ಆರ್ ಸಿ ಬಿ ಯ ಹೆಚ್ಚಿನ ಆಟಗಾರರಿಗೆ ಇಂಗ್ಲೀಷ್ ಕೂಡ ಅರ್ಥವಾಗುವುದಿಲ್ಲ: ವೀರೇಂದ್ರ ಸೆಹ್ವಾಗ್

Update: 2024-04-16 16:22 GMT

ವೀರೇಂದ್ರ ಸೆಹ್ವಾಗ್ | PC : PTI 

ಹೊಸದಿಲ್ಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನವು ಕಳವಳಕಾರಿಯಾಗಿದೆ. ಆರ್ ಸಿ ಬಿ ತಂಡವು ಹಲವಾರು ವಿಚಾರಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಹಾಗೂ ಮನೋಜ್ ತಿವಾರಿ ಬೆಟ್ಟು ಮಾಡಿದ್ದಾರೆ.

ಭಾರತೀಯ ಸಹಾಯಕ ಸಿಬ್ಬಂದಿಯ ಕೊರತೆಯು ಪ್ರಮುಖ ಚಿಂತೆಯ ವಿಚಾರವಾಗಿದ್ದು ದೇಶೀಯ ಆಟಗಾರರಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಲು ಇದು ತೊಡಕಾಗಿ ಪರಿಣಮಿಸಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿಗರಾದ ಆ್ಯಂಡಿ ಫ್ಲವರ್ ಆರ್ ಸಿ ಬಿ ತಂಡದ ಮುಖ್ಯ ಕೋಚ್ ಆಗಿದ್ದರೆ, ಆಡಮ್ ಗ್ರಿಫಿತ್ ಬೌಲಿಂಗ್ ಕೋಚ್ ಆಗಿದ್ದಾರೆ. ಹೀಗಾಗಿ ಭಾರತದ ಆಟಗಾರರು ಸಂಪರ್ಕದ ಕೊರತೆ ಎದುರಿಸುತ್ತಿದ್ದು ಮುಕ್ತವಾಗಿ ಸಂವಹನ ನಡೆಸಲು ಪರದಾಡುತ್ತಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

ನೀವು 12ರಿಂದ 15 ಭಾರತೀಯ ಆಟಗಾರರು, ಕೇವಲ 10 ವಿದೇಶಿ ಆಟಗಾರರನ್ನು ಹೊಂದಿರುವಾಗ ಸಂಪೂರ್ಣ ಸಹಾಯಕ ಸಿಬ್ಬಂದಿ ವಿದೇಶಿಗರಾಗಿದ್ದರೆ ಅದು ಸಮಸ್ಯೆಯಾಗುತ್ತದೆ. ಇದರಲ್ಲಿ ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರಾಗಿದ್ದು, ಉಳಿದವರೆಲ್ಲರೂ ಭಾರತೀಯರಾಗಿದ್ದರೆ, ಅದರಲ್ಲಿ ಅರ್ಧದಷ್ಟು ಆಟಗಾರರಿಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ. ಆಗ ನೀವು ಅವರನ್ನು ಹೇಗೆ ಪ್ರೇರೇಪಿಸುತ್ತೀರಿ? ಅವರೊಂದಿಗೆ ಸಮಯ ಕಳೆಯುವವರು ಯಾರು? ಅವರೊಂದಿಗೆ ಯಾರು ಮಾತನಾಡುತ್ತಾರೆ? ನನಗೆ ಒಬ್ಬರೂ ಭಾರತದ ಸಹಾಯಕ ಸಿಬ್ಬಂದಿ ಕಾಣಿಸುತ್ತಿಲ್ಲ. ಕನಿಷ್ಠ ಒಬ್ಬ ಆಟಗಾರನಾದರೂ ಇರಬೇಕಿತ್ತು ಎಂದು ಸೆಹ್ವಾಗ್ ಅವರು ಕ್ರಿಕ್ಬಝ್ ನಲ್ಲಿ ತಿಳಿಸಿದ್ದಾರೆ.

ಹರಾಜು ಪ್ರಕ್ರಿಯೆ ಹಾಗೂ ಟೀಮ್ ಮ್ಯಾನೇಜ್ಮೆಂಟ್ ವಿಚಾರದಲ್ಲಿ ಆರ್ ಸಿ ಬಿ ಯ ನಿರ್ಧಾರವು ಪ್ರಶ್ನಾರ್ಹವಾಗಿದೆ ಎಂದು ಮನೋಜ್ ತಿವಾರಿ ತಿಳಿಸಿದ್ದಾರೆ.

ಹರಾಜು ಪ್ರಕ್ರಿಯೆಯಿಂದ ಹಿಡಿದು ಮ್ಯಾನೇಜ್ಮೆಂಟ್ ತನಕ ಸಮಸ್ಯೆ ಏನೆಂದು ನನಗೆ ಗೊತ್ತಿದೆ. ಈ ಫ್ರಾಂಚೈಸಿಯ ಎಲ್ಲ ಉತ್ತಮ ಆಟಗಾರರು ಬಿಟ್ಟುಹೋಗುತ್ತಿದ್ದಾರೆ ಹಾಗೂ ಇತರ ತಂಡಗಳಲ್ಲಿ ಆಡುತ್ತಿದ್ದಾರೆ. ಈ ಋತುವಿನ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಯಜುವೇಂದ್ರ ಚಹಾಲ್ ಅವರಲ್ಲಿ ಒಬ್ಬರಾಗಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.

ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಆರ್ ಸಿ ಬಿ ವಿರುದ್ಧ 3 ವಿಕೆಟ್ ಗಳ ನಷ್ಟಕ್ಕೆ 287 ರನ್ ಗಳಿಸಿ ಐಪಿಎಲ್ ನಲ್ಲಿ ಅತ್ಯಂತ ಗರಿಷ್ಠ ಸ್ಕೋರ್ ದಾಖಲಿಸಿ ಹೊಸ ದಾಖಲೆ ನಿರ್ಮಿಸಿತ್ತು. ಟ್ರಾವಿಸ್ ಹೆಡ್ ಅವರ ಸ್ಫೋಟಕ ಶತಕ ಹಾಗೂ ಹೆನ್ರಿಕ್ ಕ್ಲಾಸೆನ್ ಅವರ ಮಿಂಚಿನ ಅರ್ಧಶತಕದ ನೆರವಿನಿಂದ ಹೈದರಾಬಾದ್ ತಂಡ ಈ ಐತಿಹಾಸಿಕ ಸಾಧನೆ ಮಾಡಿದೆ.

ಈ ಪಂದ್ಯದಲ್ಲಿ ಒಟ್ಟು 549 ರನ್ ಹರಿದುಬಂದಿದ್ದು ಇದು ಟಿ20 ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ವಿರಾಟ್ ಕೊಹ್ಲಿ, ಎಫ್ಡು ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಅವರ ಪ್ರಯತ್ನದ ಹೊರತಾಗಿಯೂ ಆರ್ ಸಿ ಬಿ ತಂಡ 25 ರನ್ನಿಂದ ಸೋತಿದೆ. ಈ ಋತುವಿನಲ್ಲಿ ಆರ್ ಸಿ ಬಿ ಕಂಡ ಆರನೇ ಸೋಲು ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News