ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ | ಎದುರಾಳಿ ನಿವೃತ್ತಿ; ಸಿಂಧೂ 2ನೇ ಸುತ್ತಿಗೆ
ಬರ್ಮಿಂಗ್ಹ್ಯಾಮ್ : ಎದುರಾಳಿ ಆಟದಿಂದ ನಿವೃತ್ತಿಗೊಂಡ ಬಳಿಕ, ಭಾರತದ ಪಿ.ವಿ. ಸಿಂಧೂ ಮಂಗಳವಾರ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧೂ ಅವರ ಎದುರಾಳಿ ಜರ್ಮನಿಯ ಯೋವನ್ ಲಿ ಮೊದಲ ಸುತ್ತಿನ ಗೇಮ್ ಪೂರ್ಣಗೊಂಡ ಬಳಿಕ ನಿವೃತ್ತರಾದರು.
ಹನ್ನೊಂದನೇ ವಿಶ್ವ ರ್ಯಾಂಕಿಂಗ್ ನ ಸಿಂಧೂ ಮೊದಲ ಗೇಮನ್ನು 21-10 ರಿಂದ ಗೆದ್ದರು. ಬಳಿಕ ಅವರ ಎದುರಾಳಿ 26ನೇ ವಿಶ್ವ ರ್ಯಾಂಕಿಂಗ್ ನಲ್ಲಿ ಪಂದ್ಯದಿಂದ ಹಿಂದೆ ಸರಿದರು.
28 ವರ್ಷದ ಸಿಂಧೂ ಎರಡನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಕೊರಿಯದ ಆನ್ ಸೆ ಯಂಗ್ರನ್ನು ಎದುರಿಸಲಿದ್ದಾರೆ. ಈವರೆಗೆ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಬಲ್ಲಿ ಈ ಇಬ್ಬರು ಆರು ಬಾರಿ ಮುಖಾಮುಖಿಯಾಗಿದ್ದು, ಯಂಗ್ ಎಲ್ಲಾ ಆರು ಬಾರಿಯೂ ತನ್ನ ಎದುರಾಳಿಯನ್ನು ಸೋಲಿಸಿದ್ದಾರೆ.
ಸಿಂಧೂಗೆ ಈವರೆಗೆ ಯಂಗ್ ವಿರುದ್ಧದ ಪಂದ್ಯಗಳಲ್ಲಿ ಒಂದು ಗೇಮನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ.
ಬಲ ಮಂಡಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಯಂಗ್, ಕಳೆದ ರವಿವಾರ ಫ್ರೆಂಚ್ ಓಪನ್ ನಲ್ಲಿ ಈ ಋತುವಿನ ತನ್ನ ಎರಡನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ.