ದಾಖಲೆ ಬರೆದ ಶಮಿ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 2ನೇ ಬಾರಿ ಐದು ವಿಕೆಟ್ ಪಡೆದ ಭಾರತದ ಮೊದಲ ಬೌಲರ್
ಧರ್ಮಶಾಲಾ: ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಅವರು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ಐದು ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ರವಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌ನ ಶತಕವೀರ ಡ್ಯಾರಿಲ್ ಮಿಚೆಲ್ ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಶಮಿ ಅವರು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 2 ಬಾರಿ ಐದು ವಿಕೆಟ್ ಗೊಂಚಲು ಪಡೆದ ವಿಶ್ವದ 9ನೇ ಬೌಲರ್ ಎನಿಸಿಕೊಂಡಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಬೌಲರ್‌ವೊಬ್ಬರು 7ನೇ ಬಾರಿ ಐದು ವಿಕೆಟ್ ಗುಚ್ಚ ಪಡೆದಿದ್ದಾರೆ. ಸ್ವತಃ ಶಮಿ 2019ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರು. ಅದಕ್ಕೂ ಮೊದಲು ಆಶೀಷ್ ನೆಹ್ರಾ(2003), ವೆಂಕಟೇಶ್ ಪ್ರಸಾದ್(1999), ರಾಬಿನ್ ಸಿಂಗ್(1999), ಯುವರಾಜ್ ಸಿಂಗ್(2011) ಹಾಗೂ ಕಪಿಲ್‌ದೇವ್(1983)ಈ ಸಾಧನೆ ಮಾಡಿದ್ದಾರೆ.
ಕಾರಣ ಶಮಿ ಪ್ರಸಕ್ತ ವಿಶ್ವಕಪ್‌ನಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದಿದ್ದರು. ತನ್ನ ಮೊದಲ ಎಸೆತದಲ್ಲಿ ಕಿವೀಸ್ ಓಪನರ್ ವಿಲ್ ಯಂಗ್ ವಿಕೆಟ್ ಉರುಳಿಸಿದ್ದರು. ಯಂಗ್ ವಿಕೆಟನ್ನು ಪಡೆದಿರುವ ಶಮಿ ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ(31 ವಿಕೆಟ್)ರನ್ನು ಹಿಂದಿಕ್ಕಿದರು. ಶಮಿ ಇದೀಗ ವಿಶ್ವಕಪ್‌ನಲ್ಲಿ ಒಟ್ಟು 36 ವಿಕೆಟ್‌ಗಳನ್ನು ಪಡೆದಿದ್ದಾರೆ.
ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್ ಹಾಗೂ ಮ್ಯಾಟ್ ಹೆನ್ರಿ ವಿಕೆಟನ್ನು ಪಡೆದಿರುವ ಶಮಿ ಏಕದಿನ ವಿಶ್ವಕಪ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಬೌಲಿಂಗ್(5/54) ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ 51ಕ್ಕೆ 5 ವಿಕೆಟ್ ಶಮಿ ಅವರ ಶ್ರೇಷ್ಠ ಸಾಧನೆಯಾಗಿದೆ.
ಶಮಿ ಅವರು ಮೆಗಾ ಟೂರ್ನಮೆಂಟ್‌ನ ಇನಿಂಗ್ಸ್‌ನಲ್ಲಿ ಐದನೇ ಬಾರಿ 4 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಆರು ಬಾರಿ ಈ ಸಾಧನೆ ಮಾಡಿದ್ದಾರೆ.
ಶಮಿ 2019ರ ವಿಶ್ವಕಪ್‌ನಲ್ಲಿ ಕೇವಲ 4 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಉರುಳಿಸಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದರು.
ತಾನೆಸೆದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಶಮಿ:
ಭಾರತದ ಸ್ಟಾರ್ ವೇಗದ ಬೌಲರ್ ಮುಹಮ್ಮದ್ ಶಮಿ ಐಸಿಸಿ ವಿಶ್ವಕಪ್-2023ರಲ್ಲಿ ಆಡಿರುವ ತನ್ನ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ಗ್ರ್ಯಾಂಡ್ ಎಂಟ್ರಿ ಪಡೆದಿದ್ದಾರೆ.
ನ್ಯೂಝಿಲ್ಯಾಂಡ್ ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿದ ಶಮಿ ತಾನೆಸೆದ ಮೊದಲ ಎಸೆತದಲ್ಲಿಯೇ ನ್ಯೂಝಿಲ್ಯಾಂಡ್ ಬ್ಯಾಟ್ಸ್‌ಮನ್ ವಿಲ್ ಯಂಗ್(17 ರನ್, 27 ಎಸೆತ) ವಿಕೆಟನ್ನು ಉರುಳಿಸಿದರು. ಶಮಿ ವಿಶ್ವಕಪ್‌ನ ಮೊದಲ 4 ಪಂದ್ಯಗಳಲ್ಲಿ ಆಡಿರಲಿಲ್ಲ.
ಅನುಭವಿ ವೇಗದ ಬೌಲರ್ ಶಮಿ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಯಂಗ್‌ರನ್ನು ಕ್ಲೀನ್ ಬೌಲ್ಡ್ ಮಾಡಿದರು.