ವಿಚಾರಣೆ ಮುನ್ನ ದೀರ್ಘ ಕಾಲ ಜೈಲಿನಲ್ಲಿ ಆರೋಪಿಗಳನ್ನು ಇರಿಸುವಂತಿಲ್ಲ: ಸುಪ್ರೀಂ

Update: 2023-12-08 15:29 GMT

ಸುಪ್ರೀಂ ಕೋರ್ಟ್ | Photo: PTI  

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದೊಂದಿಗೆ ಸಂಬಂಧ ಹೊಂದಿದ ಜಗತ್ತಿನ ಅತಿ ದೊಡ್ಡ ಆಲ್ಕೋಹಾಲ್ ಯುಕ್ತ ಪಾನೀಯಗಳ ಕಂಪೆನಿಗಳಲ್ಲಿ ಒಂದರ ಅಂಗ ಸಂಸ್ಥೆಯಾದ ಪೆರ್ನೋಡ್ ರಿಚರ್ಡ್ ಇಂಡಿಯಾದ ಹಿರಿಯ ಕಾರ್ಯನಿರ್ವಹಣಾಧಿಕಾರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ಪ್ರಾದೇಶಿಕ ಜನರಲ್ ಮ್ಯಾನೇಜರ್ ಬಿನೋಯ್ ಬಾಬು ಅವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ, ‘‘ನೀವು ವಿಚಾರಣೆಯ ಮುನ್ನ ಜನರನ್ನು ದೀರ್ಘ ಕಾಲ ಕಂಬಿಯ ಹಿಂದೆ ಇರಿಸಲು ಸಾಧ್ಯವಿಲ್ಲ. ಇದು ಸರಿಯಾದ ಕ್ರಮ ಅಲ್ಲ’’ ಎಂದು ಹೇಳಿದೆ.

‘‘ಇದು ಹೇಗೆ ನಡೆಯುತ್ತದೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯದ ಆರೋಪಗಳ ನಡುವೆ ವಿರೋಧಾಭಾಸವಿದೆ ’’ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಅಭಿಪ್ರಾಯಪಟ್ಟರು.

ಅವರು ಈಗಾಗಲೇ 13 ತಿಂಗಳು ಕಾಲ ಕಾರಾಗೃಹದಲ್ಲಿ ಇದ್ದರು ಎಂಬುದನ್ನು ಹಾಗೂ ಅವರ ಅರ್ಜಿಯಲ್ಲಿ ಎತ್ತಲಾದ ವಾಸ್ತವ ಸನ್ನಿವೇಶಗಳ ಆಧಾರವನ್ನು ಗಮನಿಸಿದ ಬಳಿಕ ನ್ಯಾಯಮೂರ್ತಿ ಎಸ್ವಿಎನ್ ಭಟ್ ಅವರನ್ನು ಕೂಡ ಒಳಗೊಂಡ ಪೀಠ ಬಾಬುಗೆ ಜಾಮೀನು ನೀಡಿತು.

ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ, ಮುಖ್ಯವಾಗಿ ದಿಲ್ಲಿಯಲ್ಲಿ ಅಧಿಕಾರದಲ್ಲಿ ಇರುವ ಆಮ್ ಆದ್ಮಿ ಪಕ್ಷದ ನಡುವೆ ರಾಜಕೀಯ ಘರ್ಷಣೆ ಉದ್ಭವಿಸಿದ ಈ ಪ್ರಕರಣದಲ್ಲಿ ಹಲವರು ಬಂಧಿತರಾಗಿದ್ದಾರೆ. ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ ಇಬ್ಬರು ಹಿರಿಯ ಸದಸ್ಯರು ಕೂಡ ಬಂಧಿತರಾಗಿದ್ದಾರೆ.

ಸಿಸೋಡಿಯಾ ಅವರು ಫೆಬ್ರವರಿಯಿಂದ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಅವರು ಅಕ್ಟೋಬರ್ ನಿಂದ ಕಾರಾಗೃಹದಲ್ಲಿ ಇದ್ದಾರೆ.

ಅಕ್ಟೋಬರ್ 30ರಂದು ಸುಪ್ರೀಂ ಕೋರ್ಟ್ ಮನೀಷ್ ಸಿಸೋಡಿಯಾ ಅವರಿಗೆ ಜಾಮೀನು ನಿರಾಕರಿಸಿತ್ತು. ಸಿಸೋಡಿಯಾ ಅವರನ್ನು ಸಿಬಿಐ ಮೊದಲು ಫೆಬ್ರವರಿ 26ರಂದು ಬಂಧಿಸಿತ್ತು. ಎರಡು ವಾರಗಳ ಬಳಿಕ ಮಾರ್ಚ್ 9ರಂದು ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅನಂತರ ದೀರ್ಘ ಕಾಲದಿಂದ ಅವರು ದಿಲ್ಲಿಯ ತಿಹಾರ್ ಕಾರಾಗೃಹದಲ್ಲಿ ಇದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News