ಎಲೀನಾ ರೈಬಕಿನ 2ನೇ ಸುತ್ತಿಗೆ ಆಸ್ಟ್ರೇಲಿಯನ್ ಓಪನ್

Update: 2024-01-16 18:44 GMT

ಮೆಲ್ಬರ್ನ್: ನಿಧಾನ ಆರಂಭವನ್ನು ಮಾಡಿದ ಹೊರತಾಗಿಯೂ ಕಝಖ್‍ಸ್ತಾನದ ಮೂರನೇ ವಿಶ್ವ ರ‍್ಯಾಂಕಿಂಗ್‍ನ ಆಟಗಾರ್ತಿ ಎಲೀನಾ ರೈಬಕಿನ ಮಂಗಳವಾರ ಝೆಕ್‍ನ ಕರೋಲಿನಾ ಪ್ಲಿಸ್ಕೋವರನ್ನು 7-6 (8/6), 6-4 ಸೆಟ್‍ಗಳಿಂದ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಎರಡನೇ ಸುತ್ತು ತಲುಪಿದ್ದಾರೆ.

ಮಹಿಳೆಯರ ಸಿಂಗಲ್ಸ್‍ನಲ್ಲಿ, ಕಳೆದ ಬಾರಿಯ ರನ್ನರ್ಸ್-ಅಪ್ ಆಗಿರುವ ಎಲೀನಾ ಮೊದಲ ಎರಡು ಗೇಮ್‍ಗಳಲ್ಲಿ 38ನೇ ವಿಶ್ವ ರ‍್ಯಾಂಕಿಂಗ್‍ನ ಪ್ಲಿಸ್ಕೋವರಿಗೆ ಸ್ಪರ್ಧೆ ನೀಡುವಲ್ಲಿ ವಿಫಲರಾದರು. ಆದರೆ, ಮೂರನೇ ಶ್ರೇಯಾಂಕದ ಕಝಖ್ ಆಟಗಾರ್ತಿ ರಾಡ್ ಲ್ಯಾವರ್ ಅರೀನಾದಲ್ಲಿ ನಿಧಾನವಾಗಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು.

2022ರ ವಿಂಬಲ್ಡನ್ ಚಾಂಪಿಯನ್ ಆಗಿರುವ ಎಲೀನಾ, ಈ ತಿಂಗಳ ಆದಿ ಭಾಗದಲ್ಲಿ ಬ್ರಿಸ್ಬೇನ್ ಇಂಟರ್‍ನ್ಯಾಶನಲ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.

ಎರಡನೇ ಸುತ್ತಿನಲ್ಲಿ ಅವರು ರಶ್ಯದ ಶ್ರೇಯಾಂಕರಹಿತ ಆನಾ ಬ್ಲಿಂಕೋವರನ್ನು ಎದುರಿಸಲಿದ್ದಾರೆ.

ಎಮ್ಮಾ ರಡುಕನು 2ನೇ ಸುತ್ತಿಗೆ

ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ, ಮಹಿಳೆಯರ ಸಿಂಗಲ್ಸ್ ನಲ್ಲಿ ಮಾಜಿ ಯುಎಸ್ ಓಪನ್ ಚಾಂಪಿಯನ್ ಬ್ರಿಟನ್‍ನ ಎಮ್ಮಾ ರಡುಕನು ಮಂಗಳವಾರ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಶೆಲ್ಬಿ ರೋಜರ್ಸ್‍ರನ್ನು 6-3, 6-2 ನೇರ ಸೆಟ್‍ಗಳಿಂದ ಹಿಮ್ಮೆಟ್ಟಿಸಿದರು.

2021ರಲ್ಲಿ ಅರ್ಹತಾ ಸುತ್ತಿನಲ್ಲಿ ಗೆದ್ದು ಅಮೆರಿಕ ಓಪನ್ ಪ್ರವೇಶಿಸಿದ್ದ ಎಮ್ಮಾ ಅಂತಿಮವಾಗಿ ಪ್ರಶಸ್ತಿಯನ್ನೇ ಗೆಲ್ಲುವ ಮೂಲಕ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿದ್ದರು. ಆದರೆ, ಆ ಬಳಿಕ ಅವರಿಗೆ ಒಮ್ಮೆ ಮಾತ್ರ ಗ್ರ್ಯಾನ್ ಸ್ಲಾಮೊಂದರ ನಾಲ್ಕನೇ ಸುತ್ತು ಪ್ರವೇಶಿಸಲು ಸಾಧ್ಯವಾಗಿತ್ತು.

ಮಣಿಗಂಟು ಮತ್ತು ಮಣಿಕಟ್ಟು ಗಾಯಗಳಿಗೆ ಒಳಗಾಗಿ 8 ತಿಂಗಳು ಮೈದಾನದಿಂದ ಹೊರಗಿದ್ದ ಅವರು 296ನೇ ರ‍್ಯಾಂಕಿಂಗ್‍ಗೆ ಕುಸಿದಿದ್ದಾರೆ. ಆದರೆ, ಮಂಗಳವಾರ ಅವರು 161ನೇ ರ‍್ಯಾಂಕಿಂಗ್‍ನ ಶೆಲ್ಬಿ ವಿರುದ್ಧ ಉತ್ತಮ ನಿರ್ವಹಣೆ ತೋರಿದರು.

ಎರಡನೇ ಸುತ್ತಿನಲ್ಲಿ ಎಮ್ಮಾ ಚೀನಾದ ಶ್ರೇಯಾಂಕರಹಿತ ವಾಂಗ್ ಯಫನ್‍ರನ್ನು ಎದುರಿಸಲಿದ್ದಾರೆ.

ಅಲೆಕ್ಸಾಂಡರ್ ಝ್ವೆರೆವ್ ಶುಭಾರಂಭ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್‍ನಲ್ಲಿ, ಮಂಗಳವಾರ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ತನ್ನದೇ ದೇಶದ ಡೋಮಿನಿಕ್ ಕೋಫರ್‍ರನ್ನು ಹಿಂದಿಕ್ಕಿ ಎರಡನೇ ಸುತ್ತು ತಲುಪಿದ್ದಾರೆ.

ಅವರು ಮಾರ್ಗರೆಟ್ ಕೋರ್ಟ್ ಅರೀನಾದಲ್ಲಿ ನಡೆದ ಮೊದಲನೇ ಸುತ್ತಿನ ಪಂದ್ಯದಲ್ಲಿ ತನ್ನ ಎದುರಾಳಿಯನ್ನು ಭಾರೀ ಪ್ರಯಾಸದಿಂದ 4-6, 6-3, 7-6 (7/3), 6-3 ಸೆಟ್‍ಗಳಿಂದ ಸೋಲಿಸಿದರು.

2020ರಲ್ಲಿ ತನ್ನ ಮಾಜಿ ಪ್ರೇಯಸಿಗೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಝ್ವೆರೆವ್ ಮೇ ತಿಂಗಳಿನಲ್ಲಿ ವಿಚಾರಣೆ ಎದುರಿಸುತ್ತಾರೆ ಎಂಬುದಾಗಿ ಬರ್ಲಿನ್‍ನ ನ್ಯಾಯಾಲಯವೊಂದು ತಿಳಿಸಿದ ಒಂದು ದಿನದ ಬಳಿಕ ಅವರು ಈ ಪಂದ್ಯದಲ್ಲಿ ಆಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 4,50,000 ಯುರೋ (ಸುಮಾರು 3.95 ಕೋಟಿ ರೂಪಾಯಿ) ದಂಡ ಪಾವತಿಸುವಂತೆ 26 ವರ್ಷದ ಟೆನಿಸ್ ಆಟಗಾರನಿಗೆ ನ್ಯಾಯಾಲಯ ಅಕ್ಟೋಬರ್ ನಲ್ಲಿ ಆದೇಶಿಸಿತ್ತು. ಆದರೆ, ಅವರು ಆ ತೀರ್ಪನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ ಮತ್ತು ವಿಚಾರಣೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News