ಮಲೇಶ್ಯ ಮಾಸ್ಟರ್ಸ್ | ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು ಫೈನಲ್‌ಗೆ

Update: 2024-05-25 16:43 GMT

 ಪಿ.ವಿ. ಸಿಂಧು | PC: NDTV

ಕೌಲಾಲಂಪುರ: ಭಾರತದ ಹಿರಿಯ ಆಟಗಾರ್ತಿ ಪಿ.ವಿ. ಸಿಂಧು 420,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಮಲೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ 88 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಸಿಂಧು ಥಾಯ್ಲೆಂಡ್‌ನ ಬುಸನನ್ ಒಂಗ್ಬಮ್‌ರುಂಗ್‌ಫನ್‌ರನ್ನು 13-21, 21-16, 21-12 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.

ಕಳೆದ ಎರಡು ವರ್ಷಗಳಿಂದ ಟ್ರೋಫಿಯನ್ನು ಜಯಿಸದ ಸಿಂಧು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್-500 ಪ್ರಶಸ್ತಿ ಗೆಲ್ಲುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ.

ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನಲ್ಲಿ ಎರಡನೇ ಸ್ಥಾನ ಪಡೆದಿರುವ ಸಿಂಧು 2022ರ ಸಿಂಗಾಪುರ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಸಿಂಧು ಅವರು ಬುಸನನ್ ವಿರುದ್ಧ 18ನೇ ಬಾರಿ ಗೆಲುವು ದಾಖಲಿಸಿ ತನ್ನ ಪ್ರಾಬಲ್ಯ ಮುಂದುವರಿಸಿದರು. ಬುಸನನ್ ತನ್ನ ವೃತ್ತಿಜೀವನದಲ್ಲಿ 2019ರ ಹಾಂಕಾಂಗ್ ಓಪನ್‌ನಲ್ಲಿ ಒಮ್ಮೆ ಮಾತ್ರ ಸಿಂಧುಗೆ ಸೋಲುಣಿಸಿದ್ದರು.

ಇನ್ನೆರಡು ತಿಂಗಳಲ್ಲಿ ನಡೆಯುವ ಪ್ಯಾರಿಸ್ ಗೇಮ್ಸ್‌ನಲ್ಲಿ ತನ್ನ ಮೂರನೇ ಒಲಿಂಪಿಕ್ಸ್ ಪದಕ ಗೆಲ್ಲುವತ್ತ ಚಿತ್ತಹರಿಸಿರುವ ವಿಶ್ವದ ನಂ.15ನೇ ಆಟಗಾರ್ತಿ ಸಿಂಧು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಚೀನಾದ ವಾಂಗ್ ಝಿ ಯಿ ಅವರನ್ನು ಎದುರಿಸಲಿದ್ದಾರೆ.

ಸಿಂಧು ವಿಶ್ವದ ನಂ.7ನೇ ಆಟಗಾರ್ತಿ ವಾಂಗ್‌ರನ್ನು ಮೂರು ಪಂದ್ಯಗಳಲ್ಲಿ ಎರಡು ಬಾರಿ ಮಣಿಸಿದ್ದರು.

ಮೊಣಕಾಲು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಸಿಂಧು ಕಳೆದ ಎರಡು ಒಲಿಂಪಿಕ್ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು. ಈ ವಾರ ಕೆಲವು ಆಕ್ರಮಣಕಾರಿ ಬ್ಯಾಡ್ಮಿಂಟನ್ ಆಡಿರುವ ಸಿಂಧು ತನ್ನ ಮೊದಲಿನ ಲಯಕ್ಕೆ ಮರಳಿದಂತೆ ಕಂಡುಬಂದರು. ಮಲೇಶ್ಯ ಮಾಸ್ಟರ್ಸ್ ಪ್ರಶಸ್ತಿ ಗೆಲುವು ಒಲಿಂಪಿಕ್ಸ್‌ಗಿಂತ ಮೊದಲು ಸಿಂಧುಗೆ ಹೆಚ್ಚಿನ ಆತ್ಮವಿಶ್ವಾಸ ಒದಗಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News