ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಸಿದ್ದುವಾದದೊಳಗಿನ ಮೋದಿವಾದವೇ?
ಭಾಗ- 2
ಕಾರ್ಪೊರೇಟ್ ಕರ್ನಾಟಕದ ಕನಸು
ವಾಸ್ತವವಾಗಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆ ನ್ಯಾಯದ, ದೇಶದ ಸಂಪತ್ತಿನ ಸಮಾನ ಹಂಚಿಕೆಯ ಹಾಗೂ ಹಳೆಯ ಸರಕಾರಿ ಹುದ್ದೆಗಳನ್ನು ತುಂಬುವ ಹಾಗೂ ಹೊಸ ಸರಕಾರಿ ಹುದ್ದೆಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಆ ಪ್ರಣಾಳಿಕೆ ಕೇವಲ ಜನರನ್ನು ಮರುಳುಗೊಳಿಸುವ ತಂತ್ರವೆಂಬುದು ಮತ್ತೊಮ್ಮೆ ರುಜುವಾತಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅದು ಸಂಪತ್ತನ್ನು ಜನರಿಗೆ ಹಂಚುವ ಬದಲು ಕಾರ್ಪೊರೇಟ್‌ಗಳಿಗೆ ಮಾರುವ, ಉದ್ಯೋಗವನ್ನು ಭರ್ತಿ ಮಾಡುವ ಬದಲು ರದ್ದುಗೊಳಿಸುವ ಕಾರ್ಪೊರೇಟ್ ಅನ್ಯಾಯದ ಕ್ರಮಗಳನ್ನೇ ಕೈಗೊಂಡಿದೆ. ಇದು ಅಕ್ಷರಶಃ ನರೇಂದ್ರ ಮೋದಿ ಮತ್ತು ಬಿಜೆಪಿ ಸರಕಾರ ಅನುಸರಿಸುತ್ತ ಬಂದಿರುವ ಜನವಿರೋಧಿ ಕ್ರೋನಿ ಆರ್ಥಿಕತೆಯ ಮುಂದುವರಿಕೆಯೇ ಆಗಿದೆ.
ಹಾಗೆ ನೋಡಿದರೆ ಮೋದಿ ಸರಕಾರದ ಆರ್ಥಿಕ ನೀತಿಗಳ ತಾಯಿಯೂ 1991ರಲ್ಲಿ ಕಾಂಗ್ರೆಸ್ ಜಾರಿಗೆ ತಂದ ಆರ್ಥಿಕ ನೀತಿಗಳೇ. ಆದ್ದರಿಂದಲೇ ಗ್ಯಾರಂಟಿಗಳ ಜನಪರ ಪ್ರಭಾವಳಿಯಲ್ಲಿ ಮಂಡನೆಯಾದ 2023ರ ಸಿದ್ದರಾಮಯ್ಯನವರ ಬಜೆಟನ್ನು ಗ್ಯಾರಂಟಿಗಳನ್ನು ಹೊರತುಪಡಿಸಿ ಕೂಲಂಕಷವಾಗಿ ವಿಶ್ಲೇಷಿಸಿದರೆ ಅದರಲ್ಲಿ ಪ್ರಸ್ತಾಪಿತವಾಗಿರುವ ಅಭಿವೃದ್ಧಿ ಮಾದರಿ (ಟ್ರಿಲಿಯನ್ ಡಾಲರ್ ಇಕಾನಮಿ ಮತ್ತು ಅದನ್ನು ಸಾಧಿಸಬೇಕೆಂದು ಹಾಕಿಕೊಂಡಿರುವ ಮಾದರಿ-ಮಾರ್ಗಗಳು) ಮೋದಿ ಮಾದರಿಯ ನಕಲಾಗಿದೆ! ವಾಸ್ತವದಲ್ಲಿ ಬಜೆಟ್‌ನಲ್ಲಿ ಹಾಕಿಕೊಂಡಿರುವ ಗುರಿ ಮತ್ತು ಅದನ್ನು ಸಾಧಿಸಲು ಗುರುತಿಸಿರುವ ಮಾರ್ಗಗಳು ಮತ್ತು ಒಂಭತ್ತು ಕ್ಷೇತ್ರಗಳು ಎಲ್ಲವೂ 2022ರಲ್ಲಿ ಬೊಮ್ಮಾಯಿ ಸರಕಾರ ಕಾರ್ಪೊರೇಟ್ ಉದ್ಯಮಿ ಮೋಹನ್ ದಾಸ್ ಪೈ ಅವರ ನೇತೃತ್ವದಲ್ಲಿ ಮೋದಿಯವರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ನನಸು ಮಾಡಲು ಹಾಕಿಕೊಟ್ಟ ಹೆಜ್ಜೆಗಳನ್ನೇ ಸಿದ್ದರಾಮಯ್ಯನವರ ಬಜೆಟ್ ಕೂಡ ಅನುಸರಿಸಿದೆ.
(/https://planning.karnataka.gov.in/storage/pdf-files/Latest News/Karnataka 2022-One Trillion GDP Vision-Mohandas Pai Nisha Holla.pdf)
2024ರ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರ ಸಮ್ಮೇಳನವು ನಡೆಯಲಿದ್ದು ಈ ಯೋಜನೆಯ ನೀಲನಕ್ಷೆ ತಯಾರಾಗಲಿದೆ.
ಇದರ ಅರ್ಥ ಗ್ಯಾರಂಟಿಗಳನ್ನು ಕೊಡುವುದನ್ನು ಬಿಟ್ಟರೆ ಅಭಿವೃದ್ಧಿ ಮಾದರಿಯಲ್ಲಿ ಮೋದಿಯ ಕಾರ್ಪೊರೇಟ್ ಪರ ನವ ಉದಾರವಾದಿ ಬಂಡವಾಳಶಾಹಿ ಅಭಿವೃದ್ಧಿ ಮಾದರಿಗೂ ಸಿದ್ದರಾಮಯ್ಯನವರ ಅಭಿವೃದ್ಧಿ ಮಾದರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದಾಯಿತಲ್ಲವೇ?
ಆದರೆ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿ ಸಾಮಾಜಿಕ ನ್ಯಾಯಕ್ಕೆ ತದ್ವಿರುದ್ಧವಾದ ಆಶಯ ಮತ್ತು ತತ್ವಗಳನ್ನು ಹೊಂದಿದೆ ಮತ್ತು ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಅಭಿವೃದ್ಧಿ ಫಲಗಳ ವಿತರಣೆಗೆ ಸೀಮಿತವಾದ ತತ್ವವಲ್ಲ. ಅಭಿವೃದ್ಧಿ ಮಾದರಿಯಲ್ಲೂ ಅದು ಪ್ರತಿಫಲಿತವಾಗದಿದ್ದರೆ ವಾರಂಟಿಗೆ ಮುಂಚೆ ಗ್ಯಾರಂಟಿಗಳೂ ಕೂಡ ವಿಫಲವಾಗುತ್ತವೆ.
ವಂಚಕ ಅಭಿವೃದ್ಧಿ ಮಾದರಿ ಫ್ಯಾಶಿಸಂಗೆ ಗ್ಯಾರಂಟಿ ಹೆದ್ದಾರಿ
ಏಕೆಂದರೆ ಈ ಅಭಿವೃದ್ಧಿ ಮಾದರಿಯು ಕಾರ್ಪೊರೇಟ್ ಬಂಡವಾಳಕ್ಕೆ ಅಧಿಕ ಲಾಭ ತಂದುಕೊಡುವ ಅವಕಾಶಗಳನ್ನು ಸೃಷ್ಟಿಸಿ ಅವರ ಹೂಡಿಕೆಯನ್ನು ಉತ್ತೇಜಿಸಿ, ಕರ್ನಾಟಕದ ಜಿಡಿಪಿ ಹೆಚ್ಚಳವನ್ನು ಸಾಧಿಸುವ ಗುರಿಯನ್ನು ಹೊಂದಿದೆಯೇ ವಿನಾ ಉದ್ಯೋಗ ಸೃಷ್ಟಿಸುವ ಬಂಡವಾಳ ಹೂಡಿಕೆಯನ್ನಲ್ಲ. ಮೋದಿಯ ಅಭಿವೃದ್ಧಿ ಮಾದರಿಯಂತೆ ಕಾಂಗ್ರೆಸ್‌ನ ಅಭಿವೃದ್ಧಿ ಮಾದರಿಯ ಚಾಲಕ ಸ್ಥಾನದಲ್ಲಿರುವವರು ಸಹ ಕಾರ್ಪೊರೇಟ್ ಬಂಡವಾಳಶಾಹಿಗಳೇ ವಿನಾ ಈ ದೇಶದ ಬಹುಸಂಖ್ಯಾತರಾದ ಸಣ್ಣ ರೈತ, ರೈತ ಕೂಲಿ, ಕಾರ್ಮಿಕ, ಸಣ್ಣಪುಟ್ಟ ಉದ್ಯಮಿಗಳಲ್ಲ.
ಮೋದಿ ಅಭಿವೃದ್ಧಿ ಮಾದರಿಯು ವಿದೇಶದಿಂದ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸದ ಸೆಮಿ ಕಂಡಕ್ಟರ್, ಗ್ರೀನ್ ಹೈಡ್ರೊಜನ್ ಇನ್ನಿತ್ಯಾದಿ ಅಧಿಕ ಬಂಡವಾಳ ಮತ್ತು ಉನ್ನತ ತಂತ್ರಜ್ಞಾನ ಅವಲಂಬಿತ ಹೂಡಿಕೆಯನ್ನು ಅವಲಂಬಿಸಿದೆ ಮತ್ತು ಅದನ್ನೇ ದೇಶದ ಅಭಿವೃದ್ಧಿ ಎಂದು ಘೋಷಿಸುತ್ತದೆ. ಸಿದ್ದರಾಮಯ್ಯನವರ ಬಜೆಟ್‌ನಲ್ಲೂ ಔದ್ಯಮಿಕ ಅಭಿವೃದ್ಧಿ ಮಾದರಿ ಇದೇ ಆಗಿದೆ. ಜನಸಾಮಾನ್ಯರಿಗೆ ಬೇಕಾದ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವುದು ಕೇವಲ ಜನಪರ ದೂರದೃಷ್ಟಿ ಉಳ್ಳ ಸಾರ್ವಜನಿಕ ಹೂಡಿಕೆಗೆ ಅರ್ಥತ್ ಸರಕಾರಿ ಹೂಡಿಕೆಗೆ ಮಾತ್ರ. ಆ ರೀತಿ ಉದ್ಯೋಗ ಸೃಷ್ಟಿಯಾದರೆ ಮಾತ್ರ ಜನರ ಆದಾಯ ಹೆಚ್ಚುತ್ತದೆ. ಆಗ ಮಾತ್ರ ಜನರು ಗ್ಯಾರಂಟಿಗಳ ಅನಿವಾರ್ಯ ಊರುಗೋಲನ್ನು ಅವಲಂಬಿಸದೆ ತಮ್ಮ ಕಾಲಮೇಲೆ ತಾವು ನಿಲ್ಲಲು ಸಾಧ್ಯ. ಆದರೆ ಮೋದಿ ಸರಕಾರದಂತೆ ಸಿದ್ದರಾಮಯ್ಯನವರ ಸರಕಾರವೂ ಹೂಡಿಕೆ ಎಂದರೆ ಕೇವಲ ಖಾಸಗಿ ಹೂಡಿಕೆಯೆಂದೇ ಅರ್ಥಮಾಡಿಕೊಂಡಿದೆ. ಸಿದ್ದರಾಮಯ್ಯನವರ ಬಜೆಟ್‌ನುದ್ದಕ್ಕೂ ಅದೇ ಪ್ರತಿಫಲನಗೊಂಡಿದೆ.
ಒಂದು ಜನಪರ ಮಾದರಿ ಸರಕಾರದ ಆರ್ಥಿಕ ದೃಷ್ಟಿಕೋನವು ಇಂದಿನ ಅಗತ್ಯ ಹಾಗೂ ಅನಿವಾರ್ಯವಾದ ಗ್ಯಾರಂಟಿಗಳನ್ನು ಖಾತರಿ ಮಾಡುತ್ತಲೇ ಗ್ಯಾರಂಟಿಗಳ ಅಗತ್ಯ ಬೀಳದ ಸಮಾಜ ಜನಪರ ಆರ್ಥಿಕತೆಯ ಸೃಷ್ಟಿಯನ್ನು ಒಳಗೊಂಡಿರಬೇಕು.
‘ದಿ ಹಿಂದೂ’ ಪತ್ರಿಕೆಯಲ್ಲಿ ಗ್ಯಾರಂಟಿಗಳನ್ನು ಸಮರ್ಥಿಸಿಕೊಳ್ಳುತ್ತಾ ಕಾಂಗ್ರೆಸ್‌ನ ಅಧಿಕೃತ ವಕ್ತಾರ ಹಾಗೂ ಅರ್ಥಶಾಸ್ತ್ರಜ್ಞ ಪ್ರವೀಣ್ ಚಕ್ರವರ್ತಿಯವರು ‘‘ನಿರುದ್ಯೋಗ ಎಂಬ ರೋಗ ನಿವಾರಣೆಗೆ ನಮ್ಮ ಆರ್ಥಿಕತೆಯಲ್ಲಿ ಪರಿಹಾರವಿಲ್ಲದಾಗ, ಗ್ಯಾರಂಟಿ ಎಂಬ ನೋವು ನಿವಾರಕ ಅಗತ್ಯ’’ ಎಂದು ಹೇಳುತ್ತಾ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಸೃಷ್ಟಿಯಾದ ನಿರುದ್ಯೋಗಕ್ಕೆ ಕಾಂಗ್ರೆಸ್ ಸರಕಾರದ ಬಳಿಯೂ ನಿವಾರಣೋಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
(/https://planning.karnataka.gov.in/storage/pdf-files/Latest News/Karnataka 2022-One Trillion GDP Vision-Mohandas Pai Nisha Holla.pdf)
ವಾಸ್ತವವೆಂದರೆ ಈ ಬಗೆಯ ಮಾನವೀಯ ಮುಖವಾಡದ, ಆದರೆ ಸಾರದಲ್ಲಿ ಕಾರ್ಪೊರೇಟ್ ಕ್ಯಾಪಿಟಲಿಸ್ಟ್ ಆರ್ಥಿಕತೆಗಳು ಇಂದಿನ ನವ ಉದಾರವಾದಿ ಯುಗದಲ್ಲಿ ವೆಲ್ಫೇರ್‌ಗಳನ್ನು ಕೂಡ ಗ್ಯಾರಂಟಿ ಮಾಡದೆ ಕ್ರಮೇಣವಾಗಿ ವಿಫಲವಾಗಿವೆ. ಅಪಾರ ಅಸಮಾನತೆಗಳನ್ನು ಮತ್ತು ಸಾಮಾಜಿಕ ಸಂಕ್ಷೋಭೆಗಳನ್ನು ಹುಟ್ಟಿಹಾಕಿವೆ. ಏಕೆಂದರೆ ಇಂದಿನ ನಿಯೋಲಿಬರಲ್ ಜಾಗತಿಕ ಬಂಡವಾಳಶಾಹಿ ಅರ್ಥ ವ್ಯವಸ್ಥೆಯಲ್ಲಿ ವೆಲ್ಫೇರ್‌ನ ಆಯಸ್ಸು ತುಂಬಾ ಕಡಿಮೆ. ಬದಲಿಗೆ ಅದರ ನಿಶ್ಚಿತ ವೈಫಲ್ಯದ ರಾಜಕೀಯ ಪರಿಣಾಮವಾಗಿ ಬಲಪಂಥೀಯ ಹಾಗೂ ನವ ಫ್ಯಾಶಿವಾದಿ ಆಳ್ವಿಕೆಗಳು ನೆಲೆಗೊಳ್ಳುತ್ತಿವೆ.
ಬಂಡವಾಳಶಾಹಿ ವ್ಯವಸ್ಥೆ ಬದಲಾಗದೆ ಜನಪರ, ಜನಹಿತ ಸಮಾಜ ಮಾದರಿ ಸಾಧ್ಯವಿಲ್ಲ. ಆದ್ದರಿಂದಲೇ ಕಾಂಗ್ರೆಸ್‌ಪರತೆ ಜನಪರತೆಯೂ ಅಲ್ಲ. ಕಾಂಗ್ರೆಸ್ ತಾತ್ಕಾಲಿಕವಾಗಿ ಉಸಿರು ತೆಗೆದುಕೊಳ್ಳುವ ತಂಗುದಾಣವೂ ಅಲ್ಲ.
ನೈಜ ಪರ್ಯಾಯವನ್ನು ಕಾಂಗ್ರೆಸ್‌ನಾಚೆಗೆ, ಮಾನವೀಯ, ರಾಕ್ಷಸೀಯ ನವ ಉದಾರವಾದಗಳ ಮುಖವಾಡಗಳಾಚೆಗೆ ಹುಡುಕಬೇಕು. ಅದು ಮಾತ್ರ ಜನರ ಭವಿಷ್ಯಕ್ಕೆ ಗ್ಯಾರಂಟಿ ಒದಗಿಸುತ್ತದೆ. ದೇಶವನ್ನು ಫ್ಯಾಶಿಸಂನಿಂದ ಬಚಾವು ಮಾಡುತ್ತದೆ. ಎಡಪಂಥೀಯರ ಮತ್ತು ನಡುಪಂಥೀಯರ ಬಗೆಗಿನ ಭ್ರಮನಿರಸನವೇ ಫ್ಯಾಶಿಸಂಗೆ ದಾರಿ ಮಾಡಿಕೊಟ್ಟಿದ್ದು ಎಂಬ ಪಾಠ ಮರೆಯಬಾರದು.