳಲ್ಲಿ 62 ರನ್(8 ಬೌಂಡರಿ, 1 ಸಿಕ್ಸರ್)ಗಳಿಸಿದ್ದು, ಅಲೆಕ್ಸ್ ಲೀ ಯಂಗ್(ಔಟಾಗದೆ 45, 99 ಎಸೆತ, 6 ಬೌಂಡರಿ)ಸಾಥ್ ನೀಡುತ್ತಿದ್ದಾರೆ.

5 ವಿಕೆಟ್‌ಗಳ ನಷ್ಟಕ್ಕೆ 316 ರನ್‌ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವು ನಾಯಕ ಸೋಹಮ್ ಪಟವರ್ಧನ್(63 ರನ್ )ವಿಕೆಟನ್ನು ಕಳೆದುಕೊಂಡಿತು. ಪಟವರ್ಧನ್ ನಿನ್ನೆಯ ಸ್ಕೋರ್‌ಗೆ ಕೇವಲ 2 ರನ್ ಸೇರಿಸಿ ಒಲಿ ಪ್ಯಾಟರ್ಸನ್‌ಗೆ(2-74)ವಿಕೆಟ್ ಒಪ್ಪಿಸಿದರು.

ಆಗ ಮುಹಮ್ಮದ್ ಎನಾನ್(26 ರನ್)ಹಾಗೂ ಸಮರ್ಥ್ ನಾಗರಾಜ್(20 ರನ್)ಅವರೊಂದಿಗೆ ಅಮೂಲ್ಯ ಜೊತೆಯಾಟ ನಡೆಸಿದ ಹರ್ವಂಶ್ ತಂಡವನ್ನು ಆಧರಿಸಿದರು. ಹರ್ವಂಶ್ ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿ ಆಸ್ಟ್ರೇಲಿಯದ ಬೌಲರ್‌ಗಳು ನಿರಾಸೆಗೊಂಡಿದ್ದು, ಇನಿಂಗ್ಸ್‌ನುದ್ದಕ್ಕೂ 9 ಬೌಲರ್‌ಗಳನ್ನು ಕಣಕ್ಕಿಳಿಸಲಾಗಿತ್ತು. ಹ್ಯಾರಿ ಹೊಸ್ಟ್ರಾ, ಕ್ರಿಸ್ಟಿಯನ್ ಹೋವ್, ಒಲಿ ಪ್ಯಾಟರ್ಸನ್ ಹಾಗೂ ರೊನಾಲ್ಡೊ ತಲಾ 2 ವಿಕೆಟ್‌ಗಳನ್ನು ಪಡೆದರು.

ಆಸ್ಟ್ರೇಲಿಯ ತಂಡ 10 ಓವರ್‌ನೊಳಗೆ 22 ರನ್‌ಗೆ ಆರಂಭಿಕ ಆಟಗಾರರನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಅಸ್ಟ್ರೇಲಿಯ 42 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ಯಂಗ್ ಹಾಗೂ ಪೀಕ್ ಮುರಿಯದ ಜೊತೆಯಾಟದಲ್ಲಿ 100 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ ಅಂಡರ್-19 ತಂಡ: 492 ರನ್

(ಹರ್ವಂಶ್ ಸಿಂಗ್ 117, ನಿತ್ಯ ಪಾಂಡ್ಯ 94, ಕಾರ್ತಿಕೇಯ 71, ಸೋಹಮ್ ಪಟವರ್ಧನ್ 63, ನಿಖಿಲ್ ಕುಮಾರ್ 61, ಹ್ಯಾರಿ 2-41, ಕ್ರಿಸ್ಟಿಯನ್ 2-43, ಪ್ಯಾಟರ್ಸನ್ 2-74, ರೊನಾಲ್ಡೊ 2-140)

ಆಸ್ಟ್ರೇಲಿಯ ಅಂಡರ್-19: 142/3

(ಒಲಿವೆರ್ ಪೀಕ್ ಔಟಾಗದೆ 62, ಅಲೆಕ್ಸ್ ಲೀ ಯಂಗ್ ಔಟಾಗದೆ 45, ಮುಹಮ್ಮದ್ ಎನಾನ್ 2-27) 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News