ಮೂರನೇ ಟೆಸ್ಟ್ | ಆಸ್ಟ್ರೇಲಿಯದ ವಿರುದ್ಧ ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆ

Update: 2024-12-12 20:46 IST
Rohit Sharma

ರೋಹಿತ್ ಶರ್ಮಾ | PC : PTI 

  • whatsapp icon

ಬ್ರಿಸ್ಬೇನ್ : ಅಡಿಲೇಡ್‌ನಲ್ಲಿ ನಡೆದಿರುವ ಪಿಂಕ್-ಬಾಲ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ ಪ್ರಯೋಗವು ದಯನೀಯ ವೈಫಲ್ಯ ಕಂಡಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ 3 ಹಾಗೂ 6 ರನ್ ಗಳಿಸಿದ್ದರು.

ಮೊದಲ ಟೆಸ್ಟ್ ಸೋಲಿನಿಂದ ಪುಟಿದೆದ್ದ ಆಸ್ಟ್ರೇಲಿಯ ತಂಡವು ಅಡಿಲೇಡ್ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು. ಈಗ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 5 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.

ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಶನಿವಾರದಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು,ರೋಹಿತ್ ಶರ್ಮಾ ಮತ್ತೊಮ್ಮೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯ ಕುರಿತು ಗುರುವಾರ ನಡೆದ ಭಾರತ ತಂಡದ ಪ್ರಾಕ್ಟೀಸ್‌ನಲ್ಲಿ ಸಾಕಷ್ಟು ಸುಳಿವು ಲಭಿಸಿದೆ.

ವರದಿಯ ಪ್ರಕಾರ, ಫಾರ್ಮ್‌ ನಲ್ಲಿಲ್ಲದ ರೋಹಿತ್ ಅವರು ನೆಟ್‌ನಲ್ಲಿ ಹೊಸ ಚೆಂಡನ್ನು ಎದುರಿಸಲು ಸಾಕಷ್ಟು ಸಮಯ ಕಳೆದಿದ್ದಾರೆ. ರೋಹಿತ್ ಅವರು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಿದ ಭಾರತದ ವೇಗದ ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ, ಮುಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಅವರನ್ನು ಎದುರಿಸಿದ್ದಾರೆ.

ಅಡಿಲೇಡ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್‌ ಗಿಂತ ಮೊದಲು ರೋಹಿತ್ ಅವರು ಹೊಸ ಚೆಂಡಿನಲ್ಲಿ ಭಾರತದ ವೇಗಿಗಳನ್ನು ಎದುರಿಸಿರಲಿಲ್ಲ. ರೋಹಿತ್ ಸದ್ಯ ರನ್ ಬರ ಎದುರಿಸುತ್ತಿದ್ದು, ಹಿಂದಿನ 12 ಇನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ ಮಾತ್ರ 20ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 8 ಬಾರಿ ಒಂದಂಕಿ ಸ್ಕೋರ್ ಗಳಿಸಿರುವ ರೋಹಿತ್ ಕೇವಲ ಒಂದು ಬಾರಿ ಅರ್ಧಶತಕ ಸಿಡಿಸಿದ್ದಾರೆ.

ರೋಹಿತ್ ಅವರು ಯಶಸ್ವಿ ಜೈಸ್ವಾಲ್‌ರೊಂದಿಗೆ ಆರಂಭಿಕ ಆಟಗಾರನಾಗಿ ಮತ್ತೊಮ್ಮೆ ಕಣಕ್ಕಿಳಿದರೆ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದ ಕೆ.ಎಲ್.ರಾಹುಲ್ ಸರಣಿಯ ಇನ್ನುಳಿದ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕಕ್ಕೆ ವಾಪಸಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News