ಮೂರನೇ ಟೆಸ್ಟ್: ಡಕೆಟ್ ಶತಕ, ಇಂಗ್ಲೆಂಡ್ 207/2
ರಾಜ್‌ಕೋಟ್ : ಮೂರನೇ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 445 ರನ್‌ಗೆ ಸರ್ವಪತನಗೊಳಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಸಿಡಿಸಿದ ಶತಕದ (ಔಟಾಗದೆ 133 ರನ್, 118 ಎಸೆತ, 21 ಬೌಂಡರಿ, 2 ಸಿಕ್ಸರ್) ಸಹಾಯದಿಂದ ದಿನದಾಟದಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿ ಪ್ರಬಲ ಪ್ರತಿ ಹೋರಾಟ ನೀಡುತ್ತಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್‌ನಲ್ಲಿ ದಿನದಾಟದಂತ್ಯಕ್ಕೆ ಡಕೆಟ್ ಔಟಾಗದೆ 133 ರನ್ ಗಳಿಸಿದ್ದು, ಜೋ ರೂಟ್(9 ರನ್)ಸಾಥ್ ನೀಡುತ್ತಿದ್ದಾರೆ. ಇಂಗ್ಲೆಂಡ್ 35 ಓವರ್‌ಗಳಲ್ಲಿ 5.91ರ ರನ್‌ರೇಟ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದ್ದು, ಭಾರತದ ಇನಿಂಗ್ಸ್‌ಗಿಂತ 238 ರನ್ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ ಓಪನರ್ ಝಾಕ್ ಕ್ರಾವ್ಲೆ(15 ರನ್)ವಿಕೆಟನ್ನು ಕಬಳಿಸಿದ ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ನಂತರ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ಅಶ್ವಿನ್ ಅವರು ಪಿಚ್‌ನ ಮಧ್ಯಭಾಗದಲ್ಲಿರುವ ರಕ್ಷಿತ ಪ್ರದೇಶಕ್ಕೆ ಓಡಿದ ಕಾರಣ ಭಾರತಕ್ಕೆ ಐದು ರನ್ ದಂಡ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಐದು ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಆರಂಭಿಸಿತು.
► ಭಾರತ ವಿರುದ್ಧ ವೇಗವಾಗಿ ಶತಕ ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಡಕೆಟ್
ಡಕೆಟ್ ಪ್ರಮುಖವಾಗಿ ಭಾರತದ ಸ್ಪಿನ್ನರ್‌ಗಳನ್ನು ಚೆನ್ನಾಗಿ ದಂಡಿಸಿದರು. 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಇಂಗ್ಲೆಂಡ್ ತಂಡ ಆರಂಭಿಕ ಜೊತೆಗಾರ ಝಾಕ್ ಕ್ರಾವ್ಲೆಯವರನ್ನು ಬೇಗನೆ ಕಳೆದುಕೊಂಡಿತು. ಕ್ರಾವ್ಲೆ ಅವರು ಅಶ್ವಿನ್ ಅವರ ಬೌಲಿಂಗ್‌ನಲ್ಲಿ ಸ್ವೀಪ್ ಶಾಟ್‌ಗೆ ಪ್ರಯತ್ನಿಸಿ ಶಾರ್ಟ್‌ಫೈನ್ ಲೆಗ್‌ನಲ್ಲಿ ರಜತ್ ಪಾಟಿದಾರ್‌ಗೆ ವಿಕೆಟ್ ಒಪ್ಪಿಸಿದರು. ಕ್ರಾವ್ಲೆ ವಿಕೆಟನ್ನು ಪಡೆದ ಅಶ್ವಿನ್ 500 ಟೆಸ್ಟ್ ವಿಕೆಟ್ ಪಡೆದ ವಿಶ್ವದ 9ನೇ ಬೌಲರ್ ಹಾಗೂ ಐದನೇ ಸ್ಪಿನ್ನರ್ ಎನಿಸಿಕೊಂಡರು.
29ರ ಹರೆಯದ ಡಕೆಟ್ ಅವರು ಸಿರಾಜ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿ 88 ಎಸೆತಗಳಲ್ಲಿ ತನ್ನ 3ನೇ ಟೆಸ್ಟ್ ಶತಕ ಗಳಿಸಿದರು. ಡಕೆಟ್ ಕೇವಲ 88 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಭಾರತ ವಿರುದ್ಧ ವೇಗವಾಗಿ ಶತಕ ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಎನಿಸಿಕೊಂಡರು.
ಕೊನೆಯ ಅವಧಿಯಲ್ಲಿ ಪೋಪ್‌ರನ್ನು (39ರನ್) ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಸಿರಾಜ್ ಭಾರತದ ನೈತಿಕ ಸ್ಥೈರ್ಯ ಹೆಚ್ಚಿಸಿದರು.