ಸಿಂಧು ಪ್ರಿ ಕ್ವಾರ್ಟರ್ ಫೈನಲ್ ಗೆ ತೇರ್ಗಡೆ
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ, ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಬುಧವಾರ ಭಾರತದ ಪಿ.ವಿ. ಸಿಂಧು ಎಸ್ಟೋನಿಯದ ಕ್ರಿಸ್ಟಿನ್ ಕೂಬಾ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಲಾ ಚಾಪೆಲ್ ಅರೀನಾದಲ್ಲಿ ನಡೆದ ಪಂದ್ಯದಲ್ಲಿ, ಅವಳಿ ಒಲಿಂಪಿಕ್ ಪದಕಗಳ ವಿಜೇತೆ ಸಿಂಧು ತನ್ನ ‘ಎಮ್’ ಗುಂಪಿನ ಕೊನೆಯ ಪಂದ್ಯವನ್ನು 21-5, 21-10 ಗೇಮ್ ಗಳಿಂದ ಗೆದ್ದರು. ಪಂದ್ಯವು ಕೇವಲ 34 ನಿಮಿಷಗಳಲ್ಲಿ ಮುಗಿಯಿತು.
ಮೊದಲ ಗೇಮ್ ನಲ್ಲಿ, ಸಿಂಧು ಪಂದ್ಯವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡರು. ಆ ಗೇಮನ್ನು ಅವರು ಕೇವಲ 14 ನಿಮಿಷಗಳಲ್ಲಿ ಗೆದ್ದರು. ಬಳಿಕ, ಎರಡನೇ ಗೇಮ್ ನಲ್ಲೂ ಅವರು ತನ್ನ ಪ್ರಾಬಲ್ಯವನ್ನು ಸಾಧಿಸಿದರು. ಆ ಗೇಮನ್ನು ಅವರು 19 ನಿಮಿಷಗಳಲ್ಲಿ 21-10ರಿಂದ ಗೆದ್ದರು.
ಸಿಂಧು ತನ್ನ 16ರ ಸುತ್ತಿನ ಪಂದ್ಯದಲ್ಲಿ ಚೀನಾದ ಹೆ ಬಿಂಗ್ಜಿಯಾವೊ ಅವರನ್ನು ಎದುರಿಸುವ ಸಾಧ್ಯತೆಯಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ, ಸಿಂಧು, ಬಿಂಗ್ಜಿಯಾವೊ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು.
ಅಗ್ರ ಶ್ರೇಯಾಂಕದ ಸಿಂಧು ತನ್ನ ಆರಂಭಿಕ ಪಂದ್ಯದಲ್ಲಿ ಮಾಲ್ದೀವ್ಸ್ ನ ಫಾತಿಮತ್ ಅಬ್ದುಲ್ ರಝಾಕ್ ರನ್ನು 21-9, 21-6 ಗೇಮ್ ಗಳಿಂದ ಸೋಲಿಸಿದ್ದರು.
16ರ ಸುತ್ತಿಗೆ ಎಲ್ಲಾ 16 ಗುಂಪುಗಳ ವಿಜೇತರು ತೇರ್ಗಡೆಗೊಳ್ಳುತ್ತಾರೆ.
ಸಿಂಧು 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದರೆ, 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅವರು ತನ್ನ ಮೂರನೇ ಪದಕಕ್ಕಾಗಿ ಸೆಣಸುತ್ತಿದ್ದಾರೆ.