ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಯಾದ ವಿರೇಂದ್ರ ಸೆಹ್ವಾಗ್

Update: 2023-11-13 10:02 GMT

Photo: icc-cricket.com

ಲಂಡನ್: ‍ಶ್ರೀಲಂಕಾದ ಮಾಜಿ ಆಟಗಾರ ಅರವಿಂದ ಡಿಸಿಲ್ವ ಅವರೊಂದಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಹಾಗೂ ಡಯಾನಾ ಎಡುಲ್ಜಿ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಯಾಗಿದ್ದಾರೆ. ವೀರೇಂದ್ರ ಸೆಹ್ವಾಗ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಎದುರಾಳಿ ಬೌಲರ್ ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಏಕದಿನ, ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಭಾರತ ತಂಡಕ್ಕೆ ಅವರು ಬಿರುಸಿನ ಆರಂಭ ನೀಡುತ್ತಿದ್ದರು. ಮತ್ತೊಂದೆಡೆ, ಡಯಾನಾ ಎಡುಲ್ಜಿ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಎಂದು ndtv.com ವರದಿ ಮಾಡಿದೆ.

“ನನ್ನನ್ನು ಈ ಗೌರವಕ್ಕೆ ಸೇರ್ಪಡೆ ಮಾಡಿದ್ದಕ್ಕೆ ಐಸಿಸಿ ಹಾಗೂ ತೀರ್ಪುಗಾರರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಸೆಹ್ವಾಗ್ ತಿಳಿಸಿದ್ದಾರೆ ಎಂದು ಐಸಿಸಿ ಹೇಳಿದೆ.

“ನನ್ನ ಜೀವನದ ಬಹು ದೊಡ್ಡ ಭಾಗವನ್ನು ನಾನು ಹೆಚ್ಚು ಇಷ್ಟಪಟ್ಟಿದ್ದ ಕ್ರಿಕೆಟ್ ಬಾಲನ್ನು ಹೊಡೆಯುವ ಕೆಲಸದಲ್ಲಿ ಕಳೆದಿದ್ದಕ್ಕೆ ನಾನು ಭಾರಿ ಆಭಾರಿಯಾಗಿದ್ದೇನೆ” ಎಂದು ಸೆಹ್ವಾಗ್ ಹೇಳಿದ್ದಾರೆ.

ತಮ್ಮನ್ನು ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪರಿಗಣಿಸಿದ್ದಕ್ಕೆ ಭಾರತ ತಂಡದ ಪರವಾಗಿ 100ಕ್ಕಿಂತ ಹೆಚ್ಚು ವಿಕೆಟ್ ಗಳನ್ನು ಪಡೆದಿರುವ ಎಡಗೈ ಸಾಂಪ್ರದಾಯಿಕ ಬೌಲರ್ ಎಡುಲ್ಜಿ ಅವರೂ ಸಂತಸ ವ್ಯಕ್ತಪಡಿಸಿದ್ದಾರೆ.

“ಮೊದಲಿಗೆ ನನ್ನನ್ನು ಐಸಿಸಿ ಹಾಲ್ ಆಫ್ ಫೇಮ್ 2023 ಗೌರವಕ್ಕೆ ಸೇರ್ಪಡೆ ಮಾಡಿದ ಐಸಿಸಿ ಹಾಗೂ ತೀರ್ಪುಗಾರರಿಗೆ ನನ್ನ ಧನ್ಯವಾದ ಸಲ್ಲಿಸಲು ಬಯಸುತ್ತೇನೆ” ಎಂದು ಎಡುಲ್ಜಿ ಪ್ರತಿಕ್ರಿಯಿಸಿದ್ದಾರೆ.

“ವಿಶ್ವದಾದ್ಯಂತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ಪಟುಗಳ ತಾರಾಪುಂಜಕ್ಕೆ ಪ್ರಪ್ರಥಮ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರಳಾಗಿ ಸೇರ್ಪಡೆಯಾಗುತ್ತಿರುವುದು ನಿಜಕ್ಕೂ ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News