ಪಾಕಿಸ್ತಾನ ಹಾಕಿ ಫೆಡರೇಶನ್ನಲ್ಲಿ ಆರ್ಥಿಕ ಬಿಕ್ಕಟ್ಟು ; 6 ತಿಂಗಳಿನಿಂದ ಆಟಗಾರರು, ಉದ್ಯೋಗಿಗಳಿಗೆ ವೇತನವಿಲ್ಲ
ಇಸ್ಲಾಮಾಬಾದ್: ಆರ್ಥಿಕವಾಗಿ ಬಡಕಲಾಗಿರುವ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್ಎಫ್) ಕಳೆದ ಆರು ತಿಂಗಳುಗಳಲ್ಲಿ ತನ್ನ ಉದ್ಯೋಗಿಗಳಿಗೆ ವೇತನ ನೀಡಿಲ್ಲ ಎಂದು ಹೇಳಲಾಗಿದೆ. ಫೆಡರೇಶನ್ನ ಲಾಹೋರಿನಲ್ಲಿರುವ ಪ್ರಧಾನ ಕಚೇರಿಯಲ್ಲಿ ಮತ್ತು ಕರಾಚಿಯಲ್ಲಿರುವ ಉಪ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಉದ್ಯೋಗಿಗಳು ಕಳೆದ ಆರು ತಿಂಗಳ ವೇತನಕ್ಕಾಗಿ ಈಗಲೂ ಕಾಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
80ಕ್ಕೂ ಅಧಿಕ ಮೈದಾನ ಮತ್ತು ಕಚೇರಿ ಸಿಬ್ಬಂದಿ ಕಳೆದ ಆರು ತಿಂಗಳುಗಳಿಂದ ವೈದ್ಯಕೀಯ ಸವಲತ್ತುಗಳನ್ನೂ ಪಡೆದುಕೊಂಡಿಲ್ಲ ಎನ್ನಲಾಗಿದೆ.
ಅಷ್ಟೇ ಅಲ್ಲ, ರಾಷ್ಟ್ರೀಯ ಹಿರಿಯರ ತಂಡದ ಆಟಗಾರರಿಗೂ 4-5 ತಿಂಗಳುಗಳಿಂದ ಗುತ್ತಿಗೆ ವೇತನವನ್ನೂ ಪಾವತಿಸಲಾಗಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಒಮಾನ್ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಪಾಲ್ಗೊಂಡಿರುವುದಕ್ಕೂ ಅವರಿಗೆ ವೇತನ ನೀಡಲಾಗಿಲ್ಲ.
ಒಮಾನ್ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳ ವೇಳೆ, ಪಾಕಿಸ್ತಾನ ಹಾಕಿ ತಂಡದ ನಾಯಕ ಇಮಾದ್ ಶಕೀಲ್ ಭಟ್ ಮತ್ತು ಇತರ ಕೆಲವು ಆಟಗಾರರು ತಮ್ಮ ದೈನಂದಿನ ಭತ್ತೆಗಳನ್ನು ಪಾವತಿ ಮಾಡದಿರುವುದಕ್ಕಾಗಿ ತಂಡದ ಆಡಳಿತದೊಂದಿಗೆ ಜಗಳ ಮಾಡಿದ್ದರು ಎಂದು ಬಲ್ಲ ಮೂಲವೊಂದು ತಿಳಿಸಿದೆ.
“ಒಂದು ಹಂತದಲ್ಲಿ, ದೈನಂದಿನ ಭತ್ತೆಗಳನ್ನು ಪೂರ್ತಿಯಾಗಿ ಚುಕ್ತಾ ಮಾಡುವವರೆಗೆ ಆಡುವುದಿಲ್ಲ ಎಂಬ ಬೆದರಿಕೆಯನ್ನೂ ಭಟ್ ಹಾಕಿದ್ದಾರೆ’’ ಎಂದು ಮೂಲ ಹೇಳಿದೆ.
ಆದರೆ, ಪಾಕಿಸ್ತಾನ ಹಾಕಿಯಲ್ಲಿನ ಈ ಕಳಪೆ ಪರಿಸ್ಥಿತಿಗೆ ಯಾರನ್ನು ದೂರಬೇಕು ಎನ್ನುವುದು ಯಾರಿಗೂ ಗೊತ್ತಿಲ್ಲ.
ಪಾಕಿಸ್ತಾನ ಹಾಕಿ ಫೆಡರೇಶನ್ನ ಆರ್ಥಿಕ ಬಿಕ್ಕಟ್ಟಿಗೆ ತನಗಿಂತ ಮೊದಲು ಅಧಿಕಾರದಲ್ಲಿದ್ದವರು ಮತ್ತು ತನ್ನ ಉತ್ತರಾಧಿಕಾರಿ ಕಾರಣ ಎಂದು ಫೆಡರೇಶನ್ನ ಉಚ್ಚಾಟಿತ ಮಾಜಿ ಅಧ್ಯಕ್ಷ ಬ್ರಿಗೇಡಿಯರ್ (ನಿವೃತ್ತ) ಖಾಲಿದ್ ಸಜ್ಜದ್ ಖೋಕರ್ ಆರೋಪಿಸುತ್ತಾರೆ.
ಅದೇ ವೇಳೆ, ಸರಕಾರ ಫೆಡರೇಶನ್ಗೆ ಹಣ ನೀಡುವುದನ್ನು ನಿಲ್ಲಿಸಿರುವುದು ಮಾತ್ರವಲ್ಲ, ಅದರ ಬ್ಯಾಂಕ್ ಖಾತೆಗಳನ್ನೂ ಸ್ಥಗಿತಗೊಳಿಸಿದೆ ಎಂದು ಮೂಲ ತಿಳಿಸಿದೆ. ಫೆಡರೇಶನ್ ನಡೆಸಿದೆ ಎನ್ನಲಾದ ಹಣಕಾಸು ಅವ್ಯವಹಾರಗಳ ಬಗ್ಗೆ ಪ್ರಸಕ್ತ ತನಿಖೆ ನಡೆಯುತ್ತಿರುವುದರಿಂದ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅದು ಹೇಳಿದೆ.
“ಈಗ ಫೆಡರೇಶನ್ ತನ್ನ ಉದ್ಯೋಗಿಗಳು, ಆಟಗಾರರು, ಕೋಚ್ಗಳು ಮತ್ತು ಇತರರಿಗೆ ಸುಮಾರು 8 ಕೋಟಿ ರೂಪಾಯಿ ಬಾಕಿ ನೀಡಬೇಕಾಗಿದೆ’’ ಎಂದು ಮೂಲ ತಿಳಿಸಿದೆ.