ಆಸ್ಟ್ರೇಲಿಯನ್ ಓಪನ್: ಸಬಲೆಂಕಾ ಮಹಿಳಾ ಸಿಂಗಲ್ಸ್ ಚಾಂಪಿಯನ್

Update: 2024-01-27 16:17 GMT

ಸಬಲೆಂಕಾ | Photo: X 

ಮೆಲ್ಬರ್ನ್: ಚೀನಾದ ಝೆಂಗ್ ಕ್ಷಿನ್‌ವಿನ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಬೆಲಾರುಸ್ ಆಟಗಾರ್ತಿ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಬಲೆಂಕಾ 12ನೇ ಶ್ರೇಯಾಂಕದ ಝೆಂಗ್‌ರನ್ನು 6-3, 6-2 ಸೆೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಸಬಲೆಂಕಾ ಕೇವಲ 33 ನಿಮಿಷಗಳ ಹೋರಾಟದಲ್ಲಿ ಮೊದಲ ಸೆಟನ್ನು 6-3 ಅಂತರದಿಂದ ವಶಪಡಿಸಿಕೊಂಡರು.

ಸಬಲೆಂಕಾ ಗೆದ್ದಿರುವ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಇದಾಗಿದೆ. ಝೆಂಗ್ ಚೊಚ್ಚಲ ಪ್ರಶಸ್ತಿಯ ಕನಸು ಕೈಗೂಡಲಿಲ್ಲ.

ಸಬಲೆಂಕಾ ಕಳೆದ 15 ದಿನಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ಒಂದು ಸೆಟ್ ಸೋಲದೆ ಫೈನಲ್‌ಗೆ ಪ್ರವೇಶಿಸಿದ್ದರು. 2000ರಿಂದ ಈ ಸಾಧನೆ ಮಾಡಿರುವ ಅಶ್ ಬಾರ್ಟಿ, ಸೆರೆನಾ ವಿಲಿಯಮ್ಸ್, ಮರಿಯಾ ಶರಪೋವಾ ಹಾಗೂ ಲಿಂಡ್ಸೆ ಡವೆನ್‌ಪೋರ್ಟ್ ಅವರಿರುವ ಎಲೈಟ್ ಕ್ಲಬ್‌ಗೆ ಸೇರಿದ್ದಾರೆ.

ಸತತ ಎರಡನೇ ಪ್ರಶಸ್ತಿಯನ್ನು ಜಯಿಸಿರುವ ಸಬಲೆಂಕಾ ತಮ್ಮದೇ ದೇಶದ ವಿಕ್ಟೋರಿಯಾ ಅಝರೆಂಕಾರ ಸಾಧನೆಯನ್ನು ಸರಿಗಟ್ಟಿದರು. ಬೆಲಾರುಸ್ ಆಟಗಾರ್ತಿ ಅಝರೆಂಕಾ 2012 ಹಾಗೂ 2013ರಲ್ಲಿ ಈ ಸಾಧನೆ ಮಾಡಿದ್ದರು.

ಝೆಂಗ್ ಫೈನಲ್ ಪಂದ್ಯದಲ್ಲಿ ಸೋಲುಂಡಿದ್ದರೂ ಟೂರ್ನಮೆಂಟ್‌ನುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದಾರೆ. ಮುಂದಿನ ವಾರ ಬಿಡುಗಡೆಯಾಗಲಿರುವ ನೂತನ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆಯಲಿದ್ದಾರೆ.

ಸಬಲೆಂಕಾ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಇಗಾ ಸ್ವಿಯಾಟೆಕ್ ನಂತರ ಎರಡನೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಸ್ವಿಯಾಟೆಕ್ ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರೂ ಅಗ್ರ ಸ್ಥಾನ ಉಳಿಸಿಕೊಳ್ಳಲಿದ್ದಾರೆ.

ಎರಡನೇ ಶ್ರೇಯಾಂಕಿತೆ ಬೆಲಾರುಸ್ ಆಟಗಾರ್ತಿ ಸಬಲೆಂಕಾ ಆರನೇ ವಯಸ್ಸಿನಲ್ಲಿ ಟೆನಿಸ್ ಆಡಲು ಆರಂಭಿಸಿದ್ದರು. 2012ರಲ್ಲಿ ಐಟಿಎಫ್ ಸರ್ಕ್ಯೂಟ್‌ನಲ್ಲಿ ಆಡುವ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದರು. 2015ರಲ್ಲಿ ಐಟಿಎಫ್ ಸರ್ಕ್ಯೂಟ್‌ನಲ್ಲಿ 3 ಸಿಂಗಲ್ಸ್ ಹಾಗೂ ಒಂದು ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.2018ರಲ್ಲಿ ಎರಡು ಡಬ್ಲ್ಯುಟಿಎ ಪ್ರಶಸ್ತಿ ಜಯಿಸಿದ್ದರು.

2019ರಲ್ಲಿ ಯು.ಎಸ್. ಓಪನ್‌ನಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಡಬಲ್ಸ್ ಪ್ರಶಸ್ತಿ ಸೇರಿದಂತೆ ಮೂರು ಡಬ್ಲ್ಯುಟಿಎ ಸಿಂಗಲ್ಸ್ ಪ್ರಶಸ್ತಿ ಹಾಗೂ ಮೂರು ಡಬಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

2022ರಲ್ಲಿ ಯು.ಎಸ್. ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ್ದ ಸಬಲೆಂಕಾ ಸತತ ಎರಡನೇ ಬಾರಿ ಡಬ್ಲ್ಯುಟಿಎ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದರು. ಕರೊಲಿನಾ ಗಾರ್ಸಿಯಾಗೆ ಸೋತು ರನ್ನರ್ಸ್ ಅಪ್ ಪ್ರಶಸ್ತಿ ಪಡೆದರು.

2023ರಲ್ಲಿ ಕಝಕ್‌ಸ್ತಾನದ ಎಲೆನಾ ರೈಬಾಕಿನಾರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಬಲೆಂಕಾ ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್ ಟೂರ್ನಿಗಳಲ್ಲಿ ಸೆಮಿ ಫೈನಲ್ ತಲುಪಿದ್ದರು. 2023ರಲ್ಲಿ ಯು.ಎಸ್. ಓಪನ್ ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ ಗೌಫ್‌ಗೆ ಸೋಲನುಭವಿಸಿ ಎರಡನೇ ಸ್ಥಾನ ಪಡೆದಿದ್ದರು.

2023ರ ಸೆಪ್ಟಂಬರ್‌ನಲ್ಲಿ ನಂ.1 ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News