ಸೆಮಿಫೈನಲ್ ಗೆ ಲಗ್ಗೆಯಿಟ್ಟ ಸಾತ್ವಿಕ್-ಚಿರಾಗ್ ಜೋಡಿ | ಸಿಂಧೂಗೆ ಸೋಲು
ಪ್ಯಾರಿಸ್ : ಫ್ರೆಂಚ್ ಓಪನ್ ಬಿಡಬ್ಲ್ಯುಎಫ್ ಸೂಪರ್ 750 ಪಂದ್ಯಾವಳಿಯಲ್ಲಿ ಶುಕ್ರವಾರ ಅಗ್ರ ಕ್ರಮಾಂಕದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್ ತಲುಪಿದ್ದಾರೆ. ಆದರೆ ಪಿ.ವಿ. ಸಿಂಧೂ ಸೋಲನುಭವಿಸಿದ್ದಾರೆ.
ಪರುಷರ ಡಬಲ್ಸ್ ಕ್ವಾರ್ಟರ್ಫೈನಲ್ ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಯು ಥಾಯ್ಲೆಂಡ್ ನ ಸುಪಕ್ ಜೊಮ್ಕೊಹ್ ಮತ್ತು ಕಿಟ್ಟಿನುಪೊಂಗ್ ಕೆಡ್ರೆನ್ ಜೋಡಿಯನ್ನು 21-19, 21-13 ನೇರ ಸೆಟ್ ಗಳಿಂದ ಮಣಿಸಿತು. ಜಗತ್ತಿನ ನಂಬರ್ ವನ್ ಜೋಡಿಯು ಈ ಪಂದ್ಯಾವಳಿಯಲ್ಲಿ ಈವರೆಗೆ ಅಜೇಯವಾಗುಳಿದಿದೆ.
ಮೊದಲ ಗೇಮ್ ನಲ್ಲಿ 16-18ರಿಂದ ಹಿಂದಿದ್ದ ಭಾರತೀಯ ಜೋಡಿಯು ನಾಲ್ಕು ಸತತ ಅಂಕಗಳ ಮೂಲಕ ಗೇಮ್ ಪಾಯಿಂಟ್ ತಲುಪಿತು. ಅವರು ಎರಡನೇ ಗೇಮ್ ನಲ್ಲೂ ಪ್ರಾಬಲ್ಯ ಸಾಧಿಸಿದರು.
ಸೆಮಿಫೈನಲ್ ನಲ್ಲಿ ಅವರು ದಕ್ಷಿಣ ಕೊರಿಯದ ಮೂರನೇ ಶ್ರೇಯಾಂಕದ ಕಾಂಗ್ ಮಿನ್ ಹ್ಯೂಕ್ ಮತ್ತು ಸಿಯೊ ಸೆಯುಂಗ್ ಜೇ ಜೋಡಿಯನ್ನು ಎದುರಿಸಲಿದ್ದಾರೆ.
ಇದಕ್ಕೂ ಮೊದಲು ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ಫೈನಲ್ ನಲ್ಲಿ, ಭಾರತದ ಸಿಂಧೂರನ್ನು ಚೀನಾದ ಚೆನ್ ಯು ಫೇ 22-24, 21-17, 21-18 ಗೇಮ್ ಗಳಿಂದ ಸೋಲಿಸಿದರು.
ಹಾಲಿ ಒಲಿಂಪಿಕ್ ಚಾಂಪಿಯನ್ ಚೆನ್ ವಿರುದ್ಧ ಸಿಂಧೂ ಉತ್ತಮ ಹೋರಾಟವನ್ನೇ ನೀಡಿದರು. ಸಿಂಧೂ ಕೊನೆಯ ಬಾರಿಗೆ ಚೆನ್ರನ್ನು ಸೋಲಿಸಿದ್ದು 2019ರಲ್ಲಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ. ಆ ಬಾರಿ ಸಿಂಧೂ ಪ್ರಶಸ್ತಿ ಗೆದ್ದಿದ್ದರು.
ಒಂದು ಗಂಟೆ 32 ನಿಮಿಷ ನಡೆದ ಹೋರಾಟದಲ್ಲಿ ಸಿಂಧೂ ತನ್ನ ಶ್ರೇಷ್ಠ ನಿರ್ವಹಣೆ ನೀಡಿದರು. ಸೋಲಿನ ಹೊರತಾಗಿಯೂ, ಸಿಂಧೂರ ಆಟದ ಬಗ್ಗೆ ಅವರಿಗೆ ಮತ್ತು ತಂಡಕ್ಕೆ ತೃಪ್ತಿಯಿದೆ.
ಸೆಮಿಫೈನಲ್ ನಲ್ಲಿ ಚೆನ್ ಜಪಾನಿನ ಅಕಾನೆ ಯಮಗುಚಿಯನ್ನು ಎದುರಿಸಲಿದ್ದಾರೆ.