ಭದ್ರತಾ ಪಡೆಗಳ ಕಣ್ಗಾವಲಿನಲ್ಲಿ ಒಲಿಂಪಿಕ್ಸ್ ಗೆ ವರ್ಣರಂಜಿತ ಚಾಲನೆ
ಪ್ಯಾರಿಸ್ : ಬೆಳಕಿನ ನಗರಿ ಪ್ಯಾರಿಸ್‌ನಲ್ಲಿ ಬಹುನಿರೀಕ್ಷಿತ 33ನೇ ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟವು ಶುಕ್ರವಾರ ಭದ್ರತಾ ಪಡೆಗಳ ಕಣ್ಗಾವಲಿನಲ್ಲಿ ಆರಂಭವಾಯಿತು.
ಕಾರ್ಯಕ್ರಮ ಆರಂಭವಾಗುವ ಮೊದಲೇ ಸೀನ್ ನದಿಯ ದಡದಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ ಸ್ಟ್ಯಾಂಡ್‌ಗಳಲ್ಲಿ ಪ್ರೇಕ್ಷಕರು ಜಮಾಯಿಸಿದರು.
PHOTO : PTI
ಅತಿ ವೇಗದ ರೈಲು ಜಾಲದ ಮೇಲೆ ವಿಧ್ವಂಸಕ ದಾಳಿಯು ಫ್ರಾನ್ಸ್‌ನಾದ್ಯಂತ ಪ್ರಯಾಣದ ಗೊಂದಲಕ್ಕೆ ಕಾರಣವಾದ ಗಂಟೆಗಳ ನಂತರ ಒಲಿಂಪಿಕ್ಸ್‌ಗೆ ಚಾಲನೆ ನೀಡುವ ಭವ್ಯ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು ಜನ ಸಮೂಹವು ಶುಕ್ರವಾರ ಪ್ಯಾರಿಸ್‌ನ ಸೀನ್ ನದಿಯ ಉದ್ದಕ್ಕೂ ಮಳೆಯನ್ನು ಲೆಕ್ಕಿಸದೇ ಜಮಾಯಿಸಿತು.
ಇದೇ ಮೊದಲ ಬಾರಿ ವಿನೂತನವಾಗಿ ಮುಖ್ಯ ಅತ್ಲೆಟಿಕ್ಸ್ ಕ್ರೀಡಾಂಗಣದ ಹೊರಗೆ ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಪರೇಡ್ ಆಫ್ ನೇಶನ್ಸ್‌ನೊಂದಿಗೆ ಅದ್ದೂರಿ ಸಮಾರಂಭ ಆರಂಭವಾಯಿತು. ಸೀನ್ ನದಿಯಲ್ಲಿ ಬೋಟ್‌ಗಳಲ್ಲಿ ಅತ್ಲೀಟ್‌ಗಳ ಪರೇಡ್ ನಡೆಸಲಾಯಿತು. ಗ್ರೀಸ್ ಕ್ರೀಡಾಳುಗಳನ್ನು ಒಳಗೊಂಡಿರುವ ಬೋಟ್ ಮೊದಲಿಗೆ ತನ್ನ ಪಯಣ ಆರಂಭಿಸಿತು. ನಿರಾಶ್ರಿತ ಒಲಿಂಪಿಕ್ಸ್ ಟೀಮ್, ದಕ್ಷಿಣ ಆಫ್ರಿಕಾ, ಜರ್ಮನಿ ಅತ್ಲೀಟ್‌ಗಳಿರುವ ಬೋಟ್ ಮೆರವಣಿಗೆ ನಡೆಸಿದವು. ಬೋಟ್‌ಪರೇಡ್ ಪೂರ್ವ ಆಸ್ಟರ್ಲಿಟ್ಝ್ ಸೇತುವೆಯಿಂದ ಆರಂಭಗೊಂಡು ಪಶ್ಚಿಮದ ಐಪೆಲ್ ಟವರ್‌ನಲ್ಲಿ ಕೊನೆಗೊಳ್ಳಲಿದೆ.
ಮೊದಲ ಸುತ್ತಿನ ಪರೇಡ್ ಆಫ್ ನೇಶನ್ಸ್ ನಂತರ ಜಾಗತಿಕ ಸೂಪರ್‌ಸ್ಟಾರ್ ಲೇಡಿ ಗಾಗಾ ವೇದಿಕೆ ಏರಿ ಹಾಡಲಾರಂಭಿಸಿದರು.
ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಪ್ಯಾರಿಸ್‌ನಲ್ಲಿ ಸುಮಾರು 45 ಸಾವಿರ ಪೊಲೀಸರು ಹಾಗೂ ಸಾವಿರಾರು ಸೈನಿಕರನ್ನು ಭಾರೀ ಭದ್ರತಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಪೊಲೀಸರು ನದಿಯುದ್ದಕ್ಕೂ ಭದ್ರತಾ ವಲಯವನ್ನು ರಚಿಸಿದ್ದಾರೆ.