ತೆಲಂಗಾಣ ; 64 ಮಾವೋವಾದಿಗಳ ಶರಣಾಗತಿ

Update: 2025-03-15 19:34 IST
ತೆಲಂಗಾಣ ; 64 ಮಾವೋವಾದಿಗಳ ಶರಣಾಗತಿ
  • whatsapp icon

ಹೈದರಾಬಾದ್: ಶನಿವಾರ ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಪೊಲೀಸರೆದುರು ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷದ ಒಟ್ಟು 64 ಮಂದಿ ಸದಸ್ಯರು ಶರಣಾಗಿದ್ದಾರೆ.

ಛತ್ತೀಸ್ ಗಢ ಹಾಗೂ ತೆಲಂಗಾಣದ ಗಡಿಯಲ್ಲಿರುವ ಗ್ರಾಮಗಳ ಪ್ರದೇಶ ಸಮಿತಿ ಸದಸ್ಯ ಸೇರಿದಂತೆ ವಿವಿಧ ಕೇಡರ್ ಗಳಿಗೆ ಸೇರಿದ 64 ಮಂದಿ ಮಾವೋವಾದಿಗಳು ತಮ್ಮ ನಕ್ಸಲ್ ವಾದದ ಮಾರ್ಗವನ್ನು ತೊರೆಯಲು ನಿರ್ಧರಿಸಿ, ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ ಜೀವನ ನಡೆಸಲು ನಿರ್ಧರಿಸಿದ್ದಾರೆ. ಅವರೆಲ್ಲ ಬಹುವಲಯ ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಜಿಲ್ಲಾ ಪೊಲೀಸರೆದುರು ಶರಣಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಪರೇಷನ್ ಚೇಯುತ ಯೋಜನೆಯಡಿ ಭದ್ರಾದ್ರಿ ಕೊತ್ತಗುಡೆಂ ಜಿಲ್ಲಾ ಪೊಲೀಸರು ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು ಶರಣಾಗತ ಮಾವೋವಾದಿಗಳು ಹಾಗೂ ಆದಿವಾಸಿ ಸಮುದಾಯಗಳಿಗೆ ಜಂಟಿಯಾಗಿ ಅನುಷ್ಠಾನಗೊಳಿಸಿರುವ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು ಅರಿವಿಗೆ ಬಂದ ನಂತರ, ಹಲವಾರು ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಾಗ ಮಾಡಿ, ಶರಣಾಗತರಾಗುತ್ತಿದ್ದಾರೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸದ್ಯ ಶರಣಾಗತರಾಗಿರುವ 64 ಮಂದಿ ಸದಸ್ಯರು ಸೇರಿದಂತೆ ಒಟ್ಟು 122 ಮಾವೋವಾದಿಗಳು ಕಳೆದ ಎರಡೂವರೆ ತಿಂಗಳಿನಿಂದ ಶರಣಾಗತರಾಗಿದ್ದಾರೆ ಎಂದು ಭದ್ರಾದ್ರಿ ಕೊತ್ತಗುಡೆಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರೋಹಿತ್ ರಾಜು ತಿಳಿಸಿದ್ದಾರೆ.

ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷವು ಅನುಸರಿಸುತ್ತಿರುವ ಸಿದ್ಧಾಂತವು ಪುರಾತನವಾಗಿದ್ದು, ಆದಿವಾಸಿ ಜನರ ವಿಶ್ವಾಜ ಮತ್ತು ಬೆಂಬಲ ಕಳೆದುಕೊಂಡಿದೆ ಎಂಬುದು ಈ ಬಂಡುಕೋರರಿಗೆ ಮನವರಿಕೆಯಾಗಿದೆ ಎಂದೂ ಅವರು ಹೇಳಿದ್ದಾರೆ.

“ಅವರು ತಾವು ಕಾರ್ಯಾಚರಿಸುತ್ತಿದ್ದ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಅಡಚಣೆಯುಂಟು ಮಾಡುತ್ತಿದ್ದರು ಹಾಗೂ ಮುಗ್ಧ ಆದಿವಾಸಿ ಜನರನ್ನು ಬೆದರಿಸುತ್ತಿದ್ದರು” ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಮಾವೋವಾದಿಗಳು ನೆಲದಲ್ಲಿ ಹುದುಗಿಸಿದ್ದ ಸುಧಾರಿತ ಸ್ಫೋಟಕ ಸಾಧನ ಸಿಡಿದು ಓರ್ವ ಮಹಿಳೆ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದರು. ಮಾವೋವಾದಿ ನಾಯಕರ ಇಂತಹ ಕೃತ್ಯಗಳಿಂದ ಆದಿವಾಸಿ ಸಮುದಾಯಗಳು ಮೂಲಭೂತ ಸೌಕರ್ಯಗಳನ್ನು ಪಡೆಯಲೂ ಹೆಣಗಾಡುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೆ ಶರಣಾಗಿ, ಸಹಜ ಜೀವನ ನಡೆಸಲು ಬಯಸುತ್ತಿರುವ ಮಾವೋವಾದಿಗಳು ಸಮೀಪದ ಪೊಲೀಸ್ ಠಾಣೆಗಳು ಅಥವಾ ಜಿಲ್ಲಾಡಳಿತದ ಅಧಿಕಾರಿಗಳನ್ನು ತಮ್ಮ ಕುಟುಂಬದ ಸದಸ್ಯರ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಬಹುದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News