ರಾಜ್ಯಪಾಲರನ್ನು ಎಂದಿಗೂ ರಾಜಭವನದಲ್ಲಿ ಭೇಟಿಯಾಗಲಾರೆ: ಮಮತಾ ಬ್ಯಾನರ್ಜಿ
ಕೋಲ್ಕತಾ: ಪಶ್ಚಿಮಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ವಿರುದ್ದದ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಒಂದು ವೇಳೆ ತಾನು ರಾಜ್ಯಪಾಲರನ್ನು ಭೇಟಿಯಾಗಬೇಕಿದ್ದರೆ ತಾನು ರಾಜಭವನಕ್ಕೆ ಹೋಗಲಾರೆ. ಯಾಕೆಂದರೆ ಅವರ ಪಕ್ಕದಲ್ಲಿ ಕುಳಿತುಕೊಳ್ಳುವುದೇ ಪಾಪಕರವಾದುದು ಎಂದು ಕಿಡಿಕಾರಿದ್ದಾರೆ.
ತಾತ್ಕಾಲಿಕವಾಗಿ ನೇಮಕಗೊಂಡ ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ರಾಜ್ಯಪಾಲ ಆನಂದ ಬೋಸ್ ವಿರುದ್ಧ ಪೊಲೀಸರಿಗೆ ನೀಡಿದ ಲಿಖಿತ ದೂರು ನೀಡಿದ ದಿನದ ಸಿಸಿಟಿವಿ ವೀಡಿಯೋವನ್ನು ಪತ್ರಕರ್ತರಿಗೆ ಹಾಗೂ ಆಯ್ದ ಕೆಲವರಿಗೆ ಪ್ರಸಾರ ಮಾಡಿರುವುದನ್ನು ಪ್ರಸ್ತಾವಿಸಿದ ಅವರು ಪ್ರಕರಣದ ಸಿಸಿಟಿವಿ ವೀಡಿಯೊವನ್ನು ತಿರುಚಲಾಗಿದೆ ಎಂದವರು ಹೇಳಿದ್ದಾರೆ. ತನ್ನ ಬಳಿ ಇಡೀ ಘಟನೆಯ ದೃಶ್ಯಾವಳಿಯ ವೀಡಿಯೊ ಇದೆ ಅಲ್ಲದೆ ಹಲವಾರು ವೀಡಿಯೊಗಳ ಪೆನ್‌ಡ್ರೈವ್ ಇರುವುದಾಗಿ ಅವರು ಹೇಳಿದ್ದಾರೆ.
ಹೂಗ್ಲಿಯಲ್ಲಿ ಶನಿವಾರ ನಡೆದ ಟಿಎಂಸಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಮಾನ್ಯ ರಾಜ್ಯಪಾಲರೇ, ನನ್ನ ತಪ್ಪೇನಿದೆ. ಸಮಗ್ರ ಘಟನೆಯ ಬಗ್ಗೆ ನನಗೇನೂ ತಿಳಿದಲ್ಲ. ‘ದೀದಿಗಿರಿ’ (ದಾದಾಗಿರಿ)ಗೆ ಅವಕಾಶವಿಲ್ಲವೆಂದು ರಾಜ್ಯಪಾಲರು ಹೇಳುತ್ತಾರೆ. ಆದರೆ ರಾಜ್ಯಪಾಲರೇ ಮೊದಲು ನೀವು ಅಧಿಕಾರದಿಂದ ಕೆಳಗಿಳಿಯಿರಿ. ಮಹಿಳೆಯರಿಗೆ ಚಿತ್ರಹಿಂಸೆ ನೀಡಲು ನೀವ್ಯಾರು?. ರಾಜ್ಯಪಾಲರು ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಕರೆದಿದ್ದರೆಂದು ನಾನು ಕೇಳಿದ್ದೇನೆ. ಅಲ್ಲಿ ಕೆಲವು ಎಡಿಟ್ ಮಾಡಿದ ವೀಡಿಯೊಗಳನ್ನು ತೋರಿಸಲಾಗಿದೆ’’ ಎಂದು ಮಮತಾ ಆಪಾದಿಸಿದರು.
‘‘ತನ್ನ ಬಳಿ ರಾಜಭವನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯ ಸಮಗ್ರ ವೀಡಿಯೊ ದೊರೆತಿದೆ. ಅಲ್ಲದೆ ಪೆನ್ ಡ್ರೈವ್ ಕೂಡಾ ಲಭಿಸಿದ್ದು, ಅದರಲ್ಲಿ ಒಂದರ ಆನಂತರ ಇನ್ನೊಂದು ಘಟನಾವಳಿಗಳು ದಾಖಲಾಗಿವೆ ’’ ಎಂದು ಬ್ಯಾನರ್ಜಿ ಹೇಳಿದರು.
ರಾಜ್ಯಪಾಲ ಬೋಸ್ ಅವರು ಮಮತಾ ಬ್ಯಾನರ್ಜಿ ಅವರು ತನ್ನ ವಿರುದ್ಧ ಮಾಡಿರುವ ಟೀಕೆ ಬಗ್ಗೆ ಈ ವಾರದ ಆರಂಭದಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ‘‘ ರಾಜಕೀಯವು ಮಮತಾ ಬ್ಯಾನರ್ಜಿಯವರಿಗೆ ಹೇಳಿಸಿದ್ದಲ್ಲವೆಂಬ ನನ್ನ ನಿಲುವಿಗೆ ನಾನು ಸದಾ ಬದ್ಧನಾಗಿದ್ದೇನೆ. ಹಾಗಾಗಿ ಆಕೆಯ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಲೇ ಬಂದಿದ್ದೇನೆ. ಆದರೆ ಈಗ ನನ್ನ ವಿರುದ್ಧ ಆಕೆ ಅವಹೇಳನಕಾರಿ ಮಾತುಗಳನ್ನು ಆಡಿರುವುದರಿಂದ ನಾನು ಕೂಡಾ ಮಾತನಾಡ ಬೇಕಾಗಿ ಬಂದಿದೆ. ಮಮತಾ ಬ್ಯಾನರ್ಜಿ ಅವರೇ ನೀವು ಕೊಳಕು ರಾಜಕೀಯ ಮಾಡುತ್ತಿದ್ದೀರಿ. ಆದರೂ ಆಕೆಯನ್ನು ದೇವರು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ. ಆದರೆ ಆಕೆಯನ್ನು ರಕ್ಷಿಸುವುದು ದೇವರಿಗೂ ಕಷ್ಟ. ಘನತೆಯ ರಾಜ್ಯಪಾಲ ಹುದ್ದೆಯ ಮೇಲೆ ಆಕೆ ನಡೆಸುತ್ತಿರುವ ದೀದಿಗಿರಿಯನ್ನು ನಾನು ಎಂದೂ ಒಪ್ಪುವುದಿಲ್ಲವೆಂದು ಹೇಳಿದ್ದರು.