ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಗೊಂಚಲು ಕಬಳಿಸಿದ ಭಾರತದ ಮೊದಲ ವೇಗಿ ಅರ್ಷದೀಪ್ ಸಿಂಗ್
ಜೋಹಾನ್ಸ್ ಬರ್ಗ್: ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ಐದು ವಿಕೆಟ್ ಗಳನ್ನು ಉರುಳಿಸಿದ ಭಾರತದ ಮೊದಲ ವೇಗದ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.
ಸ್ಪಿನ್ನರ್ ಗಳಾದ ಸುನೀಲ್ ಜೋಶಿ, ಯಜುವೇಂದ್ರ ಚಹಾಲ್ ಹಾಗೂ ರವೀಂದ್ರ ಜಡೇಜರ ನಂತರ 24ರ ಹರೆಯದ ಸಿಂಗ್ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದ ಭಾರತದ 4ನೇ ಬೌಲರ್ ಆಗಿದ್ದಾರೆ.
ಅರ್ಷದೀಪ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಭಾರತದ ಮೂರನೇ ಬೌಲರ್ ಆಗಿದ್ದಾರೆ. ಚಹಾಲ್ ಹಾಗೂ ಆಶೀಷ್ ನೆಹ್ರಾ ಈ ಹಿಂದೆ ಈ ಸಾಧನೆ ಮಾಡಿದ್ದರು. ನೆಹ್ರಾ 2003ರ ಏಕದಿನ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದಿದ್ದರು.
ಸ್ವಿಂಗ್ ಬೌಲಿಂಗ್ ಗೆ ಒಪ್ಪುವಂತಹ ಪಿಚ್ ನಲ್ಲಿ ಎಡಗೈ ವೇಗಿ ಅರ್ಷದೀಪ್ ಆಫ್ರಿಕಾದ ಅಗ್ರ ಮೂವರು ಬ್ಯಾಟರ್ಗಳ ವಿಕೆಟ್ ಪಡೆದು ಆರ್ಭಟಿಸಿದರು. ದಕ್ಷಿಣ ಆಫ್ರಿಕಾದ ಟಾಪ್ ಸ್ಕೋರರ್ ಆಂಡಿಲ್ ಫೆಹ್ಲುಕ್ವಾಯೊ ವಿಕೆಟನ್ನು ಪಡೆದ ಅರ್ಷದೀಪ್ ಮೊದಲ ಬಾರಿ ಐದು ವಿಕೆಟ್ ಪೂರೈಸಿದರು.
ಅರ್ಷದೀಪ್ ಹಾಗೂ ಬಲಗೈ ವೇಗಿ ಅವೇಶ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತವರಿನಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾಯಿತು.